Love Astrology: ಹೊಸ ವರ್ಷದಲ್ಲಿ ನಿಮ್ಮ ದಾಂಪತ್ಯ ಜೀವನ ಹೇಗಿರಲಿದೆ; ಮಿಥುನ, ಕಟಕ ರಾಶಿಯವರ ಭವಿಷ್ಯ
Jan 03, 2024 06:00 PM IST
2024 ಮಿಥುನ, ಕಟಕ ರಾಶಿಯವರ ದಾಂಪತ್ಯ ಭವಿಷ್ಯ
Love Astrology: ಎಲ್ಲಾ ಪತಿ ಪತ್ನಿ ನಡುವೆ ಕಲಹ ಇದ್ದೇ ಇರುತ್ತದೆ. ಆದರೆ ಅದು ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇಬ್ಬರಲ್ಲಿ ಒಬ್ಬರು ಸೋತರೆ ಅಥವಾ ಇಬ್ಬರೂ ಅನುಸರಿಕೊಂಡು ಹೋದರೆ ಜೀವನ ಹಾಲು ಜೇನಿನಂತೆ ಇರುತ್ತದೆ. ಹೊಸ ವರ್ಷದಲ್ಲಿ ಯಾವ ಯಾವ ರಾಶಿಯವರ ದಾಂಪತ್ಯ ಜೀವನ ಹೇಗಿರಲಿದೆ ನೋಡೋಣ.
Love Astrology: 2024 ಹೊಸ ವರ್ಷಕ್ಕೆ ಅಡಿ ಇಟ್ಟಿದ್ದೇವೆ. ಈ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಲು ಎಲ್ಲರೂ ಕಾತರರಾಗಿರುತ್ತಾರೆ. ಹಾಗಾದರೆ ಇಂದಿನ ಲೇಖನದಲ್ಲಿ ಮೇಷ ಹಾಗೂ ವೃಷಭ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ತಿಳಿಯೋಣ.
ತಾಜಾ ಫೋಟೊಗಳು
ಮಿಥುನ
ಮಿಥುನ ರಾಶಿಯವರು ಉತ್ತಮ ದಾಂಪತ್ಯ ಜೀವನವನ್ನು ನಡೆಸುತ್ತಾರೆ. ಸಾಮಾನ್ಯವಾಗಿ ದಂಪತಿಗಳಿಬ್ಬರೂ ಪ್ರೀತಿ ವಿಶ್ವಾಸದಿಂದ ಬಾಳುತ್ತಾರೆ. ದಂಪತಿ ಎನ್ನುವ ಬದಲು ಒಳ್ಳೆಯ ಸ್ನೇಹಿತರು ಎನ್ನಬಹುದು. ಇಬ್ಬರ ನಡುವೆ ಅಷ್ಟು ಹೊಂದಾಣಿಕೆ ಇರುತ್ತದೆ. ಮಾಡುವ ತಪ್ಪುಗಳನ್ನು ಮನ್ನಿಸುವ ಕ್ಷಮಾಗುಣ ವಿಶೇಷ ಪ್ರೀತಿ ಮೂಡಿಸುತ್ತದೆ. ಬಹುತೇಕ ಸ್ತ್ರೀಯರು ಶಾಂತಿಯಿಂದಲೇ ವರ್ತಿಸುತ್ತಾರೆ.
ಪುರುಷರು ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸಿ ದುಡುಕುತನದಿಂದ ವರ್ತಿಸುತ್ತಾರೆ. ಆದರೆ ಇವರಿಗೆ ಬರುವ ಕೋಪ ಕ್ಷಣಮಾತ್ರದಲ್ಲಿ ಮರೆಯಾಗುತ್ತದೆ. ಇವರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರುವುದಿಲ್ಲ. ಈ ಕಾರಣದಿಂದ ಸಹನೆ ಕಳೆದುಕೊಂಡು ಉದ್ವೇಗದಿಂದ ಮಾತನಾಡುತ್ತಾರೆ. ಸಂಗಾತಿಗೆ ಮಗುವಿನಂಥ ಮುಗ್ಧತೆ ಇರುತ್ತದೆ. ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವ ಕಾರಣ ವಿವಾದಕ್ಕೆ ಆಸ್ಪದವಿರುವುದಿಲ್ಲ. ಆದರ್ಶಮಯ ಜೀವನ ಬೇರೆಯವರ ಅಸೂಯೆಗೂ ಕಾರಣವಾಗುತ್ತದೆ. ಪರಸ್ಪರ ಒಬ್ಬರನ್ನೊಬ್ಬರು ಗೌರವದ ಭಾವನೆಯಿಂದ ನೋಡುತ್ತಾರೆ. ಈ ಕಾರಣದಿಂದಾಗಿ ಕುಟುಂಬದಲ್ಲಿ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುವಂತಾಗುತ್ತದೆ.
ಮೇ ತಿಂಗಳ ಕಡೆಯವರೆಗೂ ಕೈಹಿಡಿದ ಕೆಲಸಗಳಿಂದ ಲಾಭವಿರುತ್ತದೆ. ಆ ನಂತರದ ದಿನಗಳಲ್ಲಿ ಅನಾವಶ್ಯಕ ಮಾನಸಿಕ ಒತ್ತಡ ಎದುರಾಗುತ್ತದೆ. ಈ ವೇಳೆ ಸಂಗಾತಿ ತೆಗೆದುಕೊಳ್ಳುವ ತೀರ್ಮಾನಗಳು ದೊಡ್ಡ ವಿಪತನ್ನು ದೂರ ಮಾಡುತ್ತದೆ. ಇದರಿಂದ ದಂಪತಿ ನಡುವೆ ಪ್ರೀತಿ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ. ಸಂತೋಷದಿಂದ ದೀರ್ಘಕಾಲದ ಪ್ರವಾಸ ಮಾಡುವಿರಿ. ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ದೊರೆಯಲಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಾತ್ರ ಕುಟುಂಬದಲ್ಲಿ ಅನ್ಯರ ಕಾರಣದಿಂದ ವಾದ ವಿವಾದಗಳು ಉಂಟಾಗುತ್ತದೆ. ಆದರೆ ದಿನ ಕಳೆದಂತೆ ಪರಿಸ್ಥಿತಿ ತಿಳಿಯಾಗುತ್ತದೆ ಆನಂತರದ ದಿನಗಳಲ್ಲಿ ಎದುರಾಗುವ ಎಲ್ಲಾ ವಾದ ವಿವಾದಗಳನ್ನು ಪರಿಹರಿಸಿಕೊಂಡು ಅಥವಾ ಮರೆತು ಸಂತಸದಿಂದ ಬಾಳುತ್ತಾರೆ ಈ ವರ್ಷ ದಂಪತಿಗಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚುತ್ತವೆ.
ಕಟಕ
ಈ ವರ್ಷ ಕಟಕ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದಂಪತಿ ಇಚ್ಚಿಸುವಂತೆ ಸುಂದರವಾದ ಜೀವನ ನಡೆಸುತ್ತಾರೆ. ಸ್ತ್ರೀಯರಿಗೆ ವಿಶೇಷವಾದ ಸೌಲಭ್ಯಗಳು ದೊರೆಯುತ್ತವೆ. ಇದರಿಂದಾಗಿ ವೈವಾಹಿಕ ಜೀವನದಲ್ಲಿ ಸಮಾಧಾನಕರ ವಾತಾವರಣ ಇರುತ್ತದೆ. ಆತುರದಿಂದ ಕೆಲಸ ಕಾರ್ಯ ಮಾಡುವ ಕಾರಣ ದಂಪತಿ ಮಾನಸಿಕ ಒತ್ತಡದಲ್ಲಿ ಬಾಳುತ್ತಾರೆ. ಈ ಸಂದರ್ಭದಲ್ಲಿ ತಾಳ್ಮೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ಮೇ ಆರಂಭದಿಂದ ವೈವಾಹಿಕ ಜೀವನದಲ್ಲಿ ಪ್ರೀತಿ ವಿಶ್ವಾಸ ಹೆಚ್ಚುತ್ತವೆ. ಯಾರೊಬ್ಬರ ಒತ್ತಡಕ್ಕೂ ಮಣಿಯದೆ ಸ್ವಂತ ನಿರ್ಧಾರಗಳಿಗೆ ಬದ್ಧರಾಗುವಿರಿ.
ಕೌಟುಂಬಿಕ ವಿಚಾರಗಳನ್ನು ಅನಾವಶ್ಯಕವಾಗಿ ಯಾರೊಂದಿಗೂ ಚರ್ಚಿಸಬಾರದು. ಆಂತರಿಕ ವಿಚಾರಗಳನ್ನು ರಹಸ್ಯವಾಗಿ ಉಳಿಸಿಕೊಳ್ಳುವುದು ಒಳ್ಳೆಯದು. ಕುಟುಂಬದಲ್ಲಿ ಉಂಟಾಗುವ ಬೇಸರದ ವಿಚಾರಗಳನ್ನು ಮರೆತು ಬಾಳುವಿರಿ. ಆಗಸ್ಟ್ ತಿಂಗಳಲ್ಲಿ ಬಹುಶ: ನಿಮ್ಮಲ್ಲಿನ ಮನೋಭಾವನೆಯೇ ಬದಲಾಗಬಹುದು. ತಪ್ಪನ್ನು ಒಪ್ಪದೆ ಮುಂಗೋಪದಿಂದ ವರ್ತಿಸುವಿರಿ. ಇದರಿಂದ ದಂಪತಿ ನಡುವೆ ಬೇಸರ ಅಥವಾ ಮನಸ್ತಾಪ ಉಂಟಾಗಬಹುದು. ಚಾಡಿ ಮಾತುಗಳನ್ನು ನಂಬಿದಲ್ಲಿ ಮಾತ್ರ ತೊಂದರೆ ಇರುತ್ತದೆ. ನಿಮ್ಮ ಒಳ್ಳೆಯತನದ ದುರುಪಯೋಗ ಆಗಬಹುದು. ಸ್ನೇಹಿತರೊಬ್ಬರ ಸಹಾಯದಿಂದ ಪರಿಸ್ಥಿತಿ ತಿಳಿಯಾಗುತ್ತದೆ. ನಂತರದ ದಿನಗಳಲ್ಲಿ ಕುಟುಂಬದಲ್ಲಿ ಮತ್ತೊಮ್ಮೆ ಸಹಜತೆ ಮೆರೆಯುತ್ತದೆ. ಎಲ್ಲವನ್ನು ಮರೆತು ಮತ್ತೊಮ್ಮೆ ದಂಪತಿ ನಡುವೆ ಉತ್ತಮ ಬಾಂಧವ್ಯ ಉಂಟಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಪರಸ್ಪರ ಸಮಾನ ಭಾವನೆ ಮೂಡುತ್ತದೆ. ಮನದಲ್ಲಿ ಆಸೆ ಆಕಾಂಕ್ಷೆ ಈಡೇರುವ ಕಾರಣ ಸಂತೋಷಕ್ಕೆ ಪಾರವಿರುವುದಿಲ್ಲ. ಆದರ್ಶಮಯ ಜೀವನ ನಡೆಸುವಿರಿ. ಬೇರೆಯವರ ದಾಂಪತ್ಯ ಜೀವನದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಿರಿ. ದಂಪತಿಗಳು ಆರೋಗ್ಯದ ಬಗ್ಗೆ ಕೊಂಚ ಕಾಳಜಿ ತೋರಬೇಕು. ಸ್ವಂತ ಬುದ್ಧಿ ಮತ್ತು ಆತ್ಮೀಯತೆ ಸುಖಮಯ ದಾಂಪತ್ಯಕ್ಕೆ ಕಾರಣವಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).