Finance Horoscope: 2024ರ ಸಿಂಹ, ಕನ್ಯಾ ರಾಶಿಯ ಹಣಕಾಸು ಭವಿಷ್ಯ; ಏಪ್ರಿಲ್ ನಂತರ ನಿರೀಕ್ಷೆಯಂತೆ ಹಣ ಗಳಿಕೆ, ಖರ್ಚು ವೆಚ್ಚಗಳತ್ತ ಗಮನಹರಿಸಿ
Dec 27, 2023 03:20 PM IST
2024ರ ಸಿಂಹ ಹಾಗೂ ಕನ್ಯಾ ರಾಶಿಯ ಹಣಕಾಸು ಭವಿಷ್ಯ
- Money Horoscope 2024: ಹೊಸ ವರ್ಷದಲ್ಲಿ ನಮ್ಮ ಹಣಕಾಸಿನ ಪರಿಸ್ಥಿತಿ ಹೇಗಿರಬಹುದು ಎಂದು ತಿಳಿದುಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 2024ರ ಸಿಂಹ ಹಾಗೂ ಕನ್ಯಾ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಲಿದೆ ಈ ಲೇಖನ.
2023ನೇ ವರ್ಷ ಮುಗಿದು 2024ನೇ ವರ್ಷದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ಮುಂದಿನ ವರ್ಷದ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಬಹುತೇಕರಲ್ಲಿ ಕುತೂಹಲವಿರುತ್ತದೆ. ಹಾಗಾದರೆ ಇಂದಿನ ಲೇಖನದಲ್ಲಿ ಸಿಂಹ ಹಾಗೂ ಕನ್ಯಾ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ತಿಳಿಯೋಣ.
ತಾಜಾ ಫೋಟೊಗಳು
ಸಿಂಹ
ಹಣಕಾಸಿನ ವಿಚಾರದಲ್ಲಿ ನಿಮ್ಮ ನಿರೀಕ್ಷೆಯನ್ನು ತಲುಪುವುದು ಕಷ್ಟ ಸಾಧ್ಯವಾಗುತ್ತದೆ. ಆತ್ಮೀಯರ ಅಥವಾ ಕುಟುಂಬದವರ ಸಹಾಯದಿಂದ ಉತ್ತಮ ಹಣ ಗಳಿಕೆ ಸಾಧ್ಯತೆ. ಕೊಂಚವೂ ಯೋಚಿಸದೆ ಹಣಕಾಸಿನ ವಿಚಾರದಲ್ಲಿ ನೀಡುವ ಆಶ್ವಾಸನೆಯಿಂದ ತೊಂದರೆ ಅನುಭವಿಸುವಿರಿ. ನಿಮ್ಮ ಒಳ್ಳೆಯತನವನ್ನು ಉಪಯೋಗಪಡಿಸಿಕೊಳ್ಳುವ ಜನರ ಮಧ್ಯೆ ಎಚ್ಚರಿಕೆ ಇರಲಿ. ಏಪ್ರಿಲ್ ತಿಂಗಳ ಅಂತ್ಯದವರೆಗೂ ನಿಮ್ಮ ನಿರೀಕ್ಷೆಯಂತೆ ಹಣ ಗಳಿಸಬಹುದು. ಈ ಅವಧಿಯಲ್ಲಿ ಅನಿರೀಕ್ಷಿತ ಧನ ಲಾಭವಿರುತ್ತದೆ. ಹಣದ ಕೊರತೆ ಉಂಟಾದಾಗ ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ. ಅತಿಯಾದ ಆಸೆ ಆಕಾಂಕ್ಷಿಗಳಿಂದ ನಿರಾಸೆ ಉಂಟಾಗಲಿದೆ. ಸಾಧ್ಯವಾದಷ್ಟು ಮುಂದಿನ ದಿನಗಳಿಗಾಗಿ ಹಣವನ್ನು ಉಳಿಸಲು ಪ್ರಯತ್ನಿಸಿರಿ. ಹಣದ ಆದಾಯ ಮತ್ತು ಖರ್ಚನ್ನು ಸರಿಹೊಂದಿಸಲು ಮತ್ತೊಂದು ವೃತ್ತಿಯನ್ನು ಆಶ್ರಯಿಸುವಿರಿ. ಫೆಬ್ರವರಿಯ ನಂತರ ಅನಿರೀಕ್ಷಿತ ಧನ ಲಾಭವನ್ನು ನಿರೀಕ್ಷಿಸಬಹುದು.
ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಗಳಿಸುವಿರಿ. ಭೂ ವಿವಾದವು ಕೊನೆಗೊಳ್ಳುವ ಕಾರಣಕ್ಕಾಗಿ ಉತ್ತಮ ಲಾಭಾಂಶ ಗಳಿಸುವಿರಿ. ಕಮಿಷನ್ ಆಧಾರಿತ ವ್ಯಾಪಾರ ವ್ಯವಹಾರಗಳು ಹೆಚ್ಚಿನ ಲಾಭ ನೀಡುತ್ತದೆ.
ಇದನ್ನೂ ಓದಿ: Leo Astrology in 2024: ದುಡುಕಿನ ನಿರ್ಧಾರ ಬೇಡ, ನಿಶ್ಚಯವಾದ ವಿವಾಹ ಮುಂದೂಡಲ್ಪಡಬಹುದು; ಸಿಂಹ ರಾಶಿಯ ವರ್ಷಭವಿಷ್ಯ
ಮೇ ತಿಂಗಳಿನ ನಂತರ ಆದಾಯದಲ್ಲಿ ಕೊರತೆ ಕಂಡುಬಂದರೂ ನಿರ್ವಹಣಾ ಸಾಮರ್ಥ್ಯವು ದೊರೆಯುತ್ತದೆ. ಪ್ರಯತ್ನಕ್ಕೆ ತಕ್ಕಂತಹ ಪ್ರತಿಫಲವು ದೊರೆಯುತ್ತದೆ. ಮಕ್ಕಳಿಗೆ ಉದ್ಯೋಗ ದೊರೆವ ಕಾರಣ ಹಣದ ಕೊರತೆ ಕಡಿಮೆ ಇರುತ್ತದೆ. ಕೂಡಿಟ್ಟ ಹಣವನ್ನು ಮನೆ ಅಥವಾ ಜಮೀನು ಕೊಳ್ಳಲು ಬಳಸುವಿರಿ. ಆತ್ಮೀಯರ ಸಹಕಾರದ ಕಾರಣ ಹಣದ ಕೊರತೆ ಕಡಿಮೆ ಆಗಲಿದೆ. ಉತ್ತಮ ತಾಂತ್ರಿಕ ಪರಿಣತಿ ಇದ್ದಲ್ಲಿ ಉನ್ನತ ಮಟ್ಟದ ಆದಾಯ ಗಳಿಸುವಿರಿ. ಕಷ್ಟಕ್ಕೆಂದು ಆತ್ಮೀಯರಿಗೆ ನೀಡಿದ್ದ ಹಣವು ಸಕಾಲಕ್ಕೆ ದೊರೆಯಲಿದೆ. ತಾಯಿಯವರಿಂದ ಹಣದ ಸಹಾಯವು ದೊರೆತು ಸಂತಸದ ಜೀವನ ನಡೆಸುವಿರಿ. ದೊಡ್ಡ ಮೊತ್ತದಲ್ಲಿ ದೊರೆಯಬೇಕಾಗಿದ್ದ ಹಣವು ಕಂತಿನ ರೂಪದಲ್ಲಿ ದೊರೆಯುತ್ತದೆ. ಹಣದ ಕೊರತೆಯ ನಡುವೆಯೂ ಷೇರುಗಳಲ್ಲಿ ಹಣವನ್ನು ತೊಡಗಿಸುವಿರಿ. ಅಕ್ಟೋಬರ್ ತಿಂಗಳ ಉತ್ತರಾರ್ಧ ಮತ್ತು ನವೆಂಬರ್ ತಿಂಗಳ ಪೂರ್ವ ಬಿಟ್ಟು ಉಳಿದ ದಿನಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ.
ಕನ್ಯಾ
ದೃಢವಾದ ಮನಸ್ಥಿತಿ ಇದ್ದರೆ ಹಣಕಾಸಿನ ತೊಂದರೆ ಕಾಣುವುದಿಲ್ಲ. ದುಡುಕಿನ ಮಾತಿನಿಂದ ಹಣದ ವಿಚಾರದಲ್ಲಿ ತೊಂದರೆ ಅನುಭವಿಸುವಿರಿ. ಹಣಕಾಸಿನ ವಿಚಾರವು ಸಂಪೂರ್ಣವಾಗಿ ನಿಮ್ಮ ರೀತಿ ನೀತಿಯನ್ನು ಅವಲಂಬಿಸಿರುತ್ತದೆ. ಮಾಡುವ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಗಳಿಸುವಿರಿ. ಬೇರೆಯವರನ್ನು ಅವಲಂಬಿಸದೆ ಹೋದಲ್ಲಿ ಬರುವ ಆದಾಯದಲ್ಲಿ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಮಕ್ಕಳ ಸಹಾಯ ಸಹಕಾರ ದೊರೆವ ಕಾರಣ ಅಗತ್ಯಕ್ಕೆ ತಕ್ಕಷ್ಟು ಹಣವನ್ನು ಸಂಪಾದಿಸಬಲ್ಲಿರಿ. ಎಂದೋ ಬರುವ ಹಣವನ್ನು ನಂಬಿ ಯಾವುದೇ ಯೋಜನೆ ರೂಪಿಸದಿರಿ. ಆತ್ಮೀಯರಿಂದ ಸಮಯಕ್ಕೆ ತಕ್ಕಂತೆ ಹಣದ ಸಹಾಯ ದೊರೆಯುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಜಮೀನಿನ ಮಾರಾಟದಲ್ಲಿ ಹಣವು ದೊರೆಯುತ್ತದೆ. ಕ್ರಮೇಣವಾಗಿ ಕೊರತೆ ಕಡಿಮೆಯಾಗುತ್ತದೆ.
ಅನಿರೀಕ್ಷಿತ ಧನ ಲಾಭವಿರುತ್ತದೆ. ಆದರೆ ದೊರೆಯುವ ಅವಕಾಶವನ್ನು ಕಳೆದುಕೊಳ್ಳಬೇಡಿರಿ. ಖರ್ಚು ವೆಚ್ಚಗಳ ಮೇಲೆ ಹಿಡಿತ ಸಾಧಿಸುವುದು ಬಲುಮುಖ್ಯ. ಆದರೆ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ಉತ್ತಮ ಆದಾಯವನ್ನು ನೀಡುತ್ತದೆ.
ಇದನ್ನೂ ಓದಿ: Virgo Astrology in 2024: ಅನಿವಾರ್ಯವಾಗಿ ಅಪರಿಚಿತರ ಜೊತೆ ವಿವಾಹ, ಕೆಲವರಿಗೆ 2ನೇ ಮದುವೆ ಯೋಗ; ಕನ್ಯಾ ರಾಶಿ ವರ್ಷಭವಿಷ್ಯ
ಏಪ್ರಿಲ್ ತಿಂಗಳು ಕಳೆದ ನಂತರ ನಿಧಾನಗತಿಯಲ್ಲಿ ಆರ್ಥಿಕಾಭಿವೃದ್ಧಿ ಉಂಟಾಗುತ್ತದೆ. ಹಣ ಗಳಿಸಲು ಹೊಸ ಬಗೆಯ ಅವಕಾಶಗಳು ದೊರೆಯುತ್ತವೆ. ಕುಟುಂಬದ ಹಿರಿಯರ ಜೊತೆಯಲ್ಲಿ ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸಿ ಯಶಸ್ಸು ಗಳಿಸುವಿರಿ. ಹಲವಾರು ಹಣಕಾಸಿನ ಯೋಜನೆಗಳಲ್ಲಿ ಹಣವನ್ನು ತೊಡಗಿಸಿ ಯಶಸ್ವಿಯಾಗುವಿರಿ. ಆತ್ಮೀಯರ ಸಹಾಯದಿಂದ ಉತ್ತಮ ಉದ್ಯೋಗ ದೊರೆತು ಆರ್ಥಿಕವಾಗಿ ಸದೃಢರಾಗುವಿರಿ. ಯಾವುದೇ ಹಣಕಾಸಿನ ಯೋಜನೆಗಳಲ್ಲಿ ಹಣವನ್ನು ತೊಡಗಿಸುವ ಮುನ್ನ ಬೇರೆಯವರ ಸಲಹೆ ಪಡೆಯಿರಿ. ಆತುರದ ಮನಸ್ಸು ಆದಾಯದಲ್ಲಿ ಸಮಸ್ಯೆಯನ್ನು ಉಂಟು ಮಾಡುತ್ತದೆ. ಯಂತ್ರೋಪಕರಣಗಳ ಬಿಡಿ ಭಾಗಗಳ ವ್ಯಾಪಾರ ಉತ್ತಮ ಆದಾಯ ನೀಡುತ್ತದೆ. ಖ್ಯಾತ ಸಂಸ್ಥೆಯೊಂದರ ಸಹಭಾಗಿತ್ವ ದೊರೆತು ದಾಯ ಹೆಚ್ಚುತ್ತದೆ. ಈ ವರ್ಷ ಹಣಕಾಸಿನ ಸ್ಥಿತಿಯು ನಿಮ್ಮ ತೀರ್ಮಾನಗಳನ್ನು ಅವಲಂಬಿಸಿರುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).