ಕಟಕ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಆತುರದ ಮನೋಭಾವಕ್ಕೆ ಕಡಿವಾಣ ಬಿದ್ದರೆ ಒಲಿಯಲಿದೆ ಯಶಸ್ಸು
Mar 29, 2024 09:13 PM IST
ಕಟಕ ರಾಶಿ ಯುಗಾದಿ ಭವಿಷ್ಯ
ಯುಗಾದಿ ರಾಶಿ ಭವಿಷ್ಯ: ಕಟಕ ರಾಶಿಯವರು ತಮ್ಮ ಕುಟುಂಬವೇ ಸರ್ವಸ್ವ ಎಂಬ ಮನೋಭಾವ ಇರುವ ಅಪರೂಪದ ವ್ಯಕ್ತಿತ್ವದವರು. ಆದರೆ ಆತುರದ ಸ್ವಭಾವ ಈ ರಾಶಿಯ ದೌರ್ಬಲ್ಯ. ಕಟಕ ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದರಲ್ಲಿ ಬೆಲ್ಲ. ಜ್ಯೋತಿಷಿ ಎಚ್.ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.
ಕಟಕ ರಾಶಿಯ ಯುಗಾದಿ ವರ್ಷ ಭವಿಷ್ಯ: ಕಟಕ ರಾಶಿಯು ದ್ವಾದಶ ರಾಶಿಗಳ ಚಕ್ರದಲ್ಲಿ 4ನೇ ರಾಶಿ. ಏಡಿ ಈ ರಾಶಿಯ ಚಿಹ್ನೆ. ಈ ರಾಶಿಯಲ್ಲಿ ಜನಿಸಿದವರಿಗೆ ತಮ್ಮ ಮನೆಯ ಬಗ್ಗೆ ತುಂಬಾ ಕಾಳಜಿ, ಪ್ರೀತಿ ಇರುತ್ತದೆ. ತಮಗಿಂತಲೂ, ಜಗತ್ತಿಗಿಂತಲೂ ತಮ್ಮ ಕುಟುಂಬ, ಮನೆಯೇ ಮುಖ್ಯ ಎನ್ನುವ ವಿಚಾರದಲ್ಲಿ ಈ ರಾಶಿಯವರಿಗೆ ಯಾವುದೇ ಗೊಂದಲ ಇರುವುದಿಲ್ಲ.
ತಾಜಾ ಫೋಟೊಗಳು
ನೀವು ಪುನರ್ವಸು ನಕ್ಷತ್ರದ 4ನೇ ಪಾದ, ಪುಷ್ಯ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಆಶ್ಲೇಷ ನಕ್ಷತ್ರದ 1, 2, 3 ಮತ್ತು 4ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಕಟಕ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಹಿ ಆದಲ್ಲಿ ಪುನರ್ವಸು ನಕ್ಷತ್ರ. ಹು, ಹೆ, ಹೊ ಮತ್ತು ಡ ಆದಲ್ಲಿ ಪುಷ್ಯ ನಕ್ಷತ್ರ. ಡಿ, ಡು, ಡೆ ಮತ್ತು ಡೊ ಆದಲ್ಲಿ ಆಶ್ಲೇಷ ನಕ್ಷತ್ರದೊಂದಿಗೆ ಕಟಕ ರಾಶಿ ಆಗುತ್ತದೆ.
ಕಟಕ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ
ಕಟಕ ರಾಶಿಗೆ ಸೇರಿದವರಿಗೆ ಶುಭ ದಿನಾಂಕಗಳು: 4, 5, 6, 15, 16, 30. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ಸಂಖ್ಯೆಗಳು: 1, 2, 3, 4, 6, 7, 9. ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು. ಶುಭ ದಿಕ್ಕು: ಪೂರ್ವ ಮತ್ತು ಉತ್ತರ. ಶುಭ ತಿಂಗಳು: ಏಪ್ರಿಲ್ 15 ರಿಂದ ಮೇ 14, ಆಗಸ್ಟ್ 15ರಿಂದ ಸೆಪ್ಟೆಂಬರ್ 14. ಶುಭ ಹರಳು: ಮಾಣಿಕ್ಯ, ಹವಳ ಮತ್ತು ಹಳದಿ ಪುಷ್ಯ ರಾಗ. ಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೀನ. ಅಶುಭ ರಾಶಿ: ಕನ್ಯಾ, ಮಕರ, ಕುಂಭ ಮತ್ತು ಮಿಥುನ.
ಕಟಕ ರಾಶಿಯ ಗುಣಲಕ್ಷಣಗಳು (Cancer characteristics in Kannada)
ಕಟಕ ರಾಶಿಯಲ್ಲಿ ಜನಿಸಿದ ಮಹಿಳೆಯರು ಸಾಮಾನ್ಯವಾಗಿ ಹೆಚ್ಚಿನ ಆಸೆ, ಆಕಾಂಕ್ಷೆಯನ್ನು ಹೊಂದಿರುತ್ತಾರೆ. ಸದಾ ಕಾಲ ಒಳ್ಳೆಯದನ್ನೇ ಬಯಸುತ್ತಾ ಬಾಳುತ್ತಾರೆ. ಇವರಿಗೆ ಆತ್ಮೀಯರ ಸಹಾಯ, ಸಹಕಾರ ಸದಾ ಕಾಲ ಇರುತ್ತದೆ. ಸ್ವಭಾವತಃ ಇವರು ಉದಾರಿಗಳು, ಬೇರೆಯವರಿಗೆ ಸಹಾಯ ಮಾಡುವವರು. ಕಷ್ಟನಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಆದರೆ ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವುದಿಲ್ಲ. ಸೋಲು ಎದುರಾದಾಗ ಉದ್ವೇಗದಿಂದ ವರ್ತಿಸುವರು. ಗೆಲ್ಲುವವರೆಗೂ ಹಟ ಬಿಡುವುದಿಲ್ಲ.
ಕಟಕ ರಾಶಿಯಲ್ಲಿ ಜನಿಸಿದ ಪುರುಷರು ಕಷ್ಟದಲ್ಲಿರುವವರನ್ನು ಕರುಣೆಯಿಂದ ನೋಡುತ್ತಾರೆ. ತಮ್ಮ ಬಳಿ ಇರುವ ಹಣವನ್ನು ಅವಶ್ಯಕತೆ ಇದ್ದವರಿಗೆ ನೀಡಲು ಹಿಂದುಮುಂದು ನೋಡುವುದಿಲ್ಲ. ಎಂತಹ ಸಂದರ್ಭದಲ್ಲಿಯೂ ಬುದ್ಧಿವಂತಿಕೆಯಿಂದ ವರ್ತಿಸುವರು. ಸದಾಕಾಲ ಚಟುವಟಿಕೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗುವರು. ಮನದಲ್ಲಿ ಮೂಡುವ ಯೋಜನೆಗಳು ಯಶಸ್ವಿಯಾಗುವಂತೆ ನೋಡಿಕೊಳ್ಳುವರು. ಭಯದ ಗುಣವಿರುವುದಿಲ್ಲ. ಆದರೆ ಮನಸ್ಸನ್ನು ಒಂದೆಡೆ ಕೇಂದ್ರೀಕೃತವಾಗಿ ಇರಿಸುವುದಿಲ್ಲ. ಪದೇಪದೆ ಮನಸ್ಸು ಬದಲಿಸುತ್ತಿರುತ್ತಾರೆ. ಇದರಿಂದಾಗಿ ತೊಂದರೆ ಅನುಭವಿಸುತ್ತಾರೆ. ಸಣ್ಣಪುಟ್ಟ ಕೆಲಸವಾದರೂ ಅವಸರದಿಂದ ಸಂದಿಗ್ದತೆಗೆ ಒಳಗಾಗುತ್ತಾರೆ.
ಕಟಕ ರಾಶಿಗೆ ಸೇರಿದ ಸ್ತ್ರೀಯರು ಮತ್ತು ಪುರುಷರಿಗೆ ಒಂದು ಕಿವಿಮಾತು. ನೀವು ಶಾಂತಿ, ಸಹನೆಯಿಂದ ವರ್ತಿಸಿದರೆ ಮಾತ್ರ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದ ಮತ್ತು ಸಮಾಜದ ಎಲ್ಲರ ಸಹಾಯ, ಸಹಕಾರ ದೊರೆಯುತ್ತದೆ.
ಶ್ರೀ ಕ್ರೋಧಿನಾಮ ಸಂವತ್ಸರದ ಕಟಕ ರಾಶಿಯ ಗೋಚಾರ ಫಲ
ಕಟಕ ರಾಶಿಯಲ್ಲಿ ಜನಿಸಿದವರಿಗೆ ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಗುರುವಿನ ಅನುಗ್ರಹ ದೊರೆಯುವ ಕಾರಣ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಆದರೆ ಶನಿಯು ಅಷ್ಟಮ ಸ್ಥಾನದಲ್ಲಿ ಇರುವ ಕಾರಣ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಬೇಕು. ರಾಹು ಗ್ರಹವು ನವಮದಲ್ಲಿ ಇರುವ ಕಾರಣ ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವರು. ಒಳ್ಳೆಯ ಕೆಲಸಗಳಿಗೆ ಮಾತ್ರ ಹಣ ಖರ್ಚು ಮಾಡುವರು. ಉತ್ತಮ ಆದಾಯವಿರುತ್ತದೆ. ಸಹನೆಯಿಂದ ವರ್ತಿಸಿದಲ್ಲಿ ಈ ಸಂವತ್ಸರದಲ್ಲಿ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. ಆದರೆ ತಡವಾಗಿ ಕೆಲಸ ಕಾರ್ಯಗಳು ನಡೆಯಲಿವೆ. ಯಾವುದೇ ವಿಚಾರವಾದರೂ ಆತುರ ಪಡದೆ ಮುಂದುವರೆಯುವಿರಿ.
ಕಟಕ ರಾಶಿಯವರಿಗೆ ಈ ವರ್ಷದ ಸ್ನೇಹ, ವಿಶ್ವಾಸದ ಬಂಧ
ಕಟಕ ರಾಶಿಯವರಲ್ಲಿ ಸಾಮಾನ್ಯವಾಗಿ ಇರುವ ಆತುರದ ಗುಣದಿಂದ ಆತ್ಮೀಯರಲ್ಲಿ ಬೇಸರ ಮೂಡುತ್ತದೆ. ಇದು ಸೋಲಿಗೆ ಕಾರಣವಾಗಬಹುದು. ಎಲ್ಲರನ್ನು ಸಮಾನವಾದ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ದಂಪತಿಗಳ ನಡುವೆ ಕೇವಲ ಪ್ರೀತಿ ಅಲ್ಲದೆ ಅನುಕಂಪವೂ ಇರುತ್ತದೆ. ಯಾರನ್ನೂ ದ್ವೇಷಿಸದೆ ಎಲ್ಲರೊಂದಿಗೂ ಸ್ನೇಹ ಬೆಳೆಸುವಿರಿ. ಬೇರೆಯವರ ತಪ್ಪನ್ನು ಮನ್ನಿಸಿ, ಒಳ್ಳೆಯದನ್ನು ಮಾತ್ರ ಜೀವನದಲ್ಲಿ ಅಳವಡಿಸಿಕೊಳ್ಳುವಿರಿ. ನಿಮ್ಮ ಒಳ್ಳೆಯ ಸ್ನೇಹಿತರ ಗುಂಪನ್ನು ಕಂಡು ಅಸೂಯೆ ಪಡುವ ಜನ ಇರುತ್ತಾರೆ. ಮಕ್ಕಳ ಮೇಲೆ ವಿಶೇಷ ಪ್ರೀತಿ ಇರಲಿದೆ. ವಯೋವೃದ್ಧರನ್ನು ಗೌರವದಿಂದ ಕಾಣುವ ಭಾವನೆ ಎಲ್ಲರ ಗಮನ ಸೆಳೆಯುತ್ತದೆ. ಸ್ನೇಹವನ್ನು ಬಯಸಿ ಬರುವವರನ್ನು ನಿರಾಸೆಗೊಳಿಸುವುದಿಲ್ಲ.
ಉದ್ಯೋಗ: ಉದ್ಯೋಗದಲ್ಲಿ ಇರದು ತೊಂದರೆ
ಕಟಕ ರಾಶಿಯವರಿಗೆ ಈ ವರ್ಷ ಉದ್ಯೋಗದಲ್ಲಿ ಯಾವುದೇ ತೊಂದರೆಗಳು ಸಂಭವಿಸುವುದಿಲ್ಲ. ಆದರೆ ಇವರು ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಮಣಿಯುವ ದೌರ್ಬಲ್ಯದಿಂದ ಸಂಕಷ್ಟದ ಸ್ಥಿತಿ ಅನುಭವಿಸುತ್ತೀರಿ. ಸ್ವಂತ ನಿರ್ಧಾರಗಳಿಗೆ ಬದ್ಧರಾಗುವಿರಿ. ಹಿರಿಯ ಅಧಿಕಾರಿಗಳು ಸಹ ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಉತ್ತಮ ಅವಕಾಶಗಳು ಸಿಕ್ಕಾಗ ಉದ್ಯೋಗವನ್ನು ಬದಲಿಸುವ ಸಾಧ್ಯತೆಗಳಿವೆ. ನಿಮ್ಮ ಒಳ್ಳೆಯ ಮಾತುಕತೆ ಗೆಳೆಯರ ಗುಂಪನ್ನು ಹೆಚ್ಚಿಸುತ್ತದೆ. ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಜನಪ್ರಿಯತೆ ಗಳಿಸುವಿರಿ. ಬೇರೆಯವರಿಗೆ ಕಷ್ಟವೆನಿಸುವ ಕೆಲಸವನ್ನು ಹೆಚ್ಚು ಪರಿಶ್ರಮದಿಂದ ಪೂರೈಸುವಿರಿ. ಇದರಿಂದ ದೊಡ್ಡ ದೊಡ್ಡ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ಸಹ್ಯೋದ್ಯೋಗಿಗಳು ನಿಮಗೆ ಸಹಾಯ ಮಾಡಲಿದ್ದಾರೆ. ದಿನದ ಬಹುತೇಕ ವೇಳೆ ಉದ್ಯೋಗದಲ್ಲಿ ಕಳೆಯುವಿರಿ. ದಿನ ಕಳೆದಂತೆ ಉದ್ಯೋಗದಲ್ಲಿ ಉನ್ನತ ಅಧಿಕಾರ ಲಭಿಸುತ್ತದೆ. ಮಾನಸಿಕ ದೃಢತೆ ಮತ್ತು ಆತ್ಮಶಕ್ತಿ ಅಪಾಯಕಾರಿ ಎನಿಸಿದರೂ ಸವಾಲುಗಳಿಂದ ಕೂಡಿರುವ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ.
ವಿದ್ಯಾಭ್ಯಾಸ: ಹಿರಿಯರ ಅನುಗ್ರಹದಿಂದ ನಿರೀಕ್ಷಿತ ಯಶಸ್ಸು
ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಉನ್ನತ ಮಟ್ಟ ತಲುಪುವರು. ಆದರೆ ರಾಹುವಿನ ದೃಷ್ಟಿಯ ಫಲವಾಗಿ ಆತ್ಮವಿಶ್ವಾಸವು ಕಡಿಮೆ ಆಗುತ್ತದೆ. ಚುರುಕುತನ ಇರುವ ಕಾರಣ ಓದಿದ ವಿಚಾರಗಳನ್ನು ಮರೆಯುವುದಿಲ್ಲ. ಮೇ ತಿಂಗಳಲ್ಲಿ ಗುರುವು ಲಾಭಸ್ಥಾನಕ್ಕೆ ಪ್ರವೇಶಿಸುವ ಕಾರಣ ನಿರೀಕ್ಷಿಸಿದ ಯಶಸ್ಸು ಇರುತ್ತದೆ. ವಿದ್ಯಾರ್ಥಿಗಳಿಗೆ ಗುರುಹಿರಿಯರ ಅನುಗ್ರಹ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಪಡೆಯುವರು. ವಿದೇಶದಲ್ಲಿ ಅಧ್ಯಯನ ನಡೆಸುವ ಅವಕಾಶ ಒಲಿದು ಬರುವ ಸಾಧ್ಯತೆ ಇದೆ.
ಹಣಕಾಸು: ಸಂಪಾದನೆಯೊಂದಿಗೆ ಉಳಿತಾಯಕ್ಕೂ ಇದು ಶುಭ ಕಾಲ
ಕಟಕ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದಲ್ಲಿ ಗುರುವು ಉನ್ನತ ಮಟ್ಟದ ಆದಾಯ ನೀಡುತ್ತಾನೆ. ಸಮಯಕ್ಕೆ ತಕ್ಕಂತೆ ಹಣ ಸಂಪಾದಿಸಿಬಲ್ಲಿರಿ. ಭವಿಷ್ಯಕ್ಕಾಗಿ ಹಣವನ್ನೂ ಉಳಿತಾಯ ಮಾಡುವಿರಿ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯಲಿದೆ. ಸೀಮಿತ ಮಾಡಿದ ಕೆಲಸಗಳಿಗೆ ಮಾತ್ರ ಹಣ ವಿನಿಯೋಗಿಸುವಿರಿ. ಈ ವರ್ಷ ಅನಿರೀಕ್ಷಿತ ಧನಲಾಭವಿರುತ್ತದೆ. ಖರ್ಚು ವೆಚ್ಚಗಳು ಕಡಿಮೆಯಾಗಲಿವೆ. ಕೌಟುಂಬಿಕ ಜವಾಬ್ದಾರಿಗಳನ್ನು ಸರಿದೂಗಿಸಲು ಹಣ ಖರ್ಚಾಗುತ್ತದೆ. ತಂದೆಯ ಕಡೆಯಿಂದ ಹಣದ ಸಹಾಯ ದೊರೆಯುತ್ತದೆ.
ಮಕ್ಕಳ ವಿಚಾರ: ಮಕ್ಕಳಿಂದ ನಿಮಗೆ ಉತ್ತಮ ಭವಿಷ್ಯ
ನಿಮ್ಮ ಕುಟುಂಬದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ನೀವೇ ಕಾರಣರಾಗುವಿರಿ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧ ಇರಲಿದೆ. ಸೋದರ ಸೋದರಿಯ ಸಹಾಯ ಸಹಕಾರ ನಿಮಗೆ ದೊರೆಯಲಿದೆ. ಮೊದಲ ಆದ್ಯತೆಯನ್ನು ಕುಟುಂಬದವರ ಆರೋಗ್ಯಕ್ಕೆ ನೀಡುವಿರಿ. ಶಾಂತಿ ನೆಮ್ಮದಿಯ ಜೀವನ ಸಿಗುತ್ತದೆ. ಮಕ್ಕಳ ವಿಚಾರದಲ್ಲಿ ಹಿರಿಯರ ಮನಸ್ಸನ್ನು ಗೆಲ್ಲುವಿರಿ. ಕುಟುಂಬದ ಸಮೇತ ವಿದೇಶಕ್ಕೆ ತೆರಳಲು ಅವಕಾಶ ಸಿಗಬಹುದು. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಮಕ್ಕಳಿಂದ ನಿಮಗೆ ಉತ್ತಮ ಭವಿಷ್ಯ ಸಿಗುವ ನಿರೀಕ್ಷೆ ಇರುತ್ತದೆ.
ವಿವಾಹ ಮತ್ತು ದಾಂಪತ್ಯ: ಸಂತಸಕ್ಕೆ ಪಾರವಿಲ್ಲ
ಕಟಕ ರಾಶಿಯಲ್ಲಿ ಏಪ್ರಿಲ್ ನಂತರ ವಿವಾಹವಾಗುತ್ತದೆ. ಅನಿರೀಕ್ಷಿತವಾಗಿ ವಿವಾಹ ನಿಶ್ಚಯವಾಗಲಿದೆ. ದಂಪತಿಗಳ ನಡುವೆ ಅನ್ಯೋನ್ಯತೆ ಬೆಳೆಯುತ್ತದೆ. ಕೌಟುಂಬಿಕ ಜೀವನದಲ್ಲಿ ವಿವಾದಗಳು ಬಹುಕಾಲ ಉಳಿಯದು. ಪರಸ್ಪರ ಒಬ್ಬರ ಮಾತನ್ನು ಒಬ್ಬರು ಗೌರವಿಸುವ ಕಾರಣ ಸಂತಸಕ್ಕೆ ಪಾರವಿರುವುದಿಲ್ಲ. ದೂರವಾಗಿದ್ದ ದಂಪತಿಗಳು ಮತ್ತೊಮ್ಮೆ ಒಂದಾಗಿ ಬಾಳುತ್ತಾರೆ. ಬೇರೆಯವರ ಮಾತನ್ನು ಕೇಳಬಾರದು. ಹಿರಿಯರ ಜೀವನದಿಂದ ಪಾಠ ಕಲಿತು ಬಾಳುತ್ತಾರೆ.
ವ್ಯಾಪಾರ ಮತ್ತು ವ್ಯವಹಾರ: ಹಣದ ತೊಂದರೆ ಎದುರಾಗುವುದಿಲ್ಲ
ಕಟಕ ರಾಶಿಯವರು ಈ ವರ್ಷ ವ್ಯಾಪಾರ ವ್ಯವಹಾರದಲ್ಲಿ ಉನ್ನತ ಮಟ್ಟ ತಲುಪುವಿರಿ. ಆತ್ಮೀಯರ ಪಾಲುಗಾರಿಕೆಯಿಂದ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ನಿಮ್ಮ ಅಗತ್ಯಗಳಿಗೆ ಎಲ್ಲರೂ ಸ್ಪಂದಿಸುತ್ತಾರೆ. ನಿಮ್ಮ ಉತ್ಸಾಹದ ಮಾತು ಇತರರನ್ನು ಹುರಿದುಂಬಿಸಲಿದೆ. ಈ ಸಂವತ್ಸರದಲ್ಲಿ ನಿಮಗೆ ಹಣದ ತೊಂದರೆ ಎದುರಾಗುವುದಿಲ್ಲ. ಕಾರ್ಯಕ್ಷೇತ್ರದಲ್ಲಿ ಎದುರಾಗುವ ವಿವಾದಗಳನ್ನು ಮಾತುಕತೆಯಿಂದಲೇ ಗೆಲ್ಲಬೇಕು. ಕುಟುಂಬದ ಸದಸ್ಯರ ಸಹಾಯ ದೊರೆಯುತ್ತದೆ. ಮಕ್ಕಳ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ.
ವಾಹನ ವಿಚಾರ: ವಾಹನ ಬದಲಾವಣೆ ಸಾಧ್ಯತೆ
ಆತ್ಮೀಯರ ಜೊತೆ ವಾಹನ ಬದಲಾವಣೆ ಮಾಡಿಕೊಳ್ಳುವಿರಿ. ವಾಯುಯಾನ ಮಾಡುವ ಮಾಡುವ ಸಾಧತೆಗಳಿವೆ. ಕೆಂಪು ಬಣ್ಣದ ವಾಹನ ಕೊಳ್ಳುವ ಸಾಧ್ಯತೆಯಿದೆ. ನಿಮ್ಮ ಬಳಿ ಇರುವ ಹಳೆಯ ವಾಹನವನ್ನು ಆತ್ಮೀಯರಿಗೆ ಉಡುಗೊರೆಯಾಗಿ ನೀಡುವಿರಿ. ಐಷಾರಾಮಿ ವಾಹನ ಕೊಳ್ಳುವಿರಿ. ವಾಹನ ಚಾಲನೆ ಮಾಡುವುದು ನಿಮ್ಮ ಇಷ್ಟದ ಹವ್ಯಾಸ ಆಗಲಿದೆ.
ಆರೋಗ್ಯದ ವಿಚಾರ: ಯೋಗ, ಪ್ರಾಣಾಯಾಮ ಅಭ್ಯಾಸ ಮಾಡಿ
ಕಟಕ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದಲ್ಲಿ ಮಾನಸಿಕ ಒತ್ತಡವು ಬಹಳವಾಗಿ ಕಾಡುತ್ತದೆ. ನೀವು ವಾಯು ವಿಕೋಪದಿಂದ ಬಳಲುವಿರಿ. ಕೈಕಾಲುಗಳಲ್ಲಿ ತೊಂದರೆ ಕಾಣಬಹುದು. ನೀರಿನಿಂದ ಸಂಭವಿಸುವ ತೊಂದರೆಗಳೇ ಹೆಚ್ಚು. ಗಂಟಲು ಅಥವಾ ಮೂಗಿನಲ್ಲಿ ಪದೇಪದೆ ಅಧಿಕ ನೋವು ಉಂಟಾಗಬಹುದು. ಅಪಾಯಕಾರಿ ಕೆಲಸ ಮಾಡುವ ವೇಳೆ ಎಚ್ಚರಿಕೆ ಇರಲಿ. ಇಲ್ಲದೆ ಹೋದರೆ ಕೈ ಕಾಲುಗಳಿಗೆ ಪೆಟ್ಟಾಗಬಹುದು. ಆಹಾರ ಪದ್ಧತಿಯಲ್ಲಿ ನೀವೇ ನಿಯಮವನ್ನು ರೂಪಿಸಿಕೊಳ್ಳಿರಿ. ಯೋಗ ಮತ್ತು ಪ್ರಾಣಾಯಾಮದಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ಪರಿಹಾರಗಳು
1) ಪ್ರತಿದಿನ ದಕ್ಷಿಣಾಮೂರ್ತಿಯ ಸ್ತೋತ್ರ ಪಠಿಸುವುದರಿಂದ ಅಥವ ಕೇಳುವುದರಿಂದ ಆತ್ಮಶಕ್ತಿ ಹೆಚ್ಚುತ್ತದೆ. ವಾಕ್ ಶುದ್ಧಿ ಉಂಟಾಗಲಿದೆ.
2) ಬಂಗಾರದ ಬಣ್ಣದ ಬಟ್ಟೆ ಮತ್ತು ಅಕ್ಕಿಯನ್ನು ದಾನ ನೀಡುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
3) ಗುರುಗಳನ್ನು ಸತ್ಕರಿಸಿದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.
4) ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು.
5) ಬಿಳಿ ಮತ್ತು ಕೆಂಪು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
(ಬರಹ: ಎಚ್.ಸತೀಶ್, ಜ್ಯೋತಿಷಿ, ಹೊಸಕೆರೆಹಳ್ಳಿ, ಬೆಂಗಳೂರು)
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ. To read more on Ugadi festival and culture related stories, please visit 'HT Kannada' website)