ಕೈ ಬೆರಳುಗಳಲ್ಲಿ ಇರುವ ಚಕ್ರದ ಪ್ರಭಾವ: ಬೆರಳುಗಳಲ್ಲಿ ಚಕ್ರದ ಗುರುತಿದ್ದರೆ ಏನು ಅರ್ಥ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?
Aug 01, 2024 04:58 PM IST
ಕೈ ಬೆರಳುಗಳಲ್ಲಿ ಇರುವ ಚಕ್ರದ ಪ್ರಭಾವ: ಬೆರಳುಗಳಲ್ಲಿ ಚಕ್ರದ ಗುರುತಿದ್ದರೆ ಏನು ಅರ್ಥ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?
ಹಸ್ತ, ಕೈ ರೇಖೆಗಳು, ಬೆರಳುಗಳ ಮೇಲಿನ ಶಂಖ, ಚಕ್ರದ ಗುರುತುಗಳನ್ನು ನೋಡಿಯೂ ಭವಿಷ್ಯ ಹೇಳಲಾಗುತ್ತದೆ. ಬೆರಳುಗಳ ಮೇಲಿನ ಚಕ್ರದ ಗುರುತುಗಳನ್ನು ನೋಡಿ ಆ ವ್ಯಕ್ತಿಯ ಸ್ವಭಾವ, ಭವಿಷ್ಯವನ್ನು ಹೇಳಬಹುದು. ಯಾವ ಬೆರಳಿನಲ್ಲಿ ಚಕ್ರದ ಗುರುತು ಇದ್ದರೆ ಏನು ಅರ್ಥ? ಇಲ್ಲಿವೆ ಮಾಹಿತಿ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈಗಳ ರೇಖೆಗಳು ಮಾತ್ರವಲ್ಲ ಚಕ್ರದ ಗುರುತು ಕೂಡಾ ವ್ಯಕ್ತಿಗಳ ಸ್ವಭಾವ, ಭವಿಷ್ಯವನ್ನು ಸೂಚಿಸುತ್ತದೆ. ಪ್ರತಿಯೊಬ್ಬರ ಬೆರಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚಕ್ರದ ಗುರುತು ಕಂಡು ಬರುತ್ತದೆ. ಈ ರೀತಿ ಚಕ್ರವಿರುವವರ ಸ್ವಭಾವ ಹೇಗೆ? ಅವರ ಭವಿಷ್ಯ ಹೇಗಿರುತ್ತದೆ? ಇನ್ನಿತರ ವಿಚಾರಗಳ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ.
ತಾಜಾ ಫೋಟೊಗಳು
ಹೆಬ್ಬೆರಳಿನ ಮೇಲೆ ಚಕ್ರದ ಗುರುತು
ಯಾರದೇ ಹೆಬ್ಬೆರಳಿನಲ್ಲಿ ಚಕ್ರದ ಗುರುತಿದ್ದಲ್ಲಿ ಅವರ ಜೀವನದಲ್ಲಿ ಕುಟುಂಬದ ಎಲ್ಲರೂ ಇವರನ್ನೇ ಅವಲಂಬಿಸುತ್ತಾರೆ. ಇಂತಹವರು ಸುಲಭವಾಗಿ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲರು. ಪೂರ್ಣಗೊಳಿಸಿದ ಕೆಲಸ ಕಾರ್ಯಗಳ ಫಲಿತಾಂಶಕ್ಕಿಂತಲೂ ತಾವು ನಿರ್ವಹಿಸಿದ ರೀತಿ ನೀತಿಯನ್ನು ಗಮನಿಸುತ್ತಾರೆ. ಇವರಿಗೆ ಒಮ್ಮೆಲೇ ಹಣವನ್ನು ಸಂಪಾದಿಸುವ ಗುರಿ ಇರುವುದಿಲ್ಲ. ಕಾರಣವೇನೆಂದರೆ ಉತ್ತಮ ಆತ್ಮವಿಶ್ವಾಸವಿರುವ ಕಾರಣ ಯಾವುದೇ ತೊಂದರೆ ಎದುರಾಗುವುದಿಲ್ಲ. ಬೇರೆಯವರಿಗೆ ಸಹಾಯ ಮಾಡಲಾಗದೆ ಹೋದರೂ ತೊಂದರೆಯನ್ನು ಮಾಡುವುದಿಲ್ಲ.
ತೋರು ಬೆರಳಿನಲ್ಲಿ ಚಕ್ರದ ಗುರುತು
ತೋರು ಬೆರಳಿನಲ್ಲಿ ಚಕ್ರವಿದ್ದಲ್ಲಿ ಇವರು ಉತ್ತಮ ಮಾರ್ಗದರ್ಶಕರಾಗುತ್ತಾರೆ. ಸ್ವತಂತ್ರವಾಗಿ ಇವರು ಯಾವುದೇ ಕೆಲಸ ಮಾಡಬಲ್ಲರು. ಕುಟುಂಬದ ಸದಸ್ಯರ ಜೊತೆಯಲ್ಲಿ ಉತ್ತಮ ಒಡನಾಟವಿರುತ್ತದೆ. ಇವರು ಮಕ್ಕಳನ್ನು ಹೆಚ್ಚಿನ ಪ್ರೀತಿ ವಿಶ್ವಾಸದಿಂದ ಸಲಹುತ್ತಾರೆ. ಆತ್ಮೀಯರ ಮನದ ಆಸೆ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು ಅವರ ಇಚ್ಛೆಯನ್ನು ನೆರವೇರಿಸುತ್ತಾರೆ. ಜೀವನದಲ್ಲಿನ ಬಹು ಮುಖ್ಯ ಗುರಿಯನ್ನು ಆಸಕ್ತಿಯಿಂದ ತಲುಪುತ್ತಾರೆ. ಮನೆಯಲ್ಲಿ ಇವರದ್ದೇ ಯಜಮಾನಿಕೆ ಇರುತ್ತದೆ. ಉದ್ಯೋಗದಲ್ಲಿ ಉನ್ನತ ಮಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಒಟ್ಟಾರೆ ಮನೆಯ ಒಳಗೂ ಮತ್ತು ಮನೆಯ ಹೊರಗೂ ಇವರು ನಾಯಕರಾಗಿ ಬಾಳುತ್ತಾರೆ.
ಮಧ್ಯದ ಬೆರಳಿನಲ್ಲಿ ಚಕ್ರದ ಗುರುತು
ಮಧ್ಯದ ಬೆರಳಿನಲ್ಲಿ ಚಕ್ರವಿದ್ದಲ್ಲಿ ಸುತ್ತ ಮುತ್ತಲಿರುವವರಿಗೆ ಆಸರೆಯಾಗುತ್ತಾರೆ. ಉದ್ಯೋಗದಲ್ಲಿ ಎಲ್ಲರೂ ಇವರನ್ನು ಅವಲಂಬಿಸುತ್ತಾರೆ. ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಕುಟುಂಬದಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಿರಿ. ಒಂದೇ ರೀತಿಯ ಕೆಲಸ ಕಾರ್ಯಗಳನ್ನು ಇಷ್ಟಪಡದೆ ಬದಲಾವಣೆಗೆ ಹಾತೊರೆಯುತ್ತಾರೆ. ಸ್ವಂತ ಉದ್ದಿಮೆ ಇದ್ದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಬಂಧು ಬಳಗದಿಂದ ದೂರವಿರಲು ಬಯಸುತ್ತಾರೆ. ಸುಲಭವಾಗಿ ಇವರು ಯಾರನ್ನೂ ನಂಬುವುದಿಲ್ಲ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿ ತೊಂದರೆಗೆ ಸಿಲುಕುತ್ತಾರೆ. ಸಾಲದ ವ್ಯವಹಾರದಿಂದ ದೂರವಿರುವ ಕಾರಣ ಇವರ ಜೀವನದಲ್ಲಿ ಕಷ್ಟದ ಸನ್ನಿವೇಶ ಎದುರಾಗುವುದಿಲ್ಲ. ಹೊಸ ರೀತಿಯ ವಾಹನಗಳನ್ನು ಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಇರುತ್ತದೆ.
ಉಂಗುರದ ಬೆರಳಿನಲ್ಲಿ ಚಕ್ರದ ಗುರುತು
ಉಂಗುರದ ಬೆರಳಲ್ಲಿ ಚಕ್ರವಿದ್ದಲ್ಲಿ ಹೆಚ್ಚಿನ ಆತ್ಮವಿಶ್ವಾಸವಿರುತ್ತದೆ. ದೊರೆಯುವ ಫಲಿತಾಂಶವನ್ನು ಅವಲಂಬಿಸದೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಮುಂದುವರೆಯುತ್ತಾರೆ. ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಆದರೆ ದೈಹಿಕವಾಗಿ ದುರ್ಬಲರಾಗಿರುತ್ತಾರೆ. ಬೇರೆಯವರ ಸಹಾಯದ ಅವಶ್ಯಕತೆ ಇಲ್ಲದೆ ಹೋದರೂ ಬೇರೆಯವರ ಸ್ಪೂರ್ತಿಯಂತೂ ಇವರಿಗೆ ಅಗತ್ಯವಾಗುತ್ತದೆ. ಇವರಿಗೆ ಕುಟುಂಬದ ಸದಸ್ಯರ ಸಂಪೂರ್ಣವಾದ ಸಹಾಯ ಸಹಕಾರ ದೊರೆಯುತ್ತದೆ. ಅತಿಯಾದ ಆಸೆ ಇರುವುದಿಲ್ಲ. ದೊರೆಯುವ ಅವಕಾಶಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಸೋಲನ್ನು ಒಪ್ಪದೆ ಸತತವಾಗಿ ಪ್ರಯತ್ನಿಸಿ ತಮ್ಮ ಗುರಿ ತಲುಪುತ್ತಾರೆ. ಚಿಕ್ಕ ಮಕ್ಕಳ ಬಗ್ಗೆ ವಿಶೇಷವಾದ ಒಲವಿರುತ್ತದೆ. ಮಕ್ಕಳನ್ನು ಅತಿಯಾದ ಮುದ್ದು ಮತ್ತು ಮಮತೆಯಿಂದ ಬೆಳೆಸುತ್ತಾರೆ.
ಕಿರು ಬೆರಳಿನಲ್ಲಿ ಚಕ್ರದ ಗುರುತು
ಕಿರು ಬೆರಳಿನಲ್ಲಿ ಚಕ್ರವಿರುವವರಿಗೆ ಜೀವನದಲ್ಲಿ ಯಾವುದೇ ರೀತಿಯ ನಿರ್ದಿಷ್ಟವಾದ ಗುರಿಗಳು ಇರುವುದಿಲ್ಲ. ದೊರೆಯುವ ಅವಕಾಶವನ್ನು ಇವರಿಗೆ ಅನುಕೂಲವಾಗುವಂತೆ ಪರಿವರ್ತಿಸಿಕೊಳ್ಳಬಲ್ಲರು. ಇವರನ್ನು ಅವಕಾಶವಾದಿಗಳು ಎಂದು ಕರೆದರೂ ತಪ್ಪಾಗುವುದಿಲ್ಲ. ಹೊಸ ಅವಕಾಶಗಳಿಗಾಗಿ ಕಾಯುವ ಇವರು ಜೀವನಕ್ಕೆ ಹೊಂದಿಕೊಂಡು ಬಾಳಬೇಕಾಗುತ್ತದೆ. ಸೋಲುವ ಸಂದರ್ಭದಲ್ಲಿ ಆರಂಭಿಸುವ ಕೆಲಸ ಕಾರ್ಯಗಳನ್ನು ಅಪೂರ್ಣಗೊಳಿಸುತ್ತಾರೆ. ತಮ್ಮ ತಪ್ಪಿಗೆ ಬೇರೆಯವರನ್ನು ಗುರಿ ಮಾಡುವುದು ಇವರ ಗುಣ. ಹಣಕಾಸಿನ ವ್ಯವಹಾರದಲ್ಲಿ ಯಾರೊಬ್ಬರ ಸಲಹೆಯನ್ನು ಒಪ್ಪುವುದಿಲ್ಲ. ಇದರಿಂದಾಗಿ ತೊಂದರೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಕುಟುಂಬದ ಎಲ್ಲರ ಸಹಾಯವು ಇವರಿಗೆ ದೊರೆಯುತ್ತದೆ. ಆದರೆ ಸುಲಭವಾಗಿ ಬೇರೆಯವರಿಗೆ ಇವರು ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ತಮ್ಮ ಮನದ ಬಯಕೆಯನ್ನು ತೀರಿಸಿಕೊಳ್ಳಲು ಯಾವುದೇ ತ್ಯಾಗಕ್ಕೂ ಇವರು ಸಿದ್ದರಾಗುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).