ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಿ ವಿಧಾನ; ಪೂಜೆಗೆ ಬೇಕಾದ ಸಾಮಗ್ರಿಗಳೇನು, ಬಾಲ ಗೋಪಾಲನನ್ನು ಪೂಜಿಸುವುದು ಹೇಗೆ?
Aug 21, 2024 12:24 PM IST
ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಿ ವಿಧಾನ; ಪೂಜೆಗೆ ಬೇಕಾದ ಸಾಮಗ್ರಿಗಳೇನು, ಬಾಲ ಗೋಪಾಲನನ್ನು ಪೂಜಿಸುವುದು ಹೇಗೆ?
Krishna Janmashtami 2024: ಕೃಷ್ಣ ಜನ್ಮಾಷ್ಟಮಿಗೆ ದಿನಗಣನೆ ಆರಂಭವಾಗಿದೆ. ಉಡುಪಿ, ಇಸ್ಕಾನ್ ಸೇರಿದಂತೆ ದೇಶಾದ್ಯಂತ ವಿವಿಧ ಕೃಷ್ಣನ ದೇವಾಲಯಗಳಲ್ಲಿ ಜನ್ಮಾಷ್ಟಮಿ ಆಚರಣೆಗೆ ಸಕಲ ಸಿದ್ದತೆ ನಡೆಯುತ್ತಿದೆ. ಕೃಷ್ಣನ ಪೂಜಾ ವಿಧಾನ ಹೇಗೆ, ಏನೆಲ್ಲಾ ಸಾಮಗ್ರಿಗಳು ಬೇಕು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ದಿನಗಣನೆಯಾಗುತ್ತಿದೆ. ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಇದನ್ನು ಕೃಷ್ಣಾಷ್ಟಮಿ, ಕೃಷ್ಣ ಜಯಂತಿ, ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ಈ ಬಾರಿ ಆಗಸ್ಟ್ 26, ಸೋಮವಾರಂದು ಜನ್ಮಾಷ್ಟಮಿ ಆಚರಿಸಲಾಗುತ್ತಿದೆ.
ತಾಜಾ ಫೋಟೊಗಳು
ಈ ಬಾರಿ ಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷವಾಗಿದೆ. ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ಬಾರಿ ಜನ್ಮಾಷ್ಟಮಿಯಂದು ರೋಹಿಣಿ ನಕ್ಷತ್ರದ ಜೊತೆ ಅಷ್ಟಮಿ ತಿಥಿ ಕೂಡಿ ಬಂದಿದೆ, ವೃಷಭ ರಾಶಿಯಲ್ಲಿ ಕೃಷ್ಣ ಜನಿಸಿದ್ದು ಈ ದಿನ ಚಂದ್ರನು ವೃಷಭ ರಾಶಿಯಲ್ಲಿದ್ದಾನೆ. ಜೊತೆಗೆ ವಾಸುದೇವ ಯೋಗ ಕೂಡಾ ರಚನೆ ಆಗುತ್ತಿದೆ. ಇಷ್ಟೆಲ್ಲಾ ವಿಶೇಷತೆಗಳ ನಡುವೆ ಈ ಬಾರಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸುವುದು, ಪೂಜೆಗೆ ಬೇಕಾದ ಸಾಮಗ್ರಿಗಳೇನು? ಪೂಜಾ ವಿಧಿ ವಿಧಾನ ಹೇಗೆ? ಇಲ್ಲಿದೆ ಮಾಹಿತಿ.
ಪೂಜೆಗೆ ಬೇಕಾಗಿರುವ ಸಾಮಗ್ರಿಗಳು
- ಕೃಷ್ಣನ ಫೋಟೋ ಅಥವಾ ವಿಗ್ರಹ
- ವಿವಿಧ ರೀತಿಯ ಹೂಗಳು, ತುಳಸಿ
- ದೀಪಗಳು, ಕರ್ಪೂರ, ಧೂಪ
- ನೈವೇದ್ಯ
- ಹಣ್ಣುಗಳು
- ಅಕ್ಷತೆ
- ಪಂಚಾಮೃತ ಸಾಮಗ್ರಿಗಳು
ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ
ಜನ್ಮಾಷ್ಟಮಿಯ ದಿನ ಬೆಳಗ್ಗೆ ಸೂರ್ಯೂದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ.
ರಂಗೋಲಿ ಬಿಟ್ಟು, ದೇವರ ಮುಂದೆ ದೀಪ ಹಚ್ಚಿ ಸಂಕಲ್ಪ ಮಾಡಿಕೊಳ್ಳಿ
ಕೃಷ್ಣನ ಫೋಟೋ/ ವಿಗ್ರಹವನ್ನು ಸ್ವಚ್ಚಗೊಳಿಸಿ ಕೃಷ್ಣನ ಮಂತ್ರವನ್ನು ಹೇಳುತ್ತಾ ಹಾಲು ಮೊಸರು, ಜೇನುತುಪ್ಪ, ತುಪ್ಪ, ನೀರಿನಿಂದ ಅಭಿಷೇಕ ಮಾಡಿ.
ಮತ್ತೆ ಕೃಷ್ಣ ವಿಗ್ರಹವನ್ನು ಸ್ವಚ್ಚಗೊಳಿಸಿ, ಶುದ್ಧ ಬಟ್ಟೆಯಲ್ಲಿ ಒರೆಸಿ ಚಂದನ ಹಚ್ಚಿ ಹೂಗಳಿಂದ ಅಲಂಕಾರ ಮಾಡಿ
ಕೃಷ್ಣನ ಮಂತ್ರಗಳು, ಅಷ್ಟೋತ್ತರ ಜಪಿಸಿ ಪೂಜೆ ಮಾಡಿ
ಕೃಷ್ಣನಿಗೆ ಪ್ರಿಯವಾದ ನೈವೇದ್ಯಗಳನ್ನು ಇಟ್ಟು ಕೊನೆಗೆ ಮಂಗಳಾರತಿ ಮಾಡಿ. ನೆರೆ ಹೊರೆಯವರನ್ನೂ ಪೂಜೆಗೆ ಆಹ್ವಾನಿಸಿ ಪ್ರಸಾದ ನೀಡಿ.
ಆ ದಿನ ಸಾಧ್ಯವಾದರೆ ಬೆಳಗಿನಿಂದ ಮಧ್ಯರಾತ್ರಿವರೆಗೂ ಉಪವಾಸ ಮಾಡಿ
ಕೆಲವರು ಕೃಷ್ಣನಿಗಾಗಿ ಪುಟ್ಟ ತೊಟ್ಟಿಲನ್ನು ಮಾಡಿ ಪೂಜಿಸುತ್ತಾರೆ. ಬಾಲಕೃಷ್ಣನ ಹೆಜ್ಜೆಗಳನ್ನು ಬರೆದು ತೊಟ್ಟಿಲಲ್ಲಿ ಇಟ್ಟು ತೂಗುತ್ತಾರೆ.
ನಿಮ್ಮ ಹತ್ತಿರದ ಕೃಷ್ಣ ದೇವಸ್ಥಾನಗಳಿಗೆ ಹೋಗಿ ಭಜನೆಯಲ್ಲಿ ಪಾಲ್ಗೊಳ್ಳಿ.
ಬಾಲ ಗೋಪಾಲನ ಪೂಜೆ: ಕೃಷ್ಣಾಷ್ಟಮಿ, ದೀಪಾವಳಿಯಂದು ಬಹಳಷ್ಟು ಜನರು ಬಾಲ ಗೋಪಾಲನನ್ನು ಪೂಜಿಸುತ್ತಾರೆ. ಕೃಷ್ಣನು ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದರು. ಬಾಲ ಗೋಪಾಲನ ಲೀಲೆಗಳನ್ನು ಎಲ್ಲರೂ ಕೇಳಿರುತ್ತೇವೆ. ಹಾಗೇ ಬಾಲ ಗೋಪಾಲನನ್ನು ಪೂಜಿಸಿದರೆ ಸಂತಾನ ಫಲ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಕಷ್ಟಗಳೆಲ್ಲಾ ದೂರಾಗುತ್ತದೆ ಎಂಬ ನಂಬಿಕೆ ಇದೆ. ಬಾಲ ಗೋಪಾಲನ ಪೂಜೆ ಮಾಡುವಾಗ ಕೊಳಲು, ಬೆಣ್ಣೆ, ಕಲ್ಲು ಸಕ್ಕರೆ, ನವಿಲು ಗರಿ, ತೊಟ್ಟಿಲು ಅವಶ್ಯಕ. ಮನೆಯಲ್ಲಿ ಬಾಲ ಕೃಷ್ಣನ ಹೆಜ್ಜೆಗಳನ್ನು ಬರೆದು ಗೋಪಾಲನನ್ನು ಪುಟ್ಟ ತೊಟ್ಟಿಲಿನಲ್ಲಿ ಇಟ್ಟು, ತೂಗಿ ಪೂಜಿಸಬೇಕು. ನಿಯಮಾನುಸಾರ ಪೂಜೆ ಮಾಡಬೇಕು ಎಂದುಕೊಳ್ಳುವವರು ಪುರೋಹಿತರನ್ನು ಭೇಟಿ ಮಾಡಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.