Maha Shivaratri 2024: ಈ ವರ್ಷದ ಮಹಾ ಶಿವರಾತ್ರಿ ಯಾವಾಗ, ಆಚರಣೆ ಹೇಗಿರಬೇಕು: ಇಲ್ಲಿದೆ ಮಾಹಿತಿ
Feb 22, 2024 09:31 AM IST
2024 ಶಿವರಾತ್ರಿಯ ಸಮಯ , ಮಹತ್ವ , ಪೂಜಾ ವಿಧಿ
Maha Shivaratri 2024: ಹಿಂದೂ ಧರ್ಮದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ಮಹಾ ಶಿವರಾತ್ರಿ ಕೂಡ ಒಂದು. ಈ ವರ್ಷ ಮಹಾಶಿವರಾತ್ರಿ ಯಾವ ದಿನ ಬಂದಿದೆ..? ಶಿವನ ಕೃಪೆಗೆ ಪಾತ್ರರಾಗಲು ಭಕ್ತರು ಯಾವೆಲ್ಲ ರೀತಿಯಲ್ಲಿ ಈಶ್ವರನನ್ನು ಆರಾಧಿಸಬೇಕು. ಶಿವರಾತ್ರಿಯಂದು ಜಾಗರಣೆ ಮಾಡುವುದರ ಹಿಂದಿನ ಮಹತ್ವವೇನು ? ಎಂಬ ವಿಚಾರಗಳ ಬಗ್ಗೆ ಮಾಹಿತಿ ಪಡೆಯಬೇಕು.
Maha Shivaratri 2024: ಮಹೇಶ್ವರ, ಪರಮೇಶ್ವರ, ಬೋಲಾ ಶಂಕರ್, ನೀಲಕಂಠ. ಶಿವನಿಗೆ ಇರುವ ಹೆಸರುಗಳು ಒಂದೆರಡಲ್ಲ. ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾವ ಹೆಸರಿನಿಂದ ಭಕ್ತ ಕರೆದರೂ ಕಷ್ಟದಲ್ಲಿ ನೆನೆಸಿಕೊಂಡವರ ಇಷ್ಟಾರ್ಥಗಳನ್ನು ನೆರವೇರಿಸುವ ಪರಮಾತ್ಮ ಶಿವನಿಗೆ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಕಾರ್ತಿಕ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದ ಮಾಸವಾಗಿದೆ.
ತಾಜಾ ಫೋಟೊಗಳು
ಈ ವರ್ಷ ಮಹಾಶಿವರಾತ್ರಿ ಯಾವಾಗ...?
ಮಾಘ ಬಹುಳ ಚತುರ್ದಶಿಯ ದಿನದಂದು ಶಿವರಾತ್ರಿ ಬಂದರೆ ಅದು ವಿಶೇಷ ಎಂದು ಹೇಳಲಾಗುತ್ತದೆ. ಈ ವರ್ಷದ ಶಿವರಾತ್ರಿಯು ಶುಕ್ರವಾರ ಮಾರ್ಚ್ 8ರಂದು ಬಂದಿದೆ. ಮಾರ್ಚ್ 8ರಿಂದ ರಾತ್ರಿ 8:13ರವರೆಗೆ ತ್ರಯೋದಶಿ ಇರಲಿದೆ. ಅಂದಿನಿಂದ ಚತುರ್ದಶಿ ಆರಂಭಗೊಳ್ಳಲಿದೆ. ಚತುರ್ದಶಿ ತಿಥಿಯು ಮಾರ್ಚ್ 9ರ ಸಂಜೆ 6:17ಕ್ಕೆ ಕೊನೆಗೊಳ್ಳುತ್ತದೆ.
ಶಿವರಾತ್ರಿಯ ಮಹತ್ವ
ಶಿವರಾತ್ರಿಯ ದಿನ ಶಿವನ ಆರಾಧನೆ, ಶಿವನಿಗಾಗಿ ಉಪವಾಸ ಹಾಗೂ ಶಿವನಿಗಾಗಿ ಜಾಗರಣೆ ಮಾಡಲಾಗುತ್ತದೆ. ಜಗತ್ತನ್ನೇ ಸುಡುವಂತಿದ್ದ ವಿಷವನ್ನು ತಾನೇ ನುಂಗಿ ತನ್ನ ಕಂಠದಲ್ಲಿ ಇಟ್ಟುಕೊಂಡ ಶಿವ ನೀಲಕಂಠ ಎನಿಸಿಕೊಳ್ಳುತ್ತಾನೆ. ಶಿವನ ಕೃಪೆಗೆ ಪಾತ್ರರಾಗುವ ಸಲುವಾಗಿ ಭಕ್ತರು ಶಿವರಾತ್ರಿಯ ದಿನದಂದು ಭಜನೆ ಹಾಗೂ ಜಾಗರಣೆಯಲ್ಲಿ ಭಾಗಿಯಾಗುತ್ತಾರೆ. ಶಿವನೆಂದರೆ ಮಂಗಳಕರ. ಕೈಲಾಸವಾಸಿ ಶಿವನು ಲಿಂಗದ ರೂಪದಲ್ಲಿ ಕಾಣಿಸಿಕೊಂಡ ದಿನವನ್ನು ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ. ಇನ್ನೊಂದು ಅರ್ಥದ ಪ್ರಕಾರ ಶಿವನು ಅರ್ಧನಾರೀಶ್ವರನಾದ ದಿನವು ಮಹಾಶಿವರಾತ್ರಿ ಎಂದು ಹೇಳಲಾಗುತ್ತದೆ. ಪಾರ್ವತಿ ಪ್ರಕೃತಿಯ ಸಂಕೇತವಾಗಿದ್ದಾಳೆ ಹೀಗಾಗಿ ಪುರುಷ ಹಾಗೂ ಪ್ರಕೃತಿಯ ಸಂಯೋಗವನ್ನು ಶಿವರಾತ್ರಿ ಎಂದು ಹೇಳಲಾಗುತ್ತದೆ.
ಶಿವನನ್ನು ಆರಾಧಿಸುವುದು ಹೇಗೆ?
ಶಿವರಾತ್ರಿ ದಿನದಂದು ಜಾಗರಣೆ ಮಾಡುವುದು ಹಿಂದೂ ಧರ್ಮದ ಶಾಸ್ತ್ರಗಳ ಪೈಕಿ ಒಂದಾಗಿದೆ. ಈ ದಿನದಂದು ಮಾಂಸಾಹಾರ ಸೇವನೆ ನಿಷಿದ್ಧವಾಗಿದೆ. ಈ ದಿನ ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಕೇವಲ ಶಿವನ ಕಡೆಗೆ ಮಾತ್ರ ಕೇಂದ್ರೀಕರಿಸಬೇಕು. ಹಾಗೂ ಶಿವನ ಪ್ರಾರ್ಥನೆಯೊಂದರಲ್ಲೇ ಮುಳುಗಿರಬೇಕು. ಶಿವನ ನಾಮಸ್ಮರಣೆ ಮಾಡುತ್ತಾ ಆತನ ಕೃಪೆಗೆ ಪಾತ್ರರಾಗುವ ಕೆಲಸವನ್ನು ಭಕ್ತರು ಮಾಡಬೇಕು.
ಶಿವರಾತ್ರಿಯ ದಿನದಂದು ಶಿವಭಕ್ತರು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಮಾಡಬೇಕು. ಮನೆಯಲ್ಲಿ ಶಿವನಿಗೆ ಪೂಜೆ ಸಲ್ಲಿಸಬೇಕು. ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಜಾಗರಣೆ, ಬಿಲ್ವಾರ್ಚನೆ ಹಾಗೂ ಶಿವನಿಗೆ ಅಭಿಷೇಕ ಇವೆಲ್ಲವನ್ನೂ ಮಾಡುವುದರಿಂದ ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ವಿಷ್ಣು ಅಲಂಕಾರ ಪ್ರಿಯನಾಗಿದ್ದರೆ ಶಿವನು ಅಭಿಷೇಕ ಪ್ರಿಯ. ಹೀಗಾಗಿ ಶಿವನಿಗೆ ನೀರಿನಿಂದ ಅಭಿಷೇಕ ಮಾಡಿದರೂ ಅವನು ಸಂಪನ್ನಗೊಳ್ಳುತ್ತಾನೆ. ಹೀಗಾಗಿ ಶಿವರಾತ್ರಿಯಂದು ಶಿವನಿಗೆ ಅಭಿಷೇಕ ಮಾಡುವುದನ್ನು ಮರೆಯಬೇಡಿ.
ಜಾಗರಣೆ ಏಕೆ ಮಾಡಬೇಕು..?
ಶಿವರಾತ್ರಿಯ ದಿನದಂದು ಜಾಗರಣೆ ಮಾಡಿದರೆ ಸಕಲ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬುದು ಸನಾತನ ಧರ್ಮದಲ್ಲಿರುವ ನಂಬಿಕೆ. ಓಂ ನಮಃ ಶಿವಾಯ ಎಂದು ಜಪಿಸುತ್ತಲೇ ಇರಬೇಕು. ಶಿವರಾತ್ರಿಯ ಮಾರನೇ ದಿನ ಶಿವನ ದೇವಾಲಯಕ್ಕೆ ಭೇಟಿ ನೀಡಿ ಪ್ರಸಾದವನ್ನು ಸ್ವೀಕರಿಸಬೇಕು. ಶಿವರಾತ್ರಿಯ ದಿನದಂದು ಉಪವಾಸ ಹಾಗೂ ಆಚರಣೆ ಮಾಡುವವರು ಮಾರನೇ ದಿನ ರಾತ್ರಿಯವರೆಗೆ ಮಲಗುವಂತಿಲ್ಲ. ಆಗ ಮಾತ್ರ ಶಿವನ ಪೂರ್ಣ ಅನುಗ್ರಹ ಸಿಗಲು ಸಾಧ್ಯ ಎಂಬ ನಂಬಿಕೆಯಿದೆ.