Love Astrology: ದಾಂಪತ್ಯದಲ್ಲಿ ಒಲುಮೆ ಹೆಚ್ಚಲಿದೆ, ಪ್ರೀತಿಯೇ ಸರ್ವಕ್ಕೂ ಮದ್ದು; 2024ರ ತುಲಾ, ವೃಶ್ಚಿಕ ರಾಶಿಯ ಪ್ರಣಯ ಭವಿಷ್ಯ
Jan 04, 2024 06:43 PM IST
2024ರ ಪ್ರಣಯ ಭವಿಷ್ಯ
- Love Astrology: ಪತಿ ಪತ್ನಿಯ ನಡುವೆ ಕಲಹ ಇದ್ದೇ ಇರುತ್ತದೆ. ಆದರೆ ಅದು ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇಬ್ಬರಲ್ಲಿ ಒಬ್ಬರು ಸೋತರೆ ಅಥವಾ ಇಬ್ಬರೂ ಅನುಸರಿಕೊಂಡು ಹೋದರೆ ಜೀವನ ಹಾಲು ಜೇನಿನಂತೆ ಇರುತ್ತದೆ. ಹೊಸ ವರ್ಷದಲ್ಲಿ ಯಾವ ಯಾವ ರಾಶಿಯವರ ದಾಂಪತ್ಯ ಜೀವನ ಹೇಗಿರಲಿದೆ ನೋಡೋಣ.
Love Astrology: 2024 ಹೊಸ ವರ್ಷಕ್ಕೆ ಅಡಿ ಇಟ್ಟಿದ್ದೇವೆ. ಈ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಲು ಎಲ್ಲರೂ ಕಾತರರಾಗಿರುತ್ತಾರೆ. ಹಾಗಾದರೆ ಇಂದಿನ ಲೇಖನದಲ್ಲಿ ತುಲಾ ಹಾಗೂ ವೃಶ್ಚಿಕ ರಾಶಿಯವರ ಪ್ರಣಯ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.
ತಾಜಾ ಫೋಟೊಗಳು
ತುಲಾ
ಈ ವರ್ಷವಿಡೀ ದಂಪತಿಗಳ ನಡುವೆ ಭಾವಪೂರ್ಣ ವಾತಾವರಣ ಮನೆ ಮಾಡಿರುತ್ತದೆ. ನಿಮ್ಮದು ತಪ್ಪನ್ನು ಮನ್ನಿಸಿ ನಡೆಯುವ ಮನಸ್ಥಿತಿ. ನಿಮ್ಮ ಸಂಗಾತಿಗೆ ತಪ್ಪನ್ನು ಖಂಡಿಸುವ ಮನಸ್ಥಿತಿ. ಈ ಕಾರಣ ನಿಮ್ಮಿಬ್ಬರಲ್ಲಿ ಉಂಟಾಗುವ ಮನಸ್ತಾಪ ಅಥವಾ ವಿವಾದವನ್ನು ವಿನೋದವಾಗಿ ನೋಡುವ ಕಾರ್ಯ ಮನೆಯವರದ್ದು. ಅದೇನೇ ಆದರೂ ದಂಪತಿಗಳ ನಡುವೆ ಇರುವ ಪ್ರೀತಿ ವಿಶ್ವಾಸ ಎಂದಿಗೂ ಕಡಿಮೆಯಾಗುವುದಿಲ್ಲ. ನಯವಾದ ಮಾತುಕತೆಯಿಂದ ಸುಖ ಜೀವನ ನಡೆಸುವಿರಿ. ಪ್ರತಿದಿನವೂ ಪ್ರತಿ ಘಳಿಗೆಯೂ ನಿಮ್ಮ ಪಾಲಿಗೆ ಹೊಸದಾಗಿಯೇ ಕಾಣುತ್ತದೆ. ನಿಮ್ಮ ನಲಿವಿನ ಜೀವನವನ್ನು ಕಂಡು ಹೊಟ್ಟೆಕಿಚ್ಚು ಪಡುವ ಮಂದಿಯೂ ನಿಮ್ಮ ಮಧ್ಯೆ ಇರುತ್ತಾರೆ. ಆದ್ದರಿಂದ ಗಾಳಿ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದಿರಿ.
ವರ್ಷದ ಮೊದಲ ಭಾಗದಲ್ಲಿ ನಿಜಕ್ಕೂ ನೀವೇ ಅದೃಷ್ಟವಂತರು. ಕಾರಣ ನಿಮ್ಮ ತಪೆಲ್ಲವನ್ನು ಮನ್ನಿಸಿ ಸಂತೋಷ ನೀಡುವ ದೊಡ್ಡತನ ನಿಮ್ಮ ಸಂಗಾತಿಗೆ ಇರುತ್ತದೆ. ಅವಿವಾಹಿತರಿಗೆ ಸಂಬಂಧದಲ್ಲಿ ಅಥವಾ ಪರಿಚಯ ಇರುವವರ ಜೊತೆಯಲ್ಲಿ ವಿವಾಹವಾಗುತ್ತದೆ.
ಇದನ್ನೂ ಓದಿ: Love Astrology: 2024ರಲ್ಲಿ ಮೇಷ, ವೃಷಭ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತದೆ ?
ಅಕ್ಟೋಬರ್ 15ರವರೆಗೆ ನಿಮ್ಮ ಮನದಲ್ಲಿರುವ ಆಸೆ ಆಕಾಂಕ್ಷೆಗಳು ಸುಲಭವಾಗಿ ಈಡೇರಲಿವೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ಸಂಗಾತಿಯೇ ಆಗಿರುತ್ತಾರೆ. ಅನಂತರ ನವೆಂಬರ್ ತಿಂಗಳ ಅಂತ್ಯದವರೆಗೂ ಆರೋಗ್ಯದಲ್ಲಿ ತೊಂದರೆ ಎದುರಾಗಬಹುದು. ಈ ಸಂದರ್ಭದಲ್ಲಿ ಸಂಗಾತಿಯು ತೋರುವ ಸೇವಾ ಮನೋಧರ್ಮ ದಂಪತಿಗಳ ನಡುವಿನ ಪ್ರೀತಿ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಕಂಡು ಬರುವುದಿಲ್ಲ. ಉತ್ತೇಜನಕಾರಿ ಬೆಳವಣಿಗೆ ಉಂಟಾಗುತ್ತದೆ. ಮಧುರವಾದ ಮಾತುಕತೆಯಿಂದ ಸಂಗಾತಿಯ ಮನಸ್ಸನ್ನು ಗೆಲ್ಲುವಿರಿ. ಆತುರದ ನಿರ್ಧಾರವನ್ನು ತೆಗೆದುಕೊಳ್ಳದೆ ಹೋದಲ್ಲಿ ದಂಪತಿಗಳ ಮಧ್ಯ ಮನಸ್ತಾಪ ಮೂಡುವುದಿಲ್ಲ. ಹಲವು ಬಾರಿ ಕಿರು ಪ್ರವಾಸವನ್ನು ಕೈಗೊಳ್ಳುವ ಸೂಚನೆಗಳಿವೆ.
ವೃಶ್ಚಿಕ
ಮನದಲ್ಲಿ ಹತಾಶ ಭಾವನೆ ಇರುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೂ ಸಿಡುಕುವ ನಿಮಗೆ ಶಾಂತಿ ಸಂಯಮದಿಂದ ವರ್ತಿಸುವ ಸಂಗಾತಿ ಇರುತ್ತಾರೆ. ಇದರಿಂದ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಮಗುವಿನಂತೆ ಪೋಷಿಸುವ ಸಂಗಾತಿಯ ಮನೋಭಾವನೆ ಎಲ್ಲರಿಗೂ ಮಾದರಿಯಾಗುತ್ತದೆ. ಮಾಡುವ ತಪ್ಪನ್ನು ಸರಿಪಡಿಸುತ್ತಾ ಜೀವನದಲ್ಲಿ ಮುಂದುವರೆಯುವುದು ವಿಶೇಷ. ವರ್ಷದ ಆರಂಭದಲ್ಲಿ ಸಂಗಾತಿ ಇಷ್ಟಪಡುವ ಬೆಲೆಬಾಳುವ ಪದಾರ್ಥ ಒಂದನ್ನು ಉಡುಗೊರೆಯಾಗಿ ನೀಡುವಿರಿ. ಇದರಿಂದ ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಆಕರ್ಷಣೆ ಹೆಚ್ಚುತ್ತದೆ. ಮೇ ತಿಂಗಳ ಆರಂಭದವರೆಗೂ ಮನಸ್ಸಿನಲ್ಲಿ ಒಂದು ರೀತಿಯ ಭಯ ಆವರಿಸಿರುತ್ತದೆ. ಆದರೆ ಇದರಿಂದ ದಾಂಪತ್ಯ ಜೀವನಕ್ಕೆ ಯಾವುದೇ ಅಡ್ಡಿ ಆಗದು. ಸಾಮಾನ್ಯವಾಗಿ ಓಡಾಟಗಳನ್ನು ಇಷ್ಟಪಡದ ನೀವು ಸಂಗಾತಿಯ ಮನ ಗೆಲ್ಲಲು ದೀರ್ಘ ಪ್ರವಾಸಕ್ಕೆ ತೆರಳುವಿರಿ.
ಇದನ್ನೂ ಓದಿ: Love Astrology: ಹೊಸ ವರ್ಷದಲ್ಲಿ ನಿಮ್ಮ ದಾಂಪತ್ಯ ಜೀವನ ಹೇಗಿರಲಿದೆ; ಮಿಥುನ, ಕಟಕ ರಾಶಿಯವರ ಭವಿಷ್ಯ
ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಕುಟುಂಬದಲ್ಲಿ ಉಂಟಾಗುವ ಬದಲಾವಣೆಗಳು ಮನಸ್ಸಿಗೆ ಮುದ ಉಂಟುಮಾಡುತ್ತದೆ. ದಿಢೀರನೆ ಕೋಪ ತಾಪಗಳು ಮರೆಯಾಗಿ ಸಂಗಾತಿಯ ಮೇಲೆ ವಿಶೇಷ ಪ್ರೀತಿ ಆವರಿಸುತ್ತದೆ. ಇದರಿಂದಾಗಿ ದಾಂಪತ್ಯ ಜೀವನದ ಸವಿಯನ್ನು ಸವಿಯುವ ಅವಕಾಶ ದೊರೆಯುತ್ತದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಅನಿವಾರ್ಯವಾಗಿ ಉದ್ಯೋಗ ನಿಮಿತ್ತ ಪರಸ್ಪರಕ್ಕೆ ತೆರಳಬೇಕಾಗುತ್ತದೆ. ಈ ಅವಧಿಯು ಅಲ್ಪಾವಧಿಯಾಗಿರುತ್ತದೆ. ಆದರೂ ಮಾನಸಿಕ ಒತ್ತಡಕ್ಕೆ ಒಳಗಾಗುವ ಸೂಚನೆಗಳಿವೆ. ಕ್ರಮೇಣವಾಗಿ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಬೇಕಾಗುತ್ತದೆ. ಈ ಘಟನೆಯಿಂದಾಗಿ ದಂಪತಿಗಳ ನಡುವಿನ ಪ್ರೀತಿ-ವಿಶ್ವಾಸವು ಇನ್ನಷ್ಟು ಹೆಚ್ಚುತ್ತದೆ. ಒಟ್ಟಾರೆ ಒಬ್ಬರನ್ನೊಬ್ಬರು ಕ್ಷಮಿಸುವ ಗುಣವನ್ನು ಬೆಳೆಸಿಕೊಂಡಲ್ಲಿ ಸುಖ ಜೀವನ ನಡೆಸುವಲ್ಲಿ ಯಾವುದೇ ಸಂಶಯ ಕಾಣದು. ನವೆಂಬರ್ ಮಧ್ಯ ಭಾಗದಲ್ಲಿ ವಿಶೇಷ ಸಮಾರಂಭದ ನೇತೃತ್ವ ವಹಿಸುವಿರಿ. ಈ ಅವಧಿಯಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ಬಾಳುವಿರಿ. ಒಟ್ಟಾರೆ ಈ ವರ್ಷದಲ್ಲಿ ತಾಳ್ಮೆಯಿಂದ ಬಾಳಿದರೆ ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಎದುರಾಗದು.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).