ಅಲಮೇಲು ಮಂಗಾಪುರ ಎಂದೇ ಹೆಸರಾಗಿರುವ ತಿರುಪತಿಯ ತಿರುಚಾನೂರಿನಲ್ಲಿ ಪದ್ಮಾವತಿ ನೆಲೆಸಿದ್ದು ಹೇಗೆ? ಪೌರಾಣಿಕ ಕಥೆ ಹೀಗಿದೆ
Jun 04, 2024 05:45 AM IST
ಅಲಮೇಲು ಮಂಗಾಪುರ ಎಂದೇ ಹೆಸರಾಗಿರುವ ತಿರುಪತಿಯ ತಿರುಚಾನೂರಿನಲ್ಲಿ ಪದ್ಮಾವತಿ ನೆಲೆಸಿದ್ದು ಹೇಗೆ? ಪೌರಾಣಿಕ ಕಥೆ ಹೀಗಿದೆ
Tiruchanur Goddess Padmavati: ತಿರುಪತಿಯ ಬಗ್ಗೆ ತಿಳಿದಿರುವ ಎಲ್ಲಾ ಭಕ್ತರಿಗೂ ಅಲ್ಲಿ ನೆಲೆಸಿರುವ ತಾಯಿ ಪದ್ಮಾವತಿಯ ಬಗ್ಗೆ ತಿಳಿದೇ ಇದೆ. ಆದರೆ, ತಿರುಚನೂರು ದೇವಿ ಪದ್ಮಾವತಿ ತಿರುಪತಿಯಲ್ಲಿ ಹೇಗೆ ನೆಲೆಸಿದಳು? ಇದರ ಹಿಂದಿರುವ ಪೌರಾಣಿಕ ಕಥೆಯೇನು? ಇದರ ಬಗ್ಗೆ ಖ್ಯಾತಿ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ವಿವರವಾಗಿ ತಿಳಿಸಿದ್ದಾರೆ.
ಆಂಧ್ರಪ್ರದೇಶದ ತಿರುಚಾನೂರು ಪದ್ಮಾವತಿ ದೇವಿ ದೇವಸ್ಥಾನಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಈ ಊರನ್ನು ಅಲಮೇಲು ಮಂಗಾಪುರ ಎಂದೂ ಕರೆಯುತ್ತಾರೆ. ತಿರುಪತಿ ಜಿಲ್ಲೆಯಲ್ಲಿ ತಿರುಚಾನೂರು ಇದೆ. ಈ ಊರಿನ ಹಿನ್ನೆಲೆ, ಇಲ್ಲಿ ಪದ್ಮಾವತಿ ಹೇಗೆ ನೆಲೆಸಿದಳು ಎಂಬುದರ ವಿಚಾರವಾಗಿ ಖ್ಯಾತಿ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾಹಿತಿ ನೀಡಿದ್ದಾರೆ.
ತಾಜಾ ಫೋಟೊಗಳು
ತಿರುಚಾನೂರು, ಶ್ರೀ ಶುಕ ಮಹರ್ಷಿಗಳ ಆಶ್ರಮ ಕ್ಷೇತ್ರವಾಗಿತ್ತು. ಅದಕ್ಕಾಗಿಯೇ ಈ ಸ್ಥಳವನ್ನು ಶ್ರೀಶುಕುಣಿ ಊರು ಎಂದು ಕರೆಯಲಾಗುತ್ತಿತ್ತು. ಅದೇ ಸಮಯದಲ್ಲಿ ಇನ್ನೂ ಕೆಲವರು ಇದನ್ನು ಶ್ರೀಶುಕನೂರು, ತಿರುಚುಕನೂರು ಮತ್ತು ತಿರುಚಾನೂರು ಎಂದು ಕರೆಯುತ್ತಿದ್ದರು. ಅದೇನೇ ಇರಲಿ, ಶ್ರೀಶುಕಮಹರ್ಷಿಯಂತಹ ಮುನಿಗಳು ಈ ದಿವ್ಯ ಭೂಮಿಯಲ್ಲಿ ತಪಸ್ಸು ಮಾಡಿದ್ದರೆಂದೂ, ಅದರ ಪಕ್ಕದಲ್ಲಿಯೇ ಶುಕಮಹರ್ಷಿಯ ಅಜ್ಜನಾದ ಪರಾಶರನ ತಪೋಭೂಮಿಯಾದ ಯೋಗಿಮಾಮಲ್ಲವರಂ ಕೂಡಾ ಇದೆ ಎಂದೂ ಹೇಳಲಾಗುತ್ತದೆ.
ಅಲಮೇಲು ಮಂಗಮ್ಮಳಾಗಿ ಆವಿರ್ಭವಿಸಿದ ಮಹಾಲಕ್ಷ್ಮೀ
ಪುರಾಣಗಳ ಪ್ರಕಾರ ಪದ್ಮ ಸರೋವರದ ತೀರದಲ್ಲಿ ಸಾಕ್ಷಾತ್ ವೈಕುಂಠನಾಥನಾದ ಶ್ರೀ ವೆಂಕಟೇಶ್ವರನು ಶ್ರೀ ಮಹಾಲಕ್ಷ್ಮೀಯ ಕೃಪೆಗಾಗಿ ತೀವ್ರ ತಪಸ್ಸು ಮಾಡಿದನು. ಅದರ ಫಲವಾಗಿ ಶ್ರೀ ಮಹಾಲಕ್ಷ್ಮಿಯು ಪದ್ಮಸರೋವರದಲ್ಲಿ ಅಲಮೇಲು ಮಂಗಮ್ಮಳಾಗಿ ಆವಿರ್ಭವಿಸಿದಳು ಎನ್ನಲಾಗಿದೆ. ಭೃಗು ಮಹರ್ಷಿಗಳು ವೈಕುಂಠದಿಂದ ನೇರವಾಗಿ ಭೂಮಿಗೆ ಇಳಿದು ಬಂದು ಮಹಾರಾಷ್ಟ್ರದ ಶ್ರೀಕ್ಷೇತ್ರ ಕೊಲ್ಲಾಪುರದಲ್ಲಿ ನೆಲೆಸಿರುವ ಶ್ರೀ ಮಹಾಲಕ್ಷ್ಮಿ ದೇವಿ ಹಾಗೂ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿದರು. ಆ ಸ್ವಾಮಿಯ ಅಪೇಕ್ಷೆಯಂತೆ ಇಲ್ಲಿನ ಸ್ವರ್ಣಮುಖಿ ನದಿಯ ದಡದಲ್ಲಿರುವ ಶುಕಮಹರ್ಷಿ ಆಶ್ರಮ ಪ್ರದೇಶದಲ್ಲಿರುವ ಪದ್ಮ ಸರೋವರದಲ್ಲಿ ಅಲಮೇಲು ಮಂಗಮ್ಮ ಆವಿರ್ಭವಿಸಿದಳು. ಅಲಮೇಲು ಮಂಗಮ್ಮ ಎಂದರೆ ಕಮಲದ ಮೇಲೆ ಬೆಳಗುವ ದಿವ್ಯವನಿತೆ, ಶ್ರೀಕಾಂತೆ ಎಂದು ಅರ್ಥ. ಆದ್ದರಿಂದಲೇ ಆ ತಾಯಿಗೆ "ಪದ್ಮಾವತಿ" ಎಂಬ ಇನ್ನೊಂದು ಹೆಸರೂ ಇದೆ.
ಅಲಮೇಲು ಮಂಗಮ್ಮ ದೇವಿಯಾಗಿ ಅವತರಿಸಿದ ಮಹಾಲಕ್ಷ್ಮಿಯನ್ನು ಲಕ್ಷ್ಮಿಯಾಗಿ ತನ್ನ ವಕ್ಷ್ಮಸ್ಥಳದಲ್ಲಿ ಉಳಿಸಿಕೊಂಡು ಶ್ರೀ ವೆಂಕಟೇಶ್ವರನು ಮತ್ತೆ ವೆಂಕಟಾಚಲ ಕ್ಷೇತ್ರಕ್ಕೆ ಹೋದನು. ಅಲಮೇಲು ಮಂಗಮ್ಮ ದೇವಿಯ ಆರಾಧನೆಯಿಂದಾಗಿ ತಿರುಚಾನೂರು ಶ್ರೀ ಕ್ಷೇತ್ರಕ್ಕೆ ಅಲಮೇಲು ಮಂಗಪಟ್ಟಣ ಎಂಬ ಹೆಸರೂ ಬಂದಿತು. ಅದೇ ಸಮಯದಲ್ಲಿ ನಾರಾಯಣಾವರಂನ ಚಕ್ರವರ್ತಿಯಾದ ಆಕಾಶರಾಜನ ಮಗಳು ಪದ್ಮಾವತಿಯನ್ನು ವೆಂಕಟೇಶ್ವರನು ವಿವಾಹವಾದನು.
ಇದನ್ನೂ ಓದಿ: ಈ ತಾರೀಖಿನಂದು ಜನಿಸಿದವರು ಬಹಳ ಭಾವುಕರು
ಲಕ್ಷ್ಮಿಯನ್ನು ಅರಸಿ ಹೋಗುವ ವೆಂಕಟೇಶ್ವರ
ನಾನು ವೈಕುಂಠವನ್ನಾದರೂ ಬಿಟ್ಟಿರುತ್ತೇನೆ. ಆದರೆ ನನ್ನ ಭಕ್ತರನ್ನು ಮಾತ್ರ ಒಂದು ಕ್ಷಣವೂ ಬಿಟ್ಟಿರಲಾರೆ ಎಂದು ವಿಷ್ಣುವು ಭೂಲೋಕಕ್ಕೆ ತೆರಳಿ ವೆಂಕಟೇಶ್ವರ ಅವತಾರ ತಾಳುತ್ತಾನೆ. ಆದರೆ ಲಕ್ಷ್ಮಿಯನ್ನು ಬಿಟ್ಟಿರಲು ಆಗದೆ ಮತ್ತೆ ಶ್ರೀ ವೆಂಕಟೇಶ್ವರನು ಲಕ್ಷ್ಮಿಯನ್ನು ಅರಸಿ ಹೋಗುತ್ತಾನೆ. ಭೂಮಹಾಲಕ್ಷ್ಮಿ (ಭೂದೇವಿ) ಗಾಗಿ ಅವನು ವರಾಹ ಅವತಾರವನ್ನು ತಾಳುತ್ತಾನೆ. ಆಕಾಶದ ರಾಜನ ಮಗಳು ಪದ್ಮಾವತಿಯಾಗಿ ಅವತರಿಸಿದ ವೇದ ಲಕ್ಷ್ಮಿಗಾಗಿ ಪರಂಧಾಮನು ಪರಿತಪಿಸುತ್ತಾನೆ. ನಂತರ ಆಕೆಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ವೆಂಕಟಾಚಲಪತಿಯು ಮಹಾಲಕ್ಷ್ಮಿಯ ಕೃಪೆಗಾಗಿ ಹಂಬಲಿಸಿ ಕೊಲ್ಲಾಪುರದಲ್ಲಿ ಹತ್ತು ವರ್ಷಗಳ ಕಾಲ ತಪಸ್ಸು ಮಾಡಿದನು.
ಆದರೆ ಆಕಾಶವಾಣಿಯ ಆದೇಶದಂತೆ ಪದ್ಮಸರೋವರದ ದಂಡೆಯಲ್ಲಿ ಮಹಾಲಕ್ಷ್ಮಿಯ ಕೃಪೆಗಾಗಿ ಹನ್ನೆರಡು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದನು. ಅಂತಿಮವಾಗಿ, ಅವಳು ಕರುಣೆ ತೋರಿ ಪದ್ಮಸರೋವರದಲ್ಲಿ ಚಿನ್ನದ ಕಮಲದಲ್ಲಿ ಅಲಮೇಲು ಮಂಗಮ್ಮಳಾಗಿ ಹೊರ ಹೊಮ್ಮಿದಳು. ನಂತರ ಭಗವಂತನು ಅವಳನ್ನು ತನ್ನ ಹೃದಯದ ಮೇಲೆ ವ್ಯೂಹಾತ್ಮಕವಾಗಿ ಇರಿಸಿಕೊಂಡನು. ಅಂದಿನಿಂದ ವೆಂಕಟೇಶ್ವರನನ್ನು ಶ್ರೀನಿವಾಸ ಎಂಬ ಸಾರ್ಥಕನಾಮದಿಂದ ಕರೆಯಲಾಗುತ್ತಿದೆ. ಬೇಕಾದ ವರಗಳನ್ನು ಕರುಣಿಸುವವನಾಗಿದ್ದಾನೆ. ಶ್ರೀಮನ್ನಾರಾಯಣನು ಜಗನ್ಮಾತೆ ಅಲಮೇಲು ಮಂಗಮ್ಮನ ಕೃಪೆಗಾಗಿ ಅನೇಕ ರೀತಿಯಲ್ಲಿ ಪ್ರಾರ್ಥಿಸಿದನು ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ವಿವರಿಸಿದ್ದಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.