ಕಾವೇರಿ, ಗಂಗಾ ಸೇರಿದಂತೆ ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾದ ಭರತ ಭೂಮಿಯನ್ನು ಪಾವನಗೊಳಿಸಿದ ಸಪ್ತನದಿಗಳ ಮಹತ್ವ ತಿಳಿಯಿರಿ
May 19, 2024 09:32 PM IST
ಕಾವೇರಿ, ಗಂಗಾ ಸೇರಿದಂತೆ ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾದ ಭರತ ಭೂಮಿಯನ್ನು ಪಾವನಗೊಳಿಸಿದ ಸಪ್ತನದಿಗಳ ಮಹತ್ವ
Indian Rivers: ಭಾರತ ದೇಶವು ಅನೇಕ ಪವಿತ್ರ ನದಿಗಳ ನೆಲೆಯಾಗಿದೆ. ಹಿಂದೂ ಧರ್ಮದಲ್ಲಿ ನದಿಯನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗಿದೆ. ಪ್ರತಿಯೊಂದು ನದಿಯೂ ತನ್ನದೇ ಆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಭಾರತದಲ್ಲಿ ಹರಿಯುವ 7 ನದಿಗಳನ್ನು ಸಪ್ತನದಿಗಳೆಂದು ಕರೆಯಲಾಗುತ್ತದೆ.
ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು. ನಮ್ಮ ಹಿರಿಯರು ಪ್ರತಿದಿನ ಬೆಳಗ್ಗೆ ಈ ಸಪ್ತ ನದಿಗಳ ಶ್ಲೋಕವನ್ನು ಹೇಳುತ್ತಾ ಜಲ ಮೂಲಗಳನ್ನು ನೆನೆಯುತ್ತಿದ್ದರು. ಹಿಂದೂ ಧರ್ಮದಲ್ಲಿ ನದಿಗಳು ಕೇವಲ ಜಲಮೂಲಗಳಲ್ಲ. ಜಗತ್ತಿನ ಜೀವರಾಶಿಗಳಿಗೆ ಜೀವಾಮೃತವನ್ನು ನೀಡುವ ದೇವತೆಗಳೆಂದು ಪೂಜಿಸಲಾಗುತ್ತಿತ್ತು. ಈ ನದಿಗಳೇ ನಾಗರೀಕತೆಗಳ ಪ್ರಾರಂಭ ಮತ್ತು ಬೆಳವಣಿಗೆಗೆ ಕಾರಣವಾದವು.
ತಾಜಾ ಫೋಟೊಗಳು
ಭಾರತದ 7 ನದಿಗಳನ್ನು ಸಪ್ತನದಿಗಳೆಂದು ಕರೆಯಲಾಗುತ್ತದೆ. ಇವು ಜೀವನದಿಗಳು. ಇವುಗಳನ್ನು ಪವಿತ್ರ ಎಂಬ ಪರಿಕಲ್ಪನೆಯಿಂದ ನೋಡಲಾಗುತ್ತದೆ. ಗಂಗಾ, ಯಮುನಾ, ಸಿಂಧು, ನರ್ಮದಾ, ಗೋದಾವರಿ, ಕೃಷ್ಣ ಮತ್ತು ಕಾವೇರಿ ಇವೇ ಆ ಏಳು ನದಿಗಳು. ಭರತ ಭೂಮಿಯನ್ನು ಪಾವನಗೊಳಿಸಿದ ಪೂಜ್ಯ ನದಿಗಳಾಗಿವೆ. ಹಿಂದೂ ಧರ್ಮದಲ್ಲಿ ಈ ಪ್ರತಿಯೊಂದು ನದಿಗೂ ವಿಶೇಷವಾದ ಮಹತ್ವವಿದೆ. ಪುರಾಣಗಳ ಪ್ರಕಾರ ದೇವನದಿಗಳು ಧರೆಗಿಳಿದು ಬಂದ ಕಥೆಗಳಿವೆ. ಸಪ್ತನದಿಗಳ ಹಿಂದಿರುವ ವೈಶಿಷ್ಟ್ಯವನ್ನು ತಿಳಿಯಲು ಮುಂದೆ ಓದಿ.
ಹಿಂದೂ ಪುರಾಣದಲ್ಲಿನ ಏಳು ಪವಿತ್ರ ನದಿಗಳು
1) ಗಂಗಾ ನದಿ
ಗಂಗಾ ನದಿಯು ಭಾರತದ ಅತ್ಯಂತ ಪವಿತ್ರ ನದಿ ಎಂದು ಕರೆಯಲಾಗುತ್ತದೆ. ಗಂಗೆಯಲ್ಲಿ ಮಿಂದರೆ ಪಾಪಗಳು ದೂರವಾಗುತ್ತದೆ, ಮೋಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಿಮಾಲಯದ ತಪ್ಪಲಿನಲ್ಲಿ ಹುಟ್ಟಿ, ಬಂಗಾಳ ಕೊಲ್ಲಿಯನ್ನು ಸೇರುವ ಗಂಗಾ ನದಿಯು ತನ್ನ ಹರಿವಿನ ಉದ್ದಗಲಕ್ಕೂ ಪಾವಿತ್ರ್ಯತೆಯನ್ನು ಸಾರಿದೆ. ಪುರಾಣ ಕಥೆಗಳ ಪ್ರಕಾರ ಗಂಗಾ ಮಾತೆಯು ರಾಜ ಭಗೀರಥನ ಶಾಪಗ್ರಸ್ತ ಪೂರ್ವಜರ ಆತ್ಮಗಳಿಗೆ ಶಾಂತಿಯನ್ನು ನೀಡುವ ಸಲುವಾಗಿ ಭೂಮಿಗೆ ಬಂದು ನದಿಯಾಗಿ ಹರಿದಳು ಎಂದು ಹೇಳಲಾಗುತ್ತದೆ. ಹಾಗಾಗಿ ಗಂಗೆಯನ್ನು ಪಾಪನಾಶಿನಿ ಎಂದು ಕರೆಯಲಾಗುತ್ತದೆ.
2) ಯಮುನಾ ನದಿ
ಯಮುನಾ ನದಿಯು ಗಂಗಾ ನದಿಯ 2ನೇ ಅತಿ ದೊಡ್ಡ ಉಪನದಿಯಾಗಿದೆ. ಹಿಂದೂ ಪುರಾಣದಲ್ಲಿ ಈ ನದಿಗೆ ವಿಶೇಷ ಸ್ಥಾನವಿದೆ. ಶ್ರೀಕೃಷ್ಣನು ಅವನ ಬಾಲ್ಯವನ್ನು ಯಮುನಾ ನದಿಯ ತೀರದಲ್ಲೇ ಕಳೆದನು. ನಂತರ ಬೃಂದಾವನದಲ್ಲಿ ತನ್ನ ಲೀಲೆಗಳನ್ನು ತೋರಿಸಿದನು. ಯಮುನೆಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ ಎಂದು ಭಕ್ತರು ನಂಬುತ್ತಾರೆ.
3) ಸಿಂಧೂ ನದಿ
ಹಿಂದೂ ಪುರಣಾಗಳಲ್ಲಿ ಮತ್ತು ಇತಿಹಾಸದಲ್ಲೂ ಸಿಂಧೂ ನದಿಯು ಪ್ರಾಮುಖ್ಯತೆಯನ್ನು ನೀಡಲಾಗಿದೆ. ನಾಗರೀಕತೆಯು ಮೊದಲು ಪ್ರಾರಂಭವಾಗಿದ್ದು ಇದೇ ಸಿಂಧು ನದಿಯ ಬಯಲಿನಲ್ಲಿ ಎಂದು ನಮ್ಮ ಇತಿಹಾಸ ಹೇಳುತ್ತದೆ. ಸಿಂಧೂ ನದಿಯು ಭಾರತದಲ್ಲಿ ಹುಟ್ಟಿ ಪಾಕಿಸ್ತಾನದಲ್ಲಿ ಹರಿಯುತ್ತದೆ. ಅತ್ಯಂತ ಹಳೆಯ ವೇದವಾದ ಋಗ್ವೇದದಲ್ಲೂ ಈ ನದಿಗೆ ಮಹತ್ವವನ್ನು ನೀಡಲಾಗಿದೆ.
4) ನರ್ಮದಾ ನದಿ
ಭಾರತದ ಮಧ್ಯ ಭಾಗದಲ್ಲಿ ಹರಿಯುವ ನರ್ಮದಾ ನದಿಯನ್ನು ಪವಿತ್ರವೆಂದು ಹೇಳಲಾಗಿದೆ. ನರ್ಮದಾ ನದಿಯಲ್ಲಿ ಸ್ನಾನ ಮಾಡುವುದರಿಂದ ಗಂಗಾ ನದಿಯಲ್ಲೇ ಸ್ನಾನ ಮಾಡಿದಷ್ಟು ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಭಕ್ತಾದಿಗಳು ನರ್ಮದಾ ನದಿಯ ದಂಡೆಯ ಸುತ್ತ ನಡೆಯುತ್ತಾ ನರ್ಮದಾ ಪರಿಕ್ರಮ ಎಂಬ ಮಹತ್ವಪೂರ್ಣ ಆಚರಣೆಯನ್ನು ಮಾಡುತ್ತಾರೆ. ಇದು ಆಧ್ಯಾತ್ಮಿಕವಾಗಿ ಮಹತ್ವವನ್ನು ಪಡೆದುಕೊಂಡಿದೆ.
5) ಗೋದಾವರಿ
ಸಾಮಾನ್ಯವಾಗಿ ಗೋದಾವರಿ ನದಿಯನ್ನು ದಕ್ಷಿಣದ ಗಂಗಾ ನದಿ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿದೊಡ್ಡ ಪರ್ಯಾಯ ದ್ವೀಪದ ನದಿ ವ್ಯವಸ್ಥೆಯಾಗಿದೆ. ಗೌತಮ ಋಷಿಯು ಬರದಿಂದ ಕೂಡಿದ್ದ ಈ ಪ್ರದೇಶಗಳಿಗೆ ನೀರನ್ನು ನೀಡಲು ಗಂಗಾ ನದಿಯ ಒಂದು ಭಾಗವನ್ನು ಇಲ್ಲಿಗೆ ತಂದನು ಎಂದು ಹೇಳಲಾಗುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಗೋದಾವರಿ ಪುಷ್ಕರವನ್ನು ಆಚರಿಸಲಾಗುತ್ತದೆ. ಲಕ್ಷಾಂತರ ಭಕ್ತರು ಪವಿತ್ರ ನೀರಿನಲ್ಲಿ ಸ್ನಾನ ಮಾಡಿ ಪಾವನರಾಗುತ್ತಾರೆ.
6) ಕೃಷ್ಣ
ಹಿಂದೂ ಪುರಾಣದಲ್ಲಿರುವ ಶ್ರೀಕೃಷ್ಣನ ಹೆಸರಿನಲ್ಲಿ ಈ ನದಿಯನ್ನು ಪೂಜಿಸಲಾಗುತ್ತದೆ. ಈ ನದಿಯ ಮಣ್ಣಿನ ಬಣ್ಣವು ಗಾಢವಾಗಿರುವುದರಿಂದ (ಕಪ್ಪು ಮಣ್ಣು) ಈ ಹೆಸರನ್ನು ಪಡೆದುಕೊಂಡಿದ್ದರೂ ಇದನ್ನು ದಕ್ಷಿಣ ಭಾರತದಲ್ಲಿ ಪೂಜನೀಯ ನದಿ ಎಂದು ಹೇಳಲಾಗುತ್ತದೆ. ಇದು ತನ್ನ ಹರಿವಿನ ಉದ್ದಗಲಕ್ಕೂ ಅನೇಕ ಆಧ್ಯಾತ್ಮಿಕ ಭೂಭಾಗಗಳನ್ನು ಹೊಂದಿದೆ. ಸಂಗಮೇಶ್ವರಂನಂತಹ ಸ್ಥಳಗಳಲ್ಲಿ ಇದು ತನ್ನ ಉಪನದಿಗಳೊಂದಿಗೆ ಸಂಗಮವಾಗಿ ಆ ಸ್ಥಳಗಳನ್ನು ಪವಿತ್ರಗೊಳಿಸಿದೆ.
7) ಕಾವೇರಿ
ಕರ್ನಾಟಕ ಮತ್ತು ತಮಿಳುನಾಡು ಭಾಗದ ಜನರಿಗೆ ಇದು ಜೀವನದಿಯಾಗಿದೆ. ಜೀವನಾಧಾರಿತ ನದಿಯಾಗಿರುವ ಕಾವೇರಿಯನ್ನು ದೇವತೆ ಎಂದು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ಈ ಭೂಭಾಗಗಳಲ್ಲಿದ್ದ ನೀರಿನ ಕೊರತೆಯನ್ನು ನೀಗಿಸಲು ಕಾವೇರಿ ನದಿಯನ್ನು ಭೂಮಿಗೆ ಕರೆತರಲಾಯಿತು ಎಂದು ಹೇಳಲಾಗುತ್ತದೆ. ಹಾಗಾಗಿ ಅದು ಹರಿಯುವ ಭಾಗದಲ್ಲಿ ಜನರು ಅದನ್ನು ದೇವರೆಂದು ಪೂಜಿಸುತ್ತಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)