ಮಹಾಭಾರತ ಕಥೆಗಳು; ಮುನಿಗಳಿಗೆ ಅವಮಾನ ಮಾಡಿ ಶಾಪಗ್ರಸ್ತನಾಗಿ ಸಾವನ್ನಪ್ಪಿದ ಅಭಿಮನ್ಯುವಿನ ಪುತ್ರ ಪರೀಕ್ಷಿತನ ಕಥೆ
Aug 18, 2024 03:28 PM IST
ಮಹಾಭಾರತ ಕಥೆಗಳು; ಮುನಿಗಳಿಗೆ ಅವಮಾನ ಮಾಡಿ ಶಾಪಗ್ರಸ್ತನಾಗಿ ಸಾವನ್ನಪ್ಪಿದ ಅಭಿಮನ್ಯುವಿನ ಪುತ್ರ ಪರೀಕ್ಷಿತನ ಕಥೆ
ಪರೀಕ್ಷಿತ ಮಹಾರಾಜ, ಅಭಿಮನ್ಯುವಿನ ಪುತ್ರ. ಹಸ್ತಿನಾವತಿಯ ರಾಜನಾಗಿದ್ದ ಈತ ಬೇಡೆಯಾಡುವಾಗ ಮುನಿ ಕುಮಾರನ ಶಾಪಕ್ಕೆ ಗುರಿಯಾಗಿ ಶಾಪಗ್ತಸ್ತನಾಗುತ್ತಾನೆ. ಮುನಿಗಳ ಕೊರಳಿಗೆ ಹಾವು ಸುತ್ತಿ ಅವಮಾನ ಮಾಡಿದ ಈಗ ಕೊನೆಗೆ ಹಾವು ಕಡಿತದಿಂದಲೇ ಸಾವನ್ನಪ್ಪುತ್ತಾನೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಅರ್ಜುನ, ದ್ರೌಪದಿ, ಧರ್ಮರಾಯ, ಭೀಮ ಹೀಗೆ ಮಹಾಭಾರತದಲ್ಲಿ ಬರುವ ಸಾಕಷ್ಟು ಪಾತ್ರಗಳು ಜನರಿಗೆ ಚಿರಪರಿಚಿತ. ಆದರೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲದ ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ಹೆಸರುಗಳಿವೆ. ಅವರಲ್ಲಿ ಪರೀಕ್ಷಿತ ಮಹಾರಾಜ ಕೂಡಾ ಒಬ್ಬ. ಈತ ಅಭಿಮನ್ಯು ಹಾಗೂ ಉತ್ತರೆಯ ಪುತ್ರ. ಮುನಿಗಳೊಬ್ಬರಿಗೆ ಅವಮಾನ ಮಾಡಿ ಶಾಪಕ್ಕೆ ಗುರಿಯಾಗಿ ಸಾವನ್ನಪ್ಪಿದ ಪರೀಕ್ಷಿತ ಮಹಾರಾಜನ ಕಥೆ ಇಲ್ಲಿದೆ.
ತಾಜಾ ಫೋಟೊಗಳು
ಅಭಿಮನ್ಯು-ಉತ್ತರೆಯ ಪುತ್ರ ಪರೀಕ್ಷಿತ ಮಹಾರಾಜ
ಪರೀಕ್ಷಿತ ಮಹಾರಾಜ ಹಸ್ತಿನಾವತಿಯ ರಾಜನಾಗಿದ್ದನು. ಬೇಟೆಯಾಡುವುದು ಇವನ ಹವ್ಯಾಸ. ಪ್ರತಿದಿನವೂ ಬೇಟೆ ಆಡುವುದೆಂದರೆ ಈತನಿಗೆ ಖುಷಿ. ಇದೇ ರೀತಿ ಒಮ್ಮೆ ಬೇಟೆಗೆ ಹೋದ ಪರೀಕ್ಷಿತ ಮಹಾರಾಜನಿಗೆ ಬಹಳ ದಣಿವಾಗುತ್ತದೆ. ಆದರೂ ಜಿಂಕೆಯೊಂದನ್ನು ನೋಡಿದ ಅತ ಅದರತ್ತ ಬಾಣ ಹೂಡುತ್ತಾನೆ. ಜಿಂಕೆಯು ವೇಗದಿಂದ ಓಡಿ ಪರೀಕ್ಷಿತ ರಾಜನ ದಾರಿ ತಪ್ಪಿಸುತ್ತದೆ. ಆ ಜಿಂಕೆಯನ್ನು ಹುಡುಕುತ್ತಾ ಪರೀಕ್ಷಿತನು ಕಾಡಿನಲ್ಲಿ ನಡೆಯುತ್ತಾನೆ. ಆ ಕಾಡಿನಲ್ಲಿ ಶಮಿಕ ಎಂಬ ಹೆಸರಿನ ಋಷಿ ಇರುತ್ತಾನೆ. ತನ್ನ ಆಶ್ರಮದಲ್ಲಿ ಓಂಕಾರವನ್ನು ಉಚ್ಚರಿಸುತ್ತಾ, ಭಗವಂತನನ್ನು ಧ್ಯಾನಿಸುತ್ತಾ ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿರುತ್ತಾನೆ.
ಪರೀಕ್ಷಿತನು ಆಶ್ರಮದ ಬಳಿ ಬರುತ್ತಾ ಅಲ್ಲಿದ್ದ ತಪಸ್ವಿಯನ್ನು ಕಂಡು ಭಯ ಭಕ್ತಿಯಿಂದ, ಬೇಟೆಯ ವೇಳೆ ಜಿಂಕೆಯೊಂದು ನನ್ನ ಗುರಿಯಿಂದ ತಪ್ಪಿಸಿಕೊಂಡಿದೆ. ಪ್ರಾಣ ಭಯದಿಂದ ಅದು ನಿಮ್ಮ ಆಶ್ರಮದಲ್ಲಿ ಅಡಗಿರಬಹುದು, ನೀವು ಕಂಡಿರಾ? ಎಂದು ಕೇಳುತ್ತಾನೆ. ಆದರೆ ಆ ಮಹರ್ಷಿಯು ಪಂಚೇಂದ್ರಿಯಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡು ಪರಮಾತ್ಮನ ತಪಸ್ಸಿನಲ್ಲಿ ಮೈ ಮರೆತಿರುತ್ತಾನೆ. ಪರೀಕ್ಷಿತನ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ಆದ್ದರಿಂದ ಪರೀಕ್ಷಿತನ ಮಾತಿಗೆ ಆತ ಪ್ರತಿಕ್ರಿಯಿಸುವುದೂ ಇಲ್ಲ. ಅಲ್ಲಿಯವರೆಗೂ ಶಾಂತವಾಗಿದ್ದ ಪರೀಕ್ಷಿತನು ಒಮ್ಮೆಲೇ ಕೋಪದಿಂದ ಏರು ಧ್ವನಿಯಲ್ಲಿ ಮತ್ತೊಮ್ಮೆ ಪ್ರಶ್ನಿಸುತ್ತಾನೆ. ಆದರೆ ಆ ಋಷಿಯು ಓಂಕಾರ ಉಚ್ಛರಿಸುವುದು ಬಿಟ್ಟು ಬೇರೇನೂ ಮಾತನಾಡುವುದಿಲ್ಲ. ಕೊನೆಗೂ ಪರೀಕ್ಷಿತನ ಪ್ರಶ್ನೆಗೆ ಉತ್ತರ ಸಿಗುವುದೇ ಇಲ್ಲ.
ತಪಸ್ಸಿಗೆ ಕುಳಿತ ಶಮಿಕ ಮುನಿಗೆ ಅಪಮಾನ ಮಾಡಿದ ಪರೀಕ್ಷಿತ
ಪರೀಕ್ಷಿತ ಮಹಾರಾಜನಿಗೆ ಕೋಪವು ಎಲ್ಲೆ ಮೀರುತ್ತದೆ. ಆದ್ದರಿಂದ ಋಷಿಯ ತಪಸ್ಸನ್ನು ಭಂಗಗೊಳಿಸುವ ಸಲುವಾಗಿ ಆಶ್ರಮದ ಬಳಿ ಸತ್ತು ಬಿದ್ದಿದ್ದ ಸರ್ಪವೊಂದನ್ನು ತನ್ನ ಬಾಣದಿಂದ ಎತ್ತಿಕೊಂಡು ಋಷಿಯ ಕೊರಳಿಗೆ ಹೂವಿನ ಹಾರದಂತೆ ಹಾಕಿ ಬಿಡುತ್ತಾನೆ. ಆ ಋಷಿಗೆ ಒಬ್ಬ ಮಗನಿರುತ್ತಾನೆ. ಅವನ ಹೆಸರು ಶೃಂಗಿ. ಪರೀಕ್ಷಿತ ಮಹಾರಾಜನು ತನ್ನ ತಂದೆಗೆ ಮಾಡಿದ ಅವಮಾನ ಕಂಡು ಆತ ಸಿಟ್ಟಾಗುತ್ತಾನೆ. ಪರೀಕ್ಷಿತನ ಬಳಿ ಬರುವ ಶೃಂಗಿ, ಮಹಾರಾಜನನ್ನು ಕುರಿತು ನೀನು ಮಹಾರಾಜನೇ ಇರಬಹುದು. ಆದರೆ ಅಧಿಕಾರದ ಮದ ತಲೆಗೆ ಇರಬಾರದು. ಭೂಪಾಲಕರಿಗೆ ಮೊದಲು ಸಹನೆ ಇರಬೇಕು.
ನೀನು ಭೂಪಾಲಕ ಎಂದಾದರೆ ನಾವೂ ಸಹ ನಿನ್ನ ಪ್ರಜೆಗಳೇ. ಮಹಾರಾಜನಾದ ನಿನ್ನ ಮೊದಲ ಕರ್ತವ್ಯ ಪ್ರಜೆಗಳನ್ನು ಕಾಪಾಡುವುದು. ನಮ್ಮಂತಹ ಋಷಿಮುನಿಗಳನ್ನು ಗೌರವದಿಂದ ಕಂಡು ನಮ್ಮ ದೈನಂದಿನ ಪೂಜೆ ಮತ್ತು ತಪಸ್ಸಿಗೆ ಸಹಾಯ ಮಾಡುವುದು. ಆದರೆ ನೀನು ಮಾಡಿರುವ ಕೆಲಸವೇನು? ನಮ್ಮ ತಂದೆಯನ್ನೇ ಅವಮಾನಿಸಿರುವೆ. ಇದಕ್ಕೆ ಕಾರಣ ನಿನ್ನ ಅಹಂಕಾರವಲ್ಲದೆ ಮತ್ತೇನು ಅಲ್ಲ. ಇನ್ನು ಕೇವಲ 7 ದಿನಗಳಲ್ಲಿ ನಿನಗೆ ಮರಣ ಸಂಭವಿಸುತ್ತದೆ. ಇದು ನನ್ನ ಶಾಪ, ನನ್ನ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅವಮಾನಿಸಿದೀಯೆ. ಮಹಾರಾಜನೇ ಕೇಳು ನಿನ್ನ ಸಾವಿಗೂ ಒಂದು ಸರ್ಪವೇ ಕಾರಣವಾಗುತ್ತದೆ. ಹಾವು ಕಚ್ಚಿ ನೀನು ಪ್ರಾಣತ್ಯಾಗ ಮಾಡುವೆ ಎಂದು ಶಪಿಸುತ್ತಾನೆ.
ಹಾವು ಕಚ್ಚಿ ಸಾವನ್ನಪ್ಪಿದ ಪರೀಕ್ಷಿತ ಮಹಾರಾಜ
ಮಗನು ಪರೀಕ್ಷಿತನಿಗೆ ನೀಡಿದ ಶಾಪದ ಬಗ್ಗೆ ಶಮಿಕ ಬೇಸರ ಉಂಟಾಗುತ್ತದೆ. ತಪಸ್ವಿಗಳಾದ ನಾವು ಅರಿಷಡ್ವರ್ಗಗಳನ್ನು ಗೆದ್ದವರು. ನಮಗೆ ಕೋಪ ಬರುವುದಾಗಲಿ, ಮನದಲ್ಲಿ ಹಿಂಸೆಯ ಬಗ್ಗೆ ಯೋಚನೆಯಾಗಲಿ, ಬರಲೇಬಾರದು. ಇಂತಹ ಸಂದರ್ಭದಲ್ಲಿ ಮಗನ ರೀತಿ ನೀತಿ ಮುನಿಯ ಬೇಸರಕ್ಕೆ ಕಾರಣವಾಗುತ್ತದೆ. ಇತ್ತ ಪರೀಕ್ಷಿತನು ತನ್ನ ಕೋಪವನ್ನು ತೊರೆದು ಸಹಜ ಸ್ಥಿತಿಗೆ ಮರಳುತ್ತಾನೆ. ಆ ತಕ್ಷಣವೇ ಭಯದಿಂದ ಮತ್ತು ತಪ್ಪಿನ ಅರಿವಾದ ಕಾರಣ ಪಶ್ಚಾತಾಪದಿಂದ ಮಂಕಾಗುತ್ತಾನೆ. ಮುನಿಶ್ರೇಷ್ಠರೇ ನಾವು ಸಾಮಾನ್ಯ ಮಾನವರು. ಆದರೆ ನೀವು ಸಕಲವನ್ನು ಬಲ್ಲವರು. ನನ್ನನ್ನು ಕ್ಷಮಿಸಿ ಎಂದು ಬೇಡಿಕೊಳ್ಳುತ್ತಾನೆ. ಆದರೆ ಮುನಿಕುಮಾರ, ಪರೀಕ್ಷಿತನನ್ನು ಕುರಿತು, ಮಾಡಿದ ತಪ್ಪಿಗೆ ಪಶ್ಚಾತಾಪವೊಂದೇ ಮದ್ದಲ್ಲ. ದೈವ ಮತ್ತು ವಿಧಿ ನಿಯಮದಂತೆ ಶಿಕ್ಷೆಯನ್ನು ಅನುಭವಿಸಲೇಬೇಕು ಎಂದು ಹೇಳುತ್ತಾನೆ.
ಮುನಿ ಕುಮಾರನು ತನಗೆ ನೀಡಿದ ಶಾಪದ ಭಯದಿಂದ, ಸಾವು ನನ್ನ ಹತ್ತಿರ ಸುಳಿಯಲೇಬಾರದು ಎಂಬ ಕಾರಣದಿಂದ ಪರೀಕ್ಷಿತನು ಒಂದು ಕೋಣೆಯಲ್ಲಿ ವೈದ್ಯರು, ಮಂತ್ರವಾದಿಗಳ ಸಹಿತ ಅವಿತುಕೊಳ್ಳುತ್ತಾನೆ ಆಯ್ದ ಅಥಿತಿಗಳ ವಿನ: ಇನ್ನಾರಿಗೂ ರಾಜನ ಭೇಟಿಗೆ ಅವಕಾಶ ಇರುವುದಿಲ್ಲ. ಆಗ ಪರೀಕ್ಷಿತನನ್ನು ನೋಡಲು ಆತ್ಮೀಯರೊಬ್ಬರು ಬರುತ್ತಾರೆ. ಅವರು ಪ್ರೀತಿಯಿಂದ ಆತನಿಗೆ ಹಣ್ಣೊಂದನ್ನು ನೀಡುತ್ತಾರೆ. ಆ ಹಣ್ಣಿನಿಂದ ಚಿಕ್ಕ ಹುಳುವೊಂದು ಹೊರ ಬಂದು ಅದೇ ದೊಡ್ಡ ಸರ್ಪವಾಗಿ ಪರೀಕ್ಷಿತನನ್ನು ಕಚ್ಚಿ ಸಾಯಿಸುತ್ತದೆ. ಕೊನೆಗೂ ಋಷಿ ಕುಮಾರನ ಶಾಪ ನಿಜವಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).