Gemini Horoscope in 2024: ಹೊಸ ವರ್ಷದಲ್ಲಿ ಮಿಥುನ ರಾಶಿಯವರ ಭವಿಷ್ಯ ಹೇಗಿದೆ; 2024ರ ರಾಶಿಫಲ
Dec 20, 2023 02:59 PM IST
ಮಿಥುನ ರಾಶಿಯವರ 2024ರ ವರ್ಷ ಭವಿಷ್ಯ
Gemini Horoscope in 2024: ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ ದೊರೆಯಲಿದೆ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ ನೋಡೋಣ.
Gemini Horoscope in 2024: ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ಥಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. 2024 ವರ್ಷ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರಸ್ತುತಪಡಿಸುತ್ತಿದ್ದಾರೆ. ಮಿಥುನ ರಾಶಿಯವರ ವರ್ಷ ಭವಿಷ್ಯ ಹೀಗಿದೆ.
ತಾಜಾ ಫೋಟೊಗಳು
ಮಿಥುನ ರಾಶಿಯವರ ವರ್ಷ ಭವಿಷ್ಯ
ಎಲ್ಲರೊಡನೆ ಬೆರೆತು ಬಾಳುವ ವಿಶೇಷವಾದ ಬುದ್ಧಿ ನಿಮ್ಮಲ್ಲಿರುತ್ತದೆ. ಹಣಕಾಸಿನ ಬಗ್ಗೆ ಹೆಚ್ಚಿನ ಆಸೆ ಇರುವುದಿಲ್ಲ. ಯಾವುದೇ ಸ್ವಾರ್ಥವಿಲ್ಲದ ಮನಸ್ಸಿನಿಂದ ಜೀವನದಲ್ಲಿ ಮುಂದುವರೆಯುವಿರಿ. ಕುಟುಂಬದ ಬಗ್ಗೆ ವಿಶೇಷವಾದ ಅಕ್ಕರೆ ಇರುತ್ತದೆ. ಯಾರನ್ನು ಸುಲಭವಾಗಿ ನಂಬುವುದಿಲ್ಲ.
ಮನಸ್ಸು ಮುಗ್ಧ ಆಡುವ ಮಾತು ಕಠೋರ
ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಳ್ಳುವ ತೀರ್ಮಾನ ಬದಲಾಯಿಸುವಿರಿ. ಮನಸ್ಸು ಮಗುವಿನಂತೆ ಮುಗ್ಧವಾಗಿದ್ದರೂ ಆಡುವ ಮಾತು ಕಠೋರವಾಗಿರುತ್ತದೆ. ಇದರಿಂದ ಕೆಟ್ಟ ಹೆಸರನ್ನು ಗಳಿಸುವ ಸಂಭವವಿದೆ. ಆದ್ದರಿಂದ ಮಾತಾಡುವ ಮುನ್ನ ಯೋಚಿಸಿ ನೋಡಿ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಸ್ಥಿರವಾದ ಆದಾಯ ಇರುವುದಿಲ್ಲ. ಈ ಕಾರಣದಿಂದ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಬೇಕು. ಹಣದ ಆಸೆಯಿಂದ ಎಂದಿಗೂ ತಪ್ಪು ದಾರಿ ಹಿಡಿಯುವುದಿಲ್ಲ. ಕಷ್ಟಪಟ್ಟು ಗಳಿಸಿದ ಹಣದಲ್ಲಿ ಬೇರೆಯವರಿಗೂ ಸಹಾಯ ಮಾಡುವಿರಿ.
ಸೋದರ ಸಂಬಂಧದಲ್ಲಿ ಅನಾವಶ್ಯಕ ವಾದ ವಿವಾದಗಳು ಸದಾಕಾಲ ಇರುತ್ತದೆ. ಕುಟುಂದವರನ್ನು ಬಹಳ ಗೌರವದಿಂದ ಕಾಣುವಿರಿ. ಹಾಗೆಯೇ ಕಿರಿಯರನ್ನು ಪ್ರೀತಿಸುವಿರಿ. ಈ ಮೂಲಕ ಕುಟುಂಬದಲ್ಲಿ ಶಾಂತಿ ನೆಮ್ಮದಿಯನ್ನು ಉಳಿಸಲು ಸಂಪೂರ್ಣ ಕಾರಣರಾಗುವಿರಿ. ಸ್ಥಿರವಾದ ಮನಸ್ಸು ಇಲ್ಲದೇ ಹೋದರೂ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ತಡವಾಗಿಯಾದರೂ ಒಮ್ಮೆ ಕೈಗೊಂಡ ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ.
ಕುಟುಂಬದ ಬಗ್ಗೆ ಜವಾಬ್ದಾರಿ ಹೆಚ್ಚು
ಕುಟುಂಬದ ಬಗ್ಗೆ ಹೆಚ್ಚಿನ ಜವಾಬ್ದಾರಿ ತೋರುವಿರಿ. ಸ್ವಂತ ಆಸ್ತಿ ಬಗ್ಗೆ ಯೋಚನೆ ಇದ್ದಲ್ಲಿ ಈ ವರ್ಷ ಅದು ಕೈಗೂಡುತ್ತದೆ. ಆದರೆ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ. ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡುವ ಆಸೆ ಇದ್ದರೂ ಮನಸ್ಸು ವಿಶ್ರಾಂತಿ ಬಯಸುತ್ತದೆ. ಮಕ್ಕಳಿಗೆ ಅವಶ್ಯಕತೆ ತಕ್ಕಂತೆ ಎಲ್ಲಾ ಅನುಕೂಲತೆಗಳನ್ನು ಕಲ್ಪಿಸುವಿರಿ. ಮಕ್ಕಳೊಂದಿಗೆ ಸದಾಕಾಲ ಸಂತೋಷದಿಂದ ಬಾಳಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು. ಉನ್ನತ ವಿದ್ಯಾಭ್ಯಾಸಕ್ಕಾಗಿ ಕುಟುಂಬದವರ ಸಹಾಯದಿಂದ ವಿದೇಶಕ್ಕೆ ತೆರಳುವ ಅವಕಾಶ ಲಭಿಸುತ್ತದೆ. ದೊಡ್ಡ ಧಾರ್ಮಿಕ ಕಾರ್ಯವೊಂದನ್ನು ನಡೆಸುವ ಸೂಚನೆಗಳಿವೆ. ಮಕ್ಕಳಿಗೆ ವಿವಾಹ ಯೋಗವೂ ಇದೆ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಮಕ್ಕಳಿಗಾಗಿ ಆಕರ್ಷಕ ಒಡವೆ ವಸ್ತುಗಳನ್ನು ಕೊಳ್ಳಲು ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ.
ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ರಕ್ತಕ್ಕೆ ಸಂಬಂಧಿಸಿದ ದೋಷವಿರುತ್ತದೆ. ಕಿರಿಯ ಸೋದರನ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಕೋಪ ಕಡಿಮೆ ಮಾಡಿಕೊಂಡರೆ ಆರೋಗ್ಯದಲ್ಲಿ ತೊಂದರೆ ಕಾಣದು. ಉದ್ಯೋಗದಲ್ಲಿ ಶುಭ ಫಲಗಳು ದೊರೆಯಲಿವೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಯಾವುದೇ ಒತ್ತಡಕ್ಕೆ ಒಳಗಾಗದೆ ಮನಸ್ಸಿಗೆ ಒಪ್ಪುವವರನ್ನು ವರಿಸುವಿರಿ. ಪಾಲುದಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸಂಗಾತಿಯೊಂದಿಗೆ ವಿದೇಶಕ್ಕೆ ಅಥವಾ ದೂರದ ಪ್ರದೇಶಕ್ಕೆ ವಿಹಾರದ ಸಲುವಾಗಿ ಪ್ರಯಾಣ ಬೆಳೆಸುವಿರಿ. ಕುಟುಂಬದ ಏಳಿಗೆಗಾಗಿ ವಿವಿಧ ಯೋಜನೆಗಳಲ್ಲಿ ಹಣ ವಿನಿಯೋಗಿಸುವಿರಿ.
ವಾಹನ ಚಾಲನೆ ವೇಲೆ ಎಚ್ಚರ ಅಗತ್ಯ
ವಾಹನದಲ್ಲಿ ಪ್ರಯಾಣಿಸುವ ವೇಳೆ ಎಚ್ಚರಿಕೆ ಇರಲಿ. ನಿಮಗೆ ಬಹಳ ಇಷ್ಟವಾದ ಅಥವಾ ಬೆಲೆ ಬಾಳುವ ವಸ್ತು ಕಳುವಾಗಬಹುದು. ಯಾರನ್ನೂ ಸುಲಭವಾಗಿ ನಂಬದ ಪರಿಸ್ಥಿತಿಯನ್ನು ತಲುಪುವಿರಿ. ವಯೋವೃದ್ದರು ವಾಯುಕಾರಕ ಆಹಾರ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ವಾಯು ವಿಕೋಪದಿಂದ ಬಳಲುವಿರಿ. ಉದ್ಯೋಗ ಬದಲಿಸಬೇಕೆಂಬ ಮನಸಿದ್ದರೆ ಸಾಧ್ಯವಾಗುವುದಿಲ್ಲ. ತಾಂತ್ರಿಕ ಪರಿಮಿತಿ ಹೊಂದಿರುವವರಿಗೆ ಉನ್ನತ ಅಧಿಕಾರ ದೊರೆಯುತ್ತದೆ. ಹೋಟೆಲ್ ಅಥವಾ ಬೇಕರಿಯಂಥ ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ಆರಂಭಿಸಿದರೆ ಉತ್ತಮ ಆದಾಯ ದೊರೆಯುತ್ತದೆ. ವಂಶದಿಂದ ಬಂದ ಹಳೆಯ ಮನೆಯನ್ನು ಆಧುನಿಕರಣ ಗೊಳಿಸಲು ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ಒಟ್ಟಾರೆ ಈ ವರ್ಷ ಸಂತೃಪ್ತಿಯ ಜೀವನ ನಡೆಸುವಿರಿ.
ನಾಳೆ ಬೆಳಗ್ಗೆ 6 ಗಂಟೆಗೆ ಕಟಕ ರಾಶಿ ವರ್ಷ ಭವಿಷ್ಯ ಪ್ರಕಟವಾಗಲಿದೆ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).