Birth Date: ನಿಮ್ಮ ಜನ್ಮದಿನಾಂಕ 5 ಆದರೆ ದೊರೆಯಲಿದೆ ಯಶಸ್ಸಿನ ಸರಮಾಲೆ
Feb 18, 2024 08:25 PM IST
ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)
- Birth Date Astrology: 5ನೇ ತಾರೀಕು ಹುಟ್ಟಿದವರ ಗುಣ-ಜೀವನದ ಕುರಿತು ಜ್ಯೋತಿಷಿ: ಎಚ್. ಸತೀಶ್ ಅವರು ನೀಡಿದ ಮಾಹಿತಿ ಇಲ್ಲಿದೆ.
ಯಾವುದೇ ತಿಂಗಳ 5ನೇ ತಾರೀಕು ಹುಟ್ಟಿದವರು ಸಾಮಾನ್ಯವಾಗಿ ಕೈಹಿಡಿದ ಕಾರ್ಯಗಳನ್ನೆಲ್ಲ ಯಶಸ್ವಿಯಾಗಿ ಪೂರೈಸುತ್ತಾರೆ. ದೇವರಲ್ಲಿ ಹೆಚ್ಚಿನ ನಂಬಿಕೆ ಇರುತ್ತದೆ. ಸದಾ ಕಾಲವು ಯಾವುದಾದರೂ ಹೊಸ ವಿಚಾರವನ್ನು ಕಲಿಯಲು ಇಷ್ಟಪಡುತ್ತಾರೆ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಗೌರವದ ಭಾವನೆಯಿಂದ ಕಾಣುತ್ತಾರೆ. ಇದೇ ರೀತಿಯಲ್ಲಿ ಬೇರೆಯವರಿಂದಲೂ ಗೌರವವನ್ನು ನಿರೀಕ್ಷಿಸುತ್ತಾರೆ. ಇವರ ಗೌರವಕ್ಕೆ ಕುಂದು ಬರುವ ಸ್ಥಳಕ್ಕೆ ತೆರಳುವುದಿಲ್ಲ. ತಮ್ಮ ಸಮವಯಸ್ಕರ ನಡುವೆ ನಾಯಕರಂತೆ ಬಾಳುತ್ತಾರೆ. ಬೇರೆಯವರಿಗೆ ಕಷ್ಟವೆನಿಸುವ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಲ್ಲರು. ಕುಟುಂಬದ ಗೌರವ ಮತ್ತು ಐಕ್ಯತೆಯನ್ನು ಕಾಪಾಡುವಲ್ಲಿ ಶ್ರಮ ವಹಿಸುತ್ತಾರೆ.
ತಾಜಾ ಫೋಟೊಗಳು
ಮಕ್ಕಳೆಂದರೆ ಬಲುಮುದ್ದು. ಇವರ ಬಾಲ್ಯವೂ ಚೆನ್ನಾಗಿರುತ್ತದೆ. ಬಾಲ್ಯದಲ್ಲಿ ಅನಾರೋಗ್ಯ ಸಾಮಾನ್ಯವಾಗಿರುತ್ತದೆ. ಆದರೆ ಉತ್ತಮ ವೈದ್ಯಕೀಯ ಚಿಕಿತ್ಸೆಯಿಂದ ಉತ್ತಮ ಆರೋಗ್ಯ ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ಉತ್ತಮ ಗ್ರಹಣ ಶಕ್ತಿ ಇರುತ್ತದೆ. ಗಣಿತ ಅಥವಾ ವಿಜ್ಞಾನದಲ್ಲಿ ಉತ್ತಮ ಜ್ಞಾನ ಸಂಪಾದಿಸುವರು. ತಮ್ಮ ಸಹಪಾಠಿಗಳ ಜೊತೆಯಲ್ಲಿ ಸ್ನೇಹದಿಂದ ನಡೆದುಕೊಳ್ಳುತ್ತಾರೆ. ಏಕಾಂಗಿತನವನ್ನು ಇಷ್ಟಪಡುವುದಿಲ್ಲ. ತಮಗೆ ಹೊಂದಿಕೊಳ್ಳುವ ಗುಣವುಳ್ಳವರೊಡನೆ ಸ್ನೇಹವನ್ನು ಬೆಳೆಸುತ್ತಾರೆ. ವಿದೇಶದಲ್ಲಿ ನೆಲೆಸುವ ಆಸೆ ಇದ್ದರು ಜನ್ಮಸ್ಥಳದಲ್ಲಿ ಹೆಚ್ಚಿನ ಸಾಧನೆ ಮಾಡಲು ಅವಕಾಶಕ್ಕಾಗಿ ಕಾಯುತ್ತಾರೆ. ತಮ್ಮ ಜೊತೆಗಾರರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಾರೆ.
ತಂದೆ ತಾಯಿಯರನ್ನು ಸಮಾನ ಭಾವನೆಯಿಂದ ಕಂಡರೂ ತಂದೆಯ ಮೇಲೆ ಪ್ರೀತಿ ಗೌರವ ಹೆಚ್ಚಾಗಿರುತ್ತದೆ. ಹಿರಿಯರ ಸೇವೆ ಮಾಡುವುದರಿಂದ ಸಂತೋಷವನ್ನು ಗಳಿಸುತ್ತಾರೆ. ಇವರು ಇಷ್ಟಪಡುವ ವ್ಯಕ್ತಿಯಿಂದ ನಿರಾಸೆ ಉಂಟಾದರೆ ತಡೆಯಲಾರರು. ವಾದ ವಿವಾದಗಳಿಗೆ ಒಳಗಾಗದೆ ಬುದ್ಧಿವಂತಿಕೆಯಿಂದ ಎದುರಾಗುವ ಸಮಸ್ಯೆಗಳನ್ನು ಗೆಲ್ಲುತ್ತಾರೆ. ಸೋಲೆಂಬುವ ಮಾತಿರುವುದಿಲ್ಲ. ತಪ್ಪು ನಿರ್ಧಾರನಿಂದ ಸೋಲು ಎದುರಾದರೆ ಮೌನಕ್ಕೆ ಶರಣಾಗುವರು. ಆತ್ಮೀಯರ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ.
ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಣದ ಸಹಾಯ ಮಾಡುವುದು ಇಷ್ಟದ ವಿಚಾರ. ಇವರಿಗೆ ಒಳ್ಳೆಯ ಸಂತಾನವಿರುತ್ತದೆ. ಹೆತ್ತವರ ಸಮ್ಮುಖದಲ್ಲಿಯೇ ಮಕ್ಕಳು ಉನ್ನತ ಗೌರವಕ್ಕೆ ಪಾತ್ರರಾಗುತ್ತಾರೆ. ಹೆಚ್ಚಿನ ಆಸೆ ಇರದವರು. ಅಲ್ಪತೃಪ್ತಿಗಳು. ಓದಿನಲ್ಲಿ ವಿಶೇಷ ಶ್ರದ್ಧೆ ವಹಿಸುತ್ತಾರೆ. ಜೀವನದಲ್ಲಿ ಎದುರಾಗುವ ಕಷ್ಟ ನಷ್ಟಗಳನ್ನು ಬುದ್ಧಿ ಬಲದಿಂದ ಗೆಲ್ಲುವರು. ಮನಸ್ಸಿನಲ್ಲಿರುವ ನೋವುಗಳನ್ನು ಮುಚ್ಚಿಟ್ಟು ಎಲ್ಲರೊಂದಿಗೆ ಸಂತಸವನ್ನು ಹಂಚುವಿರಿ. ಸಂಪ್ರದಾಯ ಎಂದರೆ ಎಲ್ಲದ ಖುಷಿ. ವಿಶೇಷವಾದಂತಹ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಸಂಸಾರದ ಜವಾಬ್ದಾರಿ ಲಭಿಸುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಶ್ರದ್ಧೆ ಇರುತ್ತದೆ. ಜನಸೇವೆಯ ಉದ್ದೇಶವಿಟ್ಟುಕೊಂಡು ರಾಜಕೀಯಕ್ಕೆ ಸೇರಬಹುದು. ಇವರಿಗೆ ಸಂಬಂಧದಲ್ಲಿ ಅಥವಾ ಪರಿಚಯ ಇರುವವರ ಜೊತೆಯಲ್ಲಿ ವಿವಾಹವಾಗುತ್ತದೆ.
ಯಾವುದೇ ಕೆಲಸ ಕಾರ್ಯಗಳಲ್ಲಿ ಬೇಸರ ವ್ಯಕ್ತಪಡಿಸುವುದಿಲ್ಲ. ನಮ್ಮ ಸ್ಥಾನಮಾನವನ್ನು ಮರೆತು ಎಲ್ಲರೊಂದಿಗೆ ಸಹಬಾಳ್ವೆ ನಡೆಸುತ್ತಾರೆ. ಹೆಣ್ಣು ಮಕ್ಕಳನ್ನು ಗೌರವತನದಿಂದ ಕಾಣುವ ಮನಸ್ಸಿರುತ್ತದೆ. ಎಲ್ಲರೂ ಒಂದೇ ಎಂಬ ಮನೋಭಾವನೆ ಆತ್ಮೀಯರ ಒಡನಾಟವನ್ನು ಹೆಚ್ಚಿಸುತ್ತದೆ. ಹಣ ಒಂದೇ ಜೀವನದಲ್ಲಿ ಮುಖ್ಯ ಎಂದು ತಿಳಿಯುವುದಿಲ್ಲ. ತಮ್ಮ ಗೌರವಕ್ಕೆ ಧಕ್ಕೆ ಬರುವಂತಹ ಯಾವುದೇ ಕೆಲಸವನ್ನು ಮಾಡುವುದಿಲ್ಲ. ವಂಶದಲ್ಲಿಯೇ ವಿಶಿಷ್ಟವಾದ ಸ್ಥಾನವನ್ನು ಗಳಿಸುವಿರಿ. ಆಸ್ತಿಯ ವಿಚಾರದಲ್ಲಿ ಮಾತ್ರ ರಾಜಿಯಾಗುವ ಸಾಧ್ಯತೆಗಳಿಲ್ಲ .ನ್ಯಾಯಯುತವಾಗಿ ದೊರೆಯಬೇಕಾದ ಪಾಲನ್ನು ಪಡೆಯುವಿರಿ.
ಮಕ್ಕಳೊಂದಿಗೆ ಸದಾಕಾಲ ನಗುಮೊಗದಿಂದ ಬಾಳುವಿರಿ. ಆದರೆ ತಪ್ಪು ಮಾಡಿದಾಗ ಶಿಕ್ಷಿಸಲು ಹಿಂಜರಿಯುವುದಿಲ್ಲ. ಬೇರೆಯವರ ಅವಕಾಶಗಳನ್ನು ಕಸಿಯುವ ಧೋರಣೆ ತೋರುವುದಿಲ್ಲ. ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುವುದೆಂದರೆ ಅಚ್ಚುಮೆಚ್ಚು. ಇಳಿ ವಯಸ್ಸಿನಲ್ಲಿಯೂ ಪ್ರಸಕ್ತ ಸನ್ನಿವೇಶಕ್ಕೆ ರಾಜಿಯಾಗುವುದಿಲ್ಲ. ಬೇರೆಯವರ ಮೇಲೆ ಅವಲಂಬಿತವಾಗಿರದೆ ಸ್ವಂತ ಆದಾಯದಿಂದ ಜೀವಿಸುವ ಮಂದಿ. ಸಂಗಾತಿಯೊಡನೆ ಸುಧೀರ್ಘ ಜೀವನ ನಡೆಸುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದವರು ಪುರುಷರಿಗಿಂತ ಸ್ತ್ರೀಯರು ಹೆಚ್ಚಿನ ಮಟ್ಟದ ಶ್ರೇಷ್ಠವಾದ ಬದುಕನ್ನು ಅನುಭವಿಸಲಿದ್ದಾರೆ. ಶಿಕ್ಷಕರಾಗದೆ ಹೋದರು ಬೋಧನೆ ಇವರಿಗೆ ಇಷ್ಟವಾದ ಕೆಲಸ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).