Adolescence: ಹುಡುಗಾಟಿಕೆ; ಫೇಸ್‌ಬುಕ್ ಮತ್ತು ಫೇಸ್ ಟು ಫೇಸ್, ವಾಸ್ತವಕ್ಕಿಲ್ಲದ ಡಿಜಿಟಲ್ ಸ್ನೇಹ
Jul 16, 2023 08:05 AM IST
ಹುಡುಗಾಟಿಕೆ ಅಂಕಣ
- Young Mind: ಇದು ಎಚ್‌ಟಿ ಕನ್ನಡ (Hindustan Times Kannada) ವೆಬ್‌ಸೈಟ್‌ನಲ್ಲಿ ಪ್ರತಿ ಭಾನುವಾರ ಪ್ರಕಟವಾಗುವ ಅಂಕಣ 'ಹುಡುಗಾಟಿಕೆ'. ಒಳಗಿನ ಸೂಕ್ಷ್ಮ ಮನಸು ಜಾಗೃತವಾಗುವ, ಒಂದಷ್ಟು ಗೊಂದಲಗಳ ನಡುವೆ ಚಂಚಲ ಮನಸಿಗೆ ಬೇಲಿ ಹಾಕುವ ಪ್ರಯತ್ನದಲ್ಲಿರುವರನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿದ ಅಂಕಣ ಇದು.
ದೂರದ ಬೆಟ್ಟದಂತಿದ್ದ ಕೃತಕ ಬುದ್ಧಿಮತ್ತೆ (Artificial Intelligence) ಈಗೀಗ ಮನೆಗೆ ಆಗಾಗ ಬಂದುಹೋಗುವ ನೆಂಟನಾಗಿಬಿಟ್ಟಿದೆ. ವಾಸ್ತವ ಬದುಕಿನಲ್ಲಿ ಬರುವ ಕಲ್ಪನೆ ಮತ್ತು ಭ್ರಮೆಗೆ ಒಂದು ರೂಪ ಕೊಟ್ಟು ವರ್ತಮಾನವದಲ್ಲಿ ಕೃತಕ ವಾಸ್ತವತೆಯ ಸೃಷ್ಟಿಯೇ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್. ರೋಬೋಗಳಿಂದ ಹಿಡಿದು ಇತ್ತೀಚೆಗೆ ಸುದ್ದಿ ನಿರೂಪಕಿಯರವರೆಗೂ ಡಿಜಿಟಲ್ ಮನುಷ್ಯರು ಜೀವಂತ ಮನುಷ್ಯರಿಗೆ ಪೈಪೋಟಿ ಕೊಡುತ್ತಿದ್ದಾರೆ. ಮನುಷ್ಯನ ಭಾವನೆಯೂ ಡಿಜಿಟಲ್ ಆಗುತ್ತಿದೆ.
ನಮ್ಮ ಕುಟುಂಬಕ್ಕೆ ಆಪ್ತರಾಗಿರುವ ಸ್ನೇಹಿತರೊಬ್ಬರು ಹೇಳಿದ ಕತೆ ಇದು. ಅವರ ಮಗನಿಗೆ ಈಗಿನ್ನೂ 16 ವರ್ಷ ವಯಸ್ಸು. ಅವನ ಹೆಸರು ಕಿರಣ್. ಡಿಜಿಟಲ್ ಮಾಧ್ಯಮದ ಮೂಲಕ ಏನೇ ಮಾತನಾಡಿದರೂ, ಎಷ್ಟೇ ಮಾತನಾಡಿಸಿದರೂ ಪ್ರತಿಕ್ರಿಯೆ ಕೊಡ್ತಾನೆ. ಹಾಗಂತ ಮುಖಕ್ಕೆ ಮುಖ ಕೊಟ್ಟು ಮಾತನಾಡು ಅಂದ್ರೆ ಬಾಯಿಯೇ ಬಿಡಲ್ಲ. ಅದನ್ನೇ ವಾಟ್ಸಾಪೋ, ಫೇಸ್ಬುಕ್ ಮೆಸೆಂಜರ್ ಮೂಲಕವೋ ಕೇಳಿದ್ರೆ ಕ್ಷಣಮಾತ್ರದಲ್ಲಿ ಉತ್ತರ ಕೊಡ್ತಾನೆ. ಒಂದು ಪದದಲ್ಲಿ ಉತ್ತರಿಸುವ ಪ್ರಶ್ನೆಗೆ ಪ್ರಬಂಧ ರೂಪದಲ್ಲಿಯೂ ಪ್ರತಿಕ್ರಿಯೆ ನೀಡುವಷ್ಟು ಸಮಯ, ಸಹನೆ ಮತ್ತು ಸ್ವಾಭಾವ ಅವನಲ್ಲಿದೆ. ಆದರೆ ಮುಖತಃ ಮಾತಿಗೆ ಆತ ಸಿದ್ಧನಿಲ್ಲ. ಯಾಕೆ ಹೀಗಾಯ್ತು?
ಇದು ಕಿರಣ್ ಒಬ್ಬನ ಕತೆಯಲ್ಲ. ಇಂತಹ ನೂರಾರು ಹರೆಯರು ನಮ್ಮ ನಿಮ್ಮ ನಡುವೆ ಇರಬಹುದು. ನೀವೂ ಇದೇ ಥರ ಇರಬಹುದು. ನಿಮ್ಮ ಮಕ್ಕಳು ಕೂಡಾ ಮುಖಕ್ಕೆ ಮುಖ ಕೊಟ್ಟು ಮಾತನಾಡಲು ಹಿಂಜರಿಯಬಹುದು. ಇದು ಸರಳವಾಗಿ ಹೇಳಿ ಅಲ್ಲಿಗೆ ಬಿಟ್ಟುಬಿಡುವ ಸಾಮಾನ್ಯ ವಿಷಯವಲ್ಲ. ಸದ್ಯಕ್ಕೆ ಸರಳ ಅಂಶವಾದರೂ ಭವಿಷ್ಯದ ದೃಷ್ಟಿಯಿಂದ ಇದು ಗಂಭೀರ ವಿಚಾರ.
ಪ್ರತಿಯೊಬ್ಬ ವ್ಯಕ್ತಿಯ ಬಾಲ್ಯ, ಅವರ ಪೋಷಕರು, ಅವರಿರುವ ಮನೆ ಮತ್ತು ವಾತಾವರಣ, ಅವರು ಬೆರೆಯುವ ಜನರು ಹೀಗೆ ಎಲ್ಲಾ ಜೀವನಶೈಲಿಯು ಅವರ ಬದುಕಿನ ಮೇಲೆ ನೇರ ಮತ್ತು ಪರೋಕ್ಷ ಪ್ರಭಾವ ಬೀರುತ್ತವೆ. ಮಕ್ಕಳ ನಡೆನುಡಿಯ ಪ್ರತಿಯೊಂದು ಸೂಕ್ಷ್ಮಗಳತ್ತ ನೋಟ ಬೀರಿ ಅದನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಪೋಷಕರು ಹೋಗುವುದಿಲ್ಲ. ಬಹುತೇಕ ಹೆತ್ತವರು ಮಕ್ಕಳ ಕೈಗೆ ಮೊಬೈಲ್ ಕೊಡುತ್ತಾರೆಯೇ ಹೊರತು ಅವರೊಂದಿಗೆ ಕುಳಿತು ಮಾತನಾಡುವಷ್ಟು ಸಮಯ ಅವರಲ್ಲಿರುವುದಿಲ್ಲ. ಈ ಎಲ್ಲಾ ಜೀವನಶೈಲಿಯ ಪ್ರಭಾವ ಮಕ್ಕಳ ಬಾಲ್ಯದ ಮೇಲೆ ಪರಿಣಾಮ ಬೀರುತ್ತದೆ. ಕ್ರಮೇಣ ಹರೆಯವು ದೇಹ ಸೋಕಿದಾಗ ಮುಗ್ಧ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪೋಷಕರ ನಿಷ್ಕಾಳಜಿಯಿಂದಾಗಿ ಮಕ್ಕಳು ಅಂತರ್ಮುಖಿಗಳಾಗಿ ಬೆಳೆಯುವ ಸಾಧ್ಯತೆ ಹೆಚ್ಚುತ್ತದೆ.
ಡಿಜಿಟಲ್ ಭಾವನೆ ಮತ್ತು ಸಹಜ ಭಾವನೆ
ಅಂತರ್ಮುಖಿ ಅಂತವಾ Introvert ಸ್ವಭಾವವು ಸಮಸ್ಯೆ ಖಂಡಿತಾ ಅಲ್ಲ. ಇದು ಜನ್ಮತಃ ಅಥವಾ ಜೀವನಶೈಲಿಯಿಂದ ಪ್ರೇರಿತವಾದ ಸಹಜ ಸ್ವಭಾವ. ಇಂತಹ ಸ್ವಭಾವ ಇರುವವರು ಹಿಂಜರಿಕೆ, ತುಸು ನಾಚಿಕೆ ಸೇರಿದಂತೆ ಹೆಚ್ಚಾಗಿ ಬೇಗನೆ ಮುಜುಗರಕ್ಕೆ ಒಳಗಾಗುತ್ತಾರೆ. ತಮ್ಮದೇ ಲೋಕದಲ್ಲಿ ವಿಹರಿಸುವ ಅಂತರ್ಮುಖಿಗಳು, ಆಂತರಿಕ ಆಲೋಚನೆಗಳಿಗೆ ಮಣೆ ಹಾಕುತ್ತಾರೆ. ಗುಂಪು ಗುಂಪಾಗಿ ಇರುವುದಕ್ಕಿಂತ ಒಂಟಿಯಾಗಿ ಇರುವುದು, ತಪ್ಪಿದರೆ ಒಂದಿಬ್ಬರ ಒಡನಾಟ ಇಷ್ಟಪಡುತ್ತಾರೆ. ಹಾಗಂತ ಯಾರೊಂದಿಗೆ ಬೆರೆಯುವುದಿಲ್ಲ ಎಂದಲ್ಲ. ಬದಲಾಗಿ ಕಡಿಮೆ ಜನರೊಂದಿಗೆ ಬೆರೆತರೂ ಭಾವನಾತ್ಮಕವಾಗಿ ಬೇಗ ಅವರಿಗೆ ಅಂಟಿಕೊಳ್ಳುತ್ತಾರೆ. ಅಂತರ್ಮುಖಿಗಳು ಹೆಚ್ಚು ಭಾವಜೀವಿಗಳು. ಇವರ ಆಲೋಚನೆ ಹಾಗೂ ಮಾತು ತುಂಬಾ ಸೂಕ್ಷ್ಮ. ತೂಕದ ಮಾತು ಅಂತೀವಲ್ಲ, ಹಾಗೆ. ಇದು ಒಂದು ಸಹಜ ಸ್ವಭಾವ. ಹೀಗಾಗಿ ಅಂತರ್ಮುಖಿತ್ವ ತಪೂ ಅಲ್ಲ, ಅದು ಸಮಸ್ಯೆಯೂ ಇಲ್ಲ. ಹಾಗಿದ್ರೆ ತಪ್ಪು ಏನು?
ಹತ್ತು ವರ್ಷಗಳಿಗಿಂತ ಹಿಂದಿದ್ದ ಸಮಾಜಕ್ಕೂ ಈಗಿನ ಸಮಾಜಕ್ಕೂ ಅಜಗಜಾಂತರವಿದೆ. ಅಷ್ಟೇ ಯಾಕೆ, ಡಿಜಿಟಲ್ ಬದುಕಿನಲ್ಲಿ ವಾಸಿಸುತ್ತಿರುವ ನಾವುಗಳು ನಿನ್ನೆಗಿಂತ ಇಂದಿಗಾದ ಡಿಜಿಟಲ್ ಸುಧಾರಣೆಗಳನ್ನು ಪಟ್ಟಿ ಮಾಡಬಹುದು. ಒಂದು ಕಾಲದಲ್ಲಿ ಕೃತಕ ಬುದ್ಧಿಮತ್ತೆ ಎಂಬುವುದರ ಕಲ್ಪನೆಯೂ ಇಲ್ಲದವರು ಈಗ ಆ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವಷ್ಟು ಪಾಂಡಿತ್ಯ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಮಕ್ಕಳು, ಹರೆಯರು ಆ ಬಗ್ಗೆ ಸಂಶೋಧನಾ ಪ್ರಬಂಧವನ್ನೇ ಮಂಡಿಸುವಷ್ಟು ಮಾಹಿತಿ ಬಂಢಾರವನ್ನೇ ಹೊತ್ತಿದ್ದಾರೆ. ಡಿಜಿಟಲ್ ಜಗತ್ತಿಗೆ ಹಳ್ಳಿ ಹಳ್ಳಿಯೂ ಒಗ್ಗಿಕೊಳ್ಳುತ್ತಿದೆ. ಸಮಸ್ಯೆ ಇರುವುದು ಇಲ್ಲೇ. ವಾಸ್ತವವೇ ಈಗ ಕೃತಕ ಎಂಬಂತಾಗಿದೆ. ಇದೇ ಕಾರಣಕ್ಕೆ ಮಕ್ಕಳು ಸೇರಿದಂತೆ ಹರೆಯರಿಗೆ ಭಾವನೆಯ ಅರ್ಥವೇ ಅರ್ಥವಾಗುತ್ತಿಲ್ಲ.
ವಿರ್ಚುವಲ್ ಸಂಭಾಷಣೆಗೆ ಮಣೆ
ತಂತ್ರಜ್ಞಾನ ಎಷ್ಟೇ ಸುಧಾರಿಸಿದರೂ, ಮನುಷ್ಯ ವಾಸ್ತವದಲ್ಲೇ ಬದುಕಬೇಕಲ್ವೆ. ಮೇಲೆ ನಾನು ಹೇಳಿದ ಹುಡುಗನಿಗೆ ವಾಸ್ತವ ಬದುಕಿನಲ್ಲಿ ಮುಖಾಮುಖಿಯಾದಾಗ ಮಾತೇ ಹೊರಳುವುದಿಲ್ಲ. ಅದೇ ಹುಡುಗ ಅದೇ ವ್ಯಕ್ತಿಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಚಾಟ್‌ಗೆ ಸಿಗುತ್ತಾನೆ. ಗಂಟೆಗಟ್ಟಲೆ ಹರಟೆ, ಮಾತು ಎಲ್ಲದಕ್ಕೂ ಚುರುಕಾಗಿರುತ್ತಾನೆ. ಆದ್ರೆ ಎದುರು ನಿಂತು ಮಾತನಾಡಿದಾಗ ಮಾತ್ರ ಮೌನಿ. ಕಣ್ಣು ನೋಡಿ ಮಾತನಾಡುವ ಸಾಮರ್ಥ್ಯವೇ ಇಲ್ಲ. ಮುಖಾಮುಖಿ ಸಂಭಾಷಣೆಯ ಅನುಭವ, ಅರಿವು ಯಾವುದೂ ಇಲ್ಲ. ಇದು ಹರೆಯರಲ್ಲಿ ಮಾತ್ರ ಅಲ್ಲ. ಹರೆಯ ದಾಟಿದ ಹಲವರಲ್ಲೂ ಇಂತಹ ಸ್ವಭಾವವನ್ನು ನಾನು ನೋಡಿದ್ದೇನೆ. ಆ ಸಂದರ್ಭಕ್ಕೆ ಅದು ಸಮಸ್ಯೆಯಲ್ಲ. ಹಾಗಂತೆ ಭವಿಷ್ಯ ಹೀಗೆಯೇ ಇರುವುದಿಲ್ಲ ನೋಡಿ. ಮುಂದೆ ಮದುವೆ, ಮಕ್ಕಳು, ಸಂಸಾರ, ಜವಾಬ್ದಾರಿ, ಕೆಲಸ-ಕಾರ್ಯ ಎಂಬ ಜಂಜಾಟಗಳು ಬಂದಾಗ ಬದುಕು ಒಂದು ಸಮಸ್ಯೆಯಾಗಬಹುದು.
ಸ್ನೇಹಿತನೋ, ಅಪ್ಪ ಅಮ್ಮನೋ, ಸಂಬಂಧಿಕರೋ ಅಥವಾ ಇನ್ಯಾರೋ ಪರಿಚಿತ ವ್ಯಕ್ತಿಯೊಂದಿಗೆ ಕುಳಿತು ಕಣ್ಣನ್ನು ನೋಡುತ್ತಾ ತಲೆ ಎತ್ತಿ ಮಾತನಾಡಲು ಹಿಂಜರಿಯುವ ಹುಡುಗ; ಮುಂದೆ ಮದುವೆಯಾಗಲೇಬೇಕು. ಆಕೆಯೊಂದಿಗೆ 'ಮುಖ ನೋಡಿ ಮಾತನಾಡಲಾರೆ, ವಾಟ್ಸಾಪ್‌ನಲ್ಲೇ ಮೆಸೇಜ್ ಮಾಡುವೆ' ಎನ್ನಲು ಸಾಧ್ಯವೇ? ಹರೆಯದ ಯುವತಿಯರಿಗೂ ಇದು ಅನ್ವಯಿಸುತ್ತದೆ. ಮುಖತಃ ಸಂಭಾಷಣೆಗೆ ನಾಚಿ ಹಿಂಜರಿದರೆ ಗೃಹಸ್ಥ ಬದುಕು ಖಂಡಿತಾ ಕಷ್ಟ. ಮದುವೆ, ಸಂಸಾರ, ಮಕ್ಕಳು ಇದು ಬದುಕಿನ ಒಂದು ಭಾಗ. ಹೀಗಾಗಿ ಈ ಸ್ವಭಾವವನ್ನು ಗಂಭೀರವಾಗಿ ಪರಿಗಣಿಸಿ ಬದಲಾವಣೆಯ ಪ್ರಯತ್ನ ತರಬೇಕು.
ಈ ಬದಲಾವಣೆಗಳಿಗೆ ಮುನ್ನುಡಿ ಬರೆಯಿರಿ
ಹರೆಯರ ಪ್ರತಿಯೊಂದು ನಡವಳಿಕೆಗಳ ಮೇಲೆ ಪೋಷಕರು ಕಣ್ಣಿಡಬೇಕು. ಹರೆಯರ ತಪ್ಪು ಒಪ್ಪುಗಳಲ್ಲಿ, ಹೆತ್ತವರ ಪಾತ್ರ ದೊಡ್ಡದು. ನಾನು ಈ ಹಿಂದೆಯೇ ಹೇಳಿರುವಂತೆ ಮಕ್ಕಳ ಮತ್ತು ಹದಿಹರೆಯರಲ್ಲಿ ನೂರಾರು ಸಾವಿರ ಪ್ರಶ್ನೆಗಳಿರುತ್ತವೆ. ಅದು ಸಹಜ. ಅದಕ್ಕೆ ಪೋಷಕರು, ಹಿರಿಯರು, ತಿಳಿದವರು ಉತ್ತರಿಸಲೇಬೇಕು. ಪ್ರಶ್ನಿಸುವುದು ಹರೆಯರು ಹಕ್ಕು. ಉತ್ತರಿಸುವುದು ಹಿರಿಯರ ಕರ್ತವ್ಯ ಮತ್ತು ಜವಾಬ್ದಾರಿ.
ಹರೆಯರು ಮುಕ್ತವಾಗಿ ಮಾತನಾಡುವ ವಾತಾವರಣ ಕಲ್ಪಿಸಬೇಕು. ಮುಕ್ತವಾಗಿ, ಸ್ನೇಹಿತರಾಗಿ, ಏನೇ ಪ್ರಶ್ನೆ ಕೇಳಿದರೂ ವಯಸ್ಸನ್ನು ಅರ್ಥ ಮಾಡಿಕೊಂಡು ಗದರದೆ ಉತ್ತರಿಸಬೇಕು. ಭಾವನೆಯನ್ನು ಅರ್ಥ ಮಾಡಿಕೊಂಡು, ಗೊಂದಲಗಳನ್ನು ಗ್ರಹಿಸಿ ಮಾತನಾಡುವ ಸಾಮರ್ಥ್ಯ ಪೋಷಕರಿಗಿರಬೇಕು.
ಹದಿಹರೆಯದ ವಯಸ್ಸಿನಲ್ಲಿ ಮುಕ್ತ ಮಾತಿಗೆ ವಾತಾವರಣ ಕಲ್ಪಿಸದಿದ್ದರೆ, ಅಂತಹ ಹದಿಹರೆಯರು ವಿರ್ಚುವಲ್ ಭಾವನೆಯನ್ನು ಅರಸುತ್ತಾರೆ. ತಮ್ಮ ಭಾವನೆಯನ್ನು ವ್ಯಕ್ತಪಡಿಸಲು, ಮನಸಿನ ಮಾತು ಕೇಳಲು ಮತ್ತೊಂದು ಜೀವ ಇಲ್ಲವಾದಾಗ, ಯಾರೋ ಆನ್‌ಲೈನ್ ಸ್ನೇಹಿತನೋ, ಫೇಸ್‌ಬುಕ್ ಫ್ರೆಂಡ್ ಜೊತೆಗೂ ಸಂಭಾಷಣೆ ಬೆಳೆಸುತ್ತಾರೆ. ತಮ್ಮ ಭಾವನೆಯನ್ನು ಯಾವುದೋ ರೂಪಗಳಲ್ಲಿ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಗುರುತು ಪರಿಚಯವೇ ಇಲ್ಲದ ಆನ್‌ಲೈನ್ ಸ್ನೇಹಿತನೊಂದಿಗೆ ಆಪ್ತನಾಗಿ, ವಾಸ್ತವ ಬದುಕಿನ ಪರಿಚಿತ ವ್ಯಕ್ತಿಗಳಿಗಿಂತಲೂ ವಿರ್ಚುವಲ್ ಸ್ನೇಹಿತನಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇದೇ ವೇಳೆ ಮುಖತಃ ಮಾತು, ಸಂಭಾಷಣೆ, ಜನರೊಂದಿಗೆ ಒಡನಾಟ ಕಡಿಮೆಯಾಗುತ್ತಾ ಸಾಗುತ್ತದೆ. ಸಹಜವಾಗಿಯೇ ಯಾರಾದರೂ ಅವರ ಕಣ್ಣೆದುರು ನಿಂತು ಮಾತನಾಡಿದರೆ ಅದು ಅವರಿಗೆ ತೀರಾ ಹೊಸದೆನಿಸುತ್ತದೆ. ಈ ಹೀಗಾಗಿ ಈ ಸಮಸ್ಯೆಯ ಮೂಲವನ್ನು ಹುಡುಕಿದರೆ ಉತ್ತರ ಅಲ್ಲೇ ಸಿಗುತ್ತದೆ.
ಮಕ್ಕಳಿರಲಿ, ಹದಿಹರೆಯರಿರಲಿ. ಅವರಿಗೆ ಕಣ್ಣು ನೋಡಿ ಮಾತನಾಡಲು ಕಲಿಸಿ. ಯಾರೊಂದಿಗೆ ಮಾತನಾಡುವಾಗಲೂ ಕಣ್ಣನ್ನು ನೋಡಲಿ. ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇದ್ದರೆ, ಅವರ ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿ. ಸಂವಹನ ಕೌಶಲ್ಯ ಬೆಳೆಸಲು ಹರೆಯರಿಗೆ ನಿಮ್ಮ ಅನುಭವದ ಮೇಲೆ ತರಬೇತಿ ಕೊಡಿ.
ಮುಖ ನೋಡಿ ಮಾತನಾಡಲು ಹಿಂಜರಿದರೆ, ಅದರಿಂದ ಭವಿಷ್ಯದಲ್ಲಿ ಆಗಬಹುದಾದ ಸಮಸ್ಯೆಯ ಬಗ್ಗೆ ಲಘು ಎಚ್ಚರಿಕೆ ನೀಡಿ. ಅದನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿ.
ಸ್ಕ್ರೀನಿಂಗ್ ಸಮಯದ ಮೇಲೆ ನಿಗಾ ಇರಿಸಿ. ಅವರ ಸ್ನೇಹಿತರು ಯಾರು, ಮೊಬೈಲ್‌ನಲ್ಲಿ ಅವರ ಆಕ್ಟಿವಿಟಿಗಳ ಮೇಲೆ ಒಂದು ಕಣ್ಣಿಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಸ್ನೇಹಿತ ಸಿಕ್ಕರೆ, ಅವರ ಬಗ್ಗೆ ಮಾಹಿತಿ ಕಲೆ ಹಾಕಿ ಭೇಟಿ ಮಾಡುವ ಅವಕಾಶ ಮಾಡಿ ಕೊಡಿ. ನೇರ ಸಭಾಷಣೆ ಬೆಳೆಸುವಂತೆ ಮಾಡಿ.
ವಿರ್ಚುವಲ್ ಭಾವನೆಗೂ ವಾಸ್ತವಕ್ಕೂ ವ್ಯತ್ಯಾಸ ತಿಳಿಸಿ. ನಾವು 10 ಶೇಕಡದಷ್ಟು ಮಾತ್ರ ವಿರ್ಚುವಲ್ ಬದುಕಿಗೆ ಒಗ್ಗಿಕೊಂಡು ಉಳಿದ 90ರಷ್ಟು ಪ್ರಮಾಣವನ್ನು ವಾಸ್ತವ ಭಾವನಾತ್ಮಕ ಬದುಕಿಗೆ ಸೀಮಿತವಾಗಿಸಬೇಕು. ಇದಕ್ಕೆ ತದ್ವಿರುದ್ಧವಾಗಿ ಶೇಕಡಾ 90ರಷ್ಟು ಡಿಜಿಟಲ್ ಭಾವನೆಗಳಿಗೆ ಒತ್ತುಕೊಟ್ಟರೆ ಬದುಕು ಅರ್ಥಹೀನ. ಈ ಪ್ರಮಾಣವನ್ನು ಸರಿಯಾಗಿಸಬೇಕು.
ಕೊನೆಯದಾಗಿ ಒಂದು ಮಾತು. ಡಿಜಿಟಲ್ ಸ್ನೇಹಿತನಿಗಾಗಿ ಹೆಚ್ಚು ಭಾವನೆ ಮೀಸಲಿಡಬೇಡಿ. ಪ್ರತಿ ಸಂದರ್ಭದಲ್ಲಿ ನಮ್ಮ ಜೊತೆಗಿದ್ದು ಕೈ ಹಿಡಿದು ನಡೆಸುವವರೇ ನಮ್ಮವರು. ನಮ್ಮೆದುರು ಬಂದವರ ಮುಂದೆ ಮಾತನಾಡಲು ಹಿಂದೆ ಮುಂದೆ ನೋಡಲು ಕಾರಣಗಳೇ ಇಲ್ಲ. ಹೀಗಾಗಿ ಸ್ಕ್ರೀನಿಂಗ್ ಸಮಯವನ್ನು ಜನರೊಂದಿಗೆ ಬೆರೆಯಲು ವಿನಿಯೋಗಿಸಿ. ಅಂತರ್ಮುಖಿಗಳಾದರೂ ಸಮಸ್ಯೆ ಇಲ್ಲ. ಭಾವನೆಗಳನ್ನು ಬಿಗಿದಿಟ್ಟುಕೊಂಡು ಕೊನೆಗೆ ಭಾವನೆಯೇ ಇಲ್ಲದ ಕೃತಕ ಬುದ್ಧಿಮತ್ತೆಯ ರೋಬೋಗಳಾಗಬೇಡಿ. ನಮ್ಮ ಬದುಕು ನಮ್ಮ ಕೈಯಲ್ಲೇ ಇದೆ. ಬದಲಾವಣೆಗೆ ನಾವೇ ಮುಂದಡಿ ಇಡಬೇಕು. ಮುಂದಿನ ವಾರ ಮತ್ತೊಂದು ವಿಷಯದೊಂದಿಗೆ ಮತ್ತೆ ಬರುತ್ತೇನೆ.
-ಜಯರಾಜ್ ಅಮಿನ್
ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ jayaraj@htdigital.in ಅಥವಾ ht.kannada@htdigital.in ಗೆ ಈಮೇಲ್ ಮಾಡಿ. ಹದಿಹರೆಯರ ಸಮಸ್ಯೆಗಳ ಕುರಿತು ಈ ಅಂಕಣಕ್ಕೆ ಸೂಕ್ತ ವಿಷಯಗಳನ್ನು ಸಲಹೆ ನೀಡಿ.
ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.