Naga Panchami 2023: ನಾಗ ಪಂಚಮಿ: ಹಬ್ಬದ ದಿನಾಂಕ, ಪೂಜಾವಿಧಿ, ವೈಶಿಷ್ಟ್ಯ, ನೈವೇದ್ಯ, ಆಚರಣೆ ಹೇಗೆಂಬ ವಿವರ ಇಲ್ಲಿದೆ
Aug 17, 2023 08:30 PM IST
ನಾಗರ ಪಂಚಮಿ 2023 (ಸಾಂಕೇತಿಕ ಚಿತ್ರ)
Naga Panchami 2023: ಕರ್ನಾಟಕದ ಮಹತ್ವದ ಹಬ್ಬ ನಾಗರ ಪಂಚಮಿಗೆ ದಿನಗಣನೆ ಆರಂಭವಾಗಿದೆ. ನಿಜ ಶ್ರಾವಣದ ಆರಂಭದೊಂದಿಗೆ ಮನೆಗಳಲ್ಲಿ ಹಬ್ಬಕ್ಕೆ ಸಿದ್ಧತೆಗಳು ಚುರುಕಾಗಿವೆ. ನಾಗಪ್ಪನ ಪೂಜೆಯೊಂದಿಗೆ ಈ ಹಬ್ಬಕ್ಕೆ ಅಣ್ಣ-ತಂಗಿ ಬಾಂಧವ್ಯದ ಆಯಾಮವೂ ಇರುವುದು ವಿಶೇಷ.
ಶಾಸ್ತ್ರ ಸಂಪ್ರದಾಯಗಳನ್ನು ಅನುಸರಿಸುವ ನಮ್ಮ ದೇಶದಲ್ಲಿ ನಾಗರ ಪಂಚಮಿ ವಿಶೇಷವಾದ ಸ್ಥಾನವನ್ನು ಪಡೆದಿದೆ. ಇದನ್ನುಗರುಡ ಪಂಚಮಿ ಎಂದು ಕರೆಯುತ್ತೇವೆ. ಇದಕ್ಕೆ ಕಾರಣ ಇದು ಸೋದರ ಮತ್ತು ಸೋದರಿಯ ನಡುವಿನ ಸೋದರತ್ವವನ್ನು ಗಟ್ಟಿಗೊಳಿಸುತ್ತದೆ. ಯಾವುದೋ ಕಾರಣದಿಂದ ಸೋದರ ಸೋದರಿಯ ನಡುವೆ ಮನಸ್ತಾಪ ಉಂಟಾಗಿ ದೂರ ದೂರವಿದ್ದರೂ, ಇಂದಿನ ದಿನ ಪರಸ್ಪರ ಭೇಟಿಯಾಗುತ್ತಾರೆ. ಇದರ ಸಡಗರ ಕೇವಲ ಒಂದು ದಿನದ ಮಾತಲ್ಲ.
ತಾಜಾ ಫೋಟೊಗಳು
ಇದರ ಆರಂಭವೇ ಭೀಮನ ಅಮಾವಾಸ್ಯೆ. ಅಂದು ಭಂಡಾರ ಎಂಬ ತಿಂಡಿಯನ್ನು ಮಾಡುತ್ತಾರೆ. ಸೋದರಿಯರು ಇದನ್ನು ಮುಂಬಾಗಿಲ ಎರಡು ಬದಿಗಳಲ್ಲಿ ಇಡುತ್ತಾರೆ. ಇದನ್ನು ಸೋದರರು ಕೆಲವು ಕಡೆ ತಮ್ಮ ಮೊಣ ಕೈಯಿಂದ, ಇನ್ನೂ ಕೆಲವು ಕಡೆ ತಮ್ಮ ಮುಷ್ಟಿಯಿಂದ ನಿಧಾನವಾಗಿ ಸ್ಪರ್ಶಿಸುತ್ತಾರೆ. ಇದನ್ನು ಸಹೋದರರೆಲ್ಲದೆ ಬೇರಾರು ತಿನ್ನಲೇಬಾರದು. ಇದರಿಂದಾಗಿ ಕಷ್ಟ ನಷ್ಟದ ಸಮಯದಲ್ಲಿ ಸೋದರಿಯ ಸಹಾಯ ಸಹಾಯಕರ ದೊರೆಯುತ್ತದೆ. ಸಹಾಯ ಸಹಕಾರ ಎಂದ ಮಾತ್ರಕ್ಕೆ ಅದು ಬರೀ ಹಣವಲ್ಲ. ಸೋದರಿಯರ ಆಶೀರ್ವಾದಕ್ಕೆ ಹೆಚ್ಚಿನ ಶಕ್ತಿ ಇರುತ್ತದೆ.
ಆನಂತರ ಬರುವುದೇ ನಾಗ ಚೌತಿ. ಈ ತಿಂಗಳ 20ನೆಯ ದಿನಾಂಕದಂದು ನಾಗಚೌತಿ ಬರುತ್ತದೆ. ಮತ್ತೊಂದು ಅತಿ ಮುಖ್ಯವಾದ ವಿಚಾರವೆಂದರೆ ನಾಗಚೌತಿ ಮತ್ತು ನಾಗ ಪಂಚಮಿ ಎಂದು ಒಗ್ಗರಣೆಯನ್ನು ಸಹ ಹಾಕುವುದಿಲ್ಲ. ಅಷ್ಟೇ ಏಕೆ ತಲೆಗೆ ಶಾಂಪೂ ಅಥವಾ ಸಾಬುನನ್ನು ಹಚ್ಚಿ ನೀರನ್ನು ಸಹ ಹಾಕಿಕೊಳ್ಳುವುದಿಲ್ಲ.
ಈ ಪೂಜೆಗಳಿಗೆ ಯಾವುದೇ ವಿಶೇಷವಾದಂತಹ ಮಂತ್ರಗಳಿಲ್ಲ. ಕೆಲವು ಕಡೆ ಇದಕ್ಕೆಂದೆ ಬರೆದ ಹಾಡುಗಳು ಚಾಲ್ತಿಯಲ್ಲಿದೆ. ಚೌತಿಯ ದಿನ ನಾಗಪ್ಪನ ವಿಗ್ರಹಕ್ಕೆ ತನಿಯನ್ನು ಎರೆಯುತ್ತಾರೆ. ಇದಕ್ಕೆ ಅತ್ತೆ ತನಿ ಎಂಬ ಹೆಸರಿದೆ. ಕಾರಣ ಈ ತನಿಯನ್ನು ಎರೆಯುವುದು ಆ ಕುಟುಂಬದ ಅತ್ತೆ. ಇದು ಕಷ್ಟದ ಆಚರಣೆ ಆಗುತ್ತದೆ. ಕಾರಣ ಒದ್ದೆ ಬಟ್ಟೆಯಲ್ಲಿ ತನಿಯನ್ನು ಎರೆಯಬೇಕು. ಬಿಸಿ ಕಾಫಿ, ನೀರು, ಹಾಲು ಪ್ರತಿಯೊಂದು ಪದಾರ್ಥಗಳು ನಿಷೇಧಿತವಾಗಿರುತ್ತದೆ. ಒಮ್ಮೆ ಆರಂಭಿಸಿ ಬಿಟ್ಟರೆ ಇದನ್ನು ನಿಲ್ಲಿಸುವಂತಿಲ್ಲ. ಅಂದಿನ ದಿನ ಉಪ್ಪನ್ನು ಮುಟ್ಟಲೇ ಬಾರದು. ಹಾಗೆಯೇ ಯಾವುದೇ ಆಹಾರ ಪದಾರ್ಥವನ್ನು ಹುರಿಯುವುದು ಮತ್ತು ಕರಿಯುವುದನ್ನು ಸಂಪೂರ್ಣ ನಿಷೇಧಿಸಬೇಕು. ಒಂದು ವೇಳೆ ಇದನ್ನು ಮಾಡಿದರೆ ನಾಗಪ್ಪನ ಬೆನ್ನು ಸುಟ್ಟಂತೆ ಎಂದು ಕೆಲ ಹಿರಿಯರು ಹೇಳುತ್ತಾರೆ. ತನ್ನಿ ಎರೆಯುವವರು ಆ ದಿನ ತಣ್ಣನೆಯ ನೀರಿನಲ್ಲಿ ಸ್ನಾನವನ್ನು ಮಾಡಬೇಕು.
ದೇವರಿಗೆ ನೈವೇದ್ಯವಾಗಿ ಹಸಿ ತಂಬಿಟ್ಟನ್ನು ತಯಾರಿಸಬೇಕು. ಇದರೊಂದಿಗೆ ಹುರಿಯದೆ ಎಳ್ಳಿನಿಂದ ಹಸಿ ಚಿಗುಳಿಯನ್ನು ತಯಾರಿಸಬೇಕು. ಬಾಳೆಹಣ್ಣು ತೆಂಗಿನ ಕಾಯಿಯನ್ನು ಬಳಸಬಹುದು. ಹೆಸರು ಬೇಳೆಗೆ ಉಪ್ಪನ್ನು ಹಾಕದೆ ಕೇವಲ ಕಾಯಿ ತುರಿ ಬೆರೆಸಬೇಕು. ನಾಗಪ್ಪನ ವಿಗ್ರಹಕ್ಕೆ ಮೊದಲು ಹಾಲು ಮತ್ತು ತುಪ್ಪದಿಂದ ಅಭಿಷೇಕವನ್ನು ಮಾಡಬೇಕು. ಆನಂತರ ಅರಿಶಿನ, ಕುಂಕುಮ, ಅಕ್ಷತೆ, ಹೂವು ,ಗಂದಾ, ಗೆಜ್ಜೆ ವಸ್ತ್ರಗಳಿಂದ ಅರ್ಚಿಸಬೇಕು. ನಂತರ ಧೂಪದೀಪಗಳಿಂದ ನಾಗಪ್ಪನನ್ನು ಪೂಜಿಸಬೇಕು. ಅಕ್ಷತೆಯಾಗಿ ನೆನೆಸಿದ ಹಸಿ ಕಡಲೆಕಾಳನ್ನು ಬಳಸಬೇಕು. ಆನಂತರ ಬ್ರಹ್ಮಚಾರಿಗೆ ಉಪ್ಪಿಲ್ಲದೆ ತಯಾರಿಸಿದ ಹೆಸರು ಬೇಳೆ ಮುಂತಾದವುಗಳನ್ನುದಕ್ಷಿಣಯ ಸಹಿತ ನೀಡಬೇಕು.\
ನಾಗರ ಪಂಚಮಿಯ ಬಗ್ಗೆ ಒಂದು ಸೊಗಸಾದ ಕಥೆ
ಮಾರನೆಯ ದಿನ ಅಂದರೆ ಸೋಮವಾರ 21ನೆಯ ದಿನಾಂಕ ಬರುವುದೇ ನಾಗರ ಪಂಚಮಿ ಅಥವಾ ಗರುಡ ಪಂಚಮಿ. ನಾಗರ ಪಂಚಮಿಯ ಬಗ್ಗೆ ಒಂದು ಸೊಗಸಾದ ಕಥೆ ಇದೆ. ಒಂದೂರಿನಲ್ಲಿ ಒಬ್ಬ ಬಡವನಿರುತ್ತಾನೆ. ಅವನಿಗೆ ಅಕ್ಮಂಜಿ ಎಂಬ ಮಗಳಿರುತ್ತಾಳೆ. ಆಕೆಯು ಈ ನಾಗರ ಪಂಚಮಿ ವ್ರತವನ್ನು ಚಿಕ್ಕ ವಯಸ್ಸಲ್ಲಿಯೇ ಭಯ ಭಕ್ತಿಗಳಿಂದ ಆಚರಿಸುತ್ತಿದ್ದಳು. ಒಮ್ಮೆ ಪೂಜಾ ಕಾರ್ಯಕ್ಕೆ ಅಣಿಗೊಂಡು ತನ್ನ ಸೋದರರನ್ನು ಕರೆದು ಪೂಜೆಗಾಗಿ ಹಣ್ಣು ಮತ್ತು ಹೂಗಳನ್ನು ತಂದುಕೊಡಲು ಕೇಳುತ್ತಾಳೆ.
ತಂಗಿಯ ಮಾತನ್ನು ಪೂರೈಸಲು ಸೋದರರು ಕೇದಿಗೆಯ ಹೂವನ್ನು ತರಲು ಹೊರಡುತ್ತಾರೆ. ಆದರೆ ದುರಾದೃಷ್ಟ ಅಲ್ಲಿಯೇ ಕಾದಿರುತ್ತದೆ. ಅಲ್ಲಿ ಅಡಗಿದ್ದ ನಾಗರಹಾವು ಸೋದರರ ಕೈಗೆ ಕಚ್ಚುತ್ತದೆ. ಕ್ಷಣಮಾತ್ರದಲ್ಲಿ ದೇಹವನ್ನೆಲ್ಲ ವಿಷವು ವ್ಯಾಪಿಸಿ ಅಲ್ಲಿಯೇ ನೆಲದ ಮೇಲೆ ಬೀಳುತ್ತಾರೆ.
ಕೆಲ ಜನರಿಂದ ಈ ಘಟನೆಯ ಬಗ್ಗೆ ತಿಳಿದ ಅಕ್ಮಂಜೆಯು ತನ್ನ ಆರಾಧ್ಯ ದೈವವಾದ ನಾಗಪ್ಪನನ್ನು ಪೂಜಿಸಿ ಸೋದರರನ್ನು ಬದುಕಿಸಲು ಕೇಳುತ್ತಾಳೆ. ದೇವರ ಪ್ರಸಾದಕ್ಕೆಂದು ನೆನೆಸಿದ ಅಕ್ಕಿ, ಕಡಲೆಕಾಳು, ಬಾಳೆಯಹಣ್ಣು,ಚಿಗಲಿ, ತಂಬಿಟ್ಟು, ತೆಂಗಿನಕಾಯಿ,ಭತ್ತದಅರಳು, ಹುರಿಗಡಲೆ, ಹುಣಿಸೆಕಾಯಿ ಎಲ್ಲವನ್ನು ತೆಗೆದುಕೊಂಡು ಸೋದರರು ಪ್ರಾಣತ್ಯಾಗ ಮಾಡಿದ ಸ್ಥಳಕ್ಕೆ ಆಗಮಿಸುತ್ತಾಳೆ. ಅಲ್ಲಿಯೇ ಹುತ್ತದ ಮಣ್ಣಿನಿಂದ ಮಾಡಿದ ನಾಗಪ್ಪನನ್ನು ಷೋಡಶೋಪಚಾರ ಪೂಜೆಯ ಮೂಲಕ ಅರ್ಚಿಸುತ್ತಾಳೆ. ಆನಂತರ ಹುಟ್ಟದ ಮಣ್ಣು, ಹೂ ಕೊನೆ, ತನಿಎರೆದ ಹಾಲು ,ತುಪ್ಪ, ಅಕ್ಷತೆಯನ್ನು ತಂದು ಸಹೋದರರ ಮೇಲೆ ಸಿಂಪಡಿಸುತ್ತಾಳೆ.
ಆಶ್ಚರ್ಯವೆಂಬಂತೆ ತಕ್ಷಣವೇ ಆ ಸೋದರರು ಏನೂ ಆಗಿಲ್ಲವೆಂಬಂತೆ ಎದ್ದು ಕೂಡುತ್ತಾರೆ. ಎಲ್ಲರನ್ನೂ ಕುರಿತು ನಾವೇಕೆ ಇಷ್ಟು ಹೊಟ್ಟು ಮಲಗಿದ್ದೆವು ಎಂದು ಕೇಳುತ್ತಾರೆ. ಆಗ ಸಂತಸದಿಂದ ಅಕ್ಮಂಜಿಯು ನಾಗಪ್ಪನನ್ನು ಕುರಿತು ಹರಿಗೆ ಹಾಸಿಗೆಯಾಗು, ಹರಗೆ ಕಂಠಮಾಲೆಯಾಗು, ಹೆಣ್ಣು ಮಕ್ಕಳು ಪೂಜಿಸಿ ದಾಗ ಬೇಡುವ ವರವನ್ನು ಕೊಡುವ ನಾಗದೇವ ನಾಗು ಎಂದು ಹೇಳುತ್ತಾಳೆ.
ಅಂದಿನಿಂದ ಹೆಣ್ಣು ಮಕ್ಕಳು ಈ ಪೂಜೆಯನ್ನು ಮಾಡಿ ಸೋದರ ಬೆನ್ನು ತೊಳೆದು ತಮಗೆ ಇಷ್ಟವಾದ ವರಗಳನ್ನು ಪಡೆಯುತ್ತಿದ್ದಾರೆ. ಮೊದಲು ಸಹೋದರರಿಗೆ ತಿಂಡಿ ಅಥವಾ ಊಟವನ್ನು ನೀಡಬೇಕು. ಆನಂತರ ಬೆನ್ನಿಗೆ ಮೊದಲು ಅರಿಶಿನ ಮತ್ತು ಕುಂಕುಮವನ್ನು ಹಚ್ಚಬೇಕು. ಆನಂತರ ಕಡಲೆ ಕಾಡನ್ನು ಬೆನ್ನಿಗೆ ಹಾಕಬೇಕು. ಸೋದರ ಸೋದರಿಯರು ಪರಸ್ಪರ ಹೊಸ ಬಟ್ಟೆಗಳು ಮತ್ತು ದಕ್ಷಿಣೆ ಸಮೇತ ತಾಂಬೂಲವನ್ನು ನೀಡಬೇಕು. ಆನಂತರ ಚಿಕ್ಕವರು ದೊಡ್ಡವರಿಗೆ ನಮಿಸಿ ಆಶೀರ್ವಾದವನ್ನು ಪಡೆಯಬೇಕು. ಇದರಿಂದ ಸೋದರಿಯು ಮಾಡುವ ಪೂಜೆಯಿಂದಾಗಿ ಸೋದರರ ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟ ನಷ್ಟಗಳು ಅಡ್ಡಿ ಆತಂಕಗಳು ಪರಿಹಾರವಾಗುವುದು ಎಂದು ಹೇಳಲಾಗಿದೆ.
- ಎಚ್.ಸತೀಶ್, ಜ್ಯೋತಿಷಿ
(Festivals of Karnataka details from Hindustan Times Kannada. ಕರ್ನಾಟಕದ ಹಬ್ಬ, ಸಂಸ್ಕೃತಿಯ ಬಗ್ಗೆ ಮತ್ತಷ್ಟು ಮಾಹಿತಿಗೆ kannada.hindustantimes.com ಜಾಲತಾಣ ನೋಡಿ)