ಅಮೃತ ಶಿಲೆ ಇಟ್ಟಿಗೆಗಳಿಂದ ಅಲ್ಲ, ಮಣ್ಣಿನ ದೀಪಗಳು ಮಡಿಕೆಗಳಿಂದ ನಿರ್ಮಾಣವಾಗುತ್ತಿರುವ ವಿಶಿಷ್ಟ ಹನುಮಂತನ ದೇವಾಲಯವಿದು
Aug 29, 2024 11:09 AM IST
ಅಮೃತ ಶಿಲೆ ಇಟ್ಟಿಗೆಗಳಿಂದ ಅಲ್ಲ, ಮಣ್ಣಿನ ದೀಪಗಳು ಮಡಿಕೆಗಳಿಂದ ನಿರ್ಮಾಣವಾಗುತ್ತಿರುವ ವಿಶಿಷ್ಟ ಹನುಮಂತನ ದೇವಾಲಯವಿದು
ಛತ್ತೀಸ್‌ಗಢ ದಮಢಾ ದುರ್ಗ್ ಪ್ರಾಂತ್ಯದ ಬಳಿ ಇರುವ ಪ್ರದೇಶದಲ್ಲಿ ಮಣ್ಣಿನ ಮಡಿಕೆಗಳು ಹಾಗೂ ದೀಪಗಳಿಂದಲೇ ದೇವಸ್ಥಾನ ನಿರ್ಮಿಸಲಾಗುತ್ತಿದೆ. ದೇವಸ್ಥಾನದ ಅರ್ಚಕರ ವಿನೂತನ ಕಲ್ಪನೆಯಿಂದ ಆರಂಭವಾದ ಈ ದೇವಾಲಯ ನಿರ್ಮಾಣ ಇತರರಿಗೂ ಮಾದರಿ ಆಗಿದೆ.
ಭಾರತದಲ್ಲಿ ಅನೇಕ ದೇವಾಲಯಗಳು ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ. ಹಾಗೇ ದೇವಾಲಯಗಳನ್ನು ಕಟ್ಟುವಾಗ ಮರಳು, ಇಟ್ಟಿಗೆ, ಮಣ್ಣನ್ನು ಬಳಸಲಾಗುತ್ತದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಮಣ್ಣಿನ ದೀಪಗಳು ಹಾಗೂ ಮಡಿಕೆಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.
ತಾಜಾ ಫೋಟೊಗಳು
ಅರ್ಚಕರ ವಿನೂತನ ಪರಿಕಲ್ಪನೆಯಿಂದ ನಿರ್ಮಾಣವಾಗುತ್ತಿರುವ ದೇವಸ್ಥಾನ
ದೇವಾಲಯಗಳನ್ನು ಸಾಮಾನ್ಯವಾಗಿ ಇಟ್ಟಿಗೆ, ಅಮೃತಶಿಲೆ ಮತ್ತು ಸಿಮೆಂಟಿನಿಂದ ಕಟ್ಟಲಾಗುತ್ತದೆ. ಆದರೆ ಛತ್ತೀಸ್‌ಗಢದ ದುರ್ಗ್ ಪ್ರಾಂತ್ಯದ ದಮಢಾ ಬಳಿ ನಿರ್ಮಿಸಲಾಗುತ್ತಿರುವ ಈ ಹನುಮಾನ್ ದೇವಾಲಯವು ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ಈ ದೇವಾಲಯವನ್ನು ಕೇವಲ ಮಣ್ಣಿನ ದೀಪಗಳು ಮತ್ತು ಮಡಿಕೆಗಳಿಂದ ನಿರ್ಮಿಸಲಾಗುತ್ತಿದೆ. ದಮಢಾ ಪ್ರದೇಶದ ಸುತ್ತಮುತ್ತ ಪೂಜೆಗೆ ಬಳಸಲಾಗಿದ್ದ ಮಡಿಕೆಗಳು, ಮಣ್ಣಿನ ದೀಪಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇವು ಜನರ ಕಾಲಿಗೆ ಚುಚ್ಚಿ ಸಮಸ್ಯೆ ಆಗುತ್ತಿತ್ತು. ಇಡೀ ಸ್ಥಳ ಕಸದ ರಾಶಿಯಾಗಿದ್ದರಿಂದ ಅಲ್ಲಿನ ಜನರು ನಿರಾಸೆಗೊಂಡರು. ಪವಿತ್ರವಾದ ಮಡಿಕೆಗಳು, ದೀಪಗಳು ಜನರ ಪಾದಗಳಿಗೆ ಸ್ಪರ್ಶವಾಗುವುದು ಒಳ್ಳೆಯದಲ್ಲ ಎಂದುಕೊಂಡ ಅರ್ಚಕರು ದೀಪಗಳು ಮತ್ತು ಮಡಿಕೆಗಳನ್ನು ಸಂಗ್ರಹಿಸಿ ದೇವಾಲಯವನ್ನು ನಿರ್ಮಿಸುವ ಐಡಿಯಾ ಮಾಡಿದರು.
ಅರ್ಚಕರ ಸಲಹೆಯಂತೆ ನೂರಾರು ಮಡಿಕೆಗಳು, ದೀಪಗಳನ್ನು ಗ್ರಾಮಸ್ಥರಿಂದ ಸಂಗ್ರಹಿಸಲಾಯಿತು. ಅದೇ ದೀಪಗಳು ಹಾಗೂ ಮಡಿಕೆಗಳಿಂದ ಈಗ ದೇವಸ್ಥಾನ ನಿರ್ಮಿಸಲು ಆರಂಭಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅರ್ಚಕರ ವಿನೂತನ ಕಲ್ಪನೆಯಿಂದ ನಿರ್ಮಾಣವಾಗುತ್ತಿರುವ ದೇವಸ್ಥಾನವನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
50 ಅಡಿಗಿಂತ ಎತ್ತರವಿರುವ ದೇವಾಲಯ
ಮಡಿಕೆಗಳು ಮತ್ತು ದೀಪಗಳಲ್ಲಿ ಧನಾತ್ಮಕ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಆದರೆ ಇಲ್ಲಿ ದೇವಾಲಯವೇ ದೀಪಗಳಿಂದ ರೂಪುಗೊಂಡಿದೆ. ಮಣ್ಣಿನ ದೀಪಗಳಿಂದ ಗೋಡೆಗಳು ಆಕರ್ಷಕವಾಗಿ ಕಾಣುತ್ತಿವೆ. ಈ ದೇವಾಲಯದಲ್ಲಿ ಹನುಮಂತನನ್ನು ಪ್ರತಿಷ್ಠಾಪಿಸಲಾಗಿದೆ.
ಸುಮಾರು ವರ್ಷಗಳ ಹಿಂದೆಯೇ ಈ ದೇವಾಲಯ ನಿರ್ಮಾಣ ಆರಂಭವಾಯ್ತು. ದೇವಾಲಯವು 50 ಅಡಿಗಿಂತ ಹೆಚ್ಚು ಎತ್ತರವಿದೆ ಎಂದು ಹೇಳಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೇವಸ್ಥಾನದ ಬಗ್ಗೆ ತಿಳಿದ ಅನೇಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಹಣ, ಮಡಿಕೆ, ದೀಪಾರ್ಪಣೆ ಮಾಡಲು ಹೆಚ್ಚು ಮಂದಿ ಮುಂದೆ ಬರುತ್ತಿದ್ದಾರೆ. ದೇವಾಲಯದ ಅರ್ಚಕರ ಸಣ್ಣ ಕಲ್ಪನೆಯಾಗಿ ಪ್ರಾರಂಭವಾದ ಈ ದೇವಾಲಯವು ಈಗ ಬಹಳ ಪ್ರಸಿದ್ಧಿ ಪಡೆಯುತ್ತಿದೆ. ಇದು ಇತರರಿಗೂ ಮಾದರಿಯಾಗಿದೆ. ಸೃಜನಶೀಲತೆಯನ್ನು ಯಾವುದಕ್ಕಾದರೂ ಬಳಸಬಹುದು ಎಂಬುದಕ್ಕೆ ಈ ದೇವಾಲಯ ಸಾಕ್ಷಿಯಾಗಿದೆ. ದೇವಾಲಯದ ಅರ್ಚಕರ ವಿನೂತನ ಕಲ್ಪನೆ ಈಗ ಎಲ್ಲರಿಗೂ ಉತ್ತಮ ಉದಾಹರಣೆಯಾಗಿದೆ.