Scorpio Horoscope in 2024: ಒಳ್ಳೆ ಕೆಲಸಕ್ಕೆ ಗುರು ಹಿರಿಯರ ಸಹಕಾರ, ವಿದೇಶಕ್ಕೆ ತೆರಳುವ ಅವಕಾಶ; ವೃಶ್ಚಿಕ ರಾಶಿಯವರ 2024ರ ವರ್ಷ ಭವಿಷ್ಯ
Dec 26, 2023 08:10 AM IST
2024ರ ವೃಶ್ಚಿಕ ರಾಶಿ ವರ್ಷ ಭವಿಷ್ಯ
Scorpio Horoscope in 2024: ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ? ವೃಶ್ಚಿಕ ರಾಶಿ ವರ್ಷ ಭವಿಷ್ಯ ಹೀಗಿದೆ.
2024ರ ವೃಶ್ಚಿಕ ರಾಶಿ ವರ್ಷ ಭವಿಷ್ಯ: ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತಮವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕ್ಷಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ಥಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. 2024 ವರ್ಷ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರಸ್ತುತಪಡಿಸುತ್ತಿದ್ದಾರೆ. ವೃಶ್ಚಿಕ ರಾಶಿಯವರ ವರ್ಷ ಭವಿಷ್ಯ ಹೀಗಿದೆ.
ತಾಜಾ ಫೋಟೊಗಳು
ಕೆಲಸದ ಯಶಸ್ಸಿಗೆ ಹೆಚ್ಚಿನ ಶ್ರಮದ ಅವಶ್ಯಕತೆ
ಆತ್ಮವಿಶ್ವಾಸ ಒಳ್ಳೆಯದು, ಆದರೆ ನಾನೇ ಸರಿ ಎಂಬ ಭಾವನೆ ಬಿಡುವುದು ಒಳ್ಳೆಯದು. ವೃಶ್ಚಿಕ ರಾಶಿಯವರಿಗೆ 2024ರಲ್ಲಿ ಶುಭ ಫಲಗಳು ದೊರೆಯಲಿವೆ. ಏಪ್ರಿಲ್ ನಂತರ ಯಾವುದೇ ಕೆಲಸ ಕಾರ್ಯವಾದರೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಒಮ್ಮೆ ಕೈಹಿಡಿದ ಕೆಲಸ ಕಾರ್ಯಗಳು ಸಂಪೂರ್ಣವಾಗುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ.
ಪರಿಶ್ರಮದಿಂದ ಮಾತ್ರ ತಮ್ಮ ಗುರಿ ತಲುಪಲು ಸಾಧ್ಯ. ಜನ ಸಾಮಾನ್ಯರನ್ನು ಸುಲಭವಾಗಿ ಆಕರ್ಷಿಸುವಂತಹ ಆಕರ್ಷಣೆ ನಿಮ್ಮಲ್ಲಿದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಸಮಯಕ್ಕೆ ತಕ್ಕಂತೆ ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ. ಆತ್ಮೀಯರ ಜೊತೆ ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗಬಹುದು. ಸ್ವಂತ ಮನೆಯ ಆಸೆ ಸುಲಭವಾಗಿ ಕೈಗೂಡುತ್ತದೆ. ಹಿರಿಯ ಸೋದರಿಯ ಕೌಟುಂಬಿಕ ಜೀವನದಲ್ಲಿ ಸುಖ ಶಾಂತಿ, ಮನೆ ಮಾಡಿರುತ್ತದೆ. ಉಸಿರಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಎಚ್ಚರಿಕೆ ವಹಿಸಬೇಕು. ಯೋಚಿಸದೆ ಆಡುವ ಮಾತುಗಳು ವಿವಾದಕ್ಕೆ ಕಾರಣವಾಗಬಹುದು. ಆತ್ಮೀಯರು ನಿಮ್ಮೊಂದಿಗೆ ವಾದ ವಿವಾದದಲ್ಲಿ ತೊಡಗುತ್ತಾರೆ. ಆದರೆ ನಯವಾದ ಮಾತು ಕತೆಯಿಂದ ಅವರನ್ನು ಸಮಾಧಾನಗೊಳಿಸುವಿರಿ. ಉದ್ಯೋಗ ಬದಲಿಸಲು ಯೋಚಿಸುವಿರಿ. ಮೇ ತಿಂಗಳಿನಿಂದ ಹೊಸ ಜೀವನ ಆರಂಭವಾಗುವುದು.
ಅಪರಿಚಿತರ ಮಾತಿಗೆ ಮನ್ನಣೆ ನೀಡಬೇಡಿ
ಬೇಗ ಕೋಪ ಬಂದರೂ ಶಾಂತಿ ಸಂಯಮದಿಂದ ವರ್ತಿಸುವಿರಿ. ಬೇರೆಯವರ ಅಧೀನಕ್ಕೆ ಒಳಗಾಗದೆ ಬುದ್ದಿವಂತಿಕೆಯಿಂದ ಕೆಲಸ ಸಾಧಿಸುವಿರಿ. ಅನಿರೀಕ್ಷಿತ ಆದಾಯ ಹಣಕಾಸಿನ ಕೊರತೆಯನ್ನು ನೀಗಿಸುತ್ತದೆ. ನಿಮ್ಮ ಮಾತಿಗೆ ಬೆಲೆ ನೀಡಿ ಆತ್ಮೀಯರು ಮರಳಿ ಸಂಪರ್ಕಕ್ಕೆ ಬರುತ್ತಾರೆ. ಸೋದರರ ಜೊತೆಗಿನ ವಿರಸ ಮರೆಯಾಗಲಿದೆ. ನಿಮ್ಮ ಮುಂದಾಳತ್ವದಲ್ಲಿ ಸೋದರಿಯ ವಿವಾಹವೂ ನಡೆಯಲಿದೆ. ಮಾಡುವ ಉತ್ತಮ ಪ್ರಯತ್ನಗಳಿಗೆ ಗುರು ಹಿರಿಯರ ಸಹಾಯ ಸಹಕಾರ ಸದಾ ದೊರೆಯುತ್ತದೆ. ಚಿಕ್ಕ ಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ. ಆದರೆ ಅಪಜಯದ ಸುಳಿವು ಇರುವುದಿಲ್ಲ.
ಅಪರಿಚಿತರ ಮಾತುಗಳಿಗೆ ಮನ್ನಣೆ ನೀಡಿದರೆ ತೊಂದರೆ ಉಂಟಾಗಬಹುದು. ಕುಟುಂಬದ ಹಳೆಯ ಮನೆಯನ್ನು ನವೀಕರಣಗೊಳಿಸುವ ತೀರ್ಮಾನಕ್ಕೆ ಬರುವಿರಿ. ಸೋದರಿಯ ಸಹಾಯ ದೊರೆಯುತ್ತದೆ. ತಾಯಿಗೆ ಆರೋಗ್ಯದಲ್ಲಿ ತೊಂದರೆ ಕಾಡಬಹುದು. ವಿದ್ಯಾರ್ಥಿಗಳು ಒತ್ತಡದ ನಡುವೆಯೂ ಗೆಲುವಿನ ಹಾದಿಯಲ್ಲಿ ಮುನ್ನಡೆಯುತ್ತಾರೆ. ಪೋಷಕರ ಮತ್ತು ಶಿಕ್ಷಕರ ಸಹಾಯ ಸಹಕಾರದ ಅವಶ್ಯಕತೆ ಇರುತ್ತದೆ. ನಿಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.
ವಾಹನ ಚಾಲನೆ ವೇಳೆ ಎಚ್ಚರಿಕೆ ಅಗತ್ಯ
ಉದ್ಯೋಗದಲ್ಲಿ ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸುವುದಿಲ್ಲ. ಕೋಪ ಬಂದಲ್ಲಿ ಉದ್ವೇಗದಿಂದ ವರ್ತಿಸುವಿರಿ. ಶಾಂತಿಯಿಂದ ವರ್ತಿಸಿದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮಾತುಕತೆಯಿಂದ ಕೆಲಸ ಸಾಧಿಸುವಿರಿ. ಸದಾ ಕಾಲ ಮಕ್ಕಳ ಸಹಾಯ ದೊರೆಯಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ. ಕುಟುಂಬದ ಸದಸ್ಯರ ಜೊತೆ ಸೇರಿ ಮಾಡುವ ಪಾಲುದಾರಿಕೆ ವ್ಯಾಪಾರ ಲಾಭದಾಯಕ. ಹಣಕಾಸಿನ ವಿಚಾರದಲ್ಲಿ ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಬಂಧು-ಬಳಗದವರ ನಡುವೆ ನಾಯಕರಂತೆ ಬಾಳುವಿರಿ. ಸಾಕು ಪ್ರಾಣಿಗಳ ಜೊತೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ. ಮನೆಗೆ ಹೊಸ ವಸ್ತು ಅಥವಾ ಸಾಕುಪ್ರಾಣಿಯನ್ನು ತರುವಿರಿ. ವರ್ಷವಿಡೀ ಅದೃಷ್ಟದ ಸವಿಯನ್ನು ಸವಿಯಬಹುದು. ಬಹು ದಿನಗಳಿಂದ ಅಪೂರ್ಣಗೊಂಡಿದ್ದ ಕೆಲಸ ಸುಲಭವಾಗಿ ಕಾರ್ಯಗತಗೊಳ್ಳುತ್ತದೆ. ತಾಯಿಯ ಹೆಸರಿನಲ್ಲಿರುವ ಆಸ್ತಿ ಅಥವಾ ಹಣದ ಬಹುಪಾಲು ಉಡುಗೊರೆಯಾಗಿ ದೊರೆಯುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಉದ್ಯೋಗದಲ್ಲಿ ಎದುರಾಗಿದ್ದ ಸಮಸ್ಯೆಯೂ ದೂರವಾಗಲಿದೆ. ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸವನ್ನು ಮರಳಿ ಗಳಿಸುವಿರಿ. ಕುಟುಂಬದವರ ಜೊತೆ ವರ್ಷದ ಅಂತ್ಯದಲ್ಲಿ ವಿದೇಶಕ್ಕೆ ತೆರಳಬಹುದು. ಒಟ್ಟಾರೆ ಹೊಸ ವರ್ಷ ಹೊಸ ಚೇತನವನ್ನು ನೀಡಲಿದೆ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).