Navratri 2024: ಶೈಲಪುತ್ರಿಯ ಆರಾಧನೆಯಿಂದ ನವರಾತ್ರಿ ಆರಂಭ; ಹೀಗಿರಲಿ ನಿಮ್ಮ ಪೂಜಾ ಕ್ರಮ, ವಿಧಿ ವಿಧಾನ
Oct 03, 2024 07:10 AM IST
ಶೈಲಪುತ್ರಿಯ ಆರಾಧನೆಯಿಂದ ನವರಾತ್ರಿ ಆರಂಭ
- ಹಿಂದೂ ಧರ್ಮದಲ್ಲಿ ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಅದರಂತೆ ಇಂದಿನಿಂದ ಅಂದರೆ ಅಕ್ಟೋಬರ್ 3ರಿಂದ ನವರಾತ್ರಿ ಆರಂಭವಾಗುತ್ತಿದೆ.
ಮಹಾಶಕ್ತಿ, ಮಹಾದೇವಿಯನ್ನು ಒಂಭತ್ತು ರೂಪಗಳಲ್ಲಿ ಆರಾಧಿಸುವ ನವರಾತ್ರಿ ಹಬ್ಬ ಇಂದಿನಿಂದ (ಅಕ್ಟೋಬರ್ 3) ಆರಂಭವಾಗಲಿದೆ. ಉಗ್ರರೂಪಿ, ದಯಾಮಯಿ ಹೀಗೆ ಎಲ್ಲವೂ ಆಗಿರುವ ಆ ಮಹಾತಾಯಿ ಭಕ್ತರನ್ನು ಸದಾ ಪೊರೆಯುವ ಸಿದ್ಧಿದಾತ್ರಿಯೂ ಆಗಿದ್ದಾಳೆ. ನವರಾತ್ರಿಯ ಮೊದಲ ದಿನದ ಪೂಜೆಯ ಆರಂಭವು ಕಲಶ ಸ್ಥಾಪನೆಯ ಮೂಲಕ ಆರಂಭವಾಗುತ್ತದೆ. ಕಲಶವನ್ನು ಸ್ಥಾಪಿಸಿ ಮತ್ತು ಶುಭ ಮುಹೂರ್ತದಲ್ಲಿ ದೀಪ ಬೆಳಗಿ ದೇವಿಯ ಪೂಜೆ ಆರಂಭಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ದುರ್ಗಾದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆಯಿದೆ. ಕಲಶವನ್ನು ಶುದ್ಧ ಅಕ್ಕಿ ಅಥವಾ ಧಾನ್ಯಗಳಿಂದ ತುಂಬಿಸಿ ಪೀಠದ ಮೇಲೆ ಇಡಬೇಕು. ಕಲಶದ ಒಳಗಡೆ ಪವಿತ್ರ ಗಂಗಾಜಲವನ್ನು ತುಂಬಬೇಕು. ಅಥವಾ ಚಿಟಿಕೆ ಅರಶಿನವನ್ನು ನೀರಿನಲ್ಲಿ ಹಾಕಬೇಕು. ಕಲಶ ಇಡುವ ಸ್ಥಳದ ಸ್ವಚ್ಛತೆಯ ಕುರಿತು ನಿಗಾ ಇರಬೇಕು. ಎಣ್ಣೆಯ ದೀಪವನ್ನು ಬೆಳಗಿಸಿ ಅದನ್ನು ಕಲಶದ ಬಳಿ ಇಡಬೇಕು.
ತಾಜಾ ಫೋಟೊಗಳು
ಈ ವರ್ಷದ ಶಾರದೀಯ ನವರಾತ್ರಿಯ ಅಕ್ಟೋಬರ್ 2, 2024 ರಂದು ರಾತ್ರಿ 11:13 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಕ್ಟೋಬರ್ 3 ರಂದು ಮಧ್ಯಾಹ್ನ 1:19 ಕ್ಕೆ ಕೊನೆಗೊಳ್ಳುತ್ತದೆ. ಅದಕ್ಕಾಗಿಯೇ ಅಕ್ಟೋಬರ್ 3 ರಿಂದ ನವರಾತ್ರಿ ಆರಂಭವಾಗಲಿದೆ.
ಕಲಶಕ್ಕೆ ಹೂವುಗಳು, ಕುಂಕುಮ ಮತ್ತು ಶ್ರೀಗಂಧವನ್ನು ಹಚ್ಚಬೇಕು. ಹಣ್ಣುಗಳು, ಸಿಹಿತಿಂಡಿಗಳನ್ನು ಕಲಶದ ಮುಂದೆ ಇಡಬೇಕು. ಒಂಭತ್ತು ದಿನಗಳ ಆಚರಣೆಯನ್ನು ಪ್ರಾರಂಭಿಸಲು ದುರ್ಗಾ ಸಪ್ತಶತಿ ಅಥವಾ ದೇವಿಗೆ ಅರ್ಪಿತವಾದ ಇತರ ಸ್ತೋತ್ರಗಳನ್ನು ಪಠಿಸಬಹುದಾಗಿದೆ.
ಅಕ್ಟೋಬರ್ 12 ರಂದು ವಿಜಯದಶಮಿಯೊಂದಿಗೆ ನವರಾತ್ರಿ ಕೊನೆಗೊಳ್ಳಲಿದೆ. ಮೊದಲ ದಿನ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಈ ಬಾರಿಯ ನವರಾತ್ರಿ ಅಕ್ಟೋಬರ್ 3ರ ಗುರುವಾರದಿಂದ ಆರಂಭವಾಗುತ್ತದೆ. ಈ ದಿನ ಘಟಸ್ಥಾಪನೆ ಮತ್ತು ದೇವಿ ಶೈಲಪುತ್ರಿಯ ಪೂಜೆ ಮಾಡಲಾಗುತ್ತದೆ. ನವರಾತ್ರಿಯ ಮೊದಲ ದಿನ ಪಾಡ್ಯ. ಕಳಶ ಸ್ಥಾಪಿಸಿ ನವರಾತ್ರಿಗೆ ನಾಂದಿ ಹಾಡಲಾಗುತ್ತದೆ.
ಕಲಶ ಸ್ಥಾಪನೆ ಮತ್ತು ಘಟಸ್ಥಾಪನೆಗೆ ಶುಭ ಸಮಯ
ಆಚಾರ್ಯ ಗೋವಿಂದ ಶರಣ್ ಪುರೋಹಿತ್ ಅವರ ಪ್ರಕಾರ, ಅಕ್ಟೋಬರ್ 3 ರಂದು ಅಶ್ವಿನಿ ಶುಕ್ಲ ಪ್ರತಿಪದದಂದು ಕಲಶ ಸ್ಥಾಪನೆಯ ಸಮಯವು ಬೆಳಗ್ಗೆ 6.07 ರಿಂದ 9.30 ರವರೆಗೆ ಇರುತ್ತದೆ. ಅದರ ನಂತರ, ಅಭಿಜಿತ್ ಮುಹೂರ್ತವು ಬೆಳಗ್ಗೆ 11.37 ರಿಂದ 12.23 ರವರೆಗೆ ಬಹಳ ಶುಭವಾಗಿರುತ್ತದೆ. ಆರತಿಯನ್ನು ಬೆಳಗ್ಗೆಯಿಂದ ಸಂಜೆಯವರೆಗೆ ಯಾವುದೇ ಸಮಯದಲ್ಲಿ ಸ್ಥಾಪಿಸಬಹುದಾಗಿದೆ.
ದುರ್ಗಾ ದೇವಿಯ ಪೂಜಾ ವಿಧಿ ವಿಧಾನ
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡುವ ಮೂಲಕ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ.
ದುರ್ಗಾ ಮಾತೆಯ ಪ್ರತಿಮೆಗೆ ಜಲಾಭಿಷೇಕ ಮಾಡಿ
ದುರ್ಗಾ ಮಾತೆಗೆ ಪಂಚಾಮೃತ ಸೇರಿದಂತೆ ಶುದ್ಧ ನೀರಿನಿಂದ ಅಭಿಷೇಕ ಮಾಡಿ. ನೀವು ಬಳಸುವ ಶುದ್ಧ ನೀರನ್ನೇ ಗಂಗಾ ಜಲ ಎಂದು ಭಾವಿಸಿ.
ತಾಯಿಗೆ ಶ್ರೀಗಂಧ, ಅರಶಿನ, ಕುಂಕುಮ, ಇತರೆ ಪೂಜಾ ವಸ್ತುಗಳು ಹಾಗೂ ಕೆಂಪು ಹೂವುಗಳನ್ನು ಅರ್ಪಿಸಿ
ದೇವಾಲಯದಲ್ಲಿ ಅಥವಾ ಮನೆಯ ದೇವರ ಕೋಣೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸಿ
ದುರ್ಗಾ ಮಾತೆಗೆ ಸಂಪೂರ್ಣ ಶರಣಾಗತರಾಗಿ ಭಕ್ತಿಯಿಂದ ಆರತಿ ಮಾಡಿ
ಮಹಾತಾಯಿಗೆ ನೈವೇದ್ಯವನ್ನು ಅರ್ಪಿಸಿ
ಅಂತಿಮವಾಗಿ ತಿಳಿದು ತಿಳಿಯದೆಯೋ ತಪ್ಪುಗಳಾಗಿದ್ದರೆ ಕ್ಷಮೆಯನ್ನು ಕೋರಿ
ವಿಭಾಗ