Makaravilakku 2024: ಶಬರಿಮಲೆಯಲ್ಲಿ ಸಂಜೆ 6.48ಕ್ಕೆ ಮಕರ ಜ್ಯೋತಿ ದರ್ಶನ: ಪವಿತ್ರ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿ
Jan 15, 2024 07:03 PM IST
ಶಬರಿಮಲೆಯಲ್ಲಿ ಸೋಮವಾರ ಸಂಜೆ 6.48ಕ್ಕೆ ಮಕರ ಜ್ಯೋತಿ ದರ್ಶನವಾಯಿತು.
- Sankranti Markara Jyothi 2024: ಶಬರಿಮಲೆ ಅಯ್ಯಪ್ಪ ಸ್ವಾಮಿಯ ಲಕ್ಷಾಂತರ ಭಕ್ತರು ಕಾತರದಿಂದ ನಿರೀಕ್ಷಿಸುತ್ತಿದ್ದ ಮಕರ ಜ್ಯೋತಿ ದರ್ಶನದ ಕ್ಷಣ. ಬೆಟ್ಟದಲ್ಲಿ ಸಾಲುಗಟ್ಟಿ ನಿಂತ ಭಕ್ತರು ಆ ಪುಟ್ಟ ದ್ವೀಪವನ್ನು ಕಂಡು ಪುಳಕಿತರಾದರು.
ಶಬರಿಮಲೆ: ಎಲ್ಲೆಲ್ಲೂ ಸ್ವಾಮಿಯೇ ಶರಣಂ ಅಯ್ಯಪ್ಪ, ಅಯ್ಯಪ್ಪಸ್ವಾಮಿಗೆ ಜಯವಾಗಲಿ ಎನ್ನುವ ಉದ್ಘೋಷಗಳು. ದೈವ ಭಾವ ಹೊತ್ತು ಬೆಟ್ಟ ಏರಿದ ಕ್ಷಣ, ಇರುಮುಡಿ ಹೊತ್ತು ಸಾಲುಗಟ್ಟಿ ನಿಂತ ಭಕ್ತರ ದೃಷ್ಟಿ ನೆಟ್ಟಿದ್ದು ಪವಿತ್ರ ಮಕರ ಜ್ಯೋತಿಯ ಮೇಲೆಯೇ. ಕಾತರದಿಂದ ಆ ಕ್ಷಣಕ್ಕಾಗಿಯೇ ಕಾಯುವ ಸಮಯ. ಭಾರತದ ಮೂಲೆ ಮೂಲೆಗಳಿಂದಲೂ ಭಕ್ತರನ್ನು ಆಕರ್ಷಿಸುವ, ಅದರಲ್ಲೂ ದಕ್ಷಿಣ ಭಾರತದಿಂದಲೇ ಅಧಿಕ ಪ್ರಮಾಣದ ಭಕ್ತರನ್ನು ಸೆಳೆಯುವ ಶಬರಿಮಲೆಯಲ್ಲಿ ಅವಿರ್ಭವಿಸುವ ಮಕರವಿಳಕ್ಕು ಅಥವಾ ಮಕರ ಜ್ಯೋತಿಯನ್ನು ಲಕ್ಷಾಂತರ ಭಕ್ತರು ಕಂಡು ಪುನೀತರಾದರು. ಸೋಮವಾರ ಸಂಜೆ 6.30 ರಿಂದ 7ಗಂಟೆ ಹೊತ್ತಿಗೆ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಬಾರಿ ಮಕರ ಜ್ಯೋತಿಯ ದರ್ಶನ ದೊರಕಿತು. ಮೊದಲ ಬಾರಿಗೆ ಸಂಜೆ 6.48ಕ್ಕೆ ಜ್ಯೋತಿ ದರ್ಶನವಾಯಿತು.
ತಾಜಾ ಫೋಟೊಗಳು
ಈ ದಿನಕ್ಕಾಗಿಯೇ ಅಯ್ಯಪ್ಪಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವರಿಗೆ ವಿಶೇಷ ಆಭರಣಗಳೊಂದಿಗೆ ಅಲಂಕರಿಸಿವುದು ವಿಶೇಷ. ಸೋಮವಾರ ಬೆಳಗಿನಜಾವದಿಂದಲೇ ಪೂಜಾ ಕೈಂಕರ್ಯಗಳು, ಅಭಿಷೇಕಗಳು ಬೆಟ್ಟದಲ್ಲಿ ಜರುಗಿದವು. ಸಂಜೆ ನಂತರದಲ್ಲೂ ಪೂಜಾ ವಿಧಾನಗಳನ್ನು ಪೂರ್ಣಗೊಳಿಸಲಾಯಿತು.
ಎಲ್ಲೆಲ್ಲೂ ಭಕ್ತರು
ಮಕರವಿಳಕ್ಕು ಎನ್ನುವುದು ಹಿಂದೂ ಉತ್ಸವ. ಕೇರಳದ ಪ್ರಸಿದ್ದ ಯಾತ್ರಾಸ್ಥಳವಾದ ಶಬರಿಮಲೆ ದೇಗುಲದಲ್ಲಿ ಆಚರಿಸುವ ಪುರಾತನ ಸಂಪ್ರದಾಯ. ಅದರಲ್ಲೂ ಸಂಕ್ರಾಂತಿ ದಿನದಂದು ಮಕರವಿಳಕ್ಕು ಅಥವಾ ಮಕರ ಜ್ಯೋತಿ ದರ್ಶನ ಶ್ರೇಷ್ಠ ಎನ್ನುವ ನಂಬಿಕೆ ಭಾರತೀಯ ಭಕ್ತರದ್ದು. ಇದಕ್ಕಾಗಿಯೇ ಕೇರಳ ಮಾತ್ರವಲ್ಲದೇ ಹತ್ತಾರು ರಾಜ್ಯಗಳಿಂದಲೂ ಶಬರಿಮಲೆಗೆ ಆಗಮಿಸಿ ಈ ಕ್ಷಣಕ್ಕಾಗಿ ಕಾಯುತ್ತಾರೆ. ಈ ಬಾರಿಯೂ ಲಕ್ಷಾಂತರ ಭಕ್ತರು ಸೋಮವಾರ ನಡೆದ ಮಕರ ಸಂಕ್ರಮಣದ ಮಕರ ಜ್ಯೋತಿ ದರ್ಶನಕ್ಕೆ ಬಂದಿದ್ದರು. ಬೆಳಿಗ್ಗೆಯಿಂದಲೇ ಬೆಟ್ಟವನ್ನು ಇರುಮುಡಿ ಕಟ್ಟಿಕೊಂಡು ಏರುತ್ತಲೇ ಇದ್ದರು. ಸಂಜೆ ಹೊತ್ತಿಗೆ ಜ್ಯೋತಿ ದರ್ಶನವಾಗಲಿ ಎನ್ನುವ ಮನಸಿನ ಬೇಡಿಕೆಯೊಂದಿಗೆ ಬೆಟ್ಟ ಏರಿದವರು ಸಂಜೆ ಹೊತ್ತಿಗೆ ಮೇಲ್ಭಾಗಕ್ಕೆ ಆಗಮಿಸಿದರು.
ಈ ವೇಳೆ ಅವರು ಮಕರ ಜೋತಿ ಕಂಡು ಪುಳಕಿತರಾದರು. ಸಹಸ್ರಾರು ಭಕ್ತರ ಮುಖದಲ್ಲಿ ಜ್ಯೋತಿ ಕಂಡ ನಿರುಮ್ಮಳತೆ ಕಂಡು ಬಂದಿತು. ಇದಕ್ಕಾಗಿ ಹತ್ತಾರು ವರ್ಷದಿಂದ ಮಾಲೆ ಧರಿಸಿ ಬೆಟ್ಟಕ್ಕೆ ಬರುತ್ತಿದ್ದೇನೆ. ಏನೇನೋ ಕಾರಣದಿಂದ ಬೇಗನೇ ಅಯ್ಯಪ್ಪಸ್ವಾಮಿ ದರ್ಶನ ಮಾಡಿ ಹೋಗುತ್ತಿದ್ದೆ. ಈ ಬಾರಿ ಮಕರ ಜ್ಯೋತಿಯ ದರ್ಶನವಾಗಿದ್ದು ನನ್ನ ಪುಣ್ಯ ಎಂಬ ಭಾವನೆಯಿಂದಲೇ ಹಲವಾರು ಭಕ್ತರು ಪುಳಕಿತಗೊಂಡಿದ್ದರು. ಅಯ್ಯಪ್ಪಸ್ವಾಮಿಗೆ ಜೈಕಾರ ಹಾಕುತ್ತಲೇ ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡು ನಮಸ್ಕರಿಸಿದರು.
ಮೂರು ಬಾರಿ ದರ್ಶನ
ಮೂರು ಬಾರಿ ಮಕರ ಜ್ಯೋತಿ ದರ್ಶನವಾದಾಗಲೂ ಭಕ್ತರ ಸಂಭ್ರಮ ಮೇರೆ ಮೇರಿತ್ತು. ಜೈ ಅಯ್ಯಪ್ಪ ಎನ್ನುವ ಶಬ್ದ ಅಲ್ಲಿ ಕೇಳಿ ಬರುತ್ತಲೇ ಇತ್ತು. ಹಲವರು ಅಯ್ಯಪ್ಪ ಸ್ವಾಮಿ ಕುರಿತು ನಿರಂತರವಾಗಿ ಘೋಷಣೆ ಕೂಗುತ್ತಲೇ ಮುಂದೆ ಸಾಗಿದರು. ಶಬರಿಮಲೆಯನ್ಜು ಪೊನ್ನಂಬಲಮೇಡು ಬೆಟ್ಟ ಎಂದು ಕೇರಳದಲ್ಲಿ ಕರೆಯಲಾಗುತ್ತದೆ.
ಈ ಬಾರಿ ಬೆಟ್ಟ ಭಕ್ತರಿಂದ ಸಂಪೂರ್ಣ ತುಂಬಿ ಹೋಗಿತ್ತು. ಎಲ್ಲಿ ನೋಡಿದರೂ ಅಯ್ಯಪ್ಪ ಮಾಲೆ ಧಾರಿಗಳು, ಕಪ್ಪು, ನೀಲಿ, ಕೇಸರಿ ಬಟ್ಟೆ ಧರಿಸಿ ಇರುಮುಡಿ ಹೊತ್ತು ಇರುವೆಗಳ ರೀತಿಯಲ್ಲಿ ಸಾಲುಗಟ್ಟಿಹೋಗುತ್ತಿರುವಂತೆಯೇ ದೂರದಿಂದ ನೋಡಿದಾಗ ಭಾಸವಾಗುತ್ತಿತ್ತು.
ಮಕರ ಜ್ಯೋತಿಯನ್ನು ದೇವಸ್ಥಾನದಲ್ಲಿಯೇ ನೋಡಲು ಕೆಲವರಿಗೆ ಮಾತ್ರ ಸಾಧ್ಯವಾಗುವುದರಿಂದ ಭಕ್ತರು ಅಲ್ಲಲ್ಲಿ ನಿಂತು ನೋಡಲೆಂದು ಟಿವಿ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು. ಕೆಲವು ಕಡೆ ವೀಕ್ಷಣಾ ಸ್ಥಳಗಳನ್ನೂ ನಿಗದಿಪಡಿಸಿ ಅಲ್ಲಿಂದಲೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಯಿತು. ಮಕರ ಜ್ಯೋತಿ ಕ್ಷಣವನ್ನು ವಿವಿಧ ಚಾನೆಲ್‌ಗಳ ಮೂಲಕ ವೀಕ್ಷಣೆಗೂ ದೇವಸ್ಥಾನ ಆಡಳಿತ ಮಂಡಳಿಯು ವ್ಯವಸ್ಥೆ ಮಾಡಿತ್ತು.
ಭಾರೀ ಭದ್ರತೆ
ಕೋವಿಡ್ ಸೇರಿ ನಾನಾ ಕಾರಣಗಳಿಂದ ಮೂರ್ನಾಲ್ಕು ವರ್ಷದಿಂದ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಅದರೆ ಈ ಬಾರಿ ಕೇರಳದ ಧಾರ್ಮಿಕ ದತ್ತಿ ಇಲಾಖೆ, ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಗೋವಾ, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳಿಂದ ಆಗಮಿಸಿದ್ದರು. ಮಕರ ಜ್ಯೋತಿ ದರ್ಶನದ ದಿನ ಮೂರರಿಂದ ನಾಲ್ಕು ಪಟ್ಟು ಭಕ್ತರು ಆಗಮಿಸಿದ್ದರಿಂದ ಆಡಳಿತ ಮಂಡಳಿಯವರು ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು.
ಪೊಲೀಸ್ ಇಲಾಖೆಯೂ ಸುರಕ್ಷತೆಗೆ ಒತ್ತು ನೀಡಿ ಸಾಕಷ್ಟು ಭದ್ರತೆ ಕೈಗೊಂಡಿತ್ತು. ಕಳೆದ ವಾರ ಕೇರಳ ಹೈಕೋರ್ಟ್ ಕೂಡ ಶಬರಿಮಲೆಗೆ ಆಗಮಿಸುವ ಭಕ್ತರ ಸುರಕ್ಷತೆಗೆ ಒತ್ತು ನೀಡಿ ಆಡಳಿತ ನಡೆಸುವವರು ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದರಿಂದ ಆನ್ ಲೈನ್ ಮೂಲಕವೇ ಭಕ್ತರ ಆಗಮನದ ಮುಂಗಡ ಬುಕ್ಕಿಂಗ್‌ಗೆ ಅವಕಾಶ ನೀಡಿತ್ತು. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಸಿಕೊಂಡವರಿಗೆ ಮಾತ್ರ ಅವಕಾಶ ನೀಡಲಾಯಿತು.