ಕೈಗೆ ಮೊಬೈಲ್ ಕೊಡಬೇಡಿ, ಕೈ ಮುಗಿಸಿ ಸಂಸ್ಕೃತಿ, ಸಂಪ್ರದಾಯ ಪರಿಚಯಿಸಿ; ನಿಮ್ಮ ಮಕ್ಕಳಿಗೆ ಹೇಳಿಕೊಡಬಹುದಾದ ಶ್ಲೋಕಗಳು ಇವು
May 28, 2024 12:01 PM IST
ಕೈಗೆ ಮೊಬೈಲ್ ಕೊಡಬೇಡಿ, ಕೈ ಮುಗಿಸಿ ಸಂಸ್ಕೃತಿ, ಸಂಪ್ರದಾಯ ಪರಿಚಯಿಸಿ; ನಿಮ್ಮ ಮಕ್ಕಳಿಗೆ ಹೇಳಿಕೊಡಬಹುದಾದ ಶ್ಲೋಕಗಳು ಇವು
ಮಕ್ಕಳಿಗೆ ಮೊಬೈಲ್, ವಿಡಿಯೋ ಗೇಮ್ ಕೊಡುವ ಬದಲಿಗೆ ಎಲ್ಲರೂ ಮರೆಯುತ್ತಿರುವ ಸಂಸ್ಕೃತಿ, ಸಂಪ್ರದಾಯವನ್ನು ಪರಿಚಯಿಸುವುದು ಒಳ್ಳೆಯದು. ಅವರು ಭವಿಷ್ಯದಲ್ಲಿ ಧೈರ್ಯವಂತರಾಗಿ, ಸುಸಂಸ್ಕೃತರಾಗಿ ಬದುಕುವ ದಾರಿ ತೋರಿಸಿ. ನಿಮ್ಮ ಮಕ್ಕಳಿಗೆ ಹೇಳಿಕೊಡಬಹುದಾದ ಶ್ಲೋಕಗಳು ಇವು
ಈ ಕಂಪ್ಯೂಟರ್ ಯುಗದಲ್ಲಿ ಎಲ್ಲರೂ ಸಂಸ್ಕೃತಿ, ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಈಗ ಜನಿಸುವ ಮಕ್ಕಳಿಗಂತೂ ಇದರ ಬಗ್ಗೆ ಅರಿವೇ ಇರುವುದಿಲ್ಲ. ಆದರೆ ಮಕ್ಕಳಿಗೆ ವಿಡಿಯೋ ಗೇಮ್, ಮೊಬೈಲ್‌ನಂಥ ಗೆಜೆಟ್‌ಗಳನ್ನು ಕೈಗೆ ಕೊಟ್ಟು ಸುಮ್ಮನೆ ಕೂರುವ ಬದಲು ಅವರು ಕೈ ಮುಗಿದು ಶ್ಲೋಕಗಳನ್ನು ಹೇಳುವಂತೆ ಬದಲಿಸುವುದು ಪೋಷಕರ ಕರ್ತವ್ಯ.
ತಾಜಾ ಫೋಟೊಗಳು
ಮೊಬೈಲ್, ಕಂಪ್ಯೂಟರ್ ಮೂಲಕ ಮಕ್ಕಳಿಗೆ ಬೇಕಾದ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬಹುದು. ಆದರೆ ಕೆಲವೊಮ್ಮೆ ಅದೇ ಸಮಸ್ಯೆಯಾಗಿ ಬದಲಾಗುತ್ತದೆ. ಆದ್ದರಿಂದ ಮಕ್ಕಳಿಗೆ ನಮ್ಮ ಸಂಪ್ರದಾಯವನ್ನು ಹೇಳಿಕೊಡಿ, ಸುಲಭವಾದ ಶ್ಲೋಕಗಳನ್ನು ಕಲಿಸಿ. ಇದರಿಂದ ಅವರ ಜೀವನ ಉಜ್ವಲವಾಗುತ್ತದೆ. ದೇವರ ಆಶೀರ್ವಾದ ಕೂಡಾ ದೊರೆಯುತ್ತದೆ. ಮಕ್ಕಳಿಗೆ ಹೇಳಿಕೊಡಬಹುದಾದ ಕೆಲವೊಂದು ಶ್ಲೋಕಗಳಿವೆ. ಇದನ್ನು ಪ್ರತಿದಿನ ಹೇಳಿಕೊಡಿ. ಇವು ಅತ್ಯಂತ ಶಕ್ತಿಶಾಲಿ ಸಂಸ್ಕೃತ ಶ್ಲೋಕಗಳಾಗಿವೆ.
ಮಕ್ಕಳಿಗೆ ಹೇಳಿಕೊಡಬಹುದಾದ ಶ್ಲೋಕಗಳು
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಂ ಅಧರ್ಮಸ್ಯ ತದದ್ಮಾನಂ ಸೃಜಾಮ್ಯಹಮ್ ||
ಇದು ಭಗವದ್ಗೀತೆಯಲ್ಲಿಯೇ ಅತ್ಯಂತ ಪ್ರಸಿದ್ಧವಾದ ಮತ್ತು ಅರ್ಥಪೂರ್ಣವಾದ ಶ್ಲೋಕಗಳಲ್ಲಿ ಒಂದಾಗಿದೆ. ಯಾವಾಗ ಧರ್ಮವು ನಾಶವಾಗುತ್ತದೆ ಮತ್ತು ಅಧರ್ಮವು ಹೆಚ್ಚುತ್ತದೆಯೋ ಆಗ ಭೂಮಿ ಮೇಲೆ ನಾನು ಅವತರಿಸುತ್ತೇನೆ ಎಂದು ಸ್ವತಃ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಭಗವದ್ಗೀತೆಯ ಈ ಶ್ಲೋಕವನ್ನು ಬಹಳ ಸುಲಭವಾಗಿ ಪಠಿಸಬಹುದು.
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವಃ ಸರ್ವಕಾರ್ಯೇಷು ಸರ್ವದಾ ॥
ಇದು ವಿಘ್ನ ನಿವಾರಕ ಗಣೇಶನಿಗೆ ಸಮರ್ಪಿತವಾದ ಶ್ಲೋಕವಾಗಿದೆ. ಎಲ್ಲಾ ಕಾರ್ಯಗಳಲ್ಲಿ ಅಡೆತಡೆಗಳನ್ನು ನಿವಾರಿಸಲು ಗಣಪತಿಯನ್ನು ಪೂಜಿಸುವಾಗ ಈ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು . ಏಕೆಂದರೆ ಗಣೇಶನನ್ನು ವಿಘ್ನಗಳನ್ನು ನಿವಾರಿಸುವವನು ಎಂದು ಕರೆಯಲಾಗುತ್ತದೆ. ಯಾವುದೇ ಹೊಸ ಕೆಲಸ ಆರಂಭಿಸುವಾಗ ಈ ಪ್ರಾರ್ಥನೆಯನ್ನು ಹೇಳುವುದು ಗಣೇಶನ ಆಶೀರ್ವಾದ ಪಡೆದಂತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಅಥವಾ ಅಡೆತಡೆಗಳಿದ್ದರೆ ಈ ಶ್ಲೋಕ ಪಠಿಸಬಹುದು.
ಅಸತೋ ಮಾ ಸದ್ಗಮಯ
ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂ ಗಮಯ||
ಓಂ ಶಾಂತಿ ಶಾಂತಿ ಶಾಂತಿಃ
ಮಕ್ಕಳಿಗೆ ಶಾಲೆಯಲ್ಲಿ ಈ ಶಾಂತಿ ಮಂತ್ರವನ್ನು ಕಲಿಸಲಾಗುತ್ತದೆ. ತರಗತಿ ಪ್ರಾರಂಭವಾಗುವ ಮೊದಲು ಈ ಸ್ತೋತ್ರವನ್ನು ಪಠಿಸಲಾಗುತ್ತದೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತದೆಡೆಗೆ ಮುನ್ನಡೆಸುವುದು ಎಂಬುದು ಈ ಶ್ಲೋಕದ ಅರ್ಥ. ಈ ಸ್ತೋತ್ರದ ಅರ್ಥವು ದೇವತೆಗಳಿಗೆ ಜ್ಞಾನೋದಯ ಮತ್ತು ವಿಮೋಚನೆಯನ್ನು ನೀಡುವಂತೆ ವಿನಂತಿಸುವುದಾಗಿದೆ. ಇದು ನಮ್ಮನ್ನು ಸಾವಿನ ಭಯದಿಂದ, ಹತಾಶೆಯಿಂದ ಮುಕ್ತಗೊಳಿಸುತ್ತದೆ ಮತ್ತು ಜ್ಞಾನದ ಹಾದಿಯಲ್ಲಿ ನಮ್ಮನ್ನು ಕರೆದೊಯ್ಯುವ ಭರವಸೆ ನೀಡುತ್ತದೆ.
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ।
ಶರಣೇತ್ರ್ಯಂಬಕೆ ಗೌರಿ ನಾರಾಯಣಿ ನಮೋಸ್ತುತೇ
ಜಗನ್ಮಾತೆ ಪಾರ್ವತಿಗೆ ಹೇಳುವ ಶ್ಲೋಕ ಇದು. ಇದರ ಮೂಲಕ ತಮ್ಮ ಇಚ್ಛೆಗಳನ್ನು ಪೂರೈಸುವಂತೆ ಶಕ್ತಿ ಮತ್ತು ರಕ್ಷಣೆಯನ್ನು ನೀಡುವಂತೆ ದೇವಿಯನ್ನು ಪ್ರಾರ್ಥಿಸುತ್ತಾರೆ. ಈ ಸ್ತೋತ್ರವು ಮಕ್ಕಳ ಮನಸ್ಸಿನಲ್ಲಿ ಭದ್ರತೆಯ ಭಾವವನ್ನು ಬೆಳೆಸಲು ಸಹಾಯ ಮಾಡುತ್ತದೆ.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||
ಮಕ್ಕಳಿಗೆ ವಿದ್ಯೆ ಬುದ್ಧಿ ಹೇಳಿಕೊಡುವ ಶಿಕ್ಷಕರಿಗೆ ಈ ಸ್ತೋತ್ರವನ್ನು ಅರ್ಪಿಸಲಾಗಿದೆ. ಹಿಂದೂ ಧರ್ಮದಲ್ಲಿ ಗುರುವಿಗೆ ದೇವರಿಗಿಂತ ಹೆಚ್ಚಿನ ಸ್ಥಾನವಿದೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಗುರುವು ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಅಕ್ಷರಗಳನ್ನು ಕಲಿಸುವುದರಿಂದ ಹಿಡಿದು ಜೀವನ ಪಾಠ ಕಲಿಸುವವರೆಗೆ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಅದಕ್ಕಾಗಿಯೇ ಮಕ್ಕಳು ಶಾಲೆಯಲ್ಲಿ ಈ ಸ್ತೋತ್ರವನ್ನು ಪಠಿಸುತ್ತಾ ನಮಸ್ಕರಿಸುವುದು ಒಳ್ಳೆಯದು.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾಂ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ।
ಇದು ಭಗವದ್ಗೀತೆಯಲ್ಲಿಯೇ ಇನ್ನೊಂದು ಅರ್ಥಪೂರ್ಣ ಶ್ಲೋಕ. ಈ ಶ್ಲೋಕವು ಒಬ್ಬರ ಕಾರ್ಯಗಳು ಮತ್ತು ಜವಾಬ್ದಾರಿಗಳ ಮೇಲೆ ಕೇಂದ್ರೀಕರಿಸುವ ಬಗ್ಗೆ ಕಲಿಸುತ್ತದೆ. ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಅಧಿಕಾರವಿಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷೆಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ ಎಂಬುದು ಇದರ ಅರ್ಥ. ಈ ಶ್ಲೋಕವು ಜವಾಬ್ದಾರಿಯ ಪ್ರಜ್ಞೆಯನ್ನು ಸೃಷ್ಟಿಸುತ್ತದೆ. ಕಷ್ಟಪಟ್ಟು ಕೆಲಸ ಮಾಡಿ ಎಂದು ಹೇಳುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.