logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಧನು ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ದಾಂಪತ್ಯದಲ್ಲಿ ನೆಮ್ಮದಿ, ಮಕ್ಕಳಿಂದ ಖುಷಿ, ಸ್ವಂತ ಮನೆಯ ಕನಸು ನನಸು

ಧನು ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ದಾಂಪತ್ಯದಲ್ಲಿ ನೆಮ್ಮದಿ, ಮಕ್ಕಳಿಂದ ಖುಷಿ, ಸ್ವಂತ ಮನೆಯ ಕನಸು ನನಸು

Reshma HT Kannada

Mar 30, 2024 06:30 AM IST

google News

ಧನು ರಾಶಿ ಯುಗಾದಿ ಭವಿಷ್ಯ

    • ಯುಗಾದಿ ರಾಶಿ ಭವಿಷ್ಯ: ಬದುಕಿನ ಏರಿಳಿತಗಳು ಈ ವರ್ಷ ಒಂದು ಹಂತಕ್ಕೆ ಬರುತ್ತವೆ. ನಮ್ಮೆದಿಯ ದಿನಗಳ ನಿರೀಕ್ಷೆಯಲ್ಲಿರುವ ಧನು ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದಲ್ಲಿ ಬೆಲ್ಲ. ಜ್ಯೋತಿಷಿ ಎಚ್.ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.
ಧನು ರಾಶಿ ಯುಗಾದಿ ಭವಿಷ್ಯ
ಧನು ರಾಶಿ ಯುಗಾದಿ ಭವಿಷ್ಯ

ಧನು ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಮೂಲ ನಕ್ಷತ್ರದ 1, 2, 3 ಮತ್ತು 4ನೇ ಪಾದ, ಪೂರ್ವಾಷಾಢ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಉತ್ತಾರಾಷಾಢ ನಕ್ಷತ್ರದ 1 ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಧನು ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಯೆ, ಯೊ, ಬ ಅಥವಾ ಬಿ ಆದಲ್ಲಿ ಮೂಲ ನಕ್ಷತ್ರ. ಬು, ಧ, ಭ ಮತ್ತು ಢ ಆದಲ್ಲಿ ಪೂರ್ವಾಷಾಢ ನಕ್ಷತ್ರ ಹಾಗೂ ಬೆ ಆದಲ್ಲಿ ಉತ್ತರಾಷಾಢ ನಕ್ಷತ್ರ ಹಾಗೂ ಧನು ರಾಶಿ ಆಗುತ್ತದೆ. ವೈದಿಕ ಜ್ಯೋತಿಷ್ಯಶಾಸ್ತ್ರದ ರಾಶಿ ಚಕ್ರದಲ್ಲಿ ಧನು ರಾಶಿಯು 9ನೇ ರಾಶಿ ಆಗಿರುತ್ತದೆ. ಈ ರಾಶಿಗೆ ಸೇರಿದವರು ಸಾಮಾನ್ಯವಾಗಿ ಸತ್ಯ ಏನು ಹುಡುಕುವ, ಅರಿಯುವ, ಅನ್ವೇಷಣೆ ಮಾಡುವ ಸ್ವಭಾವ ಹೊಂದಿರುತ್ತಾರೆ. ವಿಶ್ರಾಂತಿಯೇ ಬೇಡ ಎನ್ನುತ್ತಾ ಸದಾ ಕನಸಿನ ಬೆನ್ನು ಹತ್ತುವ ಸ್ವಭಾವ ಇವರದು. ಸ್ವತಃ ಒಳ್ಳೆಯತನ ಇಷ್ಟಪಡುತ್ತಾರೆ, ಇತರರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಸಹಾನುಭೂತಿ ಇವತ ಮತ್ತೊಂದು ಎದ್ದು ಕಾಣುವ ಗುಣ. ಆದರೆ ತಮಗೆ ಒಳಿತಾಗಲಿ ಎಂದು ಆಪ್ತರು ನೀಡುವ ಸಲಹೆಗಳನ್ನು ನಿರ್ಲಕ್ಷಿಸುವುದು ಇವರ ಸ್ವಭಾವದ ಕಪ್ಪುಚುಕ್ಕೆಯಂತೆ ಭಾಸವಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಧನು ರಾಶಿಯ ಗುಣಲಕ್ಷಣಗಳು (Sagittarius characteristics in Kannada)

ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರಲ್ಲಿ ಧೈರ್ಯದ ಸ್ವಭಾವ ಹೆಚ್ಚಾಗಿರುತ್ತದೆ. ಎದುರಾಗುವ ಯಾವುದೇ ಸಮಸ್ಯೆಗಳಿಗೆ ಸುಲಭ ರೀತಿಯಲ್ಲಿ ಪರಿಹಾರವನ್ನು ಕಂಡುಹಿಡಿಯಬಲ್ಲರು. ಆದರೆ ಹಲವು ಕಾರಣಗಳ ಸಲುವಾಗಿ ತಂದೆ-ತಾಯಿಯಿಂದ ದೂರವಿರಬೇಕಾಗುತ್ತದೆ. ಅಣ್ಣತಮ್ಮಂದಿರಲ್ಲಿ ಹೆಚ್ಚಿನ ಗೌರವ ಇರುತ್ತದೆ. ಜನರ ಜೊತೆ ಅತಿ ವಿಶ್ವಾಸದಿಂದ ಬೆರೆಯುವರು. ಇವರಿಂದ ಸಹಾಯ ಪಡೆದವರೆ ಇವರ ಬಗ್ಗೆ ಇಲ್ಲಸಲ್ಲದ ಅಪಾದನೆ ಮಾಡುತ್ತಾರೆ. ಕಲಿಯುವ ಆಸೆ ಇದ್ದರೂ ವಿದ್ಯಾಭ್ಯಾಸದಲ್ಲಿ ಪರಿಪೂರ್ಣತೆ ಇರುವುದಿಲ್ಲ. ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಇವರ ಒಳ್ಳೆಯ ಪ್ರಯತ್ನದಿಂದ ಸಂಸಾರದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಕುಟುಂಬದ ಐಕ್ಯತೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಇವರಲ್ಲಿನ ಹೊಂದಾಣಿಕೆಯ ಗುಣವು ಎಲ್ಲರ ಮನಸ್ಸನ್ನು ಗೆಲ್ಲುತ್ತದೆ.

ಈ ರಾಶಿಯಲ್ಲಿ ಜನಿಸಿದ ಪುರುಷರು ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡುತ್ತಾರೆ. ಸುಗಮ ಜೀವನಕ್ಕೆ ಸಂಬಂಧಿಸಿದ ಬಹುತೇಕ ಎಲ್ಲಾ ವಿಷಯಗಳನ್ನು ಇವರು ಅರಿತುಕೊಂಡಿರುತ್ತಾರೆ. ಹೊಂದಿಕೊಂಡು ಬಾಳುವುದು ಇವರಲ್ಲಿರುವ ವಿಶೇಷ ಗುಣ. ಸಂಗೀತ ನಾಟ್ಯವನ್ನು ಅಭ್ಯಾಸ ಮಾಡದಿದ್ದರೂ ಅದರಲ್ಲಿ ಆಸಕ್ತಿ ಇರುತ್ತದೆ. ತಂದೆ ತಾಯಿಗಳ ಮೇಲೆ ವಿಶೇಷವಾದ ಪ್ರೀತಿ ಇರುತ್ತದೆ. ಬಂಧು-ಬಳಗದರವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದರೂ ಇವರ ಗೌರವಕ್ಕೆ ಧಕ್ಕೆ ಬಂದರೆ ಅವರಿಂದ ದೂರವಾಗುತ್ತಾರೆ. ಅಜೀರ್ಣದಿಂದ ಬಳಲುವ ಇವರು ಆಹಾರ ಕ್ರಮದಲ್ಲಿ ಕಟ್ಟುನಿಟ್ಟಾಗಿರುತ್ತಾರೆ.

ಸಾಮಾನ್ಯವಾಗಿ ಈ ರಾಶಿಯಲ್ಲಿ ಜನಿಸಿದವರು ಯಾವುದೇ ವಿಚಾರದಲ್ಲಿ ದೃಢ ನಿಲುವು ತಾಳುವುದಿಲ್ಲ. ಅತಿಯಾದ ಕೋಪ ಜನ್ಮಜಾತವಾಗಿ ಬಂದಿರುತ್ತದೆ. ಆದರೆ ಕೋಪವು ಬಂದಷ್ಟೇ ವೇಗದಲ್ಲಿ ಮರೆಯಾಗುತ್ತದೆ. ಮಕ್ಕಳ ಮೇಲೆ ವಿಶೇಷವಾದ ಪ್ರೀತಿ ಮನೆಮಾಡುತ್ತದೆ. ದಾಂಪತ್ಯ ಜೀವನದಲ್ಲಿ ಬರುವ ಮನಸ್ತಾಪ ಮತ್ತುವಿರೋಧಾಭಾಸಗಳು ಕೆಲ ದಿನಗಳಲ್ಲಿ ಮರೆಯಾಗುತ್ತವೆ. ದಂಪತಿಗಳು ಎಲ್ಲವನ್ನೂ ಮರೆತು ಪ್ರೀತಿ ವಿಶ್ವಾಸದಿಂದ ಜೀವನ ನಡೆಸುತ್ತಾರೆ.

ಧನು ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ಧನು ರಾಶಿಯಲ್ಲಿ ಜನಿಸಿದವರು ನೆನಪಿಟ್ಟುಕೊಳ್ಳಬೇಕಾದ ವಿಚಾರಗಳಿವು. ಶುಭ ದಿನಾಂಕಗಳು: 3, 5, 6 ಮತ್ತು 8. ಶುಭ ವಾರಗಳು: ಭಾನುವಾರ, ಬುಧವಾರ, ಶುಕ್ರವಾರ ಮತ್ತು ಗುರುವಾರ. ಶುಭ ವರ್ಣ: ನೀಲಿ, ಬಿಳಿ, ಕಿತ್ತಳೆ ಮತ್ತು ಕ್ರೀಂ. ಅಶುಭ ವರ್ಣ: ಕೆಂಪು, ಮುತ್ತು. ಶುಭ ದಿಕ್ಕು: ಪೂರ್ವ ಮತ್ತು ಈಶಾನ್ಯ. ಶುಭ ತಿಂಗಳು: ಏಪ್ರಿಲ್ 15ರಿಂದ ಮೇ 14 ಮತ್ತು ಆಗಸ್ಟ್ 15ರಿಂದ ಸೆಪ್ಟಂಬರ್ 14. ಶುಭ ಹರಳು: ಮಾಣಿಕ್ಯ, ಹವಳ, ಮುತ್ತು, ಕನಕ ಪುಷ್ಯರಾಗ. ಶುಭ ರಾಶಿ: ಮೀನ, ಮೇಷ ಮತ್ತು ಸಿಂಹ. ಅಶುಭ ರಾಶಿ: ಮಕರ, ಕುಂಭ, ಮಿಥುನ, ವೃಷಭ ಮತ್ತು ತುಲಾ.

ಶ್ರೀ ಕ್ರೋಧಿನಾಮ ಸಂವತ್ಸರದ ಧನು ರಾಶಿಯ ಗೋಚಾರ ಫಲ

ಧನು ರಾಶಿಗೆ ಸೇರಿದವರಿಗೆ ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಉತ್ತಮ ಫಲಗಳು ದೊರೆಯಲಿವೆ. ಸೋದರ ಅಥವಾ ಸೋದರಿ ಪ್ರತಿ ಕೆಲಸಗಳಲ್ಲಿಯೂ ನೆರವಾಗುತ್ತಾರೆ. ಈ ವರ್ಷ ಹಣದ ತೊಂದರೆ ಬರುವುದಿಲ್ಲ. ಆದರೆ ಹಣವನ್ನು ಉಳಿಸುವ ಯೋಚನೆಯನ್ನೂ ಇವರು ಮಾಡುವುದಿಲ್ಲ. ಈ ಸಂವತ್ಸರದಲ್ಲಿ ಇವರು ತೆಗೆದುಕೊಳ್ಳುವ ತೀರ್ಮಾನಗಳು ಜೀವನವನ್ನು ರೂಪಿಸುತ್ತದೆ. ಯಾವುದೇ ಮುಖ್ಯ ತೀರ್ಮಾನ ತೆಗೆದುಕೊಳ್ಳುವ ಮೊದಲು ತಾಳ್ಮೆಯಿಂದ ಯೋಚಿಸಬೇಕು, ವರ್ತನೆಯಲ್ಲಿಯೂ ತಾಳ್ಮೆ ರೂಢಿಸಿಕೊಳ್ಳಬೇಕು. ಆಗ ಮಾತ್ರ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವುದು ಸಾಧ್ಯವಾಗುತ್ತದೆ. ಮಕ್ಕಳ ವಿಚಾರದಲ್ಲಿ ನೆಮ್ಮದಿ ಇರುತ್ತದೆ. ಈ ವರ್ಷ ಧನು ರಾಶಿಯವರಿಗೆ ಸ್ವಂತ ಮನೆಯ ಕನಸು ನನಸಾಗುವ ಸಂಭವವಿದೆ.

ಧನು ರಾಶಿಯವರಿಗೆ ಈ ವರ್ಷದ ಸ್ನೇಹ, ವಿಶ್ವಾಸದ ಬಂಧ

ಧನು ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದಲ್ಲಿ ಪ್ರೀತಿ-ವಿಶ್ವಾಸ ಧಾರಾಳವಾಗಿ ಸಿಗುತ್ತದೆ. ಅವರು ಎಲ್ಲರೊಡನೆ ಪ್ರೀತಿ ವಿಶ್ವಾಸದಿಂದ ಬಾಳುತ್ತಾರೆ. ಮಕ್ಕಳೊಂದಿಗೆ ಮಕ್ಕಳಂತೆ ನಡೆದುಕೊಳ್ಳುವುದರಿಂದ ಎಲ್ಲರೂ ಇವರನ್ನು ಇಷ್ಟಪಡುತ್ತಾರೆ. ಕುಟುಂಬದಲ್ಲಿನ ಹೊಂದಾಣಿಕೆ ಹಲವು ರೀತಿಯಲ್ಲಿ ಹೆಚ್ಚಿನ ಅನುಕೂಲ ನೀಡುತ್ತದೆ. ಕೋಪ ಬಂದರು ಬಹುಕಾಲ ನಿಲ್ಲುವುದಿಲ್ಲ. ದಂಪತಿಗಳ ನಡುವೆ ಅನ್ಯೋನ್ಯತೆ ಇರುತ್ತದೆ. ಅನವಶ್ಯಕ ಒತ್ತಡವಿದ್ದರೂ ನಿಮ್ಮ ಮನಸ್ಸು ಬದಲಾಗದು. ಕೇವಲ ಕುಟುಂಬದವರು ಮಾತ್ರವಲ್ಲದೆ ನಿಮ್ಮ ಪ್ರೀತಿ ವಿಶ್ವಾಸ ಗಳಿಸಿದ ಎಲ್ಲರೊಂದಿಗೆ ಪ್ರವಾಸಕ್ಕೆ ತೆರಳುವಿರಿ. ಅವಕಾಶ ಒದಗಿದಾಗ ಸಂತೋಷಕೂಟಗಳನ್ನು ಏರ್ಪಡಿಸುವಿರಿ.

ಉದ್ಯೋಗ: ಕೆಲಸ ಬದಲಾಗಬಹುದು, ಮೇಲಧಿಕಾರಿಗಳೊಂದಿಗೆ ವಾಗ್ವಾದ ಬೇಡ

ಧನು ರಾಶಿಯವರಿಗೆ ಉದ್ಯೋಗದ ವಿಚಾರದಲ್ಲಿ ಒಂದೇ ರೀತಿಯ ಫಲಿತಾಂಶಗಳು ದೊರೆಯುವುದಿಲ್ಲ. ವೃತ್ತಿ ಕ್ಷೇತ್ರದಲ್ಲಿ ಏರಿಳಿತಗಳು ಇದ್ದರೂ ಯಾವುದೇ ತೊಂದರೆ ಎದುರಾಗುವುದಿಲ್ಲ. ಮಾಡಬೇಕಾದ ಕೆಲಸ ಆಧರಿಸಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳುವಿರಿ. ಸೋಲಿನ ಭಯವಿಲ್ಲದೆ ಕೆಲಸ ನಿರ್ವಹಿಸುವಿರಿ. ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯಲಿದೆ. ಮನಸ್ಸಿಗೆ ಬೇಸರ ಉಂಟಾಗಿ ಜೂನ್ ನಂತರ ಉದ್ಯೋಗವನ್ನು ಬದಲಾಯಿಸುವಿರಿ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಹಿರಿಯ ಅಧಿಕಾರಿಗಳ ನಡುವೆ ಅನವಶ್ಯಕ ವಾದ ವಿವಾದಗಳು ಇರುತ್ತವೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಉನ್ನತ ಅಧಿಕಾರ ದೊರೆಯಬಹುದು. ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವವರೆಗೂ ರಹಸ್ಯವನ್ನು ಕಾಪಾಡುವಿರಿ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಂಡರೂ ಮನದಲ್ಲಿರುವ ವಿಚಾರಗಳನ್ನು ಸುಲಭವಾಗಿ ತಿಳಿಸುವುದಿಲ್ಲ.

ವಿದ್ಯಾಭ್ಯಾಸ: ಅನವಶ್ಯಕ ಮಾನಸಿಕ ಒತ್ತಡ ಬೇಕಿಲ್ಲ

ಧನು ರಾಶಿಗೆ ಸೇರಿದ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಆದರೆ ಅನವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಮೇಲ್ಮಟ್ಟದ ಬುದ್ಧಿವಂತಿಕೆ ಇವರಲ್ಲಿ ಇರುತ್ತದೆ. ಬೇರೆಯವರಿಗೆ ಕಷ್ಟ ಎನಿಸುವ ವಿಚಾರಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವರು. ನಿರೀಕ್ಷೆಗೂ ಮೀರಿದ ಫಲಿತಾಂಶವೂ ಇವರಿಗೆ ದೊರೆಯುತ್ತದೆ. ಸುಲಭವಾಗಿ ಯಾವುದೇ ವಿಷಯವನ್ನು ಕಲಿಯಬಲ್ಲರು. ತಮ್ಮ ಸಹಪಾಠಿಗಳ ಜೊತೆಯಲ್ಲಿ ಒಳ್ಳೆಯ ರೀತಿಯ ಸ್ನೇಹ ಇರುತ್ತದೆ. ಎಲ್ಲರನ್ನೂ ತಮ್ಮೊಂದಿಗೆ ಯಶಸ್ಸಿನತ್ತ ಕರೆದೊಯ್ಯುವ ಗುರಿ ಇವರಿಗಿರುತ್ತದೆ. ಉನ್ನತ ಶಿಕ್ಷಣ ಪಡೆಯುವ ಹಂಬಲ ಈಡೇರುತ್ತದೆ. ವಿದೇಶದಲ್ಲಿ ಅಧ್ಯಯನ ನಡೆಸುವ ಅವಕಾಶ ದೊರೆಯುತ್ತದೆ. ಒಟ್ಟಾರೆ ಆತ್ಮವಿಶ್ವಾಸ ಮತ್ತು ಉತ್ತಮ ಪ್ರಯತ್ನಗಳು ಇವರ ಜೀವನಕ್ಕೆ ದಾರಿ ದೀಪವಾಗುತ್ತದೆ.

ಹಣಕಾಸು: ಖಜಾನೆ ತುಂಬಿದ್ದರೂ ಮನಸ್ಸಿಗೆ ತಳಮಳ

ಹಣಕಾಸಿನ ವಿಚಾರದಲ್ಲಿ ಧನು ರಾಶಿಗೆ ಸೇರಿದವರು ಉತ್ತಮ ಪ್ರಯತ್ನವಿಲ್ಲದೆ ಇವರು ಸೋಲೊಪ್ಪುವುದಿಲ್ಲ. ಕೈ ತುಂಬಾ ಹಣವಿದ್ದರೂ, ಸುಲಭಕ್ಕೆ ಖರ್ಚು ಮಾಡುವುದಿಲ್ಲ. ಸದಾ ಲೆಕ್ಕಲೆಕ್ಕ ಎನ್ನುವುದು ಇವರ ಸ್ವಭಾವದ ಭಾಗವೇ ಆಗಿರುತ್ತದೆ. ಶಿಸ್ತಿನ ವರ್ತನೆಯಿಂದಾಗಿ ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ. ಎಷ್ಟೇ ಹಣವಿದ್ದರೂ ಸದಾ ಕಾಲ ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಪರಿಸ್ಥಿತಿ ಕೈಮೀರುವ ಪರಿಸ್ಥಿತಿ ಬಂದರೂ ಉತ್ತಮ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲರು. ಹಣಕಾಸು ಪರಿಸ್ಥಿತಿಯಲ್ಲಿ ಆಗಾಗ ಬದಲಾವಣೆಗಳು ಕಂಡುಬರುತ್ತವೆ. ಕೆಲ ಬದಲಾವಣೆಗಳು ಅವರಿಗೆ ಅನುಕೂಲಕರವಾಗಿಯೇ ಇರುತ್ತದೆ. ಕೊಂಚ ಆತಂಕವಿದ್ದರೂ ಆರ್ಥಿಕ ಪ್ರಗತಿ ಕಂಡು ಬರುತ್ತದೆ. ಆದರೆ ಒಂದು ವಿಷಯದಲ್ಲಿ ಎಚ್ಚರವಿರಲಿ, ಎಂದಿಗೂ ಹೊಗಳಿಕೆಗೆ ಮರುಳಾಗಿ ಹಣ ಕೊಡಬೇಡಿ.

ಕೌಟುಂಬಿಕ ಜೀವನ: ಒಡಹುಟ್ಟಿದವರ ನೆರಳು ಗೊಂದಲವಾಗಬಹುದು

ಧನು ರಾಶಿಯವರ ಒಡಹುಟ್ಟಿದವರ ಕೆಲಸ ಕಾರ್ಯಗಳಲ್ಲಿ ಏರಿಳಿತವಿರುತ್ತದೆ. ಇದರಿಂದ ಕುಟುಂಬದಲ್ಲಿ ಅನವಶ್ಯಕ ಗೊಂದಲಗಳು ಕಂಡುಬರಲಿವೆ. ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ನಿತ್ಯದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿ ಮುಂದುವರೆಯುವ ಮನಸ್ಸು ಇವರಿಗೆ ಇರುತ್ತದೆ. ತಮ್ಮ ಬಳಿ ಇರುವ ಹಣವನ್ನು ಕೊಂಚವೂ ಯೋಚಿಸದೆ ಬೇರೆಯವರಿಗೆ ನೀಡುತ್ತಾರೆ. ಕುಟುಂಬದಲ್ಲಿ ಸಂತಸ ನೆಲೆಸಲು ಎಂಥ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಉದ್ದೇಶ ಒಳ್ಳೆಯದೇ ಇದ್ದರೂ, ಕೆಲವೊಮ್ಮೆ ಇವರು ಆಡುವ ಮಾತುಗಳು ಕೇಳಿಸಿಕೊಂಡವರಿಗೆ ಬೇಸರ ಉಂಟುಮಾಡುತ್ತದೆ. ಆದರೆ ಇವರ ಅಗತ್ಯ ಪ್ರತಿಯೊಬ್ಬರಿಗೂ ಇರುತ್ತದೆ. ಆದ್ದರಿಂದ ಸದಾ ಕಾಲ ಕೆಲಸ ಕಾರ್ಯದಲ್ಲಿ ತೊಡಗುವರು. ಸಂಗಾತಿ ಮತ್ತು ಮಕ್ಕಳೊಂದಿಗೆ ಸಂಭ್ರಮದಿಂದ ಇರುತ್ತಾರೆ. ತಾಯಿಯವರ ಆರೋಗ್ಯದಲ್ಲಿ ತೊಂದರೆ ಕಂಡು ಬರಬಹುದು. ಒಟ್ಟಾರೆ ಇವರ ನಿಸ್ವಾರ್ಥ ಬದುಕಿನಿಂದ ಕುಟುಂಬದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ.

ಮಕ್ಕಳ ವಿಚಾರ: ತೊಟ್ಟಿಲು ತೂಗಲು ಸಿದ್ಧರಾಗಿ

ಸಂತಾನ ದೋಷ ಇರುವ ಧನು ರಾಶಿಯವರಿಗೆ ಈ ವರ್ಷ ಸಮಸ್ಯೆಯು ಪರಿಹಾರವಾಗಿ ಸಂತಾನ ಲಭಿಸುತ್ತದೆ. ಮಕ್ಕಳ ಆಟಪಾಟಗಳನ್ನು ನೋಡುತ್ತಾ ಸಂತೋಷದಿಂದ ಬಾಳುತ್ತಾರೆ. ಮಕ್ಕಳು ತಂದೆ-ತಾಯಿಯ ಆಸೆಯನ್ನು ಈಡೇರಿಸಲು ಪ್ರಯತ್ನಿಸುತ್ತಾರೆ. ವಿಶೇಷವೆಂದರೆ ಈ ರಾಶಿಯಲ್ಲಿ ಜನಿಸಿರುವ ಮಕ್ಕಳು ವಯಸ್ಸಿನಲ್ಲಿ ತುಂಬಾ ಚಿಕ್ಕವರಾದರೂ ತಂದೆ ತಾಯಿಯ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ ಈ ರಾಶಿಯಲ್ಲಿ ಜನಿಸಿರುವ ಪೋಷಕ ವರ್ಗಕ್ಕೂ ಅವರ ಮಕ್ಕಳಿಂದ ಸಂತೋಷ ಪ್ರಾಪ್ತಿಯಾಗುತ್ತದೆ. ಒಟ್ಟಾರೆ ಯಾವುದೇ ಕುಟುಂಬದಲ್ಲಿ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿದ್ದಲ್ಲಿ ಸಂತೋಷದ ಬಾಳ್ವೆ ದೊರೆಯುತ್ತದೆ. ಬೆಳೆದು ನಿಂತ ಮಕ್ಕಳು ತಾವಾಗಿಯೇ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಮಕ್ಕಳ ಆರೋಗ್ಯದ ಬಗ್ಗೆ ಗಮನ ಇಡುವುದು ಒಳ್ಳೆಯದು. ಮಕ್ಕಳಿಗೆ ಅನುಕೂಲವಾಗುವಂತೆ ಆಹಾರ ಪದ್ಧತಿಯನ್ನು ಆಗಾಗ ಬದಲಾಯಿಸಿಕೊಳ್ಳಬೇಕು.

ವಿವಾಹ ಮತ್ತು ದಾಂಪತ್ಯ: ಕ್ಷಮೆಯೇ ಗೆಲುವಿಗೆ ಸೋಪಾನ

ಧನು ರಾಶಿಗೆ ಸೇರಿದವರು ಇದೇ ವರ್ಷ ಮದುವೆಯಾಗಿದ್ದಲ್ಲಿ, ಅಂದರೆ ನವ ದಂಪತಿಗಳಾಗಿದ್ದಲ್ಲಿ ನಿಮ್ಮ ಮನೆಯಲ್ಲಿ ಸಂತಸ ಮನೆ ಮಾಡಿರುತ್ತದೆ. ಗಂಡ-ಹೆಂಡತಿ ನಡುವೆ ಮನಸ್ತಾಪಗಳು ಕಂಡುಬಂದರೂ ಒಬ್ಬರ ತಪ್ಪನ್ನು ಮತ್ತೊಬ್ಬರು ಮನ್ನಿಸುವ ಕಾರಣ ವಿವಾದಗಳು ಬೇಗನೆ ಕೊನೆಯಾಗುತ್ತದೆ. ಸಂಗಾತಿಯಿಂದ ಅನವಶ್ಯಕವಾಗಿ ದೈನಂದಿನ ಜೀವನದಲ್ಲಿ ಒತ್ತಡವು ಹೆಚ್ಚುತ್ತದೆ. ಈ ಕಾರಣಕ್ಕೆ ಕೋಪ ಬಂದರೂ ಬಹುಕಾಲ ನಿಲ್ಲುವುದಿಲ್ಲ. ಕ್ಷಮಿಸಿದಲ್ಲಿ ಗೆಲ್ಲಬಹುದು ಎಂಬುದು ಇವರ ನಂಬಿಕೆ. ಆದ್ದರಿಂದ ಯಾರೇ ತಪ್ಪು ಮಾಡಿದರೂ ಮತ್ತೊಬ್ಬರು ಅದನ್ನು ಮರೆತು ನಡೆಯುತ್ತಾರೆ. ಪರಸ್ಪರ ಚರ್ಚೆಯಿಂದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ. ಆದರೆ ಸಂಗಾತಿಯ ಅನಾರೋಗ್ಯ ಕೆಲವೊಂದು ಬಾರಿ ಆತಂಕವನ್ನು ಉಂಟು ಮಾಡಬಹುದು. ಹಣದ ಮೇಲೆ ಆಸೆ ಇಲ್ಲದ ಕಾರಣ ತೊಂದರೆಗಳು ಕಡಿಮೆ. ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಲ್ಲದಲ್ಲದೆ ಕುಟುಂಬದ ಏಳಿಗೆಗಾಗಿ ದುಡಿಯುವರು. ಇದರಿಂದ ಎಲ್ಲರ ಸಹಾಯ ಸಹಕಾರ ಇವರಿಗೆ ದೊರೆಯುತ್ತದೆ.

ವ್ಯಾಪಾರ ಮತ್ತು ವ್ಯವಹಾರ: ಕಾರ್ಮಿಕರ ವಿಶ್ವಾಸ ಗಳಿಸಿ

ಧನು ರಾಶಿಯವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ಜೂನ್ ತಿಂಗಳವರೆಗೂ ಉತ್ತಮ ಆದಾಯವಿರುತ್ತದೆ. ಪ್ರತಿಯೊಂದು ಕೆಲಸವು ಸುಲಭವಾಗಿ ನೆರವೇರುತ್ತದೆ. ಜೂನ್ ತಿಂಗಳ ನಂತರ ಸೆಪ್ಟೆಂಬರ್ ತಿಂಗಳವರೆಗೂ ಸಣ್ಣಪುಟ್ಟ ವ್ಯವಹಾರಗಳಿಗೂ ಹೆಚ್ಚಿನ ಪ್ರಯತ್ನ ಬೇಕಾಗಬಹುದು. ಆದರೆ ಕಷ್ಟಪಟ್ಟು ದುಡಿದಷ್ಟು ಉತ್ತಮ ಆದಾಯ ಇವರಿಗೆ ಲಭ್ಯವಾಗುತ್ತದೆ. ಸರಕಾರಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಅನಪೇಕ್ಷಿತ ಖರ್ಚು ವೆಚ್ಚಗಳಿರುತ್ತವೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ ಉಂಟಾದಾಗ ಆಪತ್ಬಾಂಧವರೊಬ್ಬರು ಸಹಾಯ ಮಾಡಲಿದ್ದಾರೆ. ಆದ್ದರಿಂದ ಯಾರನ್ನೂ ಕಡೆಗಣ್ಣಿನಿಂದ ನೋಡದಿರಿ.

ವಾಹನ ವಿಚಾರ: ಸೋದರನ ಸಹಾಯದಿಂದ ವಾಹನಲಾಭ

ಧನು ರಾಶಿಯವರು ಕ್ರೋಧಿನಾಮ ಸಂವತ್ಸರದ ಆರಂಭದಲ್ಲಿ ಹೊಸ ವಾಹನವನ್ನು ಕೊಳ್ಳುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಸೋದರರ ಸಂಪೂರ್ಣ ಸಹಾಯ ಸಹಕಾರ ದೊರೆಯುತ್ತದೆ. ಸಂಪಾದನೆಯ ದೃಷ್ಟಿಯಿಂದಲೂ ವಾಹನವನ್ನು ಕೊಳ್ಳಬಹುದು. ಜೂನ್ ನಂತರ ಸತತ ಪ್ರಯತ್ನವಿದ್ದರೂ ವಾಹನಕೊಳ್ಳುವುದು ವಿಳಂಬವಾಗಬಹುದು. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿಯೂ ಹೊಸ ವಾಹನವನ್ನು ಕೊಳ್ಳಬಹುದು. ವಾಹನ ಖರೀದಿಯಿಂದ ಅನುಕೂಲತೆಗಳು ಹೆಚ್ಚುತ್ತದೆ.

ಆರೋಗ್ಯದ ವಿಚಾರ: ಸೋಂಕಿನ ಬಗ್ಗೆ ಇರಲಿ ಎಚ್ಚರ

ಧನು ರಾಶಿಯವರಿಗೆ ಈ ವರ್ಷ ಆರೋಗ್ಯದಲ್ಲಿ ತೊಂದರೆ ಉಂಟಾಗುವುದಿಲ್ಲ. ಆದರೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಸೋಂಕಿನಿಂದ ಬಳಬಹುದು. ಹೆಣ್ಣು ಮಕ್ಕಳಿಗೆ ಋತುಸ್ರಾವಕ್ಕೆ ಸಂಬಂಧಿಸಿದ ತೊಂದರೆ ಇರುತ್ತದೆ. ಒಳ್ಳೆಯ ಆಹಾರ ಸೇವನೆಯಿಂದ ಎಲ್ಲಾ ರೀತಿಯ ರೋಗರುಜಿನಗಳು ದೂರವಾಗುತ್ತವೆ. ಸೇವಿಸಿದ ಆಹಾರ ಜೀರ್ಣವಾಗಲು ಸರಳ ವ್ಯಾಯಾಮವನ್ನು ಅನುಸರಿಸಿ. ಪರಿಪಕ್ವ ಕ್ರಮಬದ್ಧ ದಿನಚರಿಯನ್ನು ಅನುಸರಿಸಿದರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಧನು ರಾಶಿಗೆ ಪರಿಹಾರಗಳು

1) ಪ್ರತಿದಿನ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಿಡಿದ ಕೆಲಸಗಳು ಯಶಸ್ವಿಯಾಗಲಿದೆ.

2) ಹೆಸರು ಬೇಳೆ ಮತ್ತು ಹಸಿರುಬಟ್ಟೆ ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ. ದಂಪತಿಗಳ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.

3) ಶ್ರೀ ದುರ್ಗಾಮಾತೆಯ ದೇವಾಲಯಕ್ಕೆ ಪೂಜಾಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ.

4) ಗುರುಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ.

5) ಕೆಂಪು , ಕೇಸರಿ ಮತ್ತು ಬಿಳಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಬರಹ: ಎಚ್‌.ಸತೀಶ್, ಜ್ಯೋತಿಷಿ, ಬೆಂಗಳೂರು.ಇಮೇಲ್: sathishaapr23@gmail.com

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್‌ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ