Phalguna Masam 2024: ಹಿಂದೂ ಕ್ಯಾಲೆಂಡರ್‌ನ ಕೊನೆಯ ಮಾಸ ಫಾಲ್ಗುಣದ ವೈಶಿಷ್ಟ್ಯತೆ ಏನು? ಈ ಬಾರಿ ಎಂದಿನಿಂದ ಆರಂಭ?
Mar 07, 2024 02:51 PM IST
ವಿಷ್ಣುವಿಗೆ ಬಹಳ ಪ್ರಿಯವಾದ ಫಾಲ್ಗುಣ ಮಾಸದ ವೈಶಿಷ್ಟ್ಯ
Phalguna Masam 2024: ಫಾಲ್ಗುಣ ಮಾಸದಲ್ಲಿ ಅನೇಕ ಹಬ್ಬ, ವ್ರತಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಹೋಳಿ ಕೂಡಾ ಒಂದು. ಈ ಮಾಸವು ಧಾರ್ಮಿಕ ಕಾರ್ಯಗಳಿಗೆ ಪ್ರಸಿದ್ಧಿಯಾಗಿದೆ. ಲಕ್ಷ್ಮೀ ಜಯಂತಿ, ನರಸಿಂಹ ವ್ರತ, ಹೋಳಿ ಹಬ್ಬ ಸೇರಿದಂತೆ ಈ ಮಾಸದಲ್ಲಿ ಅನೇಕ ಆಚರಣೆಗಳಿವೆ.
ಫಾಲ್ಗುಣ ಮಾಸ: ಹಿಂದೂ ಮಾಸಗಳಲ್ಲಿ ಬರುವ 12 ತಿಂಗಳಲ್ಲಿ ಕೊನೆಯದ್ದು ಫಾಲ್ಗುಣ. ನಮ್ಮಲ್ಲಿನ ಅರಿಷಡ್ವರ್ಗಗಳು, ಬಯಕೆಗಳನ್ನು ನಿಯಂತ್ರಿಸಲು ಸಾಧನೆ ಮಾಡಲು ಇದು ಸೂಕ್ತ ಮಾಸ. ಹುಣ್ಣಿಮೆಯಂದು ಫಾಲ್ಗುಣಿ ನಕ್ಷತ್ರ ಇರುವ ಚಂದ್ರ ಮಾಸವನ್ನು ಫಾಲ್ಗುಣ ಮಾಸ ಎಂದು ಕರೆಯಲಾಗುತ್ತದೆ. ಇದು ಶರತ್ಕಾಲಕ್ಕೆ ವಿದಾಯ ಹೇಳಿ, ವಸಂತ ಮಾಸವನ್ನು ಸ್ವಾಗತಿಸುವ ಸಮಯ.
ತಾಜಾ ಫೋಟೊಗಳು
ಫಾಲ್ಗುಣ ಮಾಸದಲ್ಲಿ ಮಾಡುವ ದೈವಿಕ ಚಟುವಟಿಕೆಗಳು ದ್ವಿಗುಣ ಫಲಿತಾಂಶವನ್ನು ನೀಡುತ್ತವೆ. ಹಾಗಾಗಿ ಆಧ್ಯಾತ್ಮಿವಾಗಿ ಈ ಮಾಸ ಬಹಳ ವಿಶೇಷವಾದದ್ದು. ಈ ಕಾರಣದಿಂದಲೇ ಫಾಲ್ಗುಣ ಮಾಸ ವಿಷ್ಣುವಿಗೆ ಬಹಳ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಭಕ್ತರು ಬಹಳ ವ್ರತಗಳನ್ನು ಮಾಡುತ್ತಾರೆ ಎಂದು ಖ್ಯಾತ ಅಧ್ಯಾತ್ಮಿಕ ಹಾಗೂ ಪಂಚಾಂಗಕರ್ತರಾದ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ.
ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಬರುವ ಹಬ್ಬಗಳು
ಫಾಲ್ಗುಣ ಮಾಸ ಎಂದಿನಿಂದ ಆರಂಭ?
ಈ ವರ್ಷ ಮಾರ್ಚ್ 11 ರಿಂದ ಫಾಲ್ಗುಣ ಮಾಸ ಪ್ರಾರಂಭವಾಗುತ್ತದೆ. ದೇವತಾ ಧ್ಯಾನಕ್ಕೆ ಈ ತಿಂಗಳು ಬಹಳ ಪವಿತ್ರವಾಗಿದೆ. ಫಾಲ್ಗುಣ ಶುದ್ಧ ಪಾಡ್ಯಮಿಯಿಂದ ದ್ವಾದಶಿಯವರೆಗೆ ಉಪವಾಸದ ಸಮಯದಲ್ಲಿ ಹನ್ನೆರಡು ದಿನ ನದಿ ಸ್ನಾನ ಮಾಡಬೇಕು. ಈ ಸಮಯದಲ್ಲಿ ಗುಣಾವಾಪ್ತಿ ವ್ರತ, ಮಧೂಕ ವ್ರತ ಮಾಡಲಾಗುತ್ತದೆ.
ಈ ದಿನ ಉಪವಾಸ ಮಾಡಿ ಎಳ್ಳು ಅನ್ನ ಸಹಿತ ಗಣಪತಿ ಹೋಮ ಮಾಡಿ ಅತಿಥಿಗಳನ್ನು ಸತ್ಕರಿಸಬೇಕು. ಹೀಗೆ ಮಾಡಿದರೆ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ. ಈ ದಿನ ಎಳ್ಳು ಬೆಲ್ಲದ ಅನ್ನವನ್ನು ನೈವೇದ್ಯವಾಗಿ ಅರ್ಪಿಸಬೇಕು. ಸಪ್ತಮಿಯಂದು ಅರ್ಮ ಸಂಪುಟ ವ್ರತವನ್ನು ಮಾಡಬೇಕು. ಸೂರ್ಯೋದಯ ಕಾಲದಲ್ಲಿ ಸ್ನಾನ ಮಾಡಿದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಸೂರ್ಯ ನಮಸ್ಕಾರ ಮಾಡಿ ಆದಿತ್ಯ ಹೃದಯವನ್ನು ಪಠಿಸಬೇಕು.
ಫಾಲ್ಗುಣ ಮಾಸದ ಶ್ರೀ ಲಕ್ಷ್ಮೀ ಜಯಂತಿ ದಿನದಂದು ಲಕ್ಷ್ಮೀ ಮತ್ತು ಸೀತಾ ಮಾತೆಯನ್ನು ಷೋಡಶೋಪಚಾರಗಳಿಂದ ಪೂಜಿಸಬೇಕು. ಪ್ರದೋಷ ಕಾಲದಲ್ಲಿ ದೀಪಾರಾಧನೆ ಮಾಡುವವರಿಗೆ ಐಶ್ವರ್ಯ ಮತ್ತು ಸಂಪತ್ತು ದೊರೆಯುತ್ತದೆ. ಈ ದಿನ ಲಲಿತಾ ಕಾಂತಿ ದೇವಿಯನ್ನು ಪೂಜಿಸಬೇಕು. ನವಮಿ, ಆನಂದ ನವಮಿಯಂದು ಶ್ರೀ ಲಕ್ಷ್ಮೀ ನಾರಾಯಣನನ್ನು ತುಳಸಿ ದಳಗಳು ಮತ್ತು ದಾಸವಾಳದ ಹೂವುಗಳಿಂದ ಪೂಜಿಸಿ ಪ್ರಾರ್ಥಿಸಬೇಕು. ಈ ಮಾಸದಲ್ಲಿ ಬರುವ ಏಕಾದಶಿಯನ್ನು ಮತ ತ್ರಯ ಏಕಾದಶಿ, ಅಮಲಕಿ ಏಕಾದಶಿ, ಧಾತ್ರಿ ಏಕಾದಶಿ, ಅಮೃತ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಶ್ರೀ ಲಕ್ಷ್ಮೀ ನಾರಾಯಣನನ್ನು ಪೂಜಿಸಿ, ಉಪವಾಸ ಮತ್ತು ಜಾಗರಣೆ ಮಾಡಬೇಕು. ಶ್ರೀ ಲಕ್ಷ್ಮೀ ನಾರಾಯಣನನ್ನು ಅಮೃತ ವೃಕ್ಷದ ಕೆಳಗೆ ಪೂಜಿಸುವುದರಿಂದ ಒಳ್ಳೆಯ ಫಲ ಸಿಗುತ್ತದೆ. ಈ ದಿನ ಮಾಡಿದ ತ್ಯಾಗಗಳು ಸಾವಿರಾರು ಪುಣ್ಯ ಕಾರ್ಯಗಳನ್ನು ಮಾಡಿದ ಫಲವಾಗಿರುತ್ತದೆ.
ಗಂಗಾಸ್ನಾನದಿಂದ ಪುಣ್ಯ ಪ್ರಾಪ್ತಿ
ಹಾಗೇ ಈ ಮಾಸದಲ್ಲಿ ನರಸಿಂಹ ಸ್ವಾಮಿಯನ್ನು ಆರಾಧಿಸುವುದರಿಂದ ಎಲ್ಲಾ ಸಂಕಷ್ಟಗಳು ತೊಲಗಿ ಅಭೀಷ್ಟ ಸಿದ್ಧಿಯಾಗಲಿದೆ. ಈ ದಿನ ಗಂಗಾ ಸ್ನಾನ ಮಾಡಿದರೆ ಬಹಳ ಒಳ್ಳೆಯದು. ಶುದ್ಧ ತ್ರಯೋದಶಿ ದಿನದಂದು ಗ್ರಾಮದ ಕಲ್ಯಾಣಾರ್ಥವಾಗಿ ಮನ್ಮಥನ ಮೂರ್ತಿಯನ್ನು ಸುಡಲಾಗುತ್ತದೆ. ಈ ದಿನ ಶ್ರೀ ಮಹೇಶ್ವರ ವ್ರತವನ್ನು ಮಾಡಬೇಕು. ಈ ತಿಂಗಳಲ್ಲಿ ಹೋಳಿ ಹಬ್ಬವನ್ನು ಕೂಡಾ ಆಚರಿಸಲಾಗುತ್ತದೆ. ಹೋಳಿ ಹುಣ್ಣಿಮೆಯನ್ನು ಹೋಲಿಕಾ ಪೂರ್ಣಿಮಾ, ಮದನ ಪೂರ್ಣಿಮಾ, ಹೋಳಿ ಮತ್ತು ಕಾಮದಹನ ಎಂದು ಕರೆಯಲಾಗುತ್ತದೆ.
ಹೋಳಿ ಹುಣ್ಣಿಮೆಯಲ್ಲಿ ಮಧುರೈನಲ್ಲಿ ಶ್ರೀ ಮೀನಾಕ್ಷಿ ಸುಂದರೇಶ್ವರರ ಕಲ್ಯಾಣ ಮತ್ತು ತಮಿಳುನಾಡಿನಲ್ಲಿ ಶಿವ ಪಾರ್ವತಿಯರ ಕಲ್ಯಾಣವನ್ನು ಮಾಡಲಾಗುತ್ತದೆ. ಈ ದಿನ ಮುಂಜಾನೆಯೇ ಅಭ್ಯಂಗಸ್ನಾನ ಮಾಡಿ, ಗೋಮೂತ್ರದಿಂದ ಮನೆ ಅಂಗಳವನ್ನೆಲ್ಲಾ ಶುದ್ಧ ಮಾಡಬೇಕು. ಶ್ವೇತವಸ್ತ್ರ ಧರಿಸಿ ಮನೆಯ ಅಂಗಳದಲ್ಲಿ ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡಿ ಮುತ್ತೈದೆಯರಿಗೆ ಕರೆದು ಬಾಗಿನ ನೀಡಿ ಅವರಿಂದ ಆಶೀರ್ವಾದ ಪಡೆದರೆ ಪುಣ್ಯಫಲ ಪ್ರಾಪ್ತಿಯಾಗುವುದೆಂಬ ನಂಬಿಕೆ ಇದೆ.
ಹಾಗೇ ಈ ಮಾಸದಲ್ಲಿ ಬರುವ ಬಹುಳ ಏಕಾದಶಿಯನ್ನು ವಿಜಯೈಕಾದಶಿ ಮತ್ತು ಪಾಪ ವಿಮೋಚನ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಶ್ರೀ ಲಕ್ಷ್ಮೀ ನಾರಾಯಣನನ್ನು ಪೂಜಿಸುವುದು ಮತ್ತು ಉಪವಾಸ ಮಾಡಿದರೆ ಉತ್ತಮ ಫಲ ದೊರೆಯಲಿದೆ. ನಿಯಮಗಳ ಪ್ರಕಾರ ಏಕಾದಶಿ ವ್ರತವನ್ನು ಆಚರಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಹಾಗೇ ಹಿಂದೂಗಳಿಗೆ ಹೊಸ ವರ್ಷ ಆರಂಭಕ್ಕೂ ಮುನ್ನ ಬಹುಳ ಅಮಾವಾಸ್ಯೆ ಬರುತ್ತದೆ. ಈ ದಿನ ದೇವರು ಮತ್ತು ಪೂರ್ವಜರನ್ನು ಪೂಜಿಸಬೇಕು ಮತ್ತು ಪೂರ್ವಜರಿಗೆ ತರ್ಪಣವನ್ನು ನೀಡಬೇಕು. ಅನ್ನದಾನ ಮಾಡಿದರೆ ನಿಮ್ಮ ಜೀವನ ಪಾವನವಾದಂತೆ. ಈ ತಿಂಗಳಲ್ಲಿ ಪಾಂಡವರು ಜನಿಸಿದರೆಂಬ ಕಥೆ ಇದೆ. ಈ ಮಾಸದಲ್ಲಿ ಕ್ಷೀರಸಾಗರ ಮಥನ ನಡೆಯಿತು. ಈ ಮಾಸದಲ್ಲಿ ಮಾಡುವ ಪ್ರತಿಯೊಂದು ದಾನವೂ ಬಹಳ ಶ್ರೇಷ್ಠವಾದುದು. ಒಟ್ಟಿನಲ್ಲಿ ಫಾಲ್ಗುಣ ಮಾಸ ಬಹಳ ವೈಶಿಷ್ಟ್ಯಗಳಿಂದ ಕೂಡಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.