Ayodhya Rama Temple: ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಬಾಲರಾಮ ಪ್ರವೇಶ; ಮುದ್ದು ರಾಮನಿಗೆ ಇಂದು ಘೃತಾಧಿವಾಸ
Jan 19, 2024 10:20 AM IST
ಬಾಲರಾಮನ ಮೊದಲ ಚಿತ್ರ, ಪಕ್ಕದಲ್ಲಿರುವುದು ನಿರ್ಮಾಣ ಹಂತದ ರಾಮಮಂದಿರ
Ayodhya Rama Temple: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಗೆ ಬಾಲರಾಮ ವಿಗ್ರಹ ಪ್ರವೇಶವಾಗಿದ್ದು,, ಕೂರ್ಮಪೀಠದಲ್ಲಿ ಸ್ಥಾಪಿಸಲಾಗಿದೆ. ಇದೇ ವೇಳೆ, ಬಾಲರಾಮ ವಿಗ್ರಹದ ಮೊದಲ ಚಿತ್ರ ಬಹಿರಂಗವಾಗಿದೆ. ಇಂದು ಘೃತಾಧಿವಾಸ ಮತ್ತು ವಿವಿಧ ಧಾರ್ಮಿಕ ಚಟುವಟಿಕೆ ನಡೆಯಲಿದೆ
ಅಯೋಧ್ಯೆ: ಶ್ರೀರಾಮ ಜನ್ಮಭೂಮಿಯ ರಾಮ ಮಂದಿರದ ಗರ್ಭಗುಡಿಗೆ ಗುರುವಾರ ಬಾಲರಾಮ ವಿಗ್ರಹ ಪ್ರವೇಶವಾಗಿದ್ದು, ಕೂರ್ಮಪೀಠದ ಮೇಲೆ ಕೂರಿಸಲಾಗಿದೆ. ಬಾಲರಾಮನ ವಿಗ್ರಹದ ಮುಖವನ್ನು ಬಟ್ಟೆ ಮುಸುಕುಹಾಕಿ ಮರೆಮಾಡಲಾಗಿದೆ. ಜನವರಿ 22ರಂದು ದರ್ಪಣ ಶಾಸ್ತ್ರ ನಡೆಸಿದ ಬಳಿಕ ಈ ಮುಸಕನ್ನು ತೆಗೆಯಲಾಗುತ್ತದೆ.
ತಾಜಾ ಫೋಟೊಗಳು
ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಜ.22ರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಕಡೆಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಬಾಲರಾಮನ ಮೂರ್ತಿಯನ್ನು ಬುಧವಾರ ರಾಮಮಂದಿರಕ್ಕೆ ತರಲಾಯಿತು. ಗುರುವಾರ ಬಾಲರಾಮನ ಮೂರ್ತಿಗೆ ಶ್ರೀರಾಮ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರ ಮೇಲುಸ್ತುವಾರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಗುರುವಾರ ಬೆಳಗ್ಗೆ ಪ್ರತಿಮೆಯನ್ನು ಕೂರಿಸುವ ಕೂರ್ಮಪೀಠ ಪ್ರತಿಷ್ಠೆ, ನವಧಾನ್ಯಗಳ ನಿಕ್ಷೇಪ, ನವರತ್ನಗಳ ನಿಕ್ಷೇಪ, ಗಜಶಾಲೆ, ಗೋಶಾಲೆ, ಅಶ್ವಶಾಲೆಯ ಮೃತ್ತಿಕೆ ಸೇರಿ ಹಲವು ಪವಿತ್ರ ಮೃತ್ತಿಕೆಗಳ ನಿಕ್ಷೇಪ, ಸಪ್ತಧಾತುಗಳ ನಿಕ್ಷೇಪಗಳನ್ನು ಇಟ್ಟು ಪೂಜಾಕಾರ್ಯಗಳನ್ನು ನೆರವೇರಿಸಲಾಯಿತು. ಅದಾಗಿ, ರಾಮನಾಮ ಯಂತ್ರದ ಸ್ಥಾಪನೆಯಾಗಿ ಅಲ್ಲಿ ಅರ್ಚನೆ ಕಾರ್ಯ ನೆರವೇರಿಸಲಾಯಿತು. ಇವಿಷ್ಟು ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಬಾಲರಾಮ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.
ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಮೂರ್ತಿ ಸ್ಥಾಪನೆ ಪೂರ್ಣಗೊಂಡಿರುವುದರಿಂದ ಪ್ರಾಣಪ್ರತಿಷ್ಠೆಯ ವಿವಿಧ ಧಾರ್ಮಿಕ ವಿಧಾನಗಳನ್ನು ನೆರವೇರಿಸಲಾಗುತ್ತದೆ. ವೈದಿಕರಿಗೆ ಧಾರ್ಮಿಕ ಕಾರ್ಯಗಳ ಹೊಣೆಗಾರಿಕೆ ನೀಡುವ ಪ್ರಕ್ರಿಯೆ, ನಾಂದಿ ದೇವತೆಗಳ ಪೂಜೆಗಳು ಕೂಡ ನಡೆದಿವೆ.
ಅಯೋಧ್ಯೆಯ ರಾಮಮಂದಿರದಲ್ಲಿ ಇಂದು ಏನು ಕಾರ್ಯಕ್ರಮ
ಅಯೋಧ್ಯೆಯ ರಾಮಮಂದಿರದಲ್ಲಿ ಇಂದು (ಜ.19) ಬೆಳಗ್ಗೆ ಬಾಲರಾಮನ ಮೂರ್ತಿಯ ಶುದ್ಧಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಅದಾಗಿ, ಕೇಸರಿಯಿಂದ ಮೂರ್ತಿಯನ್ನು ಮುಳುಗಿಸಿ ಶುದ್ಧೀಕರಣ ಮಾಡಲಾಗುತ್ತದೆ. ಈ ಎರಡೂ ಪ್ರಕ್ರಿಯೆಯ ಬಳಿಕ ಘೃತಾಧಿವಾಸ ಅಂದರೆ ತುಪ್ಪದಲ್ಲಿ ಮೂರ್ತಿಯನ್ನು ಮುಳುಗಿಸುವ ಪ್ರಕ್ರಿಯೆ ನಡೆಯಲಿದೆ. ಇಷ್ಟೆಲ್ಲ ಆದ ಬಳಿಕ ಬಾಲರಾಮನನ್ನು ಧಾನ್ಯಗಳಲ್ಲಿ ಮುಳುಗಿಸಿ ಶುದ್ಧೀಕರಣ ನಡೆಸಲಾಗುತ್ತದೆ.
---------------------
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in