ಒಡಿಶಾದ ಪುರಿ ಜಗನ್ನಾಥ ಮಂದಿರದ ಅಡುಗೆಗೆ ಆ ತರಕಾರಿಗಳನ್ನು ಬಳಸುವುದೇ ಇಲ್ಲ; ಪ್ರಸಾದ ತಯಾರಿಯೂ ಬಹಳ ವಿಭಿನ್ನ
Jul 06, 2024 06:30 AM IST
ಒಡಿಶಾದ ಪುರಿ ಜಗನ್ನಾಥ ಮಂದಿರದ ಅಡುಗೆಗೆ ಆ ತರಕಾರಿಗಳನ್ನು ಬಳಸುವುದೇ ಇಲ್ಲ; ಪ್ರಸಾದ ತಯಾರಿಯೂ ಬಹಳ ವಿಭಿನ್ನ
ಒಡಿಶಾದ ಪುರಿ ಜಗನ್ನಾಥ ಮಂದಿರವು ಅನೇಕ ಪವಾಡಗಳಿಗೆ ಹೆಸರಾಗಿದೆ. ಜೊತೆಗೆ ಇದು ಪ್ರಸಾದ ತಯಾರಿಗೂ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಅಡುಗೆಗೆ ಕೆಲವೊಂದು ತರಕಾರಿಗಳನ್ನು ಬಳಸುವುದಿಲ್ಲ. ಅಷ್ಟೇ ಅಲ್ಲ ಮಡಿಕೆಗಳನ್ನು ಒಂದರ ಮೇಲೊಂದು ಜೋಡಿಸಿ ಅಡುಗೆಯನ್ನು ಬಹಲ ವಿಭಿನ್ನವಾಗಿ ತಯಾರಿಸಲಾಗುತ್ತದೆ.
ಒಡಿಶಾದ ಪುರಿ ಜಗನ್ನಾಥ ದೇವಾಲಯವು ನಮ್ಮ ದೇಶದ ಅತ್ಯಂತ ವಿಶಿಷ್ಟವಾದ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಜಗನ್ನಾಥನ ರೂಪದಲ್ಲಿ ಶ್ರೀಕೃಷ್ಣನನ್ನು ಭೇಟಿ ಮಾಡುತ್ತಾರೆ. ಈ ದೇವಾಲಯದಲ್ಲಿ ಶ್ರೀಕೃಷ್ಣನು ತನ್ನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾದೇವಿಯೊಂದಿಗೆ ನೆಲೆಸಿದ್ದಾನೆ.
ತಾಜಾ ಫೋಟೊಗಳು
ಈ ದೇವಾಲಯವು ದೇಶಾದ್ಯಂತ ಬಹಳ ಪ್ರಸಿದ್ಧವಾಗಿದೆ. ದಿನದ ಯಾವ ಹೊತ್ತಿನಲ್ಲಿಯೂ, ಆಕಾಶದಲ್ಲಿ ಸೂರ್ಯ ಎಲ್ಲಿ ಬೆಳಗಿದರೂ, ದೇವಾಲಯದ ನೆರಳು ಕಾಣುವುದಿಲ್ಲ. ಕೆಲವರು ಇದನ್ನು ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಮಾಡಿರುವ ಪವಾಡ ಎಂದು ಹೇಳಿದರೆ, ಇದನ್ನು ದೇವರ ಮಹಿಮೆ ಎನ್ನುತ್ತಾರೆ. ಇದಿಷ್ಟೇ ಅಲ್ಲದೆ ಈ ದೇವಸ್ಥಾನ ಬಹಳ ವಿಚಾರಗಳಿಗೆ ಹೆಸರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಥೆಗಳು ಕೂಡಾ ಜನಜನಿತವಾಗಿದೆ.
ಅಡುಗೆಯಲ್ಲಿ ಈ ತರಕಾರಿಗಳನ್ನು ಬಳಸುವುದಿಲ್ಲ
ಇಷ್ಟು ಪವಾಡಗಳಿಗೆ ಸಾಕ್ಷಿಯಾಗಿರುವ ಜಗನ್ನಾಥನ ಬಗ್ಗೆ, ಈ ದೇವಸ್ಥಾನದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಪ್ರತಿ ದಿನವೂ ಜಗನ್ನಾಥನಿಗೆ 5 ಬಾರಿ ನೈವೇದ್ಯ ಅರ್ಪಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಸುಮಾರು 50ಕ್ಕೂ ಹೆಚ್ಚಿನ ಖಾದ್ಯಗಳನ್ನು ತಯಾರಿಸಲಾಗುತ್ತದೆ. ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ಈ ಪ್ರಸಾದದಲ್ಲಿ ಎಲ್ಲಾ ರೀತಿಯ ಸಾಮಗ್ರಿಗಳನ್ನು ಸೇರಿಸಲಾಗುತ್ತದೆ. ಆದರೆ ಆಲೂಗಡ್ಡೆ, ಟೊಮೆಟೊ ಮಾತ್ರ ಬಳಸುವುದಿಲ್ಲ. ಇವೆರಡನ್ನೂ ವಿದೇಶಿ ವಸ್ತುಗಳು ಎಂದು ಪರಿಗಣಿಸಲಾಗಿರುವುದರಿಂದ ಜಗನ್ನಾಥನ ಪ್ರಸಾದಕ್ಕೆ ಈ ತರಕಾರಿಗಳನ್ನು ಬಳಸುವುದಿಲ್ಲ. ಜೊತೆಗೆ ಹೂಕೋಸು, ಎಲೆಕೋಸುಗಳನ್ನು ಕೂಡಾ ಬಳಸುವುದಿಲ್ಲ.
ಅಡುಗೆ ತಯಾರಿಸುವ ವಿಧಾನ ಕೂಡಾ ಬಹಳ ವಿಭಿನ್ನ
ಪುರಿ ಜಗನ್ನಾಥ ಮಂದಿರದಲ್ಲಿ ಅಡುಗೆ ತಯಾರಿ ವಿಧಾನ ಕೂಡಾ ಬಹಳ ವಿಭಿನ್ನವಾಗಿದೆ. ಅಡುಗೆ ಮಾಡುವಾಗ ಒಂದು ಮಡಿಕೆಯನ್ನು ಮತ್ತೊಂದು ಮಡಿಕೆಯ ಮೇಲೆ ಇರಿಸಲಾಗುತ್ತದೆ. ಒಟ್ಟು ಏಳು ಮಣ್ಣಿನ ಮಡಕೆಗಳನ್ನು ಇಡಲಾಗುತ್ತದೆ. ಸೌದೆ ಒಲೆಯ ಮೇಲೆ ಬೇಯಿಸಲಾಗುತ್ತದೆ. ಮೇಲಿನ ಮಡಕೆಯನ್ನು ಮೊದಲು ಬೇಯಿಸಲಾಗುತ್ತದೆ. ಅದರ ನಂತರ ಉಳಿದವನ್ನು ಬೇಯಿಸಲಾಗುತ್ತದೆ. ಲಕ್ಷಿ ದೇವಿಯು ಇಲ್ಲಿನ ಅಡುಗೆಯನ್ನು ನೋಡಿಕೊಳ್ಳುತ್ತಾಳೆ ಎಂದು ಭಕ್ತರು ನಂಬುತ್ತಾರೆ. ಅದಕ್ಕಾಗಿಯೇ ಇದನ್ನು ಅತ್ಯಂತ ಪವಿತ್ರವಾಗಿ ಬೇಯಿಸಲಾಗುತ್ತದೆ. ಅಡುಗೆಗೆ ಸಹಾಯ ಮಾಡಲು ಸುಮಾರು 500 ಅಡುಗೆಯವರು ಮತ್ತು 300 ಸಹಾಯಕರು ಇರುತ್ತಾರೆ. ತಿರುಪತಿಯ ನಂತರ ಅಷ್ಟು ದೊಡ್ಡ ಮಟ್ಟದಲ್ಲಿ ಅಡುಗೆ ತಯಾರಾಗುವುದು ಪುರಿ ಜಗನ್ನಾಥ ಮಂದಿರದಲ್ಲಿ.
ಪ್ರಸಾದವನ್ನು ಅಬಾಧ ಎನ್ನುತ್ತಾರೆ
ಇಲ್ಲಿ ದೇವರಿಗೆ ಅರ್ಪಿಸುವ ಪ್ರಸಾದವನ್ನು 'ಅಬಾಧ' ಎಂದು ಕರೆಯುತ್ತಾರೆ. ಓಬಡ'. ಅನ್ನ, ಬೇಳೆ, ವಿವಿಧ ತರಕಾರಿಗಳೊಂದಿಗೆ ಬೇಯಿಸಿದ ಕರಿ, ಸಿಹಿ ರಸಂ ಮತ್ತು ಪಾಯಸಂ ಎಲ್ಲವನ್ನೂ ಈ ಮಹಾಪ್ರಸಾದದಲ್ಲಿ ಸೇರಿಸಲಾಗುತ್ತದೆ. ಜೊತೆಗೆ ವಿವಿಧ ಸಿಹಿತಿಂಡಿಗಳೂ ಈ ಮಹಾಪ್ರಸಾದದ ಭಾಗವಾಗಿದೆ. ಈ ಪ್ರಸಾದ ಉಳಿದರೆ ಬಿಸಿಲಿನಲ್ಲಿ ಒಣಗಿಸುತ್ತಾರೆ. ಇದನ್ನು ನಿರ್ಮಾಯಿಲ್ ಎಂದು ಕರೆಯಲಾಗುತ್ತದೆ. ಇದನ್ನು ಪುರಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆ ಇದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ನಂಬಲಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.