ಮಿಥುನದಲ್ಲಿ ಕುಜ: ಸಿಂಹದಿಂದ ವೃಶ್ಚಿಕ ರಾಶಿವರೆಗೆ ಉಂಟಾಗುವ ಪರಿಣಾಮ; ಹಟದ ಸ್ವಭಾವವೇ ಯಶಸ್ಸಿಗೆ ಅಡ್ಡಿಯಾಗಲಿದೆ
Aug 28, 2024 10:27 AM IST
ಮಿಥುನದಲ್ಲಿ ಕುಜ: ಸಿಂಹದಿಂದ ವೃಶ್ಚಿಕ ರಾಶಿವರೆಗೆ ಉಂಟಾಗುವ ಪರಿಣಾಮ
- ಮಿಥುನ ರಾಶಿಗೆ ಇದೇ ಕೃಷ್ಣಾಷ್ಟಮಿಯಂದು (ಆಗಸ್ಟ್ 26) ಮಂಗಳನ (ಕುಜ) ಪ್ರವೇಶವಾಗಿದೆ. ಅಕ್ಟೋಬರ್ ತಿಂಗಳ 20ನೇ ತಾರೀಖಿನವರೆಗೂ ಮಂಗಳ ಇದೇ ರಾಶಿಯಲ್ಲಿ ಇರುತ್ತಾನೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಶುಭಫಲವಿದ್ದರೆ, ಕೆಲವರಿಗೆ ನಷ್ಟವಾಗಲಿದೆ. ಕುಜ ಸಂಚಾರದಿಂದ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಗಳಿಗೆ ಏನು ಫಲ ಎಂಬ ವಿವರ ಇಲ್ಲಿದೆ. (ಬರಹ: ಸತೀಶ್ ಎಚ್.)
ಮಿಥುನ ರಾಶಿಗೆ ಇದೇ ಕೃಷ್ಣಾಷ್ಟಮಿಯಂದು (ಆಗಸ್ಟ್ 26) ಮಂಗಳನ (ಕುಜ) ಪ್ರವೇಶವಾಗಿದೆ. ಅಕ್ಟೋಬರ್ ತಿಂಗಳ 20ನೇ ತಾರೀಖಿನವರೆಗೂ ಮಂಗಳ ಇದೇ ರಾಶಿಯಲ್ಲಿ ಇರುತ್ತಾನೆ. ಈ ಅವಧಿಯಲ್ಲಿ ಹಲವು ರಾಶಿಗಳಿಗೆ ಶುಭ ಫಲ ಕೊಡುತ್ತಾನೆ. ಕೆಲ ರಾಶಿಗಳಿಗೆ ಸೇರಿದವರು ಮಾತ್ರ ಎಚ್ಚರವಹಿಸಬೇಕು. ದುಡುಕುತನವು ಯಾವುದೇ ರಾಶಿಗೆ ಒಳ್ಳೆಯದಲ್ಲ. ಕುಜ ಸಂಚಾರದಿಂದ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಗಳಿಗೆ ಏನು ಫಲ ಎನ್ನುವ ವಿವರ ಇಲ್ಲಿದೆ.
ತಾಜಾ ಫೋಟೊಗಳು
ಸಿಂಹ ರಾಶಿ: ಬಹುಕಾಲದ ಆಸೆ ಈಡೇರುವ ಕಾಲವಿದು
ನಿಮ್ಮ ಮನಸ್ಸಿನಲ್ಲಿದ್ದ ಬಹುತೇಕ ಆಸೆ-ಆಕಾಂಕ್ಷೆಗಳು ಈಡೇರುವ ಸಮಯ ಇದು. ಆದರೆ ನಿಮ್ಮ ಮನಸ್ಸನ್ನು ಬದಲಿಸುವ ಜನರು ಸುತ್ತಮುತ್ತಲೂ ಇರುತ್ತಾರೆ. ಹೀಗಾಗಿ ನೀವು ಎಚ್ಚರ ವಹಿಸಲೇಬೇಕು. ನಿಮ್ಮ ಮನಸ್ಸನ್ನು ಸುಲಭವಾಗಿ ಯಾರೂ ಬದಲಿಸಲು ಸಾಧ್ಯವಾಗುವುದಿಲ್ಲ. ನೀವು ಅಧಿಕಾರಿಗಳಾಗಿದ್ದಲ್ಲಿ ದೊಡ್ಡಮಟ್ಟದ ಯಶಸ್ಸು ದೊರೆಯಲಿದೆ. ಕಾರ್ಮಿಕ ವರ್ಗದವರಿಗೆ ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಕೊಂಚ ಪ್ರಯತ್ನಪಟ್ಟಲ್ಲಿ ಸ್ವಂತ ಮನೆ ಕಟ್ಟಿಸುವ ಅಥವಾ ಕೊಳ್ಳುವ ಅವಕಾಶ ಒದಗಿಬರಲಿದೆ. ತಂದೆಯವರು ಮಾಡುತ್ತಿದ್ದ ವ್ಯಾಪಾರವೊಂದನ್ನು ಮುಂದುವರೆಸಿ ಉತ್ತಮ ಲಾಭ ಗಳಿಸುವಿರಿ. ಕುಟುಂಬದಲ್ಲಿ ನಿಮ್ಮ ನಿರ್ಧಾರಗಳೇ ಅಂತಿಮವಾಗುತ್ತದೆ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಲು ಪ್ರಯತ್ನಿಸಿ. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಅತಿ ಮುಖ್ಯ.
ಕನ್ಯಾ ರಾಶಿ: ಉದ್ಯೋಗದಲ್ಲಿ ಬೇಸರ, ಕ್ಷಮಿಸುವುದು ಕಲಿಯಿರಿ
ಉದ್ಯೋಗದಲ್ಲಿ ಬೇಸರದ ಸನ್ನಿವೇಶಗಳು ಎದುರಾಗುತ್ತವೆ. ಹಿರಿಯ ಸೋದರ ಅಥವಾ ಸೋದರಿಯ ಕೆಲಸ ಕಾರ್ಯಗಳಲ್ಲಿ ನಿಮ್ಮ ಪಾತ್ರ ಅತಿಮುಖ್ಯವಾಗುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಸಾಧ್ಯವಾದಷ್ಟು ಬದಲಿಸದಿರಿ. ತಪ್ಪನ್ನು ಖಂಡಿಸುವ ಬದಲು ಮನ್ನಿಸಿ ಸರಿಪಡಿಸಿ. ಈ ಅವಧಿಯಲ್ಲಿ ಕೇವಲ ನೀವು ಆಡುವ ಮಾತುಕತೆಯು ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ತರುತ್ತವೆ. ಮನಸ್ಸಿಗೆ ಬೇಸರ ಉಂಟಾಗಿ ಉದ್ಯೋಗ ಬದಲಿಸಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಹಣಕಾಸಿನ ಕೊರತೆಯನ್ನು ಸರಿದೂಗಿಸಲು ಉಪವೃತ್ತಿ ಅಥವಾ ಸಣ್ಣಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಮನಸ್ಸಿನಲ್ಲಿ ಅಳುಕಿನ ಭಾವನೆ ತುಂಬಿರುತ್ತದೆ. ಅನಾವಶ್ಯಕವಾದ ಖರ್ಚು ವೆಚ್ಚಗಳನ್ನು ನಿಯಂತ್ರಿಸುವುದು ಉತ್ತಮ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಮಕ್ಕಳು ನಿಮ್ಮ ಪ್ರೀತಿ ವಿಶ್ವಾಸವನ್ನು ನಿರೀಕ್ಷಿಸುತ್ತಾರೆ. ಆತುರದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿರಿ.
ತುಲಾ ರಾಶಿ: ಕುಟುಂಬದಲ್ಲಿ ನೆಮ್ಮದಿ ಮೂಡುವ ಕಾಲ
ತುಲಾ ರಾಶಿಯವರು ಮೊದಲೇ ಲೆಕ್ಕಾಚಾರದ ಜನ. ಬುದ್ಧಿವಂತಿಕೆಯ ಮಾತುಕತೆಯಿಂದ ತಮ್ಮ ಕೆಲಸಗಳಲ್ಲಿ ಗೆಲುವು ಸಾಧಿಸುತ್ತಾರೆ. ಆರಂಭಿಸಿದ ಪ್ರತಿ ಕೆಲಸವನ್ನೂ ಪೂರ್ಣಗೊಳಿಸುವ ತವಕವಿರುತ್ತದೆ. ಕುಟುಂಬದಲ್ಲಿದ್ದ ಅಸಮಾಧಾನವು ದೂರವಾಗುತ್ತದೆ. ದಾಂಪತ್ಯದಲ್ಲಿ ಪರಸ್ಪರ ಪ್ರೀತಿ ವಿಶ್ವಾಸವಿರುತ್ತದೆ. ಉದ್ಯೋಗದಲ್ಲಿ ನಿಮಗೆ ಉಪಯುಕ್ತವಾಗುವ ಬದಲಾವಣೆಗಳು ಉಂಟಾಗಲಿವೆ. ಹಣಕಾಸಿನ ಕೊರತೆ ಇರುವುದಿಲ್ಲ. ಆದರೆ ಉಳಿತಾಯ ಮಾಡುವ ತೀರ್ಮಾನ ಒಳ್ಳೆಯದು. ನಿಮ್ಮ ತಂದೆ ಉದ್ಯೋಗ ಬದಲಿಸಬಹುದು. ಬಹು ಹಿಂದಿನ ಯೋಜನೆಯಂತೆ ದೀರ್ಘಕಾಲದ ಪ್ರವಾಸವು ಸಾಧ್ಯವಾಗುತ್ತದೆ. ಹೈಪರ್ ಅಸಿಡಿಟಿಯ ಸೂಚನೆಗಳು ಕಂಡುಬರುತ್ತವೆ. ಲಘು ವ್ಯಾಯಾಮದಿಂದ ಉತ್ತಮ ಆರೋಗ್ಯ ಗಳಿಸಬಹುದು. ಭೂವ್ಯವಹಾರವಿದ್ದಲ್ಲಿ ಕಾನೂನು ತಜ್ಞರ ಜೊತೆಗೆ ಚರ್ಚಿಸುವುದು ಒಳ್ಳೆಯದು. ಆಕಸ್ಮಿಕ ಆದಾಯಕ್ಕೆ ಆಸೆಪಟ್ಟು ಮೋಸ ಹೋಗಬೇಡಿ.
ವೃಶ್ಚಿಕ ರಾಶಿ: ನಿಮ್ಮ ಗೆಲುವಿಗೆ ಹಟದ ಸ್ವಭಾವವೇ ಅಡ್ಡಿ
ನಿಮ್ಮಲ್ಲಿರುವ ಹಟದ ಗುಣವು ಗೆಲುವಿಗೆ ಅಡ್ಡಿಯಾಗಬಹುದು. ಆದ್ದರಿಂದ ಕಾದು ನೋಡುವ ನೀತಿಯನ್ನು ಪಾಲಿಸುವುದು ಒಳ್ಳೆಯದು. ಹಣದ ಸಹಾಯವು ಅನಿರೀಕ್ಷಿತವಾಗಿ ಆಪ್ತರಿಂದ ದೊರೆಯುತ್ತದೆ. ಕೆಲವೊಂದು ಅಡಚಣೆಗಳು ಎದುರಾದ ನಂತರ ಉದ್ಯೋಗದಲ್ಲಿ ವಿಶೇಷ ಪ್ರಗತಿ ಸಾಧಿಸುವಿರಿ. ನಿಮ್ಮ ದಕ್ಷತೆಗೆ ಮೆಚ್ಚಿ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಕುಟುಂಬದ ಹಿರಿಯರಿಂದ ಅಗತ್ಯ ಹಣದ ಸಹಕಾರ ದೊರೆಯುತ್ತದೆ. ಉತ್ತಮ ಅವಕಾಶ ದೊರೆತರೆ ಕೊಂಚ ಪ್ರಯಾಸವಾದರೂ ಉದ್ಯೋಗ ಬದಲಿಸಬಹುದು. ಬಾಳ ಸಂಗಾತಿಯ ಜೊತೆಯಲ್ಲಿ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ಮಕ್ಕಳೇ ಸರ್ವಸ್ವ ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಕೆಲಸದ ಒತ್ತಡದಿಂದ ವೈಯಕ್ತಿಕ ಜವಾಬ್ದಾರಿ ಪೂರ್ಣಗೊಳಿಸಲು ಅಸಾಧ್ಯ. ಆಡುಮಾತಿನ ಮೇಲೆ ಹತೋಟಿ ಇದ್ದಲ್ಲಿ ಮಾತ್ರ ವಿರಸದ ಕ್ಷಣಗಳು ದೂರವಾಗುತ್ತವೆ.
(ಗಮನಿಸಿ: ಇದು ನಂಬಿಕೆ ಮತ್ತು ಪ್ರಚಲಿತ ಕಥೆಗಳನ್ನು ಆಧರಿಸಿದ ಬರಹ. ಇಲ್ಲಿರುವ ಯಾವ ಸಂಗತಿಯನ್ನೂ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸಿಬ್ಬಂದಿ ಪುಷ್ಟೀಕರಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಓದುಗರಿಗೆ ಮಾಹಿತಿ ಕೊಡುವ ಉದ್ದೇಶದಿಂದ ಮಾತ್ರ ಈ ಬರಹ ಪ್ರಕಟಿಸಲಾಗಿದೆ.)