Melkote Rajamudi: ಮೇಲುಕೋಟೆ ರಾಜಮುಡಿ ಬ್ರಹ್ಮೋತ್ಸವದಲ್ಲಿ ತೊಟ್ಟಿಲು ಮಡು ಜಾತ್ರಾ ಸಡಗರ
Nov 23, 2023 06:29 AM IST
ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಯವರ ಕಾರ್ತೀಕಮಾಸದ ತೊಟ್ಟಿಲಮಡು ಜಾತ್ರಾಮಹೋತ್ಸವವೆಂದೇ ಪ್ರಖ್ಯಾತವಾದ ಅಷ್ಠತೀರ್ಥೋತ್ಸವ ಬುಧವಾರ ವೈಭವದಿಂದ ನೆರವೇರಿತು.
- Mandya News ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ( Melkote) ರಾಜಮುಡಿ ಬ್ರಹ್ಮೋತ್ಸವದ ಅಂಗವಾಗಿ ನಾನಾ ಧಾರ್ಮಿಕ ಚಟುವಟಿಕೆಗಳು ನಡೆದಿವೆ. ರಾಜಮುಡಿ ಬ್ರಹ್ಮೋತ್ಸವದ ಆರನೇ ತಿರುನಾಳ್ ಮತ್ತು ದಶಮಿತಿಥಿ ಕೂಡಿದ ವಿಶೇಷ ದಿನದಂದು ಶ್ರೀಚೆಲುವನಾರಾಯಣನ ವಿಶೇಷ ಪೂಜೆ, ತೊಟ್ಟಿಲು ಮಡು ಜಾತ್ರೆಗಳು ಜರುಗಿದವು.
ಮಂಡ್ಯ:ಮಂಡ್ಯದ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಐತಿಹಾಸಿಕ ತಾಣ ಮೇಲುಕೋಟೆಯಲ್ಲಿ ಬುಧವಾರ ರಾಜಮುಡಿ ವೈಭವ, ಧಾರ್ಮಿಕ ಚಟುವಟಿಕೆಗಳ ಜತೆಗೆ ತೊಟ್ಟಿಲಮಡು ಜಾತ್ರಾಮಹೋತ್ಸವ ಸಡಗರ.
ತಾಜಾ ಫೋಟೊಗಳು
ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಯವರ ಕಾರ್ತೀಕಮಾಸದ ತೊಟ್ಟಿಲಮಡು ಜಾತ್ರಾಮಹೋತ್ಸವವೆಂದೇ ಪ್ರಖ್ಯಾತವಾದ ಅಷ್ಠತೀರ್ಥೋತ್ಸವ ಬುಧವಾರ ವೈಭವದಿಂದ ನೆರವೇರಿತು.
ರಾಜಮುಡಿ ಬ್ರಹ್ಮೋತ್ಸವದ ಆರನೇ ತಿರುನಾಳ್ ಮತ್ತು ದಶಮಿತಿಥಿ ಕೂಡಿದ ವಿಶೇಷ ದಿನದಂದು ಶ್ರೀಚೆಲುವನಾರಾಯಣನ ಬಂಗಾರದ ಪಾದುಕೆಗೆ ಪಂಚಕಲ್ಯಾಣಿ, ವೈಕುಂಠಗಂಗೆ ಹಾಗೂ ಎಲ್ಲಾ ಎಂಟು ತೀರ್ಥಗಳಲ್ಲಿ ವೇದಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು.
ರಾಜ್ಯದ ವಿವಿಧಭಾಗಗಳು ಮತ್ತು ಆಂಧ್ರಪ್ರದೇಶದಿಂದ ಭಕ್ತರು ಹಾಗೂ ಮಕ್ಕಳಭಾಗ್ಯ ಅಪೇಕ್ಷಿಸಿ ಮಡಿಲು ತುಂಬಿ ಹರಕೆ ಹೊತ್ತ ನೂರಾರು ದಂಪತಿಗಳು, ಕಂಕಣಭಾಗ್ಯ ಅಪೇಕ್ಷಿತರು, ಪಾದುಕೆಯ ಪಲ್ಲಕ್ಕಿಯೊಡನೆ 20ಕಿಮಿಗೂ ಹೆಚ್ಚು ಗಿರಿಶಿಖರಗಳ ದಾರಿಯನ್ನು ಕ್ರಮಿಸಿ ಅಷ್ಠತೀರ್ಥಗಳಲ್ಲಿ ಪವಿತ್ರಸ್ನಾನ ಮಾಡಿದರು.
ಇಡೀ ದಿನವೇದ ಪಾರಾಯಣ ನಡೆದರೆ ರಾತ್ರಿ ಶ್ರೀಯೋಗಾನರಸಿಂಹಸ್ವಾಮಿ ಗಿರಿಪ್ರದಕ್ಷಿಣೆವೇಳೆ ವಿಷ್ಣುಸಹಸ್ರನಾಮ ಪಾರಾಯಣ ಮಾಡಲಾಯಿತು.
ಅಷ್ಠತೀರ್ಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ಬೆಳಗಿನಜಾವ 5-30ಕ್ಕೆ ನಿತ್ಯಪೂಜಾ ಕೈಂಕರ್ಯಗಳನ್ನು ಆರಂಭಿಸಲಾಯಿತು. ಬೆಳಿಗ್ಗೆ 8-30ಕ್ಕೆ ವೇದಾಂತದೇಶಿಕರ ಸನ್ನಿಧಿಗೆ ಪಾದುಕೆಯಪಲ್ಲಕ್ಕಿಯ ಮಂಟಪೋತ್ಸವ ನೆರವೇರಿತು.
ರಾತ್ರಿ 9 ಗಂಟೆಗೆ ಆಚಾರ್ಯರಾಮಾನುಜರನ್ನೊಳಗೊಂಡು ವಜ್ರಖಚಿತರಾಜಮುಡಿ ಉತ್ಸವ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ಕಲ್ಯಾಣಿಗೆ ತಲುಪಿತು. ಅಲ್ಲಿನ ಗಜೇಂದ್ರವರದನ ಸನ್ನಿಧಿಯ ಬಳಿ ಸ್ವಾಮಿಯ ಪಾದುಕೆಗೆ ಲೋಕಲ್ಯಾರ್ಥವಾಗಿ ಹಾಗೂ ಹರಕೆಹೊತ್ತಭಕ್ತರ ಇಷ್ಠಾರ್ಥ ನೆರವೇರಲಿ ಎಂದು ಪ್ರಾರ್ಥಿಸಿ ವಿಶೇಷ ಆರಾಧನೆಮಾಡಿ ಕಲ್ಯಾಣಿಯಲ್ಲಿ ಅಭಿಷೇಕ ಮಾಡಲಾಯಿತು. ಸಾವಿರಾರು ಭಕ್ತರು ಕಲ್ಯಾಣಿಯಲ್ಲಿ ಪವಿತ್ರಸ್ನಾನಮಾಡಿದ ನಂತರ ಅಷ್ಠತೀರ್ಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಗಿರಿಶಿಖರಗಳ ಮಧ್ಯೆ ಇರುವೆಯ ಸಾಲಿನಂತೆ ಸಾಲಾಗಿ ಸಾಗುತ್ತಿದ್ದ ಭಕ್ತಸಮೂಹ ದೃಶ್ಯವೈಭವ ಸೃಷ್ಠಿಸಿ ಭಕ್ತಿಯ ಚಿಲುಮೆ ಉಕ್ಕಿಸುತ್ತಿತ್ತು. ಪ್ರಥಮವಾಗಿ ವೇದಪುಷ್ಕರಣಿಯಲ್ಲಿ ನಂತರ 500 ಅಡಿ ಎತ್ತರದಲ್ಲಿರುವ ರಾಮ ಸೀತೆಗಾಗಿ ಬಾಣಬಿಟ್ಟು ತೀರ್ಥ ತರಿಸಿದ ಧನುಷ್ಕೋಟಿಯಲ್ಲಿ ಸ್ನಾನ ಮಾಡಿದರು.
ನಂತರ ಬೆಟ್ಟ ಇಳಿದು ಬೃಹತ್ ಬೆಟ್ಟದ ಸಾಲುಗಳಲ್ಲಿ ಸಾಗಿ ಯಾದವಾತೀರ್ಥ, ದರ್ಭತೀರ್ಥ, ಪಲಾಶತೀರ್ಥ ಪದ್ಮತೀರ್ಥದಲ್ಲಿ ಅಭಿಷೇಕದಲ್ಲಿ ಪಾಲ್ಗೊಂಡರು. ಪಲಾಶತೀರ್ಥದಲ್ಲಿ ಯತಿರಾಜದಾಸರ್ ಗುರುಪೀಠದಿಂದ ಭಕ್ತರಿಗೆ ಹಾಲು ಹಣ್ಣು ವಿತರಿಸಲಾಯಿತು.
ಮಧ್ಯಾಹ್ನ 3 ಗಂಟೆಗೆ ನರಸಿಂಹ ಮತ್ತು ನಾರಾಯಣ ತೀರ್ಥದಲ್ಲಿ ಅಭಿಷೇಕ ನೆರವೇರಿತು ಸಂಜೆ 5ಗಂಟೆ ಸುಮಾರಿಗೆ ತೊಟ್ಟಿಲಮಡು ವೈಕುಂಠಗಂಗೆಯಲ್ಲಿ ಸಮಾರೋಪ ಅಭಿಷೇಕ ನೆರವೇರಿತು. ಈ ವೇಳೆ ಮೇಲುಕೋಟೆಯ ವಿಶಿಷ್ಠ ಪ್ರಸಾದವಾದ ಕದಂಬ ಮತ್ತು ಮೊಸರನ್ನವನ್ನು ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರಿಗೆ ನೀಡಲಾಯಿತು, ವಿವಿಧ ಜನಾಂಗದವತಿಯಿಂದ ಪ್ರಸಾದವಿತರಣೆ ಸೇವೆ ಅನೂಚಾನ ಸಂಪ್ರದಾಯದಂತೆ ಏರ್ಪಡಿಸಲಾಗಿತ್ತು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಸ್ ಮಹೇಶ್ ಅಷ್ಠತೀರ್ಥಗಳು ಹಾಗೂ ಪಲ್ಲಕ್ಕಿ ಸಾಗುವ ಮಾರ್ಗದಲ್ಲಿ ಶುಚಿತ್ವಮಾಡಿದ್ದರೆ. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಮತ್ತು ಜನಪ್ರತಿನಿಧಿಗಳ ತಂಡ ಆಸಕ್ತಿವಹಿಸಿ ತೊಟ್ಟಿಲಮಡು ಬಳಿ, ಕುಡಿಯುವ ನೀರು, ಸ್ವಚ್ಚತೆ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿತ್ತು.
ಮೇಲುಕೋಟೆ ಇನ್ಸ್ಪೆಕ್ಟರ್ ಸಿದ್ಧಪ್ಪ ಪೊಲೀಸ್ ಭದ್ರತೆ ಮಾಡಿದ್ದರು, ಉತ್ಸವದ ಧಾರ್ಮಿಕ ಕೈಂಕರ್ಯಗಳು ಸಮಯಕ್ಕೆ ಸರಿಯಾಗಿ ನಡೆಯಲು ದೇವಾಲಯದ ಪಾರುಪತ್ತೇಗಾರರುಗಳಾದ ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಪರಿಚಾರಕ ಎಂ.ಎನ್ ಪಾರ್ಥಸಾರಥಿ ಸಿಬ್ಬಂದಿಗಳ ಸಹಕಾರದಲ್ಲಿ ಶ್ರಮಿಸಿದ್ದರು.
ರಾಜಮುಡಿ ಬ್ರಹ್ಮೋತ್ಸವದ ಅಂಗವಾಗಿ ನಡೆಯುತ್ತಿರುವ ನಾನಾ ಧಾರ್ಮಿಕ ಚಟುವಟಿಕೆಗಳು ನವೆಂಬರ್ 25ರ ಶನಿವಾರ ತೀರ್ಥಸ್ನಾನ ನೆರವೇರುವುದರೊಂದಿಗೆ ಮುಕ್ತಾಯವಾಗಲಿದೆ ಎಂದು ಮೇಲುಕೋಟೆ ದೇವಾಲಯ ಸಮಿತಿ ತಿಳಿಸಿದೆ.