ಮಹಾಭಾರತ ಕಥೆಗಳು: ವಾಯುದೇವನ ಅನುಗ್ರಹದಿಂದ ಭೀಮನಿಗೆ ಜನ್ಮ ನೀಡಿದ ಕುಂತಿ, ಅದೇ ದಿನ ಗಾಂಧಾರಿಗೆ ಜನಿಸಿದ ದುರ್ಯೋಧನ
Oct 07, 2024 10:31 AM IST
ಮಹಾಭಾರತ ಕಥೆಗಳು: ವಾಯುದೇವನ ಅನುಗ್ರಹದಿಂದ ಭೀಮನಿಗೆ ಜನ್ಮ ನೀಡಿದ ಕುಂತಿ, ಅದೇ ದಿನ ಗಾಂಧಾರಿಗೆ ಜನಿಸಿದ ದುರ್ಯೋಧನ (ಸಾಂದರ್ಭಿಕ ಚಿತ್ರ)
ಧರ್ಮರಾಯ ಜನಿಸಿದ ನಂತರ ಪಾಂಡು ರಾಜ ಮತ್ತೊಬ್ಬ ಮಗನನ್ನು ಬಯಸುತ್ತಾನೆ. ಈ ವಿಚಾರವನ್ನು ಪತ್ನಿ ಕುಂತಿಗೆ ತಿಳಿಸಿದಾಗ ಅವಳು ವಾಯುದೇವನನ್ನು ಪ್ರಾರ್ಥಿಸುತ್ತಾಳೆ. ಆಗ ಭೀಮ ಜನಿಸುತ್ತಾನೆ. ಅದೇ ದಿನ ಗಾಂಧಾರಿಯ ಪಿಂಡದಿಂದ ದುರ್ಯೋಧನ ಜನಿಸುತ್ತಾನೆ. ಕೆಲವು ದಿನಗಳ ನಂತರ 99 ಕೌರವರು ಹುಟ್ಟುತ್ತಾರೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಯಮ ಧರ್ಮರಾಯನ ಮಂತ್ರದ ಸಹಾಯದಿಂದ ಕುಂತಿಗೆ ಧರ್ಮರಾಯ ಜನಿಸುತ್ತಾನೆ. ಪಾಂಡು ರಾಜನು ಧರ್ಮರಾಯನ ಜನನದಿಂದ ಸಂತೋಷ ವ್ಯಕ್ತಪಡಿಸುತ್ತಾನೆ. ಕಿಂದಮ ಋಷಿಯ ಶಾಪವನ್ನೂ ಮರೆಯುತ್ತಾನೆ. ಪತಿಯ ಸಂತೋಷದ ಜೊತೆಯಲ್ಲಿ ಕುಂತಿ ಸಹ ಪಾಲ್ಗೊಳ್ಳುತ್ತಾಳೆ. ಮೂರು ಲೋಕವನ್ನೇ ಆಳುವಂತಹ ಇನ್ನೊಬ್ಬ ಮಗನನ್ನು ಪಡೆಯಬೇಕು ಎಂದು ಪಾಂಡುರಾಜನಿಗೆ ಆಸೆ ಆಗುತ್ತದೆ.
ತಾಜಾ ಫೋಟೊಗಳು
ಮತ್ತೊಂದು ಮಗುವನ್ನು ಬಯಸುವ ಪಾಂಡುರಾಜ
ಪಾಂಡು ರಾಜ ಕುಂತಿಯನ್ನು ಕುರಿತು ದಾನ ಧರ್ಮಗಳನ್ನು ಮಾಡುವ, ಸತ್ಯದ ಹಾದಿಯಲ್ಲಿ ನಡೆಯುವ, ಇನ್ನೊಬ್ಬ ಪುತ್ರನನ್ನು ಪಡೆಯುವಂತೆ ತಿಳಿಸುತ್ತಾನೆ. ಪತಿಯ ಮಾತಿನಿಂದ ಕುಂತಿಗೆ ಸಂತೋಷವಾಗುತ್ತದೆ. ಆಗ ಕುಂತಿಯು ದಿನ ನಿತ್ಯದಂತೆ ಸ್ನಾನ ಮತ್ತು ಪೂಜೆಯನ್ನು ಮುಗಿಸಿ ದೇವರ ಪ್ರಾರ್ಥನೆಯಲ್ಲಿ ತೊಡಗುತ್ತಾಳೆ.
ಮಾನವರು, ಪ್ರಾಣಿಗಳು, ಕ್ರಿಮಿ ಕೀಟಗಳು ಮಾತ್ರವಲ್ಲದೆ ಸಸ್ಯವರ್ಗಕ್ಕೂ ಆಧಾರವಾಗಿ ಜೀವವನ್ನು ನೀಡುತ್ತಿರುವ ಸಾಕ್ಷಾತ್ ವಾಯುದೇವರ ಮಂತ್ರವನ್ನು ಕುಂತಿ ಪಠಿಸುತ್ತಾಳೆ. ಇವಳ ಭಕ್ತಿಗೆ ಮೆಚ್ಚಿದ ವಾಯುದೇವನು ಪ್ರತ್ಯಕ್ಷನಾಗುತ್ತಾನೆ. ಮೂರು ಲೋಕಗಳಲ್ಲಿಯೇ ಅತಿ ಶಕ್ತಿಶಾಲಿಯಾದಂತಹ ಮಗುವೊಂದನ್ನು ವಾಯುದೇವನು ಅನುಗ್ರಹಿಸುತ್ತಾನೆ. ವಾಯುದೇವನಿಂದ ಪಾಂಡು ಮತ್ತು ಕುಂತಿಗೆ ಜನಿಸಿದ ಮಗುವಿನ ಬಗ್ಗೆ ತಿಳಿದು ಹಸ್ತಿನಾವತಿ ಜನರು ಸಂಭ್ರಮಾಚರಣೆ ಮಾಡುತ್ತಾರೆ. ಈ ಮಗುವೇ ಇಡೀ ಕೌರವ ಕುಲಕ್ಕೆ ಸವಾಲಾಗಿ ನಿಂತ ಬಲಶಾಲಿ ಭೀಮಸೇನ. ಶ್ರಾವಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಮಖಾ ನಕ್ಷತ್ರದಲ್ಲಿ ಭೀಮ ಜನಿಸುತ್ತಾನೆ.
ಗಾಂಧಾರಿಯ ಪಿಂಡದಿಂದ ದುರ್ಯೋಧನ ಜನನ
ಭೀಮಸೇನ ಜನಿಸಿದ ದಿನವೇ ಶುದ್ಧೋದಕದಿಂದ ಶುಚಿಯಾದ ಗಾಂಧಾರಿಯ ಪಿಂಡವು ಮುದ್ದಿನ ಮಗುವಾಗಿ ಜನ್ಮ ತಾಳುತ್ತದೆ. ಈ ವಿಚಾರವನ್ನು ಕೇಳಿದ ಧೃತರಾಷ್ಟ್ರ ಮತ್ತು ಗಾಂಧಾರಿಗೆ ಸಂತೋಷ ಉಂಟಾಗುತ್ತದೆ. ಧರ್ಮರಾಯ ಜನಿಸಿದ ವೇಳೆ ಆಕಾಶದಿಂದ ಹೂವಿನ ಸುರಿಮಳೆಯಾಗುತ್ತದೆ. ಭೀಮನು ಜನಿಸಿದಾಗ ಬಿರುಸಾಗಿದ್ದ ಗಾಳಿಯು ತಂಪಾಗಿ ಬೀಸುತ್ತದೆ. ಆದರೆ ಗಾಂಧಾರಿಗೆ ಮಗು ಜನಿಸಿದ ನಂತರ ಎಲ್ಲೆಲ್ಲೂ ಅಪಶಕುನ ಉಂಟಾಗುತ್ತದೆ. ಇದನ್ನು ನೋಡಿದ ಧರ್ಮಪಾಲಕ ವಿದುರನಿಗೆ ಆಶ್ಚರ್ಯವಾಗುತ್ತದೆ. ಮನಸ್ಸಿನಲ್ಲಿ ಆತಂಕವೂ ಉಂಟಾಗುತ್ತದೆ. ಇದರ ಹಿನ್ನೆಲೆಯನ್ನು ಅರಿತ ವಿದುರನು ತಕ್ಷಣವೇ ತನ್ನ ಸೋದರನಾದ ಗತಾಕ್ಷನಿಗೆ ತಿಳಿಸಿ ಅವನನ್ನು ಎಚ್ಚರಿಸುತ್ತಾನೆ.
99 ಮಂದಿ ಕೌರವರ ಜನನ
ಧೃತರಾಷ್ಟ್ರನನ್ನು ಕುರಿತು ಈಗ ಸಂಭವಿಸುತ್ತಿರುವ ಶಕುನಗಳು ಮುಂದಿನ ಕೆಟ್ಟ ದಿನಗಳನ್ನು ಸೂಚಿಸುತ್ತದೆ. ಈ ಜನನದಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಾಯವನ್ನು ಸೂಚಿಸುತ್ತದೆ. ಬಹುಶ: ಇದಕ್ಕೆ ಕಾರಣ ನಿನ್ನ ಮಗನೇ ಇರಬಹುದು. ಚಂದ್ರಕುಲದ ಸಂರಕ್ಷಣೆಗಾಗಿ ರಾಜನಾದವನು ಪ್ರತಿಯೊಂದು ತ್ಯಾಗಕ್ಕೂ ಸಿದ್ಧನಾಗಿರಬೇಕು. ಆದ್ದರಿಂದ ನೀನು ಈ ಮಗುವನ್ನು ತ್ಯಜಿಸುವುದೇ ಒಳ್ಳೆಯದು ಎಂದು ತಿಳಿಸುತ್ತಾರೆ. ಆದರೆ ಅವನು ಒಪ್ಪುವುದಿಲ್ಲ. ಇದಾದ ಒಂದು ತಿಂಗಳಲ್ಲಿ ಉಳಿದ 99 ಪಿಂಡಗಳಿಗೆ ಜೀವ ಬರುತ್ತದೆ. 99 ಗಂಡು ಮಕ್ಕಳು ಹುಟ್ಟುತ್ತಾರೆ. ಅವರೊಂದಿಗೆ ಸೌಂದರ್ಯವತಿಯಾದ ಹೆಣ್ಣು ಮಗು ಜನಿಸುತ್ತದೆ. ಅವಳಿಗೆ ದುಶ್ಯಲೆ ಎಂದು ನಾಮಕರಣ ಮಾಡುತ್ತಾರೆ. ಅರಮನೆಯಲ್ಲಿ ಎಲ್ಲರೂ ಸುಖ ಸಂತೋಷದಿಂದ ಬೆಳೆಯುತ್ತಾರೆ.
ಬಾಲ್ಯದಲ್ಲೇ ಶಕ್ತಿಶಾಲಿ ಎನಿಸಿಕೊಂಡ ಭೀಮ
ಭೀಮನು ಅಣ್ಣ ಧರ್ಮರಾಯನೊಂದಿಗೆ ಕಾಡಿನಲ್ಲಿ ದಿನ ಕಳೆಯುತ್ತಿರುತ್ತಾರೆ. ಒಮ್ಮೆ ಕುಂತಿಯು ಭೀಮನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತಾಳೆ. ಆಗ ಆ ಕಡೆಗೆ ಜೋರಾಗಿ ಘರ್ಜಿಸುತ್ತಾ ಹುಲಿಯೊಂದು ಬರುತ್ತದೆ. ಹುಲಿಯ ಘರ್ಜನೆಯನ್ನು ಕೇಳಿದ ಕುಂತಿಯು ಭಯದಿಂದ ತಕ್ಷಣವೇ ಎದ್ದು ನಿಲ್ಲುತ್ತಾಳೆ. ಆಗ ಶಿಶುವಾಗಿದ್ದ ಭೀಮನು ನೆಲದ ಮೇಲೆ ಬೀಳುತ್ತಾನೆ. ಅವನು ನೆಲದ ಮೇಲೆ ಬಿದ್ದಾಗ ಭಾರೀ ಸದ್ದೊಂದು ಕೇಳಿಸುತ್ತದೆ. ಮಗುವಿನ ಮೇಲೆ ಹಾರಲು ಸಿದ್ಧವಾಗಿದ್ದ ಹುಲಿಯೂ ಆ ಶಬ್ದವನ್ನು ಕೇಳಿದ ತಕ್ಷಣ ಅಲ್ಲಿಂದ ಓಡಿ ಹೋಗುತ್ತದೆ. ಭೀಮನು ತನ್ನ ಬಾಲ್ಯದಲ್ಲಿಯೇ ಮುಂದಿನ ಗೆಲುವಿನ ಸೂಚನೆಯನ್ನು ನೀಡುತ್ತಾನೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).