ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಹುಡುಕೋಣ; ಗೋಡೆ ಮೇಲೆ ಯಾವ ರೀತಿಯ ಚಿತ್ರಗಳಿರಬೇಕು, ಕಾಲಿಂಗ್ ಬೆಲ್ ಹೇಗಿರಬೇಕು? ಇಲ್ಲಿದೆ ವಾಸ್ತು ಟಿಪ್ಸ್
Jun 07, 2024 11:16 AM IST
ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಹುಡುಕೋಣ; ಗೋಡೆ ಮೇಲೆ ಯಾವ ರೀತಿಯ ಚಿತ್ರಗಳಿರಬೇಕು, ಕಾಲಿಂಗ್ ಬೆಲ್ ಹೇಗಿರಬೇಕು? ಇಲ್ಲಿದೆ ವಾಸ್ತು ಟಿಪ್ಸ್
ತಿಳಿದೋ ತಿಳಿಯದೆಯೋ ನಾವು ಅನೇಕ ತಪ್ಪುಗಳನ್ನು ಮಾಡುತ್ತೇವೆ. ಆದರೆ ಅದರಿಂದಾಗುವ ತೊಂದರೆಗಳನ್ನು ಕೂಡಾ ನಾವೇ ಅನುಭವಿಸಬೇಕು. ಆದರೆ ಆದಷ್ಟು ತಪ್ಪುಗಳನ್ನು ಮಾಡದಿರುವುದು ಅಥವಾ ಆ ತಪ್ಪಿನಿಂದಾಗಿ ಉಂಟಾದ ಸಮಸ್ಯೆಗೆ ಪರಿಹಾರ ಹುಡುಕುವುದು ಕೂಡಾ ನಮ್ಮ ಕೈಯಲ್ಲೇ ಇದೆ. ಈ ಲೇಖನದಲ್ಲಿ ಎಲ್ಲರೂ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಎಂಬ ವಿವರವಿದೆ.
'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ‘ದಿನ ಭವಿಷ್ಯ’ ವಾರ ಭವಿಷ್ಯ ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ‘ನಮ್ಮ ಕಷ್ಟಕ್ಕೆ ನಾವೇ ಕಾರಣ’ ಎಂಬ ಲೇಖನವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.
ತಾಜಾ ಫೋಟೊಗಳು
ಸಂಬಂಧವನ್ನೇ ಹಾಳು ಮಾಡುತ್ತೆ ಮನೆ ಒಳಗಿನ ಧೂಳು
ದಿನ ಬಳಕೆಯ ವಸ್ತುಗಳ ಮೇಲೆ ಧೂಳು ಇದ್ದಲ್ಲಿ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ. ಮನೆಯ ಮಧ್ಯ ಭಾಗದಲ್ಲಿ ಇಟ್ಟಿರುವ ವಸ್ತುಗಳ ಮೇಲೆ ಧೂಳು ಇದ್ದಲ್ಲಿ ಕುಟುಂಬದಲ್ಲಿ ಐಕ್ಯಮತ್ಯ ಇರುವುದಿಲ್ಲ. ಮಲಗುವ ಕೋಣೆಯಲ್ಲಿ ಇರುವ ವಸ್ತುಗಳ ಮೇಲೆ ಧೂಳು ಇದ್ದಲ್ಲಿ ದಂಪತಿ ನಡುವೆ ಉತ್ತಮ ಬಾಂಧವ್ಯ ಇರುವುದಿಲ್ಲ. ಮನೆಯ ಮುಂಭಾಗದಲ್ಲಿ ದೂಳು ಇದ್ದಲ್ಲಿ ಬಂಧು ಬಳಗದವರ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳು ಇರುತ್ತವೆ. ಅಡುಗೆ ಕೋಣೆಯಲ್ಲಿ ದಿನನಿತ್ಯ ಬಳಸುವ ವಸ್ತುಗಳ ಮೇಲೆ ಧೂಳು ಇದ್ದಲ್ಲಿ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಂದು ವಸ್ತುವನ್ನು ಧೂಳಿನಿಂದ ದೂರವಿಡಬೇಕು.
ಗೋಡೆಯಲ್ಲಿ ಪ್ರಾಣಿಗಳು ಬೇಟೆ ಆಡುವ ದೃಶ್ಯ ಅಥವಾ ಕಾಡು ಪ್ರಾಣಿಗಳ ಚಿತ್ರಗಳು ಇಲ್ಲವೇ ಆಕೃತಿಗಳು ಇದ್ದಲ್ಲಿ ಕುಟುಂಬದ ಸದಸ್ಯರ ನಡುವೆ ಅನಾವಶ್ಯಕವಾದ ವಾದ ವಿವಾದಗಳು ಇರುತ್ತವೆ. ಉದ್ಯೋಗ ಮಾಡುವ ಜಾಗದಲ್ಲಿ ಈ ಮೇಲಿನ ಆಕೃತಿಗಳು ಇದ್ದಲ್ಲಿ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ರೂಪಗೊಳ್ಳುವುದಿಲ್ಲ. ಆದ್ದರಿಂದ ಮನೆಯಾಗಲಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ನಗುತ್ತಿರುವ ಜನರಿರುವ ಭಾವಚಿತ್ರವನ್ನು ಹಾಕಬೇಕು. ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುವ ಭಾವಚಿತ್ರ ಇದ್ದಲ್ಲಿ ಒಳ್ಳೆಯ ಫಲಗಳು ದೊರೆಯುತ್ತವೆ.
ಯಾವ ರೀತಿಯ ಬಲ್ಬ್‌ಗಳನ್ನು ಬಳಸಬೇಕು?
ಮನೆಯ ಒಳಗೆ ಸೂರ್ಯನ ಬೆಳಕು ಬರುವಂತೆ ಇರುವುದು ಒಳ್ಳೆಯದು. ವಿದ್ಯುತ್ ಬಲ್ಪುಗಳನ್ನು ಮನೆಯ ಪೂರ್ತಿ ಬೆಳಕು ಮೂಡುವಂತೆ ಹಾಕಬೇಕು. ಮೇಲ್ಚಾವಣಿಗೆ ಅಳವಡಿಸುವುದು ಒಳ್ಳೆಯದು. ಕೆಂಪು ಬಣ್ಣದ ಬೆಳಕನ್ನು ನೀಡುವ ಬಲ್ಬ್‌ಗಳಿಂದ ಕುಟುಂಬದಲ್ಲಿ ಅಶಾಂತಿ ನೆಲೆಸುತ್ತದೆ. ಕೆಟ್ಟು ಹೋದ ಬಲ್ಪುಗಳನ್ನು ಮನೆಯಲ್ಲಿ ಇಟ್ಟು ಕೊಳ್ಳಬಾರದು. ಪದೇ ಪದೆ ಕೆಡುವ ಬಲ್ಬುಗಳನ್ನು ಬಳಸಬಾರದು. ಯಾವುದೇ ಕಾರಣಕ್ಕೂ ಬಾಗಿಲಿಗೆ ಪರದೆಗಳನ್ನು ಹಾಕಬಾರದು. ಆದರೆ ಕಿಟಕಿಗಳಿಗೆ ಪರದೆಯನ್ನು ಆಗಬಹುದು. ಮನೆ ಬಾಗಿಲಿನ ನಡುವಿನ ಜಾಗದಲ್ಲಿಊದಿನ ಕಡ್ಡಿಯನ್ನು ಸಿಲುಕಿಸಬಾರದು. ಗಂಧದ ಕಡ್ಡಿಗಳನ್ನು ಮನೆಯ ಹೊರಗೆ ಸಿಲುಕಿಸುವುದು ತಪ್ಪು. ಆದರೆ ಮನೆಯ ಹೊರಗೆ ಇರುವ ಗಿಡಗಳ ಬಳಿ ಗಂಧದ ಕಡ್ಡಿಯನ್ನುಹಚ್ಚಬಹುದು. ಉರಿಯುತ್ತಿರುವ ಗಂಧದ ಕಡ್ಡಿಯನ್ನು ಬಲವಂತವಾಗಿ ಆರಿಸಬಾರದು. ಹಾಗೆಯೇ ಊದಿನ ಕಡ್ಡಿಯಿಂದ ಬರುವ ಬೂದಿಯನ್ನು ಹಣೆಗೆ ಧರಿಸಬಾರದು. ಗಂಧದ ಕಡ್ಡಿಯನ್ನು ಹಚ್ಚಿ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ನೀಡಬಾರದು.
ಮನೆಯ ಬಾಗಿಲಿಗೆ ಉಪಯೋಗಿಸುವ ಕರೆ ಘಂಟೆಯ ಶಬ್ಧವು ಮಧುರವಾಗಿರಬೇಕು. ಕರ್ಕಶ ಶಬ್ದದ ಕರೆಘಂಟೆಯನ್ನು ಬಳಸಬಾರದು. ಸಾಧ್ಯವಾದಲ್ಲಿ ಆಧುನಿಕತೆಯನ್ನು ತೊರೆದು ದೇವಾಲಯದಲ್ಲಿ ಬಳಸುವ ಘಂಟೆಯನ್ನು ಉಪಯೋಗಿಸುವುದು ಒಳ್ಳೆಯದು. ಬಾಗಿಲಿಗೆ ಅಳವಡಿಸಿರುವ ಲೋಹದ ಚಿಲಕವನ್ನು ಬಡಿದು ಸದ್ದು ಮಾಡಬಾರದು. ಮುಂಬಾಗಿಲಿಗೆ ಯಾವುದೇ ಭಾವಚಿತ್ರ ಅಂಟಿಸುವುದು ಕೂಡಾ ಒಳ್ಳೆಯದಲ್ಲ.
ಕಸ ಗುಡಿಸುವ ಸರಿಯಾದ ಏನು?
ಚೂಪಾದ ಮೂಲೆಗಳಿರುವ ಪೀಠೋಪಕರಣಗಳನ್ನು ಉಪಯೋಗಿಸುವುದು ಒಳ್ಳೆಯದಲ್ಲ. ಇದರಿಂದಾಗಿ ಅನಾವಶ್ಯಕವಾಗಿ ಒಬ್ಬರ ಮೇಲೆ ಒಬ್ಬರಿಗೆ ಅನುಮಾನ ಉಂಟಾಗುತ್ತದೆ. ಸೂರ್ಯೋದಯಕ್ಕೂ ಮುನ್ನ ಅಥವಾ ಸೂರ್ಯಾಸ್ತದ ಮುನ್ನ ಮನೆ ಕಸವನ್ನು ಗುಡಿಸಬೇಕು. ಯಾವುದೇ ಕಾರಣಕ್ಕೂ ಕಸವನ್ನು ಕಾಲಿನಿಂದ ತಳ್ಳಬಾರದು. ಕಸಪೊರಕೆಯನ್ನು ಎಂದಿಗೂ ನಿಲ್ಲಿಸಬಾರದು. ಕಸ ಗುಡಿಸುವ ವೇಳೆ ಮನೆಯ ಒಳಗಿನಿಂದ ಬಾಗಿಲ ಬಳಿ ಕಸ ಗುಡಿಸಬೇಕು. ಇದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳು ಹೊರ ಹೋಗುತ್ತವೆ. ಒಂದು ವೇಳೆ ಕಸವನ್ನು ಬಾಗಿಲಿನಿಂದ ಮನೆಯ ಒಳಗೆ ಗುಡಿಸಿದರೆ ಋಣಾತ್ಮಕ ಶಕ್ತಿಯು ಮನೆಯಲ್ಲಿಯೇ ಉಳಿಯುತ್ತದೆ. ಕಸ ಪೊರಕೆಯಿಂದ ಪುಸ್ತಕದ ಗೂಡು ಮತ್ತು ಅಡುಗೆಗೆ ಬೇಕಾದ ಪದಾರ್ಥಗಳು ಇರುವ ಕಡೆ ಎಂದಿಗೂ ಕಸವನ್ನು ಗುಡಿಸಬಾರದು. ಇದಕ್ಕಾಗಿಯೇ ಪ್ರತ್ಯೇಕವಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಯ ಒಳಗೆ ಅಥವಾ ಮನೆಯ ಹೊರಗೆ ದೀಪವನ್ನು ಹಚ್ಚಿ ಕಸವನ್ನು ಗುಡಿಸಬಾರದು. ಪೊರಕೆ ಕಡ್ಡಿಯಿಂದ ದೀಪವನ್ನು ಹಚ್ಚಬಾರದು. ಉರಿಯುತ್ತಿರುವ ದೀಪವನ್ನು ಮನೆಯಿಂದ ಹೊರಗೆ ಅಥವಾ ಮನೆಯಿಂದ ಒಳಗೆ ತೆಗೆದುಕೊಂಡು ಬರುವುದು ಬಹಳ ತಪ್ಪು.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).