ಸಾಧು ಸಂತರು ಹೆಚ್ಚಾಗಿ ಕಾವಿ ಬಟ್ಟೆಗಳನ್ನು ಏಕೆ ಧರಿಸುತ್ತಾರೆ? ಕೇಸರಿ ಬಣ್ಣ ಏನನ್ನು ಪ್ರತಿನಿಧಿಸುತ್ತದೆ?
Jun 12, 2024 09:49 AM IST
ಸಾಧು ಸಂತರು ಹೆಚ್ಚಾಗಿ ಕಾವಿ ಬಟ್ಟೆಗಳನ್ನು ಏಕೆ ಧರಿಸುತ್ತಾರೆ? ಕೇಸರಿ ಬಣ್ಣ ಏನನ್ನು ಪ್ರತಿನಿಧಿಸುತ್ತದೆ?
Saffron Clothes: ಸಾಮಾನ್ಯವಾಗಿ ನಾವು ಸನ್ಯಾಸಿಗಳು ಮತ್ತು ಸಾಧು ಸಂತರನ್ನು ಕೇಸರಿ ಬಣ್ಣದ ಬಟ್ಟೆಗಳಲ್ಲೇ ನೋಡಿರುತ್ತೇವೆ. ಅದಕ್ಕೆ ಕಾವಿ ವಸ್ತ್ರ ಎಂದು ಕರೆಯುತ್ತಾರೆ. ಅವರೆಲ್ಲರೂ ಕೇಸರಿ ಬಣ್ಣದ ಬಟ್ಟೆಯನ್ನೇ ಧರಿಸಲು ಕಾರಣವೇನು? ಇದರ ಹಿಂದಿರುವ ಕಾರಣ ಏನು? ಇಲ್ಲಿದೆ ಮಾಹಿತಿ.
ಋಷಿ, ಮುನಿಗಳು ಎಂದರೆ ನಮ್ಮ ಕಣ್ಣ ಮುಂದೆ ಬರುವುದು ಅವರ ಕಾವಿ ಬಟ್ಟೆ. ಸಾಧು–ಸಂತರು ಮನೆ ಹತ್ತಿರ ಬಂದರೆ ಅವರನ್ನು ಬರಿಗೈಯಲ್ಲಿ ಕಳುಹಿಸಬಾರದು ಎಂದು ಕೆಲವರು ನಂಬುತ್ತಾರೆ. ಪವಿತ್ರ ನದಿಗಳ ಸಂಗಮದ ಬಳಿ ನಡೆಯುವ ಕುಂಭಮೇಳಗಳ ಸಮಯದಲ್ಲಿ ಸನ್ಯಾಸಿಗಳು ಹೆಚ್ಚಾಗಿ ಕಂಡುಬರುತ್ತಾರೆ. ದೇವಸ್ಥಾನಗಳಲ್ಲಿ, ಕಾಡು ಮೇಡುಗಳಲ್ಲಿ ಧ್ಯಾನ ಮಾಡುತ್ತಾ ಭಕ್ತರಿಗೆ ದರ್ಶನ ನೀಡುತ್ತಾರೆ. ಸನ್ಯಾಸಿಗಳು ನುಡಿದ ಮಾತು ನಡೆಯುತ್ತದೆ ಎಂಬುದು ಹಲವರ ನಂಬಿಕೆ. ಹಾಗೇ ಸಾಮಾನ್ಯವಾಗಿ ಸನ್ಯಾಸಿಗಳು ಕಾವಿ ಬಟ್ಟೆಯನ್ನು ಧರಿಸಿರುವುದನ್ನು ನೋಡಿರುತ್ತೇವೆ. ಸನ್ಯಾಸಿಗಳು ಹೀಗೆ ಕಾವಿ ಬಟ್ಟೆ ಧರಿಸಲು ಕಾರಣವೇನು ತಿಳಿಯಲು ಮುಂದೆ ಓದಿ.
ತಾಜಾ ಫೋಟೊಗಳು
ಕೇಸರಿ ಬಣ್ಣ ಸೂರ್ಯನ ಸಂಕೇತ
ಕೇಸರಿ ಬಣ್ಣವು ಸೂರ್ಯನ ಬೆಳಕನ್ನು ಪ್ರತಿಪಾದಿಸುತ್ತದೆ. ಸೂರ್ಯನು ಪ್ರತಿಯೊಬ್ಬರ ಜೀವನದ ಮೂಲಾಧಾರನಾಗಿದ್ದಾನೆ. ಬೆಳಕು ಜ್ಞಾನವನ್ನು ಸಂಕೇತಿಸುತ್ತದೆ. ಯೋಗಿಗಳು, ಸನ್ಯಾಸಿಗಳು, ಸಾಧುಗಳು ತಮ್ಮ ಅಜ್ಞಾನ ಮತ್ತು ಅಂಧಕಾರವನ್ನು ತೊರೆದು ಜ್ಞಾನವನ್ನು ಜಾಗೃತಗೊಳಿಸುವ ಉದ್ದೇಶದಿಂದ ಕೇಸರಿ ಬಣ್ಣವನ್ನು ಧರಿಸುತ್ತಾರೆ. ಕೇಸರಿ ಬಣ್ಣವು ಎಲ್ಲರನ್ನೂ ಸಮಾನವಾಗಿ ಕಾಣುವ ಗುಣವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಬಣ್ಣವು ಬೆಂಕಿಯನ್ನು ಸಂಕೇತಿಸುತ್ತದೆ. ಇದು ಅಹಂಕಾರ, ಕಾಮ ಮತ್ತು ಕೋಪವನ್ನು ತ್ಯಜಿಸುವುದನ್ನು ಸೂಚಿಸುತ್ತದೆ. ಈ ಬಣ್ಣವು ಮನಸ್ಸಿಗೆ ಶಾಂತಿ ನೀಡುತ್ತದೆ.
ನಕಾರಾತ್ಮಕ ಆಲೋಚನೆ ತಡೆಯುವ ಕೇಸರಿ ಬಣ್ಣ
ಶೈವರು ಮತ್ತು ಸಾಧುಗಳು ಕೇಸರಿ ಬಣ್ಣದ ನಿಲುವಂಗಿಯನ್ನು ಧರಿಸುತ್ತಾರೆ. ಈ ಬಣ್ಣವನ್ನು ಶಕ್ತಿ ಮತ್ತು ತ್ಯಾಗದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮನಸ್ಸು ನಿಯಂತ್ರಣದಲ್ಲಿರುತ್ತದೆ. ನಕಾರಾತ್ಮಕ ಆಲೋಚನೆಗಳು ಬರದಂತೆ ತಡೆಯುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೇ ದೇಹ ಯಾವಾಗಲೂ ಮಣ್ಣಿನಲ್ಲಿಯೇ ವಿಲೀನವಾಗಬೇಕು. ಇದರ ಪ್ರತಿಬಿಂಬವಾಗಿ ಈ ಬಣ್ಣವನ್ನು ಧರಿಸಲಾಗುತ್ತದೆ. ಇದು ಪವಿತ್ರತೆಯನ್ನು ಸೂಚಿಸುತ್ತದೆ.
ಕಾವಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮನಸ್ಸಿನಲ್ಲಿನ ಆತಂಕದಿಂದ ಮುಕ್ತಿ ದೊರೆಯುತ್ತದೆ. ಬಹಳಷ್ಟು ಜನರು ಶಾಂತಿಗಾಗಿಯೂ ಈ ಬಣ್ಣವನ್ನು ಧರಿಸುತ್ತಾರೆ. ಹನುಮಂತನನ್ನು ಪೂಜಿಸುವ ಭಕ್ತರು ಕೂಡ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಏಕೆಂದರೆ ಈ ಬಣ್ಣವು ಹನುಮಂತನಿಗೆ ತುಂಬಾ ಪ್ರಿಯವಾದ ಬಣ್ಣವಾಗಿದೆ.
ಬಿಳಿ ಬಟ್ಟೆಯನ್ನು ಯಾರು ಧರಿಸುತ್ತಾರೆ?
ಕೆಲವು ಸಂತರು ಸಹ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ. ಹೆಚ್ಚಾಗಿ ಜೈನ ಧರ್ಮವನ್ನು ಅನುಸರಿಸುವ ಸಂತರು ಯಾವಾಗಲೂ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ. ಜೈನ ಧರ್ಮದಲ್ಲಿ ಎರಡು ರೀತಿಯ ಸಂತರಿದ್ದಾರೆ. ದಿಗಂಬರರು ಮತ್ತು ಶ್ವೇತಾಂಬರು. ದಿಗಂಬರ ಜೈನ ಸಂತರು ತಮ್ಮ ಇಡೀ ಜೀವನದಲ್ಲಿ ಬಟ್ಟೆ ಧರಿಸದೇ ಬದುಕುತ್ತಾರೆ. ಆದರೆ ಶ್ವೇತಾಂಬರರು ಬಿಳಿ ಬಟ್ಟೆಯನ್ನು ತೊಡುತ್ತಾರೆ.
ಕಪ್ಪು ಬಟ್ಟೆ ಧರಿಸುವ ತಾಂತ್ರಿಕರು
ಕಪ್ಪು ಬಟ್ಟೆಗಳನ್ನು ತಾಂತ್ರಿಕರು ಹೆಚ್ಚಾಗಿ ಧರಿಸುತ್ತಾರೆ. ಈ ಬಣ್ಣವನ್ನು ಧರಿಸುವ ಸಂತರು ತಂತ್ರ ಮಂತ್ರಗಳಲ್ಲಿ ಪಾರಂಗತರಾಗಿದ್ದಾರೆ. ಈ ಸಾಧುಗಳು ರುದ್ರಾಕ್ಷ ಮಾಲೆಗಳೊಂದಿಗೆ ಕಪ್ಪು ಬಟ್ಟೆಗಳನ್ನು ಧರಿಸುತ್ತಾರೆ. ಅಯ್ಯಪ್ಪನ ಭಕ್ತರು ಕೂಡ ಕಪ್ಪು ಬಟ್ಟೆಗಳನ್ನು ಧರಿಸುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಬರಹ: ಅರ್ಚನಾ ಹೆಗ್ಡೆ