ಚಾಣಕ್ಯ ನೀತಿ: ನೀವು ಸತ್ತ ನಂತರವೂ ನಿಮ್ಮ ಕುಟುಂಬ ಸಂತೋಷವಾಗಿರಬೇಕು ಎಂದರೆ ಏನು ಮಾಡಬೇಕು; ಕೌಟಿಲ್ಯ ಹೇಳುವುದೇನು?
Jul 11, 2024 01:32 PM IST
ಚಾಣಕ್ಯ ನೀತಿ: ನೀವು ಸತ್ತ ನಂತರವೂ ನಿಮ್ಮ ಕುಟುಂಬ ಸಂತೋಷವಾಗಿರಬೇಕು ಎಂದರೆ ಏನು ಮಾಡಬೇಕು; ಕೌಟಿಲ್ಯ ಹೇಳುವುದೇನು?
ಕೆಲವೊಮ್ಮೆ ಕುಟುಂಬಕ್ಕೆ ಆಧಾರವಾಗಿದ್ದವರು ಮರಣ ಹೊಂದಿದರೆ ಕುಟುಂಬದ ಇತರ ಸದಸ್ಯರು ಆರ್ಥಿಕ ಸಮಸ್ಯೆಯಿಂದ ಕಷ್ಟ ಪಡುತ್ತಾರೆ. ಆದರೆ ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದರೆ ಆತನ ಸತ್ತ ನಂತರವೂ ಆತನ ಕುಟುಂಬ ಬಹಳ ಖುಷಿಯಾಗಿರುತ್ತದೆ. ಈ ವಿಚಾರವಾಗಿ ಆಚಾರ್ಯ ಚಾಣಕ್ಯ ಏನು ಹೇಳಿದ್ದಾರೆ, ನೋಡೋಣ.
ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ತತ್ವಜ್ಞಾನಿ ಮತ್ತು ಅರ್ಥಶಾಸ್ತ್ರಜ್ಞ. ಜನರು ಸುಖ, ಸಂತೋಷದಿಂದ ಜೀವನ ನಡೆಸಲು ಬೇಕಾದ ಎಷ್ಟೋ ಸಲಹೆಗಳನ್ನು ಚಾಣಕ್ಯ ನೀಡಿದ್ದಾರೆ. ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಅನೇಕ ಸಾಮ್ಯತೆಗಳಿವೆ. ಆದರೆ ಜ್ಞಾನ ಮತ್ತು ಬುದ್ಧಿವಂತಿಕೆ ಮಾತ್ರ ಮನುಷ್ಯನನ್ನು ಪ್ರಾಣಿಗಳಿಂದ ಪ್ರತ್ಯೇಕಿಸುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.
ತಾಜಾ ಫೋಟೊಗಳು
ಮನುಷ್ಯ ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ಕೆಲವು ಪ್ರಮುಖ ಕಾರ್ಯಗಳನ್ನು ಮರೆತುಬಿಡುತ್ತಾರೆ. ಪರಿಣಾಮವಾಗಿ ಅವರ ಸಾವಿನ ನಂತರ ಆ ಪರಿಣಾಮಗಳನ್ನು ಅವರ ಕುಟುಂಬ ಅನುಭವಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಸಾರ್ಥಕಗೊಳಿಸಲು ಕೆಲವು ಕೆಲಸಗಳನ್ನು ಮಾಡಬೇಕು ಹಾಗೆ ಮಾಡಿದರೆ ಮಾತ್ರ ಅವನ ಸಾವಿನ ನಂತರವೂ ಅವನ ಕುಟುಂಬ ಸುಖವಾಗಿ ಬದುಕುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಹಾಗಾದರೆ ಆ ವಿಚಾರಗಳು ಏನು ಎಂಬುದನ್ನು ನೋಡೋಣ.
ಹಣ ಉಳಿತಾಯ ಮಾಡಿ
ಜವಾಬ್ದಾರಿಗಳನ್ನು ನಿರ್ವಹಿಸಲು ಹಣದ ಅಗತ್ಯವಿದೆ. ಆದರೆ ನೀವು ಮಾಡಿದ ಸಂಪಾದನೆಯಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಿ. ಕೈ ತುಂಬಾ ಸಂಪಾದನೆ ಇದೆ ಎಂದು ಬೇಕಾಬಿಟ್ಟಿ ಖರ್ಚು ಮಾಡುವುದನ್ನು ಮೊದಲು ನಿಲ್ಲಿಸಿ. ಈ ಹಣವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಕಷ್ಟದ ಸಮಯದಲ್ಲಿ ಕಾಪಾಡುತ್ತದೆ. ಹೀಗೆ ಮಾಡಿದರೆ ನಿಮಗೆ ಆರ್ಥಿಕ ಬಿಕ್ಕಟ್ಟು ಎದುರಾದಾಗ ಬೇರೆಯವರ ಸಹಾಯ ಅವಶ್ಯಕತೆ ಇರುವುದಿಲ್ಲ. ಅನಾವಶ್ಯಕ ಖರ್ಚು ಮಾಡದೆ ಹಣ ಉಳಿಸುವತ್ತ ಗಮನ ಹರಿಸುವವರಿಗೆ ಬಡತನ, ಸಂಕಷ್ಟ ಎಂದಿಗೂ ಎದುರಾಗುವುದಿಲ್ಲ. ನೀವು ಸಂಗ್ರಹಿಸುವ ಸಂಪತ್ತು, ನಿಮ್ಮ ಸಾವಿನ ನಂತರವೂ ನಿಮ್ಮ ಕುಟುಂಬವನ್ನು ಸಹ ರಕ್ಷಿಸುತ್ತದೆ.
ಜವಾಬ್ದಾರಿಗಳನ್ನು ಪೂರೈಸಬೇಕು
ಮನುಷ್ಯ ಸೋಮಾರಿತನ ತೊರೆದು ತನ್ನ ಜವಾಬ್ದಾರಿಯನ್ನು ಪೂರೈಸಲು ಶ್ರಮಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ . ಇದು ಅವನ ಮತ್ತು ಅವನ ಕುಟುಂಬದ ಯೋಗಕ್ಷೇಮಕ್ಕೆ ದಾರಿದೀಪವಾಗಿದೆ. ಯೌವನದಲ್ಲಿ ಕಷ್ಟಪಟ್ಟು ದುಡಿದರೆ ವೃದ್ಧಾಪ್ಯವನ್ನು ಸುಖವಾಗಿ ಕಳೆಯುತ್ತೀರಿ ಎಂದು ಚಾಣಕ್ಯ ಹೇಳುತ್ತಾರೆ. ಚಾಣಕ್ಯನ ಪ್ರಕಾರ ನಿಮ್ಮ ಪ್ರಸ್ತುತ ಸಂದರ್ಭಗಳನ್ನು ನೆನಪಿಡಿ. ಆರೋಗ್ಯ ಮತ್ತು ಕುಟುಂಬ ಚೆನ್ನಾಗಿರಲು ಏನೆಲ್ಲಾ ಮಾಡಬಹುದೋ ಅದನ್ನು ತಪ್ಪದೆ ಜವಾಬ್ದಾರಿಯಿಂದ ನಿರ್ವಹಿಸಿ. ಕಷ್ಟಪಟ್ಟು ಕೆಲಸ ಮಾಡಿ.
ವಿನಯವಂತರಾಗಿರಿ
ವ್ಯಕ್ತಿಯ ವರ್ತನೆಯು ಅವನ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಚಾಣಕ್ಯನ ಪ್ರಕಾರ, ನಿಮ್ಮ ವರ್ತನೆಯಲ್ಲಿ ವಿನಯವಂತಿಕೆ ಮತ್ತು ನಿಮ್ಮ ಮಾತಿನಲ್ಲಿ ಎಂದಿಗೂ ಸಂಯಮ ಬಹಳ ಮುಖ್ಯ ನಡವಳಿಕೆಯಿಂದ ಗೌರವವನ್ನು ಗಳಿಸುವ ವ್ಯಕ್ತಿಯು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಅಂತಹವರಿಗೆ ಸಹಾಯ ಮಾಡಲು ಅನೇಕರು ಮುಂದೆ ಬರುತ್ತಾರೆ. ನಿಮ್ಮ ಖ್ಯಾತಿ, ನಿಮ್ಮ ಒಳ್ಳೆತನ ಸಾವಿನ ನಂತರವೂ ನಿಮ್ಮ ಕುಟುಂಬವನ್ನು ಕಾಪಾಡುತ್ತದೆ.
ಅಗತ್ಯವಿರುವವರಿಗೆ ಸಹಾಯ ಮಾಡಿ
ಚಾಣಕ್ಯನು ದಯೆ ಮತ್ತು ಸಹಾನುಭೂತಿಯ ಶಕ್ತಿಯನ್ನು ನಂಬುತ್ತಾರೆ. ಆದ್ದರಿಂದ ಇತರರಿಗೂ ಅದನ್ನೇ ಹೇಳುತ್ತಾರೆ. ದಯೆ ಹಾಗೂ ಪ್ರೀತಿಯಿಂದ ಕಷ್ಟದಲ್ಲಿರುವವರಿಗೆ ಸಕಲ ಸೌಲಭ್ಯ ಕಲ್ಪಿಸಬೇಕು. ಹೀಗೆ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದು. ಇದು ಜೀವನದಲ್ಲಿ ಹೆಚ್ಚು ಸಮೃದ್ಧಿ ಮತ್ತು ಸಂತೋಷಕ್ಕೆ ಕಾರಣವಾಗುತ್ತದೆ. ಮರಣಾನಂತರ ನಿಮ್ಮ ಕುಟುಂಬಕ್ಕೂ ನೀವು ಮಾಡಿದ ಪುಣ್ಯದ ಫಲ ಸಿಗುತ್ತದೆ.
ಹಿರಿಯರಿಗೆ ಗೌರವ ಕೊಡಿ
ಚಾಣಕ್ಯನ ನೀತಿಶಾಸ್ತ್ರದಲ್ಲಿ ಎಲ್ಲರಿಗೂ ದಯೆ ಮತ್ತು ಸೌಜನ್ಯವನ್ನು ತೋರಿಸುವ ಪ್ರಾಮುಖ್ಯತೆಯನ್ನು ಚಾಣಕ್ಯ ಒತ್ತಿಹೇಳಿದ್ದಾನೆ. ಕುಟುಂಬದ ಸದಸ್ಯರು ಸೇರಿದಂತೆ ಇತರರೊಂದಿಗೆ ವಿನಮ್ರ ಮತ್ತು ಸೌಮ್ಯವಾಗಿರುವ ವ್ಯಕ್ತಿಯು ಸಂತೋಷದ ಜೀವನ ನಡೆಸಬಹುದು. ಪೋಷಕರು, ಶಿಕ್ಷಕರು ಮತ್ತು ಇತರ ಹಿರಿಯರ ಬಗ್ಗೆ ಸಹಿಷ್ಣುತೆ ಮತ್ತು ಗೌರವವು ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಹಿರಿಯರಿಗೆ ನೀವು ನೀಡುವ ಗೌರವದಿಂದ ಸಾವಿನ ನಂತರವೂ ಇತರರು ನಿಮ್ಮಲ್ಲಿರುವ ಈ ಗುಣಗಳನ್ನು ನೆನಪಿಸಿಕೊಳ್ಳುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.