logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri 2024: ಅಲ್ಪಾಯುಷಿ ಮಾರ್ಕಂಡೇಯನ ಕಥೆ ಕೇಳಿದ್ದೀರಾ? ಶಿವನ ಪರಮ ಭಕ್ತ, ಯಮನನ್ನು ಸೋಲಿಸಿದ್ದು ಹೇಗೆ?

Maha Shivaratri 2024: ಅಲ್ಪಾಯುಷಿ ಮಾರ್ಕಂಡೇಯನ ಕಥೆ ಕೇಳಿದ್ದೀರಾ? ಶಿವನ ಪರಮ ಭಕ್ತ, ಯಮನನ್ನು ಸೋಲಿಸಿದ್ದು ಹೇಗೆ?

HT Kannada Desk HT Kannada

Mar 02, 2024 06:00 AM IST

google News

ಶಿವಭಕ್ತ ಮಾರ್ಕಂಡೇಯನ ಕಥೆ

  • Maha Shivaratri 2024:  ಅಲ್ಪಾಯುಷಿ ಮಾರ್ಕಂಡೇಯ, ಶಿವನ ಪರಮಭಕ್ತ. ಈತನ ತಂದೆ ತಾಯಿ ಕೂಡಾ ಶಿವನನ್ನು ಆರಾಧಿಸುತ್ತಿದ್ದರು. 16 ವರ್ಷ ತುಂಬಿದ ನಂತರ ಜೀವವನ್ನು ಕಸಿದುಕೊಳ್ಳಲು ಬರುವ ಯಮಧರ್ಮನನ್ನು ಕೂಡಾ ಮಾರ್ಕಂಡೇಯ ಸೋಲಿಸುತ್ತಾನೆ. ಕೊನೆಗೆ ಶಿವ, ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ ಧೀರ್ಘಾಯಸ್ಸು ನೀಡುತ್ತಾನೆ. 

ಶಿವಭಕ್ತ ಮಾರ್ಕಂಡೇಯನ ಕಥೆ
ಶಿವಭಕ್ತ ಮಾರ್ಕಂಡೇಯನ ಕಥೆ (PC: Unsplash)

Maha Shivaratri 2024: ಶಿವರಾತ್ರಿ ಸಮೀಪಿಸುತ್ತಿದೆ. ಭಕ್ತರು ಶಿವನ ಆರಾಧನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪರ ಶಿವನ ಭಕ್ತರ ಸಾಲಿನಲ್ಲಿ ಅನೇಕರು ಬರುತ್ತಾರೆ. ರಾವಣ, ಸಿರಿಯಾಳ ಅಲ್ಲದೆ ಅನೇಕ ಮಹಾ ಮುನಿಗಳು ಇದ್ದಾರೆ. ಇದೇ ರೀತಿ ಮಾರ್ಕಂಡೇಯ ಕೂಡಾ ಶಿವನ ಮಹಾನ್‌ ಭಕ್ತನಾಗಿ ಹೆಸರಾಗಿದ್ದಾನೆ. ಮಾರ್ಕಂಡೇಯನು ಓರ್ವ ಋಷಿಕುಮಾರ. ಈತನ ಜೀವನ ಕೇವಲ ವೇದಾಭ್ಯಾಸ, ಪೂಜೆ ಪುನಸ್ಕಾರಗಳಿಗೆ ಸೀಮಿತವಾಗಿರುವುದಿಲ್ಲ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಜ್ಯೋತಿಷ್ಯ ಜಗತ್ತಿನಲ್ಲಿ ಅತಿ ಮುಖ್ಯವಾದ ಮಾರ್ಕಂಡೇಯ ಜ್ಯೋತಿಷ್ಯ ಶಾಸ್ತ್ರ ಎಂಬ ಗ್ರಂಥವನ್ನು ಬರೆದವನೇ ಈ ಮಾರ್ಕಂಡೇಯ ಮಹಾಮನಿ. ಇವನು ಮೃಕಂಡುಮುನಿಯ ಪುತ್ರ. ಮೃಗು ಮಹರ್ಷಿಯ ವಂಶಕ್ಕೆ ಸೇರಿದವನು. ಈತನ ಪತ್ನಿಯ ಹೆಸರು ಧೂಮೋರ್ಣೆ. ಪಾಂಡವರಿಗೆ ಸ್ವತ: ಮಾರ್ಕಂಡೇಯನೇ ಅನೇಕ ಪುಣ್ಯ ಕಥೆಗಳನ್ನು ಹೇಳುತ್ತಾನೆ. ಇಷ್ಟಲ್ಲದೆ ದಶರಥ ಮಾಡುವ ಪುತ್ರಕಾಮೇಷ್ಠಿ ಯಾಗದಲ್ಲಿ ಮುಖ್ಯ ಋತ್ವೀಕನಾಗಿ ಭಾಗವಹಿಸುತ್ತಾನೆ. ಇವನು ಬಾಲ್ಯದಿಂದಲೇ ಶಿವನ ಭಕ್ತನಾಗಿರುತ್ತಾನೆ. ಯಾವ ರೀತಿ ಶಿವನನ್ನು ಒಲಿಸಿಕೊಂಡ ಎಂಬುದು ಕಥೆಯ ಮೂಲಕವೇ ತಿಳಿಯಬೇಕು.

ಮೃಕಂಡು ಮಹಾಮುನಿ ಮರುದ್ವತಿ ದಂಪತಿಯ ಪುತ್ರ

ಮೃಕಂಡು ಮಹಾಮುನಿ ಮತ್ತು ಮರುದ್ವತಿ ದಂಪತಿಗಳಿಗೆ ಬಹುಕಾಲದವರೆಗೂ ಸಂತಾನವಿರುವುದಿಲ್ಲ. ಸಂತಾನಕ್ಕಾಗಿ ನಾಗ ಪ್ರತಿಷ್ಠೆ ಮತ್ತು ಹಲವಾರು ಹೋಮಗಳನ್ನು ಸಹ ಮಾಡುತ್ತಾರೆ. ಒಮ್ಮೆ ನಾರದರು ಆಶ್ರಮಕ್ಕೆ ಆಗಮಿಸುತ್ತಾರೆ. ದಂಪತಿಗಳ ಒಂದೇ ಒಂದು ಚಿಂತೆ ಎಂದರೆ ಮಕ್ಕಳಿಲ್ಲದೆ ಇರುವುದು. ಭಕ್ತಿಗಳಿಂದ ದಂಪತಿಗಳು ನಾರದರಿಗೆ ನಮಸ್ಕರಿಸುತ್ತಾರೆ. ಆಗ ನಾರದರು ನಿಮ್ಮ ಮನದಲ್ಲಿರುವ ಇಷ್ಟಕಾಮನೆಗಳು ಸಿದ್ಧಿಸಲಿ ಎಂದು ಆಶೀರ್ವದಿಸುತ್ತಾರೆ.

ತಾನು ಗಳಿಸಿದ ತಪಸ್ಸಿನ ಶಕ್ತಿಯನ್ನು ಬಳಸಿಕೊಂಡು ಮೃಕಂಡ ಮಹರ್ಷಿಯು ದೇವಲೋಕದಲ್ಲಿ ನಡೆಯುವ ಪೂಜೆಯೊಂದನ್ನು ಕಾಣಲು ದೇವಲೋಕಕ್ಕೆ ತೆರಳುತ್ತಾನೆ. ಆದರೆ ಸಂತಾನ ಇಲ್ಲದ ಕಾರಣ ಸ್ವರ್ಗಕ್ಕೆ ಪ್ರವೇಶಸಲು ಅನುಮತಿ ದೊರೆಯುವುದಿಲ್ಲ. ಮರುದ್ವತಿಗೆ ಸಹ ಸಮಾರಂಭವೊಂದರಲ್ಲಿ ಇದೇ ರೀತಿ ಅವಮಾನವಾಗುತ್ತದೆ. ಮನೆಗೆ ಬಂದ ಅತಿಥಿ ಅಭ್ಯಾಗತರು ಸಹ ಮಕ್ಕಳಿಲ್ಲವೆಂದು ತಿಳಿದು ಭೋಜನ ಮಾಡದೆ ಹೋಗುತ್ತಾರೆ. ಈ ಎಲ್ಲಾ ಜಂಜಾಟಗಳು ದಂಪತಿಗಳ ಮನಸ್ಸನ್ನು ಘಾಸಿಗೊಳಿಸುತ್ತದೆ.

ನಾರದ ಮಹರ್ಷಿಗಳು ಈ ಮಧ್ಯೆ ಕೈಲಾಸವನ್ನು ತಲುಪುತ್ತಾರೆ. ಶಿವ ಪಾರ್ವತಿಯರಿಗೆ ಋಷಿ ದಂಪತಿಗಳ ಸಂತಾನಹೀನತೆಯ ಬಗ್ಗೆ ತಿಳಿಸುತ್ತಾರೆ. ತನ್ನ ಭಕ್ತರಾದ ದಂಪತಿಗಳ ಸಮಸ್ಯೆಗೆ ಪರಿಹಾರ ಸೂಚಿಸಲು ಸ್ವಯಂ ಪಾರ್ವತಿಯೇ ಭೂಲೋಕಕ್ಕೆ ಬರುತ್ತಾಳೆ. ಕಣಿ ಹೇಳುವ ರೂಪದಲ್ಲಿ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಮರುದ್ವತಿಯನ್ನು ಕಾಪಾಡುತ್ತಾಳೆ. ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಸಾವೊಂದೇ ಪರಿಹಾರವಲ್ಲ ಎಂಬ ಸತ್ಯದ ಅರಿವನ್ನು ಮಾಡಿಸುತ್ತಾಳೆ. 

ತಪಸ್ಸು ಮಾಡಿ ಶಿವನ ವರಪ್ರಸಾದದಿಂದ ಮಗನನ್ನು ಪಡೆದ ದಂಪತಿ

ಪಾರ್ವತಿಯ ಅಣತಿಯಂತೆ ಋಷಿ ದಂಪತಿಗಳು ಪಶುಪತಿನಾಥನ ಸನ್ನಿಧಿಯಲ್ಲಿ ಘೋರ ತಪಸ್ಸನ್ನು ಆಚರಿಸುತ್ತಾರೆ. ಕೊನೆಗೆ ಇವರ ತಪಸ್ಸನ್ನು ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷನಾಗುತ್ತಾನೆ. ಶಿವನನ್ನು ಕುರಿತು ವರವನ್ನಾಗಿ ಪುತ್ರನನ್ನು ಕರುಣಿಸು ಎಂದು ಬೇಡುತ್ತಾರೆ. ಆಗ ಪರಮೇಶ್ವರನು ಒಳ್ಳೆಯ ನಡತೆಯುಳ್ಳ ಎಲ್ಲರನ್ನೂ ಗೌರವಿಸುವ ಮಗ ಬೇಕೋ ಅಥವಾ ಕೆಟ್ಟತನದಲ್ಲಿ ನಡೆದುಕೊಳ್ಳುವ ಮಗ ಬೇಕೋ ಎಂದು ಕೇಳುತ್ತಾನೆ. ಆಗ ಮುನಿಯ ಅಪೇಕ್ಷೆಯಂತೆ ಸನ್ನಡತೆಯ ಮಗನನ್ನು ಪ್ರಸಾದಿಸುತ್ತಾನೆ. ಆದರೆ ಅವನ ಮಗನ ಆಯಸ್ಸು ಕೇವಲ 16 ವರ್ಷ ಎಂದು ಹೇಳಿ ಮಾಯವಾಗುತ್ತಾನೆ.

ಈ ದಂಪತಿಗೆ ಶುಭ ಗಳಿಗೆಯಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ. ವ್ಯಾಸ ಮಹರ್ಷಿಗಳು ಆ ಮಗುವಿಗೆ ಮಾರ್ಕಂಡೇಯ ಎಂಬ ಹೆಸರನ್ನು ಇಡುತ್ತಾರೆ. ಅಲ್ಲದೆ ಇವನ ಕೀರ್ತಿಯು ಮೂರು ಲೋಕವನ್ನು ವ್ಯಾಪಿಸಲಿ ಎಂದು ಹಾರೈಸುತ್ತಾರೆ. ಸಹಜವಾಗಿಯೇ ಮಾರ್ಕಂಡೇಯನು ಶಿವನಿಗೆ ಮಹಾಭಕ್ತನಾಗುತ್ತಾನೆ. ಚಿಕ್ಕ ವಯಸ್ಸಿನಲ್ಲಿ ತನ್ನ ವಯಸ್ಸಿನ ಮಕ್ಕಳಿಗೆ ವೇದ ಅಧ್ಯಯನ ಮಾಡಿಸುವ ಮಟ್ಟವನ್ನು ತಲುಪುತ್ತಾನೆ. ಅದೆಷ್ಟೋ ಬಾರಿ ಗುರುಗಳಿಗೆ ಮಾರ್ಕಂಡಯ್ಯನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹೋಗುತ್ತಾರೆ.

ದಿನ ಕಳೆದಂತೆ ಮಾರ್ಕಂಡೇಯನಿಗೆ ಉಪನಯನ ಶಾಸ್ತ್ರವಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸಿದ ಮುನಿವರೇಣ್ಯರೆಲ್ಲರೂ ಮಾರ್ಕಂಡೇಯರನ್ನು ಕುರಿತು 100 ವರ್ಷ ಬಾಳು, ಸಾವಿರ ವರ್ಷ ಬಾಳು ಎಂದು ಹರಸಿ ಹೋಗುತ್ತಾರೆ. ಮಗನ ಆಯುಷ್ಯದ ಬಗ್ಗೆ ತಿಳಿದ ಮರುದ್ವತಿಯ ಸಲಹೆಯಂತೆ ಮಾರ್ಕಂಡೇಯನು ಘೋರ ತಪಸ್ಸನ್ನು ಆಚರಿಸಲು ಆರಂಭಿಸುತ್ತಾನೆ. ನೀರು ಆಹಾರವನ್ನು ತ್ಯಜಿಸಿ ತಪಸ್ಸು ಮಾಡುವ ಮಗನನ್ನು ನೋಡಿ ತಾಯಿ ಸಹ ಉಪವಾಸ ಇರುತ್ತಾಳೆ. ಮಾರ್ಕಂಡಯ್ಯನ ತಪಸ್ಸನ್ನು ಭಂಗಗೊಳಿಸಲು ಸ್ವತಃ ಶ್ರೀ ಶಂಕರನೇ ವೃದ್ಧನ ರೂಪದಲ್ಲಿ ಆಗಮಿಸುತ್ತಾನೆ. ಆದರೆ ಮಾರ್ಕಂಡೆಯನ ಪೂಜೆ ಮತ್ತು ಅತಿಥಿ ಸತ್ಕಾರಕ್ಕೆ ಶಿವನೇ ಮನಸೋಲುತ್ತಾನೆ. ಕೊನೆಗೆ ಮಾರ್ಕಂಡಯನನ್ನು ಹರಸಿಹೋಗುತ್ತಾನೆ ಆನಂತರ ಬಂದ ಪಾರ್ವತಿಯು ಮಾರ್ಕಂಡೇಯನಿಗೆ ರುದ್ರಾಕ್ಷಿಯನ್ನು ನೀಡಿ ಯಾವುದೇ ಕಾರಣಕ್ಕೂ ರುದ್ರಾಕ್ಷಿ ಮತ್ತು ಶಿವ ಸಾನಿಧ್ಯವನ್ನು ತೊರೆಯಬೇಡ ಎಂದು ಹೇಳುತ್ತಾಳೆ.

ಯಮನನ್ನು ಸೋಲಿಸಿದ ಮಾರ್ಕಂಡೇಯ

ಈ ಮಧ್ಯೆ ಮಾರ್ಕಂಡೇಯನಿಗೆ 16 ವರ್ಷ ತುಂಬುತ್ತವೆ. ಆಗ ಯಮ ಧರ್ಮರಾಜನ ಆದೇಶದಂತೆ ಮಾರ್ಕಂಡೇಯನ ಆತ್ಮವನ್ನು ಕರೆದೊಯ್ಯಲು ಯಮದೂತರು ಬರುತ್ತಾರೆ. ಆದರೆ ಮಾರ್ಕಂಡೇಯನ ಬಳಿ ಇದ್ದ ರುದ್ರಾಕ್ಷಿಯು ಯಮದೂತರನ್ನು ಹತ್ತಿರಕ್ಕೆ ಬರದಂತೆ ದೂರ ತಳ್ಳುತ್ತದೆ. ಬಹಳ ಯಾತನೆಗೆ ಒಳಗಾದ ಯಮದೂತರು ಯಮನ ಬಳಿ ವಿಚಾರವನ್ನು ತಿಳಿಸುತ್ತಾರೆ. ಸಿಟ್ಟಿನಿಂದ ಆರ್ಭಟಿಸಿ ಯಮ ಧರ್ಮರಾಜನು ಸ್ವಯಂ ತಾನೇ ಮಾರ್ಕಂಡೇಯನ ಪ್ರಾಣವನ್ನು ತೆಗೆದುಕೊಂಡು ಹೋಗಲು ಭೂಲೋಕಕ್ಕೆ ಬರುತ್ತಾನೆ.

ಆದರೆ ಮಾರ್ಕಂಡೇಯನ ತಪಸ್ಸನ್ನು ಭಂಗ ಪಡಿಸಲು ಯಮನಿಗೆ ಸಾಧ್ಯವಾಗುವುದಿಲ್ಲ. ಅವನನ್ನು ತಲುಪಲು ಕಾಲನ್ನು ಇಟ್ಟ ಕಡೆಯೆಲ್ಲಾ ಶಿವಲಿಂಗಗಳು ಉದ್ಭವಿಸುತ್ತದೆ. ಕೊನೆಗೆ ಶಿವಲಿಂಗವನ್ನು ದಾಟಲಾಗದೆ ಸ್ವಯಂ ಯಮನೇ ಸೋತು ಹೋಗುತ್ತಾನೆ. ಕ್ರೋಧದಿಂದ ಯಮ ಧರ್ಮನು ಶಿವಲಿಂಗದ ಜೊತೆ ಲಿಂಗವನ್ನು ಅಪ್ಪಿ ಹಿಡಿದ ಮಾರ್ಕಂಡೇಯನಿಗೂ ಯಮಪಾಶವನ್ನು ಹಾಕುತ್ತಾನೆ. ಆಗ ಯಮಪಾಶವು ಶಿವನ ಕುತ್ತಿಗೆಗೆ ಬೀಳುತ್ತದೆ. ಸಿಡುಕಿನಿಂದ ಶಿವನು ಲಿಂಗವನ್ನು ಸೀಳಿ ಹೊರಬಂದು ತನ್ನ ಮೂರನೇ ಕಣ್ಣಿನಿಂದ ಯಮನನ್ನು ಸುಡುತ್ತಾನೆ. ನಂತರ ಪಾರ್ವತಿಯ ಮಾತನ್ನು ಕೇಳಿ ಶಿವನು ಯಮನನ್ನು ಬದುಕಿಸುತ್ತಾನೆ. ಚಿರಂಜೀವಿಯಾಗಿ ಬದುಕು ಎಂದು ಮಾರ್ಕಂಡೇಯನಿಗೆ ವರ ನೀಡುತ್ತಾನೆ. ಈ ರೀತಿ ಭಕ್ತಿ ಮಾರ್ಗದಿಂದ ಸಾವನ್ನು ಜಯಿಸಬಹುದು ಎಂದು ಮಾರ್ಕಂಡೇಯ ನಿರೂಪಿಸಿದ್ದಾನೆ.

 

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ