Ganesha Brahma Story: ಸೃಷ್ಟಿಕರ್ತನನ್ನೂ ಬಿಡದ ಗಣಪತಿಯ ಸಿಟ್ಟು; ಬ್ರಹ್ಮನಿಗೆ ಗುರುವಾದ ವಿನಾಯಕನ ಕಥೆ ತಿಳಿಯಿರಿ
Sep 06, 2024 02:03 PM IST
ಗಣೇಶ ಮತ್ತು ಸೃಷ್ಟಿಕರ್ತ ಬ್ರಹ್ಮ ದೇವರು
- ಬ್ರಹ್ಮನು ಗಣಪತಿ ಪೂಜೆ ಮಾಡದೆ ಸೃಷ್ಟಿಯ ಕಾರ್ಯದಲ್ಲಿ ನಿರತನಾಗುತ್ತಾನೆ. ಲೆಕ್ಕಕ್ಕೆ ಸಿಗದಷ್ಟು ಮಾನವರು, ಪ್ರಾಣಿ ಪಕ್ಷಿಗಳು, ಕ್ರಿಮಿ ಕೀಟಗಳು ಮುಂತಾದವುಗಳನ್ನು ಸೃಷ್ಟಿಸುತ್ತಾನೆ. ಆದರೆ ಗಣಪತಿಯ ಪೂಜೆಯ ಬಗ್ಗೆ ನೆನಪೇ ಆಗುವುದಿಲ್ಲ. ಆಗ ಗಣಪತಿಯ ಸಿಟ್ಟಿಗೆ ಕಾರಣವಾಗುತ್ತಾನೆ. ಮುಂದೇನಾಯ್ತು ಎಂಬುದನ್ನು ಕಥೆಯಲ್ಲಿ ವಿವರಿಸಲಾಗಿದೆ. (ಬರಹ: ಎಚ್ ಸತೀಶ್, ಜ್ಯೋತಿಷಿ)
ಸೃಷ್ಟಿಕರ್ತನ ಬ್ರಹ್ಮನ ಮೇಲೆ ಒಮ್ಮೆ ಗಣೇಶ ಕೋಪ ಮಾಡಿಕೊಂಡಿದ್ದ. ಆ ಘಟನೆಯನ್ನು ಇಲ್ಲಿ ವಿವರಿಸಲಾಗಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ತುಂಬಾ ಅಸಕ್ತಿಕರವಾದ ಗಣೇಶ ಮತ್ತು ಬ್ರಹ್ಮನ ನಡುವಿನ ಕಥೆಯನ್ನು ಇಲ್ಲಿ ನೀಡಲಾಗಿದೆ. ನಾವು ತಿಳಿದಿರುವುದು ಶ್ರೀಸುಬ್ರಹ್ಮಣ್ಯ ಸ್ವಾಮಿಗೆ ಸಿಡುಕಿನ ಬುದ್ಧಿ ಎಂದು. ಆದರೆ ಸಿಟ್ಟಿನಲ್ಲಿ ಗಣಪತಿಯು ತನ್ನ ಸೋದರ ಸುಬ್ರಹ್ಮಣ್ಯ ಸ್ವಾಮಿ ಮತ್ತು ತಂದೆಯಾದ ಶಿವನನ್ನೇ ಮೀರಿಸುತ್ತಾನೆ. ನೋಡಲು ಸಹನೆ ಇದ್ದಂತೆ ಕಂಡರೂ ಸಹನೆ ಕಳೆದುಕೊಂಡರೆ ಎದುರಾಗುವ ಕಷ್ಟ ನಷ್ಟಗಳಿಗೆ ಮಿತಿಯೇ ಇರುವುದಿಲ್ಲ. ನಮ್ಮ ನಿತ್ಯ ಜೀವನದಲ್ಲಿಯೂ ಕೇತು ಗ್ರಹದ ಇಷ್ಟ ದೇವತೆ ಗಣಪತಿ. ನಮ್ಮ ನಿತ್ಯ ಜೀವನದಲ್ಲಿ ಕೇತುವಿನ ದಶಾ ಭುಕ್ತಿ ಮತ್ತು ಅಂತರ್ ಭುಕ್ತಿಗಳು ಬಂದಾಗ ಅಡ್ಡಿ ಆತಂಕಗಳು ಖಚಿತ. ಈ ವೇಳೆಯಲ್ಲಿ ಗಣಪತಿಯ ಪೂಜೆಯನ್ನು ಅವಶ್ಯಕವಾಗಿ ಮಾಡಬೇಕಾಗುತ್ತದೆ.
ತಾಜಾ ಫೋಟೊಗಳು
ಗಣಪತಿಯ ಸಿಟ್ಟು ಸಾಕ್ಷಾತ್ ಬ್ರಹ್ಮದೇವನನ್ನೆ ಬಿಟ್ಟಿಲ್ಲ. ಶಿವನ ವರದಂತೆ ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಗಣಪತಿಯ ಪೂಜೆಯನ್ನು ಅವಶ್ಯಕವಾಗಿ ಮಾಡಲೇಬೇಕಾಗುತ್ತದೆ. ತಂದೆಯಾದರು, ತಾಯಿಯಾದರು ಶಿವ ಪಾರ್ವತಿಯರೇ ಗಣಪತಿಯ ಪೂಜೆ ಮಾಡಿದ ನಿದರ್ಶನಗಳು ಸಿಗುತ್ತವೆ. ಭಗವಾನ್ ವಿಷ್ಣು ಗಣಪತಿಯ ಪೂಜೆ ಮಾಡಿದ ನಿದರ್ಶನಗಳು ಇವೆ. ರಾವಣನ ಜೊತೆಯಲ್ಲಿ ಯುದ್ಧವನ್ನು ಆರಂಭಿಸುವ ಮುನ್ನ ಶ್ರೀರಾಮನು ಮೊದಲು ಗಣಪತಿಯ ಪೂಜೆಯನ್ನು ಮಾಡಿ ಆನಂತರ ಶಿವನ ಪೂಜೆಯನ್ನು ಮಾಡುತ್ತಾನೆ.
ವಿಘ್ನನಿವಾರಕ ಗಣೇಶನಿಗೆ ಬ್ರಹ್ಮನ ಮೇಲೆ ಸಿಟ್ಟು ಬರಲು ಇದೇ ಕಾರಣ
ಬ್ರಹ್ಮದೇವರ ಕೆಲಸವೇ ಸೃಷ್ಟಿ ಮಾಡುವುದು. ಒಮ್ಮೆ ಬ್ರಹ್ಮನು ಗಣಪತಿ ಪೂಜೆಯನ್ನು ಮಾಡದೆ ಸೃಷ್ಟಿಯ ಕಾರ್ಯದಲ್ಲಿ ನಿರತನಾಗುತ್ತಾನೆ. ಲೆಕ್ಕಕ್ಕೆ ಸಿಗದಷ್ಟು ಮಾನವರು, ಪ್ರಾಣಿ-ಪಕ್ಷಿಗಳು, ಕ್ರಿಮಿ-ಕೀಟಗಳು ಮುಂತಾದವುಗಳನ್ನು ಸೃಷ್ಟಿಸುತ್ತಾನೆ. ಆದರೆ ಗಣಪತಿಯ ಪೂಜೆಯ ಬಗ್ಗೆ ನೆನಪೇ ಆಗುವುದಿಲ್ಲ. ಇದರ ಬಗ್ಗೆ ಗಣಪತಿಗೆ ವಿಚಾರ ತಿಳಿಯುತ್ತದೆ. ಆರಂಭದಲ್ಲಿ ಸಹನೆಯಿಂದ ಬ್ರಹ್ಮನಿಂದ ಪೂಜೆಗಾಗಿ ಕಾಯುತ್ತಾನೆ. ಆದರೆ ಕಾಯುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ತಿಳಿದು ಬ್ರಹ್ಮನ ಮೇಲೆ ಕೋಪಗೊಳ್ಳುತ್ತಾನೆ.
ಆಕ್ಷಣವೇ ಸ್ವಲ್ಪವೂ ಯೋಚಿಸದೆ ಬ್ರಹ್ಮನಿಗೆ ಶಾಪವನ್ನು ನೀಡಲು ನಿರ್ಧರಿಸುತ್ತಾನೆ. ನೀನು ಸೃಷ್ಟಿ ಮಾಡಿರುವ ಜೀವಿಗಳೇ ನಿನ್ನ ಶತ್ರುಗಳಾಗಿ ಕಾಡಲಿ ಎಂದು ಶಪಿಸುತ್ತಾನೆ. ಬ್ರಹ್ಮನಿಗೆ ಶಾಪ ನೀಡಿದ ಕಾರಣ ಮೂರು ಲೋಕದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ತಾನೇ ಸೃಷ್ಟಿಸಿದ ಜೀವಿಗಳು ಆಕ್ರಮಣ ಮಾಡಲು ಆರಂಭಿಸಿದಾಗ ಅದನ್ನು ತಡೆಯಲು ಬ್ರಹ್ಮನು ಸೋತು ಹೋಗುತ್ತಾನೆ. ಅವುಗಳ ಹಿಂಸೆಯನ್ನು ತಾಳಲಾರದೆ ತನ್ನನ್ನು ತಾನು ಕಾಪಾಡಿಕೊಳ್ಳಲು ಸಾಕ್ಷಾತ್ ವಿಷ್ಣುವಿನ ಬಳಿ ಬರುತ್ತಾನೆ. ನಾನೇ ಸೃಷ್ಟಿಸಿದ ಜೀವಿಗಳು ನನಗೆ ತೊಂದರೆ ನೀಡುತ್ತಿವೆ. ಆದ್ದರಿಂದ ಅವುಗಳಿಂದ ನನ್ನನ್ನು ಕಾಪಾಡು ಎಂದು ಕೇಳುತ್ತಾನೆ.
ಆಗ ಭಗವಾನ್ ವಿಷ್ಣು ಬ್ರಹ್ಮದೇವನನ್ನು ಕುರಿತು ಹಿಂದೊಮ್ಮೆ ನಾವು ನಮ್ಮ ಕೆಲಸ ಆರಂಭಿಸುವ ಮುನ್ನ ಶಿವನ ಪುತ್ರನಾದ ಗಣಪತಿಯನ್ನು ಪೂಜಿಸಿದೆವು. ತ್ರಿಮೂರ್ತಿಗಳಾದ ನಾವೆಲ್ಲರೂ ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಗಣಪತಿಯ ಪೂಜೆಯನ್ನು ಮಾಡಿದಲ್ಲಿ ಎದುರಾಗುವ ಅಡ್ಡಿ ಆತಂಕಗಳು ತೊಂದರೆಗಳು ದೂರವಾಗುತ್ತವೆ ಎಂದು ಗಣಪತಿಗೆ ವರವನ್ನು ನೀಡಿದ್ದೆವು. ಇಲ್ಲವಾದಲ್ಲಿ ಯಾರೇ ಆದರೂ ತಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಇದು ನಿನಗೂ ತಿಳಿದ ವಿಚಾರವೇ ಆಗಿದೆ. ಬಹುಶ: ನೀನು ನಿನ್ನ ಕೆಲಸವನ್ನು ಆರಂಭಿಸುವ ಮುನ್ನ ಗಣೇಶನನ್ನು ಪೂಜಿಸಲು ಮರೆತಿರುವೆ. ಈ ಕಾರಣದಿಂದ ತೊಂದರೆ ಎದುರಾಗಿದೆ ಎಂದು ತಿಳಿಸುತ್ತಾನೆ.
ಬ್ರಹ್ಮದೇವನಿಗೆ ಆಗ ತನ್ನ ತಪ್ಪಿನ ಅರಿವಾಗುತ್ತದೆ. ಗಣಪತಿಯನ್ನು ಕುರಿತು ಸ್ತುತಿಸುತ್ತಾನೆ. ಆದರೆ ಗಣಪತಿಯು ಬರುವುದೇ ಇಲ್ಲ. ಕೊನೆಗೆ ಬ್ರಹ್ಮದೇವನು ಬೇರೆ ದಾರಿ ಕಾಣದೆ ಗಣಪತಿಗೆ ಇಷ್ಟವಾದ ಕಡಬು ಮತ್ತು ಮೋದಕಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾನೆ. ಆಗ ಪ್ರತ್ಯಕ್ಷಗೊಂಡ ಗಣಪತಿಯು ಸಂತೋಷದಿಂದ ಮೋದಕವನ್ನು ಸೇವಿಸಿ ಬ್ರಹ್ಮದೇವನ ತಪ್ಪನ್ನು ಮನ್ನಿಸುತ್ತಾನೆ. ಆ ಕ್ಷಣವೇ ತಾನೇ ಸೃಷ್ಟಿಸಿದ ಜೀವಿಗಳಿಂದ ಆಗುತ್ತಿದ್ದ ತೊಂದರೆಯೂ ನಿಂತು ಹೋಗುತ್ತದೆ. ಈ ರೀತಿ ಬ್ರಹ್ಮದೇವನಿಗೆ ಗಣಪತಿಯು ಪಾಠವನ್ನು ಕಲಿಸುವ ಗುರುವಾಗುತ್ತಾನೆ.