ಕುಂಭ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಆರೋಗ್ಯದ ಬಗ್ಗೆ ಎಚ್ಚರ ಅವಶ್ಯ, ಉದ್ಯೋಗ ಕ್ಷೇತ್ರದಲ್ಲಿ ಸಿಗಲಿದೆ ಯಶಸ್ಸು
Mar 30, 2024 12:44 PM IST
ಕುಂಭ ರಾಶಿ ಯುಗಾದಿ ಭವಿಷ್ಯ
- ಯುಗಾದಿ ರಾಶಿ ಭವಿಷ್ಯ: ಭವಿಷ್ಯದ ಬಗ್ಗೆ ಸಾಕಷ್ಟು ಚಿಂತೆ ಮಾಡುವ ಕುಂಭ ರಾಶಿಯವರು ವಿಶೇಷ ಸ್ಮರಣಶಕ್ತಿ ಹೊಂದಿರುತ್ತಾರೆ. ಅತಿಯಾದ ಪ್ರಾಮಾಣಿಕತೆಯೇ ಇವರ ಬದುಕಿಗೆ ಮುಳುವಾಗುತ್ತದೆ. ಕುಂಭ ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದರಲ್ಲಿ ಬೆಲ್ಲ. ಜ್ಯೋತಿಷಿ ಎಚ್. ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.
ಕುಂಭ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಧನಿಷ್ಠ ನಕ್ಷತ್ರದ 3 ಮತ್ತು 4ನೇ ಪಾದ, ಶತಭಿಷ ನಕ್ಷತ್ರದ 1,2,3 ಮತ್ತು 4ನೇ ಪಾದಗಳು, ಪೂರ್ವಭಾದ್ರ ನಕ್ಷದ 1, 2ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಕುಂಭ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಗು ಅಥವಾ ಗೆ ಆದಲ್ಲಿ ಧನಿಷ್ಠ ನಕ್ಷತ್ರ ಗೊ, ಸ, ಸಿ ಅಥವಾ ಸು ಆದಲ್ಲಿ ಶತಭಿಷ ನಕ್ಷತ್ರ ಹಾಗು ಸೊ, ದ ಅಥವಾ ದಿ ಆದಲ್ಲಿ ಪೂರ್ವಾಭಾದ್ರ ನಕ್ಷತ್ರ ಹಾಗೂ ಕುಂಭ ರಾಶಿ ಆಗುತ್ತದೆ. ಅದ್ಭುತ ಸ್ಮರಣಶಕ್ತಿ ಹೊಂದಿರುವ ಕುಂಭರಾಶಿಯವರು ಎಲ್ಲರೊಂದಿಗೂ ವಿವೇಕದಿಂದ ವರ್ತಿಸುತ್ತಾರೆ. ಯಾರಿಗೂ ಮೋಸ ಮಾಡುವ ಉದ್ದೇಶ ಇರುವುದಿಲ್ಲ. ಇತರರಿಂದ ಮಾನಸಿಕ ಬೆಂಬಲವನ್ನು ನಿರೀಕ್ಷಿಸುತ್ತಾರೆ. ವಿಶಿಷ್ಟ ರೀತಿಯಲ್ಲಿ ಜೀವನ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇವರಿಂದ ಕಲಿಯಬೇಕಾದ್ದು ಸಾಕಷ್ಟಿರುತ್ತದೆ.
ತಾಜಾ ಫೋಟೊಗಳು
ಕುಂಭ ರಾಶಿಯ ಗುಣಲಕ್ಷಣಗಳು (Aquarius characteristics in Kannada)
ಕುಂಭ ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ನಿಗೂಢ ಮನಸ್ಸು ಇರುತ್ತದೆ. ಕುತೂಹಲಕಾರಿ ವಿಚಾರಗಳನ್ನು ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಇವರು ಇರುವ ಕಡೆ ಸಂತೋಷಕ್ಕೆ ಕೊರತೆ ಇರುವುದಿಲ್ಲ. ಇವರ ಸ್ಮರಣಶಕ್ತಿ ವಿಶೇಷವಾಗಿರುತ್ತದೆ. ವಿವೇಕದಿಂದ ವರ್ತಿಸುತ್ತಾರೆ. ಬೇರೆಯವರು ಅನುಸರಿಸಬೇಕಾದಂತಹ ಅನೇಕ ಗುಣಗಳು ಇವರಲ್ಲಿರುತ್ತದೆ. ಯಾರನ್ನೂ ದ್ವೇಷಿಸದೆ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತನೆ ಇರುತ್ತದೆ. ಯಾರಿಗೂ ಮೋಸ ಮಾಡುವುದಿಲ್ಲ. ಮಾನಸಿಕವಾಗಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಪರಿಹರಿಸುತ್ತಾರೆ. ಆದರೆ ತಮ್ಮ ಮೇಲೆಯೇ ತಮಗೆ ನಂಬಿಕೆ ಕಡಿಮೆ ಇರುತ್ತದೆ. ಕನಿಷ್ಠ ಪಕ್ಷ ಬೇರೆಯವರಿಂದ ಇವರಿಗೆ ಮಾನಸಿಕ ಬೆಂಬಲದ ಅಗತ್ಯವಿರುತ್ತದೆ.
ಈ ರಾಶಿಯಲ್ಲಿ ಹುಟ್ಟಿದ ಪುರುಷರಿಗೆ ಆವಿಷ್ಕಾರ ಮನೋಭಾವವಿರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣತಿ ಗಳಿಸುತ್ತಾರೆ. ಗಣಿತಶಾಸ್ತ್ರವೆಂದರೆ ವಿಶೇಷ ಅಕ್ಕರೆ. ಇವರು ಕೈ ಹಾಕಿದ ಬಹುತೇಕ ಕೆಲಸ-ಕಾರ್ಯಗಳು ಯಶಸ್ವಿಯಾಗುತ್ತವೆ. ಎಂದಿಗೂ ತಮ್ಮವರನ್ನು ರಕ್ಷಿಸಲು ತಪ್ಪು ದಾರಿ ಹಿಡಿಯುವುದಿಲ್ಲ. ಅತಿಯಾದ ಪ್ರಾಮಾಣಿಕತೆ ತೊಂದರೆಗೆ ಕಾರಣವಾಗುತ್ತದೆ. ಜೀವನವನ್ನು ನಿರ್ದಿಷ್ಟ ರೀತಿಯಲ್ಲಿ ನಡೆಸಿ ಎಲ್ಲರ ಗಮನ ಸೆಳೆಯುತ್ತಾರೆ. ಸಾಮಾನ್ಯವಾಗಿ ಇವರಿಗೆ ಕೋಪ ಬರುವುದಿಲ್ಲ. ಕೋಪ ಬಂದಲ್ಲಿ ಆವೇಶದಿಂದ ವರ್ತಿಸುತ್ತಾರೆ. ತಪ್ಪು ಮಾಡಿದವರನ್ನು ದೂರ ಮಾಡದೆ ಹೋದರೂ ತಪ್ಪನ್ನು ಒಪ್ಪುವುದಿಲ್ಲ.
ಸಾಮಾನ್ಯವಾಗಿ ಈ ರಾಶಿಯಲ್ಲಿ ಜನಿಸಿದವರು ರಹಸ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇವರ ಮನಸ್ಸಿನಲ್ಲಿ ಇರುವ ವಿಚಾರವನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಇವರಿಗೆ ಬಹುತೇಕ ಎಲ್ಲಾ ವಿಚಾರಗಳ ಅರಿವು ಇರುತ್ತದೆ. ಬರಹದಲ್ಲಿ ಇವರಿಗೆ ಅದೃಷ್ಟವಿದೆ. ಸಮಾಜದಲ್ಲಿ ಜನಪ್ರಿಯ ವ್ಯಕ್ತಿಯಾಗಿ ಬಾಳುತ್ತಾರೆ. ಇವರಿಂದ ಕಲಿಯಬೇಕಾದ ವಿಚಾರಗಳು ಹಲವಾರು ಇರುತ್ತವೆ.
ಕುಂಭ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ
ಕುಂಭ ರಾಶಿಗೆ ಸೇರಿದವರು ನೆನಪಿಟ್ಟುಕೊಳ್ಳಬೇಕಾದ ವಿಷಯಗಳಿವು. ಶುಭ ದಿನಾಂಕಗಳು: 2, 3, 7 ಮತ್ತು 9. ಶುಭ ವಾರಗಳು: ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ, ಶುಭ ವರ್ಣ: ಹಿತ್ತಾಳೆ, ಹಸಿರು, ನೀಲಿ. ಅಶುಭ ವರ್ಣ: ಹಳದಿ, ಕ್ರೀಂ, ಬಿಳಿ ಮತ್ತು ಕೆಂಪು, ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಶುಭ ತಿಂಗಳು: ಜೂನ್ 15 ರಿಂದ ಜುಲೈ 14 ಮತ್ತು ಡಿಸೆಂಬರ್ 15ರಿಂದ ಜನವರಿ14. ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ, ಹೊಂದಾಣಿಕೆ ಇರುವ ರಾಶಿಗಳು: ಕುಂಭ, ವೃಷಭ ಮತ್ತು ಕನ್ಯಾ. ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ ಮತ್ತು ಸಿಂಹ.
ಶ್ರೀ ಕ್ರೋಧಿನಾಮ ಸಂವತ್ಸರದ ಕುಂಭ ರಾಶಿಯ ಗೋಚಾರ ಫಲ
ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಕುಂಭ ರಾಶಿಯವರಿಗೆ ಉತ್ತಮ ಫಲಗಳು ಲಭ್ಯವಾಗುತ್ತವೆ. ಶನಿ ಮತ್ತು ರಾಹು ಗ್ರಹಗಳು ಸಂವತ್ಸರದ ಕೊನೆಯವರೆಗೂ ಶಕ್ತಿಶಾಲಿಯಾಗಿರುತ್ತವೆ. ಆದರೆ ಕೆಲಸ-ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ದೇವಾಲಯ ಅಥವಾ ಧಾರ್ಮಿಕ ಸಂಸ್ಥೆಯನ್ನು ಕಟ್ಟುವ ಇಲ್ಲದೆ ದುರಸ್ತಿ ಮಾಡುವ ಗುರಿ ಇದ್ದಲ್ಲಿ ಮೇ ತಿಂಗಳಿನಿಂದ ಸಾಧ್ಯವಾಗುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಏಪ್ರಿಲ್ ತಿಂಗಳ ದ್ವಿತೀಯ ಭಾಗ ಮತ್ತು ಮೇ ತಿಂಗಳ ಆರಂಭದಲ್ಲಿ ಅನಾರೋಗ್ಯವಿರುತ್ತದೆ. ಹಿರಿಯ ಅಧಿಕಾರಿಗಳ ಜೊತೆ ಅನಾವಶ್ಯಕ ವಾದವಿವಾದಗಳಿರುತ್ತವೆ. ಉಳಿದ ದಿನಗಳಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಕೆಲಸ-ಕಾರ್ಯಗಳ ವೇಳೆ ಎಚ್ಚರಿಕೆಯಿಂದ ವ್ಯವಹರಿಸಬೇಕು.
ಅನುಮಾನದ ಗುಣವು ಪ್ರೀತಿ-ವಿಶ್ವಾಸದ ಕೊರತೆಗೆ ಕಾರಣವಾಗಲಿದೆ
ಕುಂಭ ರಾಶಿಯವರಿಗೆ ಪ್ರತಿಯೊಬ್ಬರ ಬಗ್ಗೆ ಉತ್ತಮ ಅಭಿಪ್ರಾಯವಿರುತ್ತದೆ. ಹಾಗೆಯೇ ಅನುಮಾನ ಪ್ರವೃತ್ತಿ ಇರುವ ಕಾರಣ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಯಾರೊಂದಿಗೂ ಪ್ರೀತಿ, ವಿಶ್ವಾಸವನ್ನು ಹಂಚಿಕೊಳ್ಳಲಾರಿರಿ. ಆದರೆ ಮೇ ತಿಂಗಳಿನಿಂದ ತಮ್ಮ ತಪ್ಪನ್ನು ತಾವು ಅರಿತುಕೊಂಡು ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಬಾಳುವಿರಿ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವುದಿಲ್ಲ. ಶಾಂತಿ ತಾಳ್ಮೆಯಿಂದ ಜೀವನವನ್ನು ನಡೆಸಲು ಇಷ್ಟಪಡುವಿರಿ. ಯಾವುದೇ ವಾದ ವಿವಾದಗಳಿದ್ದರೂ ಸುಲಭವಾಗಿ ಬಗೆಹರಿಸುವಿರಿ. ಕುಟುಂಬದ ಸದಸ್ಯರ ತಪ್ಪುಗಳನ್ನು ಗಮನಿಸದೆ ಮತ್ತು ಆಕ್ಷೇಪಿಸಿದೆ ಸರಿಪಡಿಸುವ ಕಾರಣ ನೆಮ್ಮದಿ ನೆಲೆಸಿರುತ್ತದೆ. ಮಕ್ಕಳ ಮೇಲೆ ವಿಶೇಷವಾದ ಪ್ರೀತಿ, ವಿಶ್ವಾಸ ತೋರುವಿರಿ. ನಂಬಿದ ವ್ಯಕ್ತಿಗಳು ನಿಮ್ಮಿಂದ ದೂರವಾಗದಂತೆ ವ್ಯವಹರಿಸುವಿರಿ.
ಉದ್ಯೋಗ; ವೃತ್ತಿರಂಗದಲ್ಲಿ ಉನ್ನತ ಸ್ಥಾನಕ್ಕೇರಲಿದ್ದೀರಿ
ಕುಂಭ ರಾಶಿಯವರಿಗೆ ಉದ್ಯೋಗದ ವಿಚಾರದಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಬೆಂಬಲ ದೊರೆಯುತ್ತದೆ. ಕಠಿಣವೆನಿಸಿದ ಕೆಲಸ ಕಾರ್ಯಗಳನ್ನು ಮಾಡಬಲ್ಲಿರಿ. ಕೈ ಹಿಡಿದ ಕೆಲಸ-ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ವೃತ್ತಿ ಕ್ಷೇತ್ರದಲ್ಲಿ ಉನ್ನತಮಟ್ಟದ ಸ್ಥಾನಮಾನ ಲಭಿಸುತ್ತದೆ. ಬಿಡುವಿಲ್ಲದ ಜವಾಬ್ದಾರಿಯು ಮನಸ್ಸಿಗೆ ಬೇಸರವನ್ನು ಉಂಟು ಮಾಡುತ್ತದೆ. ಉದ್ಯೋಗ ಬದಲಿಸಬೇಕಾದ ಪ್ರಸಂಗವಿದ್ದರೆ ಉತ್ತಮ ಅವಕಾಶಗಳು ನಿಮ್ಮದಾಗುತ್ತವೆ. ಒಳ್ಳೆಯ ಹೆಸರು ದೊರೆಯಲಿದೆ. ನಿಮಗೆ ಅನುಕೂಲವೆನಿಸುವ ವಾತಾವರಣ ಉಂಟಾಗಲಿದೆ. ಸ್ವಂತ ಉದ್ದಿಮೆ ಸ್ಥಾಪಿಸುವ ಆಸೆ ಇದ್ದಲ್ಲಿ ಈಗ ಸಾಧ್ಯವಾಗಲಿದೆ.
ವಿದ್ಯಾಭ್ಯಾಸ; ವಿದ್ಯಾರ್ಥಿಗಳಿಗೆ ಏಕಾಗ್ರತೆಯೇ ಯಶಸ್ಸಿನ ಕೀಲಿಕೈ
ಕುಂಭ ರಾಶಿಗೆ ಸೇರಿದ ವಿದ್ಯಾರ್ಥಿಗಳು ಕೆಲವೊಮ್ಮೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಹೆಚ್ಚಿನ ವಿಶ್ವಾಸದಿಂದ ಕಲಿಕೆಯಲ್ಲಿ ಮುಂದಿರುತ್ತಾರೆ. ವಿದ್ಯಾಭ್ಯಾಸವು ಆರಂಭಿಸುವವರೆಗೂ ಒಂದ ರೀತಿಯ ಸೋಮಾರಿತನವನ್ನು ಕಾಡುತ್ತದೆ. ಆದರೆ ಹಿರಿಯರ ಮಾತಿಗೆ ಗೌರವ ನೀಡಿ ಕಠಿಣ ಪ್ರಯತ್ನದಿಂದ ಕಲಿಕೆಯನ್ನು ಮುಂದುವರಿಸುತ್ತಾರೆ. ಸತತ ಪ್ರಯತ್ನದಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಏಕಾಗ್ರತೆ ನಿಮ್ಮನ್ನು ಸದಾ ಕಾಪಾಡುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಕುಟುಂಬದ ಹಿರಿಯರ ಮತ್ತು ಶಿಕ್ಷಕರ ಬೆಂಬಲ ದೊರೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆತ್ಮೀಯರ ಸಲಹೆಯನ್ನು ಪಡೆಯುವುದು ಒಳ್ಳೆಯದು. ಶ್ರದ್ಧೆಯಿಂದ ಯಾವುದೇ ಕೆಲಸವನ್ನು ಸಾಧಿಸಬಹುದು ಎಂಬ ಸತ್ಯ ತಿಳಿದಿರುತ್ತದೆ. ನಿಮ್ಮಲ್ಲಿನ ಸಮರ್ಪಣಾ ಮನೋಭಾವ ಹೊಸ ಅವಕಾಶಗಳನ್ನು ನೀಡುತ್ತದೆ.
ಹಣಕಾಸಿನ ಪರಿಸ್ಥಿತಿ; ಹಣ ಉಳಿಸುವ ಯೋಚನೆ ಮಾಡಲಿದ್ದೀರಿ
ಕುಂಭ ರಾಶಿಗೆ ಸೇರಿದವರಿಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ನಿಧಾನಗತಿಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣವನ್ನು ಉಳಿಸುವ ಯೋಚನೆ ಮಾಡುವುದು ಒಳ್ಳೆಯದು. ಸಾಲ ಕೊಡುವುದು ಮತ್ತು ತರುವುದನ್ನು ಸಂಪೂರ್ಣ ನಿಯಂತ್ರಿಸುವಿರಿ. ಇದರಿಂದ ಯಾವುದೇ ರೀತಿಯ ತೊಂದರೆಗಳು ಕಂಡುಬರುವುದಿಲ್ಲ. ಹಣದ ಕೊರತೆ ಕಂಡುಬಂದಾಗ ಪ್ರೀತಿಪಾತ್ರರಿಂದ ಸಹಾಯ ದೊರೆಯುತ್ತದೆ.
ಕುಟುಂಬದ ವಿಚಾರ; ನೆಮ್ಮದಿ ಕೆಡಿಸಲಿದೆ ಮನಸ್ತಾಪ
ಕುಂಭ ರಾಶಿಯವರ ಕೌಟುಂಬಿಕ ಸಮಸ್ಯೆಗಳು ಕ್ರಮೇಣ ಕೊನೆಗೊಳ್ಳಲಿದೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯವಿರುತ್ತದೆ. ಕುಟುಂಬದ ಹಿರಿಯರನ್ನು ಗೌರವಿಸುವ ಕಾರಣ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಬಂಧು ಬಳಗದವರ ಜೊತೆ ಉತ್ತಮ ಬಾಂಧವ್ಯ ಇರುವುದಿಲ್ಲ. ಇದರಿಂದಾಗಿ ಕುಟುಂಬದಲ್ಲಿನ ನೆಮ್ಮದಿಗೆ ಕೊರತೆ ಉಂಟಾಗಬಹುದು. ಸಹೋದರ, ಸಹೋದರಿಯ ಜೊತೆಯಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ತಂದೆಯವರಿಗೆ ಅನಾರೋಗ್ಯ ಉಂಟಾಗಬಹುದು. ಇದರಿಂದಾಗಿ ಆತಂಕದ ಪರಿಸ್ಥಿತಿ ಉಂಟಾಗುತ್ತದೆ. ಆದರೆ ಕುಟುಂಬದಲ್ಲಿನ ಸಾಮರಸ್ಯ ಎಂದಿಗೂ ಕಡಿಮೆಯಾಗುವುದಿಲ್ಲ.
ಮಕ್ಕಳ ವಿಚಾರ; ಮಕ್ಕಳ ಆರೋಗ್ಯದ ಬಗ್ಗೆ ಇರಲಿ ಗಮನ
ಕುಂಭ ರಾಶಿಯವರಿಗೆ ಮಕ್ಕಳ ವಿಚಾರದಲ್ಲಿ ಮಿಶ್ರಫಲಗಳು ದೊರೆಯುತ್ತವೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಆದರೆ ಆಹಾರಕ್ರಮದಲ್ಲಿ ಸರಿಯಾದ ಮಾರ್ಗವಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಮಕ್ಕಳಲ್ಲಿ ಆಕ್ರೋಶದ ಮನೋಭಾವ ಹೆಚ್ಚಾಗಿರುತ್ತದೆ. ಕುಟುಂಬದ ಹಿರಿಯ ವ್ಯಕ್ತಿಗಳು ಮಕ್ಕಳ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಬೇಕಾಗುತ್ತದೆ. ಮಕ್ಕಳ ಆರೋಗ್ಯದಲ್ಲಿ ಜೂನ್ ತಿಂಗಳ ನಂತರ ಚೇತರಿಕೆ ಕಂಡುಬರುತ್ತದೆ. ಓದು ಮುಗಿಸಿದವರಿಗೆ ಪ್ರಸಿದ್ಧ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಒಳ್ಳೆಯ ಮಾರ್ಗದರ್ಶನದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ.
ವಿವಾಹ ಮತ್ತು ದಾಂಪತ್ಯ; ಮಾತು ಮನೆ ಕೆಡಿಸಬಹುದು ಎಚ್ಚರ
ಕುಂಭ ರಾಶಿಯವರ ದಾಂಪತ್ಯ ಜೀವನದಲ್ಲಿ ಅನವಶ್ಯಕ ವಾದ, ವಿವಾದಗಳು ಇರುತ್ತವೆ. ಆದರೆ ವೈವಾಹಿಕ ಸಂಬಂಧವು ಕ್ರಮೇಣವಾಗಿ ಬಲಗೊಳ್ಳುತ್ತದೆ. ಕೌಟುಂಬಿಕ ವಿವಾದಗಳಿಂದ ದಂಪತಿಗಳ ನಡುವೆ ಅನಾವಶ್ಯಕ ಒತ್ತಡ ಇರುತ್ತದೆ. ಪತ್ನಿಯ ಕ್ಷಮಾಗುಣ ಕುಟುಂಬದ ಸೌಖ್ಯವನ್ನು ಹೆಚ್ಚಿಸುತ್ತದೆ. ಮಾತಿನ ಮೇಲೆ ಹತೋಟಿ ಹೊಂದಿರುವುದು ಒಳ್ಳೆಯದು. ಜೂನ್ ತಿಂಗಳ ನಂತರ ಯಾವುದೇ ತೊಂದರೆ ಉಂಟಾಗದು. ಅವಿವಾಹಿತರಿಗೆ ಸಂಬಂಧದಲ್ಲಿ ವಿವಾಹ ನಿಶ್ಚಯವಾಗುತ್ತದೆ. ಮಕ್ಕಳ ವಿವಾಹಕ್ಕಾಗಿ ಬೇರೆಯವರಿಂದ ಹಣದ ಸಹಾಯ ದೊರೆಯುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಅನಾವಶ್ಯಕ ಯೋಚನೆ ಇರಲಿದೆ. ಶಾಂತಿಯಿಂದ ಇದ್ದರೆ ಯಾವುದೇ ತೊಂದರೆ ಇರದು. ದಂಪತಿಗಳು ಬೇಸರ ಕಳೆಯಲು ದೀರ್ಘಕಾಲದ ಪ್ರಯಾಣಗಳನ್ನು ಮಾಡಲಿದ್ದಾರೆ.
ವ್ಯಾಪಾರ ವ್ಯವಹಾರ; ಪಾಲುದಾರಿಕೆ ವ್ಯವಹಾರದಿಂದ ಲಾಭ
ಕುಂಭ ರಾಶಿಗೆ ರಾಹುವು ದ್ವಿತೀಯದಲ್ಲಿ ಇರುವ ಕಾರಣ ವ್ಯಾಪಾರ, ವ್ಯವಹಾರಗಳಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಹಣಕಾಸಿನ ತೊಂದರೆ ಇದ್ದಲ್ಲಿ ಆತ್ಮೀಯರು ಸಹಾಯ ನೀಡುತ್ತಾರೆ. ಸ್ವತಂತ್ರವಾಗಿ ನಿರ್ವಹಿಸುವ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಲಾಭ ದೊರೆಯುತ್ತದೆ. ಕುಟುಂಬದ ಸದಸ್ಯರ ಸಹಾಯದಿಂದ ವ್ಯಾಪಾರವನ್ನು ವಿಸ್ತರಿಸುವಿರಿ. ಉತ್ತಮ ಲಾಭ ದೊರೆತರೂ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರಕ್ಕೆ ಸಂಬಂಧಿಸಿದಂತೆ ಕಮಿಷನ್ ಆಧಾರಿತ ಕೆಲಸ ಕಾರ್ಯಗಳನ್ನು ಮಾಡಬಹುದು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಕಾನೂನಿನ ತೊಂದರೆ ಉಂಟಾಗಬಹುದು. ಪಾಲುದಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯವಿರುತ್ತದೆ.
ವಾಹನ ವಿಚಾರ; ವಾಹನ ಚಾಲನೆ ಮಾಡುವಾಗ ಸಾಕಷ್ಟು ಎಚ್ಚರ ಅವಶ್ಯ
ಕುಂಭ ರಾಶಿಯವರಿಗೆ ಈ ವರ್ಷ ಸ್ವಂತ ಬಳಕೆಗಾಗಿ ವಿಶಾಲವಾದ ವಾಹನಕೊಳ್ಳುವ ಯೋಗ ಕಾಣಿಸುತ್ತಿದೆ. ನೀವು ಕಾರು ಅಥವಾ ಇತರ ನಾಲ್ಕು ಚಕ್ರದ ವಾಹನವನ್ನು ಕೊಳ್ಳಬಹುದು. ನಿಮ್ಮ ಬಳಿ ಇರುವ ವಾಹನವನ್ನು ವ್ಯಾಪಾರೋದ್ದೇಶಗಳಿಗಾಗಿ ಬಳಸುವಿರಿ. ಇರುವ ಹಳೆಯ ವಾಹನವನ್ನು ಮಾರಾಟ ಮಾಡಿ ಹೊಸ ವಾಹನವನ್ನು ಕೊಳ್ಳುವಿರಿ. ಮಕ್ಕಳಿಗೆ ವಾಹನವನ್ನು ಉಡುಗೊರೆಯಾಗಿ ನೀಡುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ವಾಹನ ಚಾಲನೆ ಮಾಡುವ ವೇಳೆ ಯಾರೊಂದಿಗೂ ಮಾತನಾಡದಿರಿ. ಹಾಗೆಯೇ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಸುವುದನ್ನು ಸಂಪೂರ್ಣ ಬಿಟ್ಟುಬಿಡಿ.
ಆರೋಗ್ಯದ ವಿಚಾರ; ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
ಕುಂಭ ರಾಶಿಯವರಿಗೆ ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಕೈಕಾಲುಗಳಲ್ಲಿ ಊತ ಅಥವಾ ನೋವಿನ ತೊಂದರೆ ಸದಾ ಕಾಡುತ್ತದೆ. ಆದರೆ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯವನ್ನು ಗಳಿಸಬಹುದು. ಆಹಾರಶೈಲಿಯನ್ನು ಬದಲಾಯಿಸಿಕೊಂಡರೆ ಆರೋಗ್ಯದ ತೊಂದರೆ ಕಡಿಮೆಯಾಗುತ್ತದೆ. ಕಲುಷಿತ ಆಹಾರ ಸೇವನೆಯಿಂದ ಹೆಚ್ಚಿನ ತೊಂದರೆ ಉಂಟಾಗಲಿದೆ. ಆದ್ದರಿಂದ ಜೀವನಶೈಲಿಯನ್ನು ಬದಲಿಸಬೇಕು. ಮೂಲವ್ಯಾಧಿಯಂತಹ ತೊಂದರೆ ಇರುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆದರೆ ಯಾವುದೇ ವಿಚಾರವೂ ಅಪಾಯದ ಮಟ್ಟವನ್ನು ತಲುಪುವುದಿಲ್ಲ.
ಪರಿಹಾರಗಳು
1. ಪ್ರತಿದಿನ ನವನಾಗ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮನದಲ್ಲಿರುವ ಆತಂಕ ದೂರವಾಗುತ್ತದೆ.
2. ಮಿಶ್ರವರ್ಣದ ಬಟ್ಟೆ ಮತ್ತು ಹುರುಳಿ ದಾನ ನೀಡುವುದರಿಂದ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ.
3. ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಅಥವಾ ಶ್ರವಣದಿಂದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.
4. ಶ್ರೀ ನರಸಿಂಹ ಸ್ವಾಮಿ ದೇವಾಲದಲ್ಲಿ ಪೂಜೆ ಮಾಡಿಸಿದಲ್ಲಿ ವಿರೋಧಿಗಳ ಹಾವಳಿ ಕಡಿಮೆಯಾಗಲಿದೆ. ಮನದ ಆತಂಕ ದೂರವಾಗಲಿದೆ.
5. ಹಸಿರು ಮತ್ತು ಬಿಳಿ ಬಣ್ಣದ ಕರವಸ್ತ್ರ ಬಳಸುವುದು ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು.
ಬರಹ: ಎಚ್.ಸತೀಶ್, ಜ್ಯೋತಿಷಿ, ಬೆಂಗಳೂರು.ಇಮೇಲ್: sathishaapr23@gmail.com
ಈ ರಾಶಿಗಳ ಯುಗಾದಿ ಭವಿಷ್ಯವನ್ನೂ ಓದಿ
ತುಲಾ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಬುದ್ಧಿವಂತಿಕೆಯ ನಡೆಯಿಂದ ಯಶಸ್ಸು ಖಚಿತ, ಸಾಲದ ವ್ಯವಹಾರ ಸಲ್ಲ
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)