Indian Temple: ದೇವರ ಸಾಮಿಪ್ಯದ ಜೊತೆಗೆ ಮನಸ್ಸಿಗೆ ಶಾಂತಿ ನೀಡುವ ಭಾರತದ ವೈವಿಧ್ಯಮಯ 9 ಆಧ್ಯಾತ್ಮಿಕ ತಾಣಗಳಿವು
Jun 29, 2024 01:58 PM IST
ದೇವರ ಸಾಮಿಪ್ಯದ ಜೊತೆಗೆ ಮನಸ್ಸಿಗೆ ಶಾಂತಿ ನೀಡುವ ಭಾರತದ ವೈವಿಧ್ಯಮಯ 9 ಆಧ್ಯಾತ್ಮಿಕ ತಾಣಗಳಿವು
Indian Temple: ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಆಲೋಚನೆಯಿದ್ದರೆ, ಹೃಷಿಕೇಶ, ಹರಿದ್ವಾರ ಸೇರಿದಂತೆ ಭಾರತದ ಈ ಸ್ಥಳಗಳು ಸೂಕ್ತವಾಗಿದೆ. ಇವು ಆಧ್ಯಾತ್ಮದ ಕೇಂದ್ರವಾಗಿರುವುದರ ಜೊತೆಗೆ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. (ಬರಹ: ಅರ್ಚನಾ ವಿ ಭಟ್)
ಭರತ ಭೂಮಿ ಆಧ್ಯಾತ್ಮಿಕ ಸ್ಥಳಗಳನ್ನು ಹೊಂದಿರುವ ಪಾವನ ಭೂಮಿ. ಇಲ್ಲಿ ವೈವಿಧ್ಯಮಯ ತಾಣಗಳಿವೆ. ಆಧ್ಯಾತ್ಮಿಕ ತಾಣಗಳೆಲ್ಲವೂ ಒಂದಲ್ಲಾ ಒಂದು ರೀತಿ ದೇವರ ಸಾಮಿಪ್ಯವನ್ನು ನೀಡುತ್ತದೆ. ನಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಜೀವನದ ನಿತ್ಯದ ಜಂಜಾಟದ ನಡುವೆ ಮನಸ್ಸಿಗೆ ಶಾಂತಿ ನೀಡುವಂತಹ, ದೇವರ ಸಾನಿಧ್ಯ ಪಡೆಯುವಂತಹ ಯಾವುದಾದರೂ ಸ್ಥಳಕ್ಕೆ ಭೇಟಿ ನೀಡಬೇಕೆನಿಸುತ್ತದೆ. ಅವು ನಮ್ಮನ್ನು ಒತ್ತಡಗಳಿಂದ ದೂರ ಉಳಿಸಿ ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳುವ ಮಾರ್ಗವೂ ಹೌದು. ಕೆಲವು ಆಧ್ಯಾತ್ಮಿಕ ತಾಣಗಳು ನೆಮ್ಮದಿ, ಸ್ಪೂರ್ತಿಯನ್ನು ನೀಡುವ ಸ್ಥಳಗಳಾಗಿವೆ.
ತಾಜಾ ಫೋಟೊಗಳು
1) ಹೃಷಿಕೇಶ
ವಿಶ್ವದ ಯೋಗ ರಾಜಧಾನಿ ಎಂದು ಖ್ಯಾತಿ ಪಡೆದಿರುವ ಹೃಷಿಕೇಶ ಉತ್ತಮ ಆಧ್ಯಾತ್ಮದ ಸ್ಥಳವಾಗಿದೆ. ಹಿಮಾಲಯದ ತಪ್ಪಲಿನಲ್ಲಿರುವ ಈ ಸ್ಥಳವು ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಇದನ್ನು ಹಿಮಾಲಯದ ಹೆಬ್ಬಾಗಿಲು ಎಂದೂ ಕರೆಯುತ್ತಾರೆ. ಪ್ರಾಚೀನ ಕಾಲದಿಂದಲೂ ಇದು ಋಷಿ ಮುನಿಗಳ ನೆಚ್ಚಿನ ಆಧ್ಯಾತ್ಮದ ತಾಣವಾಗಿದೆ. ಪ್ರಶಾಂತವಾದ ಪ್ರಕೃತಿ ಸೌಂದರ್ಯವನ್ನು ಹೊತ್ತು ನಿಂತಿರುವ ಹೃಷಿಕೇಶ ನಿಮ್ಮಲ್ಲಿ ಧನ್ಯತೆಯ ಭಾವವನ್ನು ಮೂಡಿಸುತ್ತದೆ.
2) ಹರಿದ್ವಾರ
ಗಂಗಾ ನದಿಯ ತಟದಲ್ಲಿರುವ ಹರಿದ್ವಾರ ಹಿಂದೂಗಳ ಭಕ್ತಿಯ ಕೇಂದ್ರವಾಗಿದೆ. ಹರಿದ್ವಾರದಲ್ಲಿರುವ ಹರ್ ಕಿ ಪೌಡಿಯಲ್ಲಿ ಪ್ರತಿನಿತ್ಯ ಗಂಗಾ ಆರತಿಯನ್ನು ಮಾಡಲಾಗುತ್ತದೆ. ಇಲ್ಲಿ ಸ್ನಾನ ಮಾಡುವುದರಿಂದ ಮೋಕ್ಷದ ಬಾಗಿಲು ತೆರೆದುಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಚಾರ್ ಧಾಮ್ ಯಾತ್ರೆ ಮಾಡುವವರು ಹರಿದ್ವಾರದ ಬ್ರಹ್ಮ ಕುಂಡದಲ್ಲಿ ಸ್ನಾನ ಮಾಡಿ ಯಾತ್ರೆ ಪ್ರಾರಂಭಿಸುವುದು ವಾಡಿಕೆ.
3) ವಾರಣಾಸಿ
ಭಾರತದ ಅತ್ಯಂತ ಹಳೆಯ ಧಾರ್ಮಿಕ ಸ್ಥಳ ಎಂದು ಗುರುತಿಸಿರುವ ವಾರಣಾಸಿಯು ಆಧ್ಯಾತ್ಮದ ಕೇಂದ್ರವಾಗಿದೆ. ಪವಿತ್ರ ಗಂಗೆಯಲ್ಲಿ ಮಿಂದರೆ ಪಾವನರಾಗುತ್ತಾರೆ ಎಂಬ ನಂಬಿಕೆಯಿದೆ. ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಈ ಸ್ಥಳವನ್ನು ಭಾರತದ ಆಧ್ಯಾತ್ಮದ ರಾಜಧಾನಿ ಎಂದು ಪರಿಗಣಿಸಲಾಗಿದೆ. ವಾರಣಾಸಿಯಲ್ಲಿ ಸಾಕ್ಷಾತ್ ಪರಶಿವನೇ ನೆಲೆಸಿದ್ದಾನೆ.
4) ಅಮೃತ್‌ಸರ್
ಇದು ಸಿಖ್‌ರ ಪವಿತ್ರ ಕ್ಷೇತ್ರ. ಇಲ್ಲಿನ ಗೋಲ್ಡನ್ ಟೆಂಪಲ್ ಪ್ರಮುಖ ಆಧ್ಯಾತ್ಮ ಮತ್ತು ಧಾರ್ಮಿಕ ಸ್ಥಳವಾಗಿದೆ. ಸರೋವರದಿಂದ ಆವೃತವಾಗಿರುವ ಗೋಲ್ಡನ್ ಟೆಂಪಲ್ ಯಾತ್ರಾರ್ಥಿಗಳಿಗೆ ಶಾಂತಿ, ನೆಮ್ಮದಿ ಮತ್ತು ಭರವಸೆಯನ್ನು ನೀಡುತ್ತದೆ.
5) ಬದರಿನಾಥ
ಬದರಿನಾಥ ಕ್ಷೇತ್ರವು ಉತ್ತರಾಖಂಡದ ಘರ್ವಾಲ್ ಬೆಟ್ಟದ ಮೇಲಿದೆ. ಭಕ್ತರು ಕೈಗೊಳ್ಳುವ ಪವಿತ್ರ ಚಾರ್‌ಧಾಮ್ ಯಾತ್ರೆಯಲ್ಲಿ ಒಂದಾಗಿದೆ. ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ. ಇಲ್ಲಿ ಮಹಾವಿಷ್ಣುವು ಬದರಿ ನಾರಾಯಣನಾಗಿ ನೆಲೆಸಿದ್ದಾನೆ. ಈ ದೇವಸ್ಥಾನದ ವೈಶಿಷ್ಟ್ಯವೇನೆಂದರೆ ಇದು ವರ್ಷದ 6 ತಿಂಗಳು ಮುಚ್ಚಿರುತ್ತದೆ. ಅಕ್ಷಯ ತೃತಿಯ ದಿನದಂದು ಈ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ.
6) ಮಥುರಾ
ಮಥುರಾವನ್ನು ಶ್ರೀಕೃಷ್ಣನ ಜನ್ಮಭೂಮಿ ಎಂದು ಕರೆಯುತ್ತಾರೆ. ಶ್ರೀಕೃಷ್ಣನ 7 ಪವಿತ್ರ ಸ್ಥಳಗಳಲ್ಲಿ ಇದೂ ಒಂದಾಗಿದೆ. ಶ್ರೀಕೃಷ್ಣನು ಕಂಸನನ್ನು ಕೊಂದ ನಂತರ ವಿಶ್ರಾಂತಿ ತೆಗೆದುಕೊಂಡ ಸ್ಥಳವಾದ ವಿಶಮ್ ಘಾಟ್ ಮಥುರಾದಲ್ಲೇ ಇದೆ. ಆಧ್ಯಾತ್ಮದ ಕೇಂದ್ರಗಳಾದ ನಾಮ್ ಯೋಗ್ ಸಾಧನಾ ಮಂದಿರ ಮತ್ತು ಶ್ರೀ ಬಂಕಿ ಬಿಹಾರಿ ಮಂದಿರ್ ಸಹ ಇದೆ.
7) ತಿರುಪತಿ ಬಾಲಾಜಿ
ಆಂಧ್ರಪ್ರದೇಶದ ತಿರುಮಲ ಬೆಟ್ಟದಲ್ಲಿರುವ ತಿರುಪತಿ ಭಕ್ತಿಯ ಕೇಂದ್ರ ಎಂದು ಪರಿಗಣಿಸಲಾಗಿದೆ. ಇಲ್ಲಿ ಶ್ರೀ ವೆಂಕಟೇಶ್ವರ ನೆಲೆಸಿದ್ದಾನೆ. ತಿರುಪತಿ ತಿಮ್ಮಪ್ಪ, ಶ್ರೀನಿವಾಸ, ಬಾಲಾಜಿ ಎಂದೆಲ್ಲಾ ಕರೆಯುತ್ತಾರೆ. ಮನಸ್ಸಿಗೆ ಶಾಂತಿ ನೀಡುವ ಈ ಸ್ಥಳ ಆಧ್ಯಾತ್ಮದ ಒಲವನ್ನು ಹೆಚ್ಚಿಸುತ್ತದೆ. ತಿರುಪತಿ ಬಾಲಾಜಿಯ ಆಶೀರ್ವಾದ ಪಡೆಯುವುದರಿಂದ ಜೀವನದಲ್ಲಿರುವ ಕಷ್ಟಗಳೆಲ್ಲವೂ ದೂರವಾಗಿ ಶಾಂತಿ, ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿದೆ.
8) ಕೇದಾರನಾಥ
ಶಿವನಿಗೆ ಸಮರ್ಪಿತವಾದ ಈ ದೇವಾಲಯವು ಭಕ್ತಿ ಮತ್ತು ಆಧ್ಯಾತ್ಮದ ಕೇಂದ್ರವಾಗಿದೆ. ಇಲ್ಲಿ ನೆಲೆಸಿರುವ ಶಿವನು ಮೋಕ್ಷವನ್ನು ಕರುಣಿಸುತ್ತಾನೆ ಎಂಬ ನಂಬಿಕೆಯಿದೆ. ಮಂದಾಕಿನಿ ನದಿಯ ಸಮೀಪದಲ್ಲಿರುವ ಕೇದಾರನಾಥ ದೇವಸ್ಥಾನವು ಚಾರ್‌ಧಾಮ್‌ಗಳಲ್ಲಿ ಒಂದಾಗಿದೆ.
9) ರಾಮೇಶ್ವರಂ
ತಮಿಳುನಾಡಿನಲ್ಲಿರುವ ರಾಮೇಶ್ವರಂ ದೇವಸ್ಥಾನವು ಶಿವನಿಗೆ ಅರ್ಪಿತವಾದ ಇನ್ನೊಂದು ದೇವಾಲಯವಾಗಿದೆ. ರಾಮಾಯಣದ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಇದು ಆಧ್ಯಾತ್ಮದ ಕೇಂದ್ರವಾಗಿದೆ.
ಬರಹ: ಅರ್ಚನಾ ವಿ ಭಟ್