logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೀನ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಕೆಲಸ-ಕಾರ್ಯಗಳು ವಿಳಂಬವಾಗಲಿವೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ

ಮೀನ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಕೆಲಸ-ಕಾರ್ಯಗಳು ವಿಳಂಬವಾಗಲಿವೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ

Reshma HT Kannada

Mar 30, 2024 12:30 PM IST

google News

ಮೀನ ರಾಶಿ ಯುಗಾದಿ ಭವಿಷ್ಯ

    • ಯುಗಾದಿ ರಾಶಿ ಭವಿಷ್ಯ: ಸೂಕ್ಷ್ಮ ಗುಣದ ಮೀನ ರಾಶಿಯವರು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುತ್ತಾರೆ. ಆದರೆ ಎಲ್ಲಾ ರೀತಿ ಅನುಕೂಲಗಳಿದ್ದರೂ ಚಿಂತೆ ತಪ್ಪಿದ್ದಲ್ಲ. ದೃಢ ಮನಸ್ಸಿಲ್ಲದೆ ಇರುವುದೇ ಇವರಿಗೆ ಅಪಾಯ. ಸಾಧಿಸುವ ಮನಸ್ಸುಳ್ಳ ಮೀನ ರಾಶಿಯವರಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದಲ್ಲಿ ಬೆಲ್ಲ. ಜ್ಯೋತಿಷಿ ಎಚ್.ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.
ಮೀನ ರಾಶಿ ಯುಗಾದಿ ಭವಿಷ್ಯ
ಮೀನ ರಾಶಿ ಯುಗಾದಿ ಭವಿಷ್ಯ

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಮೀನ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಪೂರ್ವಾಭಾದ್ರ ನಕ್ಷತ್ರದ 4ನೇ ಪಾದ, ಉತ್ತರಾಭಾದ್ರ ನಕ್ಷತ್ರದ 1,2,3 ಮತ್ತು 4ನೇ ಪಾದಗಳು, ರೇವತಿ ನಕ್ಷದ 1,2,3 ಅಥವ 4 ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಮೀನ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ದಿ ಆದಲ್ಲಿ ಪೂರ್ವಾಭಾದ್ರ ನಕ್ಷತ್ರ, ದು, ಖ, ಝ ಮತ್ತು ಥ ಆದಲ್ಲಿ ಉತ್ತರಾಭಾದ್ರ ನಕ್ಷತ್ರ ಹಾಗು ದೆ, ದೊ, ಚ ಅಥವ ಚಿ ಆದಲ್ಲಿ ರೇವತಿ ನಕ್ಷತ್ರ ಹಾಗು ಮೀನ ರಾಶಿ ಆಗುತ್ತದೆ. ಸೂಕ್ಷ್ಮ ಗುಣವಿರುವ ಮೀನ ರಾಶಿಯವರು ದೃಢ ನಿರ್ಧಾರ ತೆಗೆದುಕೊಳ್ಳದ ಕಾರಣ ಪದೇ ಪದೇ ಸೋಲು ಎದುರಿಸುತ್ತಾರೆ. ಶಾಂತ ಸ್ವಭಾವವಿದ್ದರೂ ಮಾತು ಕಟುವಾಗಿರುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಅಭಿಲಾಷೆ ಇವರಲ್ಲಿರುತ್ತದೆ. ವಿಲಾಸಿ ಜೀವನ ಇಷ್ಟಪಡುವ ಈ ರಾಶಿಯವರು ಅಂದುಕೊಂಡಿದ್ದನ್ನು ಸಾಧಿಸದೇ ಬಿಡುವುದಿಲ್ಲ.

ಮೀನ ರಾಶಿಯ ಗುಣಲಕ್ಷಣಗಳು (Pisces characteristics in Kannada)

ಮೀನ ರಾಶಿಯಲ್ಲಿ ಜನಿಸಿರುವ ಮಹಿಳೆಯರಿಗೆ ಕೋಮಲವಾದ ಮನಸ್ಸಿರುತ್ತದೆ. ಯಾರ ಮನಸ್ಸಿಗೂ ನೋವಾಗುವಂತೆ ಮಾತನಾಡುವುದಿಲ್ಲ. ಸೂಕ್ಷ್ಮವಾದ ಗುಣ ಸ್ವಭಾವವಿರುತ್ತದೆ. ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನ ದೊರೆಯುತ್ತದೆ. ಹಾಸ್ಯಪ್ರಜ್ಞೆ ವಿಶೇಷವಾಗಿರುತ್ತದೆ. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳುವ ಗುಣ ಇವರದ್ದು. ಸದಾಕಾಲ ಯಾವುದಾದರೂ ಒಂದು ಕೆಲಸ-ಕಾರ್ಯಗಳಲ್ಲಿ ನಿರತರಾಗಿರುತ್ತೀರಿ. ಎಲ್ಲಾ ರೀತಿಯ ಅನುಕೂಲಗಳು ಇದ್ದರೂ ಮನದಲ್ಲಿ ಚಿಂತೆಯೊಂದು ಇರುತ್ತದೆ. ಶಾಂತಿ ಸ್ವಭಾವದವರಾದರೂ ಕಟುವಾಗಿ ಮಾತನಾಡುವಿರಿ.

ಈ ಜಾತಕದಲ್ಲಿ ಜನಿಸಿರುವ ಪುರುಷರು ಜೀವನವನ್ನು ಪ್ರೀತಿಸುತ್ತಾರೆ. ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂಬ ಅಭಿಲಾಷೆ ಇವರಿಗಿರುತ್ತದೆ. ಸೂಕ್ಷ್ಮವಾದ ಮನಸ್ಸಿನ ಕಾರಣ ಸಣ್ಣಪುಟ್ಟ ವಿವಾದವನ್ನು ಎದುರಿಸಲಾರಿರಿ. ಆಧ್ಯಾತ್ಮಿಕ ಭಾವನೆ ವಿಶೇಷವಾಗಿರುತ್ತದೆ. ಸಂಗೀತ, ನಾಟ್ಯದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಹೆಚ್ಚು ಆಸಕ್ತಿ ತೋರುವಿರಿ. ಕುಟುಂಬದ ಒಳಿತಿಗಾಗಿ ಯಾವುದೇ ತ್ಯಾಗವನ್ನು ಮಾಡಬಲ್ಲಿರಿ. ಕೋಪ ಬೇಗನೆ ಬಂದರೂ ಬಹುಕಾಲ ಉಳಿಯದು. ಹೆಚ್ಚಿನ ನಿರೀಕ್ಷೆ ಇದ್ದರೂ ಸುಮ್ಮನಾಗುವಿರಿ.

ಸಾಮಾನ್ಯವಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ಧೃಡವಾದ ಮನಸ್ಸಿರುವುದಿಲ್ಲ. ಆದ್ದರಿಂದ ಎಲ್ಲಾ ಕೆಲಸ-ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆದರೆ ಶುದ್ಧವಾದ ಮನಸ್ಸಿರುತ್ತದೆ. ಯಾವುದೇ ಕೆಲಸ-ಕಾರ್ಯಗಳು ನಿಮಗೆ ಅಸಾಧ್ಯವೆನಿಸುವುದಿಲ್ಲ. ಉನ್ನತ ಮಟ್ಟದ ಜೀವನವನ್ನು ನಡೆಸಲು ಬಯಸುವಿರಿ. ವಿಲಾಸಿ ಜೀವನವನ್ನು ನಡೆಸಲು ಇಷ್ಟಪಡುವಿರಿ. ಇವರ ದಾಂಪತ್ಯ ಜೀವನವು ಸುಖ ಸಂತೋಷಗಳಿಂದ ಕೂಡಿರುತ್ತದೆ.

ಮೀನ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ಮೀನ ರಾಶಿಗೆ ಸೇರಿದವರು ನೆನಪಿಟ್ಟುಕೊಂಡಿರಬೇಕಾದ ವಿಷಯಗಳು. ಶುಭ ದಿನಾಂಕಗಳು: 1,3,4 ಮತ್ತು9, ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಅಶುಭ ವರ್ಣ: ನೀಲಿ, ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಶುಭ ತಿಂಗಳು: ಏಪ್ರಿಲ್ 15ರಿಂದ ಮೇ 14 ಮತ್ತು ಡಿಸೆಂಬರ್ 15ರಿಂದ ಜನವರಿ 14, ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ

ಶ್ರೀ ಕ್ರೋಧಿನಾಮ ಸಂವತ್ಸರದ ಮೀನ ರಾಶಿಯ ಗೋಚಾರ ಫಲ

ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಜೂನ್ ತಿಂಗಳವರೆಗೂ ಯಾವುದೇ ತೊಂದರೆ ಎದುರಾಗುವುದಿಲ್ಲ. ಅನಂತರ ಗುರು ಮೂರನೇ ಮನೆಯಲ್ಲಿ ಸಂಚರಿಸುತ್ತಾನೆ. ನಂತರದ ದಿನಗಳಲ್ಲಿ ಸಣ್ಣಪುಟ್ಟ ಕೆಲಸ-ಕಾರ್ಯಗಳು ಹೆಚ್ಚಿನ ಪ್ರಯಾಸದಿಂದ ನಡೆಯಲ್ಪಡುತ್ತವೆ. ಆದಾಯವನ್ನು ಮೀರಿಸಿದ ಖರ್ಚು ವೆಚ್ಚಗಳು ಇರಲಿವೆ. ಸೋದರರ ಅಥವಾ ಸೋದರಿಯರ ಸಲುವಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸುವಿರಿ. ಮನದಲ್ಲಿ ಜೀವನದ ಭವಿಷ್ಯದ ಬಗ್ಗೆ ಹೆಚ್ಚಿನ ಯೋಚನೆಗಳು ಇರುತ್ತವೆ. ಅನಾವಶ್ಯಕವಾಗಿ ಕೆಲಸ-ಕಾರ್ಯಗಳನ್ನು ಮುಂದೂಡದೆ ಅಂದಿನ ಕೆಲಸವನ್ನು ಅಂದೇ ಪೂರ್ಣಗೊಳಿಸುವುದು ಒಳ್ಳೆಯದು.

ಕೌಟುಂಬಿಕ ಬದುಕು: ಕುಟುಂಬದಲ್ಲಿ ಪ್ರೀತಿ, ವಿಶ್ವಾಸ

ಮೀನ ರಾಶಿಗೆ ಸೇರಿದವರು ಪ್ರೀತಿ, ವಿಶ್ವಾಸದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಮಕ್ಕಳ ಬಗ್ಗೆ ಹೆಚ್ಚಿನ ಮುದ್ದು ಇದ್ದರೂ ಶಿಸ್ತಿನ ಜೀವನ ಕಲಿಸುವಿರಿ. ಕುಟುಂಬದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗು ನಂಬಿಕೆ ಇರುತ್ತದೆ. ಇದರಿಂದಾಗಿ ಯಾವುದೇ ತೊಂದರೆ ಎದುರಾಗದು. ಸ್ಥಿರವಾದ ಮನಸ್ಸು ಇರುವುದಿಲ್ಲ. ಆತ್ಮೀಯರಿಂದ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಅನುಕೂಲ ದೊರೆಯುತ್ತದೆ. ಕೋಪ ಬರುವುದೇ ಇಲ್ಲ. ಯಾರ ಮಾತನ್ನು ಕೇಳುವುದಿಲ್ಲ. ದಂಪತಿಗಳ ನಡುವೆ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಮಾನಸಿಕ ಒತ್ತಡವಿರುತ್ತದೆ.

ಉದ್ಯೋಗ; ಹಲವು ಬಾರಿ ಕೆಲಸ ಬದಲಿಸುವ ಸಾಧ್ಯತೆ

ಮೀನ ರಾಶಿಯಲ್ಲಿ ಜನಿಸಿದವರಿಗೆ ಈ ವರ್ಷ ಉದ್ಯೋಗದಲ್ಲಿ ಹಲವು ಬದಲಾವಣೆಗಳು ಕಂಡುಬರಲಿವೆ. ಹಲವು ಬಾರಿ ಉದ್ಯೋಗವನ್ನು ಬದಲಾಯಿಸುವ ಸೂಚನೆಗಳಿವೆ. ಮನಸ್ಸಿನಲ್ಲಿ ಯಾವುದೋ ಒಂದು ರೀತಿಯ ಭೀತಿ ಆವರಿಸಿರುತ್ತದೆ. ಕೆಲಸ-ಕಾರ್ಯಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ರೂಪಿಸುತ್ತದೆ. ನಿಮ್ಮಲ್ಲಿರುವ ವಿಶೇಷ ಬುದ್ಧಿಶಕ್ತಿ ದೊಡ್ಡ ವಿವಾದ ಒಂದರಿಂದ ಪಾರು ಮಾಡುತ್ತದೆ. ಸ್ವಂತ ಉದ್ದಿಮೆ ಇರುವವರು ಕಾರ್ಮಿಕರ ಮನದಾಸೆಗಳನ್ನು ಈಡೇರಿಸುತ್ತಾರೆ. ಎಲ್ಲರ ಮನೆಗೆದ್ದು ಸಮಾಜದ ಮುಖ್ಯಸ್ಥರಾಗಿ ಮೆರೆಯುತ್ತಾರೆ. ಆದರೆ ಸಾಧ್ಯವಾದಷ್ಟು ದೃಢವಾದ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ವಿದ್ಯಾಭ್ಯಾಸ; ತಾಂತ್ರಿಕ ಜ್ಞಾನದಲ್ಲಿ ವಿಶೇಷ ಪರಿಣತಿ

ಮೀನ ರಾಶಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಉನ್ನತ ವಿದ್ಯಾಭ್ಯಾಸಕ್ಕೆ ವಿಷಯಗಳ ಆಯ್ಕೆ ಮಾಡುವ ವೇಳೆ ಒತ್ತಡಕ್ಕೆ ಒಳಗಾಗುವಿರಿ. ವಿದೇಶದಲ್ಲಿ ಕಲಿಯುವ ಕನಸಿದ್ದಲ್ಲಿ ಹೆಚ್ಚಿನ ಮಟ್ಟದ ಪ್ರಯತ್ನ ಬೇಕು. ಶಿಕ್ಷಕರಿಗೆ ವಿಶೇಷ ಗೌರವ ನೀಡುವ ಕಾರಣ, ಅವರ ಸಹಾಯ ಬಹುಕಾಲ ಲಭಿಸುತ್ತದೆ. ಸಹಪಾಠಿಗಳು ನಿಮ್ಮ ಮನಸ್ಸನ್ನು ಅರಿತುಕೊಂಡು ನಿಮ್ಮೊಡನೆ ಮುಂದುವರೆಯುತ್ತಾರೆ. ತಾಂತ್ರಿಕ ಜ್ಞಾನದಲ್ಲಿ ವಿಶೇಷ ಪರಿಣತಿ ಸಾಧಿಸುವಿರಿ. ವಿದ್ಯಾರ್ಥಿನಿಯರು ಮೇಲುಗೈ ಸಾಧಿಸುವ ಲಕ್ಷಣಗಳು ತೋರುತ್ತವೆ. ಉದ್ಯೋಗ ಗಳಿಸಲು ಬೇಕಾದ ವಿಷಯಗಳನ್ನು ಮಾತ್ರ ಆಯ್ದು ಅಭ್ಯಾಸ ಮಾಡುವಿರಿ.

ಹಣಕಾಸಿನ ಪರಿಸ್ಥಿತಿ; ಸ್ಥಿರವಾದ ಹಣ ಗಳಿಕೆ ಇರುವುದಿಲ್ಲ

ಮೀನ ರಾಶಿಯ ಜಾತಕರಿಗೆ ಆದಾಯದ ವಿಚಾರದಲ್ಲಿ ಮಾನಸಿಕ ಒತ್ತಡವಿರುತ್ತದೆ. ಸ್ಥಿರವಾದ ಹಣ ಗಳಿಕೆ ಸಾಧ್ಯವಾಗುವುದಿಲ್ಲ. ಹೆಚ್ಚಾದ ಆದಾಯವಿರುವ ವೇಳೆಯಲ್ಲಿ ಹಣವನ್ನು ಉಳಿಸಲು ಪ್ರಯತ್ನಿಸಿ. ಹಿರಿಯ ಸೋದರ ಅಥವಾ ಸೋದರಿಯ ಸಲುವಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ಜೂನ್ ತಿಂಗಳವರೆಗೂ ಅನಿರೀಕ್ಷಿತ ಧನ ಲಾಭವಿರುತ್ತದೆ. ಅವಶ್ಯಕತೆ ಇದ್ದಲ್ಲಿ ಕುಟುಂಬದವರಿಂದ ಹಣದ ಸಹಾಯ ದೊರೆಯುತ್ತದೆ. ಜೂನ್ ತಿಂಗಳ ನಂತರ ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಫಲಿತಾಂಶ ಅಂದರೆ ಧನಲಾಭ ಇರಲಿದೆ. ಖರ್ಚು ವೆಚ್ಚಗಳ ಮೇಲೆ ಹಿಡಿತವನ್ನು ಸಾಧಿಸಿದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಹೇರಳ ಲಾಭವಿರುತ್ತದೆ. ಕಡಿಮೆ ಬಂಡವಾಳದಿಂದ ಹೆಚ್ಚಿನ ಲಾಭ ಗಳಿಸಲು ಪ್ರಯತ್ನಿಸುವುದು ಒಳ್ಳೆಯದು.

ಕುಟುಂಬದ ವಿಚಾರ; ಪದೇಪದೆ ನಿರ್ಧಾರ ಬದಲಿಸಬೇಡಿ

ಮೀನ ರಾಶಿಗೆ ಸೇರಿದವರ ಕುಟುಂಬದಲ್ಲಿ ಉತ್ತಮ ಸಾಮರಸ್ಯ ಕಂಡುಬರುತ್ತದೆ. ದಂಪತಿಗಳ ನಡುವೆ ಆತ್ಮೀಯತೆ ಹೆಚ್ಚುತ್ತದೆ. ಕುಟುಂಬದ ಸದಸ್ಯರು ಪ್ರತಿಯೊಂದು ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವ ಕಾರಣ ಸಂತೋಷ ನೆಲೆಸಿರುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸದೆ ಹೋದಲ್ಲಿ ತೊಂದರೆ ಇರುವುದಿಲ್ಲ. ಆದರೆ ಹಣಕಾಸಿನ ವಿಚಾರದಲ್ಲಿನ ಚರ್ಚೆಯಲ್ಲಿ ಒಮ್ಮತ ಮೂಡುವುದು ಅಸಾಧ್ಯ. ಕುಟುಂಬದ ಹಿರಿಯರ ವಿಚಾರದಲ್ಲಿ ಕಾಳಜಿ ತೋರಬೇಕು. ಬೇರೆಯವರು ಹೇಳುವ ಮಾತಿನಲ್ಲಿನ ಒಳಾರ್ಥವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಮನದಲ್ಲಿನ ನೋವನ್ನು ಹಂಚಿಕೊಳ್ಳುವುದರಿಂದ ನೆಮ್ಮದಿ ದೊರೆಯುತ್ತದೆ. ಅವಶ್ಯಕತೆ ಇದ್ದಲ್ಲಿ ಎಲ್ಲರ ಸಹಾಯವು ನಿಮಗಿರುತ್ತದೆ. ಇದರಿಂದ ಸುಖ ಸಂತೋಷದ ಜೀವನ ನಡೆಸುವಿರಿ.

ಮಕ್ಕಳ ವಿಚಾರ; ಮಕ್ಕಳು ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ

ಸಂತಾನ ದೋಷ ಇರುವ ಮೀನ ರಾಶಿಯ ಜಾತಕರಿಗೆ ಕ್ರೋಧಿನಾಮ ಸಂವತ್ಸರದಲ್ಲಿ ಸಮಸ್ಯೆಯು ಪರಿಹಾರವಾಗಿ ಸಂತಾನ ಭಾಗ್ಯ ದೊರೆಯಲಿದೆ. ಮಕ್ಕಳ ಆಟ, ಪಾಠಗಳನ್ನು ನೋಡುತ್ತಾ ಇವರು ಸಂತೋಷದಿಂದ ಬಾಳುತ್ತಾರೆ. ಮಕ್ಕಳು ತಂದೆ ತಾಯಿಯ ಆಸೆಯನ್ನು ಈಡೇರಿಸಲು ಪ್ರಯತ್ನಿಸುತ್ತಾರೆ. ವಿಶೇಷವೆಂದರೆ ಈ ರಾಶಿಯ ಜನಿಸಿರುವ ಮಕ್ಕಳು ವಯಸ್ಸಿನಲ್ಲಿ ತುಂಬಾ ಚಿಕ್ಕವರಾದರೂ ತಂದೆ ತಾಯಿಯ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ. ಈ ರಾಶಿಯಲ್ಲಿ ಜನಿಸಿರುವ ಪೋಷಕ ವರ್ಗಕ್ಕೂ ಅವರ ಮಕ್ಕಳಿಂದ ಸಂತೋಷ ಪ್ರಾಪ್ತಿಯಾಗುತ್ತದೆ. ಒಟ್ಟಾರೆ ಯಾವುದೇ ಕುಟುಂಬದಲ್ಲಿ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿದ್ದಲ್ಲಿ ಸಂತೋಷದ ಬಾಳು ದೊರೆಯುತ್ತದೆ. ಬೆಳೆದು ನಿಂತ ಮಕ್ಕಳು ತಾವಾಗಿಯೇ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಮಕ್ಕಳ ಆರೋಗ್ಯದ ಬಗ್ಗೆ ಗಮನ ಇಡುವುದು ಒಳ್ಳೆಯದು. ಮಕ್ಕಳಿಗೆ ಅನುಕೂಲವಾಗುವಂತೆ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು.

ವಿವಾಹ ಮತ್ತು ದಾಂಪತ್ಯ; ದಾಂಪತ್ಯ ಜೀವನದಲ್ಲಿದ್ದ ತೊಂದರೆ ದೂರಾಗಲಿದೆ

ಮೀನ ರಾಶಿಗೆ ಸೇರಿದವರ ನವ ದಾಂಪತ್ಯ ಸುಂದರವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಯಾವುದೇ ವಿಚಾರವನ್ನು ಮರೆ ಮಾಚದೆ ಪರಸ್ಪರ ಚರ್ಚಿಸುವ ಕಾರಣ ಮನಸ್ತಾಪಗಳಿಗೆ ತೊಂದರೆ ಇರುವುದಿಲ್ಲ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಅನಾವಶ್ಯಕವಾಗಿ ವಿವಾಹವು ಕೆಲ ದಿನಗಳ ಕಾಲ ಮುಂದೂಡಲ್ಪಡುತ್ತವೆ. ದಾಂಪತ್ಯ ಜೀವನದಲ್ಲಿ ಇದ್ದ ತೊಂದರೆಗಳು ದೂರವಾಗಲಿವೆ. ಕುಟುಂಬದ ಹಿರಿಯರ ಸಹಕಾರ ದೊರೆಯುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಪರಸ್ಪರ ಸಹಕಾರ ಮನೋಭಾವವಿರುತ್ತದೆ. ಇದರಿಂದಾಗಿ ಕೌಟುಂಬಿಕ ಜೀವನದಲ್ಲಿ ಸಂತಸ ನೆಲೆಸಿರುತ್ತದೆ. ಪರಸ್ಪರ ವಿಶೇಷ ದಿನಗಳಲ್ಲಿ ಉಡುಗೊರೆಗಳನ್ನು ನೀಡುವುದರಿಂದ ಪ್ರೀತಿ ವಿಶ್ವಾಸವು ಹೆಚ್ಚುತ್ತದೆ. ಮಕ್ಕಳ ಸಲುವಾಗಿ ಗಳಿಸಿದ ಆದಾಯದಲ್ಲಿ ಬಹುಪಾಲು ಹಣವನ್ನು ಉಳಿಸುವ ನಿರ್ಧಾರಕ್ಕೆ ಬರುವಿರಿ. ದುಡುಕುತನ ತೋರದೆ ಮನ ಬಿಚ್ಚಿ ಮಾತನಾಡುವುದರಿಂದ ಉಪಯೋಗವಿದೆ.

ವ್ಯಾಪಾರ ವ್ಯವಹಾರ; ಕಷ್ಟಪಟ್ಟು ದುಡಿದರೆ ಆದಾಯ ಖಚಿತ

ಮೀನ ರಾಶಿಗೆ ಸೇರಿದವರ ವ್ಯಾಪಾರ, ವ್ಯವಹಾರಗಳು ಜೂನ್ ತಿಂಗಳವರೆಗೂ ನಿರೀಕ್ಷಿತ ಮಟ್ಟದ ಆದಾಯವಿರುತ್ತದೆ. ಹಣಕಾಸಿಗೆ ಸಂಬಂಧಿಸಿದ ಕೆಲಸ-ಕಾರ್ಯಗಳು ಸುಲಭವಾಗಿ ನೆರವೇರುತ್ತದೆ. ಜೂನ್ ತಿಂಗಳ ನಂತರ ಸೆಪ್ಟೆಂಬರ್ ತಿಂಗಳವರೆಗೂ ಆತ್ಮೀಯರ ಸಹಕಾರದಿಂದ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಕಮೀಷನ್‌ ಆಧಾರಿತ ವ್ಯಾಪಾರದಲ್ಲಿ ಉತ್ತಮ ಗಳಿಕೆ ಇರಲಿದೆ. ಕಷ್ಟಪಟ್ಟು ದುಡಿದಷ್ಟು ವರಮಾನದಲ್ಲಿ ಪ್ರಗತಿ ಕಂಡುಬರುತ್ತದೆ. ಸರ್ಕಾರದ ಅನುದಾದಲ್ಲಿ ನಡೆಯುವ ವ್ಯಾಪಾರದಲ್ಲಿ ನಷ್ಟವಿರದು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಉತ್ತಮ ಕಾರ್ಯಯೋಜನೆಯ ಅವಶ್ಯಕತೆ ಇರುತ್ತದೆ. ಪಾಲುಗಾರಿಕೆ ವ್ಯಾಪಾರ ವಹಿವಾಟಿನಲ್ಲಿ ಹಣ ಗಳಿಸುವಿರಿ. ಲೇವಾದೇವಿ ವ್ಯವಹಾರದಲ್ಲಿ ತೊಂದರೆ ಇರುತ್ತದೆ.

ವಾಹನ ವಿಚಾರ; ಐಷಾರಾಮಿ ವಾಹನ ಕೊಳ್ಳುವ ಯೋಗವಿದೆ

ಮೀನ ರಾಶಿಗೆ ಸೇರಿದ ನಿಮಗೆ ಈ ವರ್ಷ ಐಷಾರಾಮಿ ವಾಹನವನ್ನು ಕೊಳ್ಳುವ ಯೋಗವಿದೆ. ಈಗ ಬಳಸುತ್ತಿರುವ ವಾಹನವನ್ನು ಮಾರಾಟ ಮಾಡುವಿರಿ. ಕೆಂಪು ಮತ್ತು ಹಾಲಿನ ಬಣ್ಣದ ಅಥವ ಬಿಳಿ ಬಣ್ಣದ ವಾಹನಗಳು ನಿಮಗೆ ಒಳ್ಳೆಯದು. ವ್ಯಾಪಾರದ ಸಲುವಾಗಿ ವಾಹನವನ್ನು ಕೊಳ್ಳುವ ಮನಸ್ಸಿದ್ದಲ್ಲಿ ಸಾಧ್ಯವಿದೆ. ರಾಶಿಯಲ್ಲಿ ರಾಹು ಮತ್ತು ದ್ವಾದಶದಲ್ಲಿ ಶನಿ ಇರುವ ಕಾರಣ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು.

ಆರೋಗ್ಯದ ವಿಚಾರದಲ್ಲಿ ಎಚ್ಚರ ತಪ್ಪಿದರೆ ಅಪಾಯ

ಉತ್ತಮ ಆತ್ಮವಿಶ್ವಾಸ ಇದ್ದಲ್ಲಿ ಆರೋಗ್ಯದಲ್ಲಿ ತೊಂದರೆ ಉಂಟಾಗುವುದಿಲ್ಲ. ಆದರೆ ಈ ವರ್ಷ ಮೀನ ರಾಶಿಗೆ ಸೇರಿದವರಿಗೆ ನೀರಿಗೆ ಸಂಬಧಿಸಿದಂತೆ ಶ್ವಾಸಕೋಶದ ಸೋಂಕು ಉಂಟಾಗಬಹುದು. ಚರ್ಮದ ತೊಂದರೆ ಉಂಟಾದರೂ ಗುಣ ಹೊಂದುವಿರಿ. ಯೋಗ ಪ್ರಾಣಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ. ಗೃಹಿಣಿಯರಿಗೆ ಕೆಲಸ ಮಾಡುವ ವೇಳೆ ಕೈಕಾಲುಗಳಿಗೆ ತೊಂದರೆ ಉಂಟಾಗಬಹುದು. ಎಚ್ಚರಿಕೆಯಿಂದ ಇರಬೇಕು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ತೊಂದರೆ ಇರದು.

ಮೀನ ರಾಶಿಗೆ ಪರಿಹಾರಗಳು

1. ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.

2. ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.

3. ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ.

4. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.

5. ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಬರಹ: ಎಚ್‌.ಸತೀಶ್, ಜ್ಯೋತಿಷಿ, ಬೆಂಗಳೂರು, ಇಮೇಲ್: sathishaapr23@gmail.com

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್‌ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ