Magh Purnima 2024: ಮಾಘ ಪೂರ್ಣಿಮೆಯ ಮಹತ್ವವೇನು, ಈ ದಿನ ಭಗವಾನ್ ವಿಷ್ಣು ದೇವಿ ಲಕ್ಷ್ಮಿಯನ್ನು ಪೂಜಿಸಲು ಕಾರಣವೇನು?
Feb 18, 2024 12:27 PM IST
ಮಾಘ ಪೂರ್ಣಿಮೆಯ ಮಹತ್ವವೇನು
Magha Paurnami 2024: ಮಾಘ ಮಾಸದ ಹುಣ್ಣಿಮೆ ಅತ್ಯಂತ ಮಂಗಳಕರ ಎಂದು ನಂಬಲಾಗಿದೆ. ಮಾಘ ಹುಣ್ಣಿಮೆಯ ದಿನದಂದು ನಾವು ಯಾವೆಲ್ಲ ಕಾರ್ಯಗಳನ್ನು ಮಾಡುವ ಮೂಲಕ ಭಗವಾನ್ ವಿಷ್ಣು ಹಾಗೂ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
Magha Paurnami 2024: ಸನಾತನ ಧರ್ಮದಲ್ಲಿ ಹುಣ್ಣಿಮೆಗೆ ಸಾಕಷ್ಟು ಮಹತ್ವವಿದೆ. ಎಲ್ಲಾ ಮಾಸಗಳಲ್ಲಿ ಮಾಘ ಮಾಸವು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಾಘ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಮಾಘ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಭಕ್ತರು ಈ ದಿನದಂದು ಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮಾಘ ಮಾಸ ಈ ಹುಣ್ಣಿಮೆಯಂದು ಪವಿತ್ರವಾದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ತಾಜಾ ಫೋಟೊಗಳು
ಮಾಘ ಪೂರ್ಣಿಮೆಯ ದಿನದಂದು ನೀವು ಭಗವಾನ್ ವಿಷ್ಣು ಹಾಗೂ ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ನಿಮ್ಮೆಲ್ಲ ಇಷ್ಟಾರ್ಥಗಳು ಈಡೇರುತ್ತದೆ ಎಂದು ಹೇಳಲಾಗುತ್ತದೆ. ಈ ಬಾರಿ ಫೆಬ್ರವರಿ 24ರಂದು ಮಾಘ ಪೂರ್ಣಿಮೆಯಿದೆ . ಈ ದಿನದಂದು ಉಪವಾಸ ಕೈಗೊಂಡರೆ ನಿಮ್ಮ ಈಡೇರದ ಆಸೆಗಳೂ ಕೈಗೂಡುತ್ತವೆ ಎಂದು ಹೇಳಲಾಗುತ್ತದೆ. ಹುಣ್ಣಿಮೆಯ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ.
ಪೂಜೆಯ ವಿಧಾನ ಹೇಗಿರಬೇಕು..?
ಹುಣ್ಣಿಮೆಯ ದಿನ ಬೆಳಗ್ಗೆ ಬೇಗನೇ ಎದ್ದು ನದಿಯಲ್ಲಿ ಸ್ನಾನ ಮಾಡಬೇಕು. ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ ಎಂದಾದರೆ ಮನೆಯ ನೀರಿಗೆ ಗಂಗಾಜಲ ಮಿಶ್ರಣ ಮಾಡಿ ಸ್ನಾನ ಮಾಡಬಹುದು. ಸ್ನಾನವಾದ ಬಳಿಕ ಮನೆಯ ಪೂಜಾ ಕೋಣೆಯಲ್ಲಿ ದೀಪವನ್ನು ಬೆಳಗಬೇಕು. ಪೂಜಾ ಗೃಹದಲ್ಲಿ ವಿಷ್ಣುವಿನ ವಿಗ್ರಹವನ್ನು ಸ್ಥಾಪಿಸಿ ಗಂಗಾಜಲದಿಂದ ಅಭಿಷೇಕ ಮಾಡಬೇಕು. ವಿಷ್ಣು ಪೂಜೆ ಮಾಡುವುದರ ಹಿಂದೆಯೂ ಸಾಕಷ್ಟು ಮಹತ್ವವಿದೆ. ವಿಷ್ಣುವಿನ ಜೊತೆಯಲ್ಲಿ ಲಕ್ಷ್ಮೀಗೂ ಪೂಜೆ ಸಲ್ಲಿಸಬೇಕು. ವಿಷ್ಣುವಿಗೆ ನೈವೇದ್ಯ ಸಲ್ಲಿಸುವಾಗ ತುಳಸಿ ಬಳಕೆ ಬೇಕೇ ಬೇಕು. ಇಲ್ಲವಾದಲ್ಲಿ ನಿಮ್ಮ ಪೂಜೆಯೇ ಅಪೂರ್ಣವಾದಂತೆ. ಸಾತ್ವಿಕ ಪದಾರ್ಥಗಳನ್ನು ಮಾತ್ರ ದೇವರಿಗೆ ಅರ್ಪಿಸಬೇಕು. ಈ ದಿನದಂದು ಆಂಜನೇಯನನ್ನು ಆರಾಧಿಸುವುದು ಕೂಡ ಶುಭಕರ ಎಂದು ಹೇಳಲಾಗಿದೆ . ಈ ರೀತಿ ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎಂದು ಹೇಳಲಾಗಿದೆ.
ಹಿಂದೂ ಪುರಾಣಗಳ ಪ್ರಕಾರ ಮಾಘ ಹುಣ್ಣಿಮೆಯಂದು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ತಮಿಳುನಾಡಿನ ಕೆಲವು ಕಡೆಗಳಲ್ಲಿ ಮಾಘ ಹುಣ್ಣಿಮೆಯಂದು ತೇಲು ಎಂಬ ಹಬ್ಬವನ್ನು ಆಚರಿಸುತ್ತಾರೆ. ಈ ದಿನದಂದು ಅನೇಕರು ಉಪವಾಸವಿರುತ್ತಾರೆ. ಚಂದ್ರನಿಗೆ ಕೂಡ ಪೂಜೆ ಸಲ್ಲಿಸುತ್ತಾರೆ. ಕೆಲವರು ಈ ದಿನದಂದು ಸತ್ಯನಾರಾಯಣ ಕತೆಯನ್ನು ಓದುತ್ತಾರೆ. ಈ ರೀತಿ ಮಾಡುವುದರಿಂದ ವಿಷ್ಣುವಿನ ಕೃಪೆ ದೊರಕುತ್ತದೆ ಎಂದು ಹೇಳಲಾಗುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.