ಪಂಢರಪುರದಲ್ಲಿ ಆಷಾಢ ಏಕಾದಶಿ ಸಡಗರ; ವಿಠ್ಠಲ-ಪುಂಡಲೀಕರ ಕಥೆ ಸೇರಿ ಸಮಗ್ರ ಮಾಹಿತಿ ಇಲ್ಲಿದೆ
Jul 15, 2024 07:25 PM IST
ಪಂಢರಪುರದಲ್ಲಿ ಆಷಾಢ ಏಕಾದಶಿ ಸಡಗರ; ವಿಠ್ಠಲ-ಪುಂಡಲೀಕರ ಕಥೆ
- ಮಹಾರಾಷ್ಟ್ರದಲ್ಲಿರುವ ಪವಿತ್ರ ತೀರ್ಥಕ್ಷೇತ್ರ ಪಂಢರಪುರದಲ್ಲಿ ಆಷಾಢ ಏಕಾದಶಿ ಸಂಭ್ರಮ. ವಿಠ್ಠಲನ ಅವತಾರದಲ್ಲಿ ನೆಲೆಸಿರುವ ವಿಷ್ಣುವಿನ ದರ್ಶನ ಪಡೆದು ಪಾದಸ್ಪರ್ಶಿಸಲು ದೇಶದ ವಿವಿಧ ಭಾಗಗಳಿಂದ ಭಕ್ತರು ಪಂಢರಪುರಕ್ಕೆ ತೀರ್ಥಯಾತ್ರೆ ಕೈಗೊಳ್ಳುತ್ತಿದ್ದಾರೆ. ಅದಕ್ಕೂ ಮುನ್ನ ಈ ಕ್ಷೇತ್ರದ ಇತಿಹಾಸ ತಿಳಿದುಕೊಳ್ಳೋಣ.
ಪಂಢರಪುರದಲ್ಲಿ ಆಷಾಢ ಏಕಾದಶಿ ಸಂಭ್ರಮ ಕಳೆಗಟ್ಟಿದೆ. ಕರ್ನಾಟಕದ ನೆರೆಯ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿರುವ ಪವಿತ್ರ ಕ್ಷೇತ್ರದಲ್ಲಿ ವಿಠ್ಠಲನ ಪಾದ ದರ್ಶನಕ್ಕೆ ಲಕ್ಷಾಂತರ ಭಕ್ತರು ದೇಶದ ಮೂಲೆ ಮೂಲೆಗಳಿಂದ ಕಾಲ್ನಡಿಗೆಯಲ್ಲಿ ಯಾತ್ರೆ ಕೈಗೊಂಡಿದ್ದಾರೆ. ಆಷಾಢ ಮಾಸದ ಹನ್ನೊಂದನೇ ದಿನವೇ ಆಷಾಢ ಏಕಾದಶಿ (ಜುಲೈ 17). ಈ ಬಾರಿ ಆಷಾಢ ಶುಕ್ಲದ ಏಕಾದಶಿ ತಿಥಿಯು ಜುಲೈ 16ರಂದು ರಾತ್ರಿ 08:33ಕ್ಕೆ ಆರಂಭವಾಗಿ ಜುಲೈ 17ರಂದು ರಾತ್ರಿ 09:02ಕ್ಕೆ ಮುಕ್ತಾಯವಾಗುತ್ತದೆ. ಪಂಢರಾಪುರದ ವಿಠ್ಠಲ ದೇವಸ್ಥಾನದಲ್ಲಿ ವಿಶೇಷ ಆಚರಣೆ ನಡೆಯಲಿದೆ. ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಪವಿತ್ರ ಸ್ಥಳವಾಗಿರುವ ಐಸಿಹಾಸಿಕ ದೇಗುಲಕ್ಕೆ, ಸುಮಾರು 800 ವರ್ಷಗಳಿಂದಲೂ ಭಕ್ತರು ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಹೀಗಾಗಿ ಆಷಾಡ ಏಕಾದಶಿ ಪಂಢರಾಪುರದಲ್ಲಿ ಒಂದು ದೊಡ್ಡ ಜಾತ್ರೆ.
ತಾಜಾ ಫೋಟೊಗಳು
ಸೋಲಾಪುರ ಜಿಲ್ಲೆಯಲ್ಲಿ ಚಂದ್ರಭಾಗ ನದಿ ದಡದಲ್ಲಿರುವ ಪಂಢರಪುರದಲ್ಲಿರುವ ವಿಠ್ಠಲ ದೇವಾಲಯವು ವೈಷ್ಣವರ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ವಿಷ್ಣುವನ್ನು ವಿಠ್ಠಲ ಅಥವಾ ಪಾಂಡುರಂಗ ರೂಪದಲ್ಲಿ ಆರಾಧಿಸಲಾಗುತ್ತದೆ. ಇದು ಕೃಷ್ಣ ಅಥವಾ ವಿಷ್ಣುವಿನ ಪುನರ್ಜನ್ಮ ಎಂದು ನಂಬಲಾಗಿದೆ.
ಪಂಢರಾಪುರದದಲ್ಲಿ ಭಗವಂತನಾದ ವಿಷ್ಣು; ವಿಠ್ಠಲ ಅಥವಾ ವಿಠ್ಠೋಬ ಅವತಾರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಭಾರತದಲ್ಲಿ ವೈಷ್ಣವರ ಪ್ರಮುಖ ಆರಾಧನಾ ಕ್ಷೇತ್ರವಿದು. ಇಲ್ಲಿನ ವಿಶೇಷವೆಂದರೆ, ಭಕ್ತರು ವಿಠ್ಠಲನ ಪಾದ ಸ್ಪರ್ಶಿಸಿ ನಮಸ್ಕರಿಸಬಹುದಾಗಿದೆ.
ವಿಷ್ಣು ಹಾಗೂ ಪುಂಡಲೀಕರ ಕಥೆ
ವಿಠ್ಠಲನು ಪಂಢರಾಪುರದಲ್ಲಿ ನೆಲೆಸಿದ್ದು ಹೇಗೆ ಎಂಬುದಕ್ಕೆ ಕಥೆಯೊಂದಿದೆ. ಪುರಾಣದ ಪ್ರಕಾರ, ಹಿಂದೆ ಈ ಊರಿನಲ್ಲಿ ಪುಂಡಲೀಕ ಎಂಬ ವ್ಯಕ್ತಿ ವಾಸಿಸುತ್ತಿದ್ದ. ಆತ ವಿಷ್ಣುವಿನ ಭಕ್ತ. ಒಂದು ದಿನ ಪುಂಡಲೀಕನನ್ನು ಭೇಟಿ ಮಾಡಲು ವಿಷ್ಣುವು ಧರೆಗಿಳಿದು ಬರುತ್ತಾನೆ. ಪುಂಡಲೀಕನ ಮನೆ ಬಳಿ ಬಂದಾಗ, ಪುಂಡಲೀಕ ತನ್ನ ಹೆತ್ತವರಿಗೆ ಊಟ ಬಡಿಸಿ ಸೇವೆ ಮಾಡುತ್ತಿದ್ದ. ತಂದೆ-ತಾಯಿಯ ಸೇವೆಯಲ್ಲಿ ನಿರತನಾಗಿದ್ದ ಪುಂಡಲೀಕನು ವಿಷ್ಣುವಿಗೆ ಆತಿಥ್ಯ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಮನೆಯ ಹೊರಗೆ ನಿಲ್ಲಲು ಹೇಳುತ್ತಾನೆ. ಅದು ಮಳೆಗಾಲವಾಗಿದ್ದರಿಂದ ವಿಷ್ಣುವಿನ ಕಾಲಿನಲ್ಲಿ ಕೆಸರಾಗದಂತೆ ಮನೆಯ ಹೊರಗೆ ಇಟ್ಟಿಗೆಯ ಮೇಲೆ ನಿಲ್ಲುವಂತೆ ಪುಂಡಲೀಕ ಕೇಳಿಕೊಳ್ಳುತ್ತಾನೆ.
ತಂದೆ ತಾಯಿಯ ಸೇವೆ ಮುಗಿದ ಬಳಿಕ ಮನೆಯ ಹೊರಬಂದ ಪುಂಡಲೀಕನು, ವಿಷ್ಣುವಿನ ಬಳಿ ಕ್ಷಮೆ ಕೇಳುತ್ತಾನೆ. ಅಷ್ಟರಲ್ಲೇ ತನ್ನ ಹೆತ್ತವರ ಮೇಲೆ ಪುಂಡಲೀಕನಿಗೆ ಇರುವ ಅಗಾಧ ಭಕ್ತಿ ಹಾಗೂ ಗೌರವ ಕಂಡ ವಿಷ್ಣು ತನ್ನ ಭಕ್ತನ ನಡವಳಿಕೆಯನ್ನು ಮೆಚ್ಚಿಕೊಳ್ಳುತ್ತಾನೆ. ಹೀಗಾಗಿ ವಿಠ್ಠಲನ ರೂಪದಲ್ಲಿ ಇಟ್ಟಿಗೆಯ ಮೇಲೆ ನಿಂತು ಭೂಮಿಯ ಮೇಲೆಯೇ ಉಳಿಯಲು ವಿಷ್ಣು ನಿರ್ಧರಿಸುತ್ತಾನೆ. ಹೀಗಾಗಿ ಪಂಢರಾಪುರದಲ್ಲಿ ವಿಷ್ಣು ವಿಠ್ಠಲನ ರೂಪದಲ್ಲಿ ನೆಲೆಸಿದ್ದಾನೆ. ಇದಕ್ಕೆ ಕಾರಣಕರ್ತ ಪುಂಡಲೀಕ.
ವಿಠ್ಠಲ ಪದ ಬಂದಿದ್ದು ಹೇಗೆ?
ಮೇಲೆ ತಿಳಿಸಲಾದ ಕಥೆಗೂ ವಿಠಲ ಎಂಬ ಹೆಸರಿಗೂ ನಂಟಿದೆ. 'ವಿಠ್ಠಲ' ಎಂಬ ಪದದ ಮೂಲದ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಸ್ಥಳೀಯ ಪುರಾಣದ ಪ್ರಕಾರ, ವಿಠ್ಠಲ ಪದದ ವಿಟ್ ಎಂದರೆ 'ಇಟ್ಟಿಗೆ' ಎಂದರ್ಥ, ಠ್ಠಲ್ ಎಂದರೆ ಸ್ಥಳ ಅಥವಾ ನಿಂತಿರುವುದು ಎಂದು ಅರ್ಥ. ಪುಂಡಲೀಕನ ಮನೆಯ ಹೊರಗೆ ಇಟ್ಟಿಗೆಯ ಮೇಲೆ ವಿಷ್ಣು ನಿಂತಿದ್ದ ಕಾರಣದಿಂದಾಗಿ ಈ ಹಸೆರು ಬಂದಿದೆ ಎನ್ನಲಾಗಿದೆ.
ಒಂದು ಪೌರಾಣಿಕ ಹಿನ್ನೆಲೆ ಪ್ರಕಾರ ಇದು ದಂತಕಥೆಯಾಗಿದ್ದರೂ, ವಿಠ್ಠಲನ ಆರಾಧನೆಯು ಪ್ರಾಯಶಃ ಈ ಪ್ರದೇಶದಲ್ಲಿ ವೈಷ್ಣವರಿಗಿಂತ ಹಿಂದಿನದು ಎಂಬ ನಂಬಿಕೆಯೂ ಇದೆ.
ಪಂಢರಪುರದಲ್ಲಿ ದೇವಾಲಯವನ್ನು ನಿರ್ಮಿಸಲು ಹೊಯ್ಸಳ ರಾಜನಾದ ವಿಷ್ಣುವರ್ಧನನಿಗೆ ಪುಂಡಲೀಕನು ಹೇಳಿರಬಹುದು ಎಂದು ಇತಿಹಾಸಕಾರರು ಹೇಳಿದ್ದಾರೆ. ಶತಮಾನಗಳಿಂದಲೂ ದೇವಾಲಯಕ್ಕೆ ಕಾಲಕಾಲಕ್ಕೆ ಸುಧಾರಣಾ ಕಾರ್ಯ ಮಾಡಲಾಗಿದೆ. ಇರುವ ದೇವಸ್ಥಾನವನ್ನು ಅಭಿವೃದ್ಧಿ ಮಾಡಲಾಗಿದೆ. ಹೀಗಾಗಿ ಇಲ್ಲಿನ ಮೂಲ ದೇವಸ್ಥಾನ ಹೇಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ದೇವಸ್ಥಾನಗಳ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಬೆಂಗಳೂರಿನಿಂದ ಪಂಢರಪುರಕ್ಕೆ ರೈಲಿನಲ್ಲಿ ಹೋಗುವುದು ಹೇಗೆ; ಕರ್ನಾಟಕದ ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತೆ? ಟಿಕೆಟ್ ದರ ಸಹಿತ ಸಮಗ್ರ ಮಾಹಿತಿ