Banada Hunnime: ಇಂದು ಬನದ ಹುಣ್ಣಿಮೆ; ಬನಶಂಕರಿಯನ್ನು ಆರಾಧಿಸುವ ಈ ದಿನದ ಮಹತ್ವ ಹೀಗಿದೆ
Jan 24, 2024 06:00 AM IST
ಜ 24 ರಂದು ಬನದ ಹುಣ್ಣಿಮೆ ಆಚರಣೆ
Banada Hunnime: ಇಂದು ರಾಜ್ಯಾದ್ಯಂತ (ಬನದ ಹುಣ್ಣಿಮೆ) ಆಚರಿಸಲಾಗುತ್ತಿದೆ. ಈ ದಿನದಂದು ದುರ್ಗಾಮಾತೆಯ ಪ್ರತಿರೂಪವಾದ ಬನಶಂಕರಿಯನ್ನು ಪೂಜಿಸಲಾಗುತ್ತದೆ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಈ ದಿನ ಬಹಳ ವಿಶೇಷವಾಗಿದೆ.
Banda Hunnime: ಪ್ರತಿ ಹುಣ್ಣಿಮೆಗೂ ಒಂದೊಂದು ವಿಶೇಷತೆ ಇರುತ್ತದೆ. ಜನವರಿ ತಿಂಗಳ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. 2024ರ ಪುಷ್ಯ ಮಾಸದ ಹುಣ್ಣಿಮೆಯು 24ರ ರಾತ್ರಿ 9:15ಕ್ಕೆ ಆರಂಭವಾಗುತ್ತದೆ. ರಾತ್ರಿ ವೇಳೆ ಹುಣ್ಣಿಮೆ ಆರಂಭವಾಗುವ ಕಾರಣ ಯಾವುದೇ ವಿಶೇಷವಾದ ಪೂಜೆ ಮಾಡುವುದಿಲ್ಲ. ಆದರೆ ಹುಣ್ಣಿಮೆಯು 25ರ ದಿನಾಂಕದಂದು ರಾತ್ರಿ 10:17ರವರೆಗೆ ಇರುತ್ತದೆ. ಈ ದಿನವನ್ನು ಬನದ ಹುಣ್ಣಿಮೆ ಎಂದು ಕರೆಯುತ್ತೇವೆ. ಮುಖ್ಯವಾಗಿ ಈ ದಿನದಂದು ದುರ್ಗಾಮಾತೆಯ ಪ್ರತಿರೂಪವಾದ ಬನಶಂಕರಿಯನ್ನು ಪೂಜಿಸಲಾಗುತ್ತದೆ.
ತಾಜಾ ಫೋಟೊಗಳು
ಬನಶಂಕರಿ ಆರಾಧನೆ
ಕೆಲವೆಡೆ ಈ ಎರಡು ದಿನಗಳಂದು ಬನಶಂಕರಿ ಮಾತೆಯ ಪೂಜೆ ಮಾಡುತ್ತಾರೆ. ಒಟ್ಟು 7 ದಿನಗಳ ಕಾಲ ಪೂಜೆ ಮಾಡುವುದು ವಿಶೇಷವಾಗಿದೆ. ಬನದ ಹುಣ್ಣಿಮೆಯಂದು ವಿವಿಧ ರೀತಿಯ ತರಕಾರಿಗಳಿಂದ ಮಾಡಿದ ತಿಂಡಿಯನ್ನು ನೈವೇದ್ಯವಾಗಿ ನೀಡುತ್ತಾರೆ. ಈ ದಿನ ಬೇರೆ ಬೇರೆ ತರಕಾರಿಯ ಪಲ್ಯವನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. ಹಲವು ಕಡೆ ಬನದ ಹುಣ್ಣಿಮೆಯ ದಿನ ವಿಶೇಷ ಜಾತ್ರೆ ನಡೆಯುತ್ತದೆ. ಕರ್ನಾಟಕದ ಹಲವು ಭಾಗಗಳಲ್ಲಿ ಬನಶಂಕರಿ ದೇವಾಲಯಗಳು ಇವೆ. ಈ ದೇವಸ್ಥಾನಗಳಲ್ಲಿ ಬನದ ಹುಣ್ಣಿಮೆ ದಿನದಂದು ದುರ್ಗಾ ಹೋಮ, ದುರ್ಗಾ ಸೂಕ್ತ ಹೋಮ, ದುರ್ಗಾ ಕವಚ ಪಠಣೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಈ ದಿನ ಬಹಳ ವಿಶೇಷವಾಗಿದೆ. ಕರ್ನಾಟಕದಲ್ಲಿರುವ ಬಾದಾಮಿಯಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಈ ದಿನ ಬೆಂಗಳೂರಿನಲ್ಲಿನ ಬನಶಂಕರಿ ದೇವಾಲಯದಲ್ಲಿಯೂ ವಿಶೇಷ ಪೂಜೆಯನ್ನು ಆಯೋಜಿಸುತ್ತಾರೆ. ಸಾಮಾನ್ಯವಾಗಿ ಮನೆಗಳಲ್ಲಿ ದುರ್ಗಾ ಪೂಜೆಯ ಬದಲಾಗಿ ಅನ್ನಪೂರ್ಣೇಶ್ವರಿ ಅಥವಾ ರಾಜರಾಜೇಶ್ವರಿಯ ವಿಗ್ರಹ ಇಲ್ಲವೇ ಭಾವಚಿತ್ರವನ್ನು ಇಟ್ಟು ಭಕ್ತಿ ಪೂರ್ವಕವಾಗಿ ಪೂಜಿಸುತ್ತಾರೆ. ಈ ಅವಧಿಯಲ್ಲಿ ದೊರೆಯುವ ಎಲ್ಲಾ ರೀತಿಯ ತರಕಾರಿಯನ್ನು ದುರ್ಗಾ ಮಾತೆಗೆ ಅರ್ಪಿಸಲಾಗುತ್ತದೆ. ಈ ದಿನ ಕೆಲವರು ಬಿಳಿ ಸಾಸಿವೆಯನ್ನು ಮೈಗೆ ಹಚ್ಚಿ ಸ್ನಾನ ಮಾಡುತ್ತಾರೆ. ಸ್ನಾನದ ನಂತರ ಹೊಸ ಹಸಿರು ಬಣ್ಣದ ವಸ್ತ್ರಗಳನ್ನು ಧರಿಸಿದ ಹೆಣ್ಣು ಮಕ್ಕಳು ಕಳಶ ಕನ್ನಡಿಯ ಸಮೇತ ದುರ್ಗಾಮಾತೆಯ ದೇವಸ್ಥಾನಕ್ಕೆ ತೆರಳುತ್ತಾರೆ.
ಪೂಜೆಯ ವಿಧಿ ವಿಧಾನಗಳು
ಮುಖ್ಯವಾಗಿ ಸೂರ್ಯೋದಯವಾದ 2 ಗಂಟೆಯ ಒಳಗಾಗಿ ಗೋಪೂಜೆ ಮಾಡಬೇಕು. ನಂತರ ಗೋವಿನ ಆಶೀರ್ವಾದ ಪಡೆದು, ವಯೋವೃದ್ದ ದಂಪತಿಗಳಿಗೆ ಕೈಲಾದಷ್ಟು ವಿವಿಧ ರೀತಿಯ ತರಕಾರಿಯನ್ನು ದಾನ ಮಾಡಿ ಅವರ ಆಶೀರ್ವಾದ ಪಡೆಯಬೇಕು. ಇನ್ನೂ ಕೆಲವೆಡೆ ದಂಪತಿಗಳಿಗೆ ಭೋಜನ ವ್ಯವಸ್ಥೆ ಮಾಡುತ್ತಾರೆ. ಯಾವುದೇ ಹೆಣ್ಣು ದೇವರ ದೇವಸ್ಥಾನಕ್ಕೆ ಈ ದಿನ ಅಕ್ಕಿ, ಬೇಳೆ, ಉಪ್ಪು ಮತ್ತು ಬೆಲ್ಲ ನೀಡಿದರೆ ಉತ್ತಮ ಆರೋಗ್ಯ ಲಭಿಸುತ್ತದೆ. ಅಷ್ಟೇ ಅಲ್ಲದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ದಂಪತಿಗಳ ನಡುವೆ ಇರುವ ಮನಸ್ತಾಪವು ಮರೆಯಾಗುತ್ತದೆ. ಇಂತಹ ಕುಟುಂಬಗಳಲ್ಲಿ ಎಂದಿಗೂ ಆಹಾರದ ಸಮಸ್ಯೆ ಎದುರಾಗುವುದಿಲ್ಲ. ದಾರಿದ್ರ್ಯವು ತೊಲಗಿ ಹಣದ ಅನುಕೂಲತೆ ಉಂಟಾಗುತ್ತದೆ. ಈ ದಿನದಂದು ಮನೆಯ ಬಾಗಿಲಲ್ಲಿ ದೀಪಗಳನ್ನು ಇಡಬೇಕು. ಮುಂಜಾನೆ ಮಾವಿನ ಎಲೆಯ ಹಸಿರು ತೋರಣವನ್ನು ಕಟ್ಟುವುದು ಮುಖ್ಯವಾಗುತ್ತದೆ. ಇದಾದ ನಂತರ ಒಂದು ತಟ್ಟೆಯಲ್ಲಿ ಅಕ್ಕಿ ಇಟ್ಟು ಅದರ ಮೇಲೆ ಕಳಶವನ್ನು ಕನ್ನಡಿ ಜೊತೆಯಲ್ಲಿ ಇಡಬೇಕು. ನಂತರ ಗಣಪತಿ ಪೂಜೆ ಮಾಡಬೇಕು. ಕಳಸದಲ್ಲಿ ನೀರು ಹಾಕಿ ನಿಂಬೆಹಣ್ಣು, ಒಣ ದ್ರಾಕ್ಷಿ ,ಕೆಂಪು ಕಲ್ಲು ಸಕ್ಕರೆ, ಗೋಡಂಬಿ, ಮತ್ತು ಬಾದಾಮಿ ಹಾಕಬೇಕು.
ಗಣೇಶನ ಪೂಜೆ ಮತ್ತು ಗಂಗೆಯ ಪೂಜೆಯನ್ನು ಮಾಡಬೇಕು. ಬನಶಂಕರಿ ಮಾತೆಯನ್ನು ದ್ವಾದಶ ನಾಮದ ಮುಖಾಂತರ ಹೂವು ಮತ್ತು ಮಂತ್ರಾಕ್ಷತೆಯ ಮುಖಾಂತರ ಪೂಜಿಸಬೇಕು. ದುರ್ಗಾಷ್ಟೋತ್ತರದಿಂದ ಅರಿಶಿಣ ಅಥವಾ ಕುಂಕುಮದಿಂದ ಪೂಜಿಸಬೇಕು. ಧೂಪ ಮತ್ತು ದೀಪದ ನಂತರ ದುರ್ಗಾ ಮಾತೆಗೆ 5 ತರಕಾರಿಗಳಿಂದ ಮಾಡಿದ ಪಲ್ಯಗಳನ್ನು ನೈವೇದ್ಯವಾಗಿ ಅರ್ಪಿಸಬೇಕು. ಆನಂತರ ಮಂಗಳಾರತಿಯನ್ನು ಮಾಡಿ ಮನದಲ್ಲಿರುವ ಆಸೆಯನ್ನು ಪೂರೈಸುವಂತೆ ಬೇಡಿಕೊಳ್ಳಬೇಕು. ಇದರಿಂದ ನಮ್ಮ ಮನದ ಎಲ್ಲಾ ಆಸೆಗಳು ಪೂರ್ಣಗೊಳ್ಳುತ್ತವೆ. ಮನೆಗೆ ಬಂದ ಸ್ತ್ರೀಯರು ಮತ್ತು ಹೆಣ್ಣು ಮಕ್ಕಳಿಗೆ ತಾಂಬೂಲ ನೀಡಿ ಅವರ ಆಶೀರ್ವಾದ ಪಡೆದ ನಂತರ ವ್ರತ ಸಂಪೂರ್ಣಗೊಳ್ಳುತ್ತದೆ.