logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Deepawali 2023: ಬೆಳಕಿನ ಹಬ್ಬದ ಸಂಭ್ರಮದ ನಡುವೆ ದೀಪಾವಳಿ, ಬಲಿಪಾಡ್ಯಮಿ, ನರಕಚತುರ್ದಶಿ ಆಚರಣೆಯ ಮಹತ್ವ, ಧಾರ್ಮಿಕ ಹಿನ್ನೆಲೆ ತಿಳಿಯಿರಿ

Deepawali 2023: ಬೆಳಕಿನ ಹಬ್ಬದ ಸಂಭ್ರಮದ ನಡುವೆ ದೀಪಾವಳಿ, ಬಲಿಪಾಡ್ಯಮಿ, ನರಕಚತುರ್ದಶಿ ಆಚರಣೆಯ ಮಹತ್ವ, ಧಾರ್ಮಿಕ ಹಿನ್ನೆಲೆ ತಿಳಿಯಿರಿ

Reshma HT Kannada

Nov 05, 2023 05:58 PM IST

google News

ದೀಪಾವಳಿ, ಬಲಿಪಾಡ್ಯಮಿ, ನರಕಚತುರ್ದಶಿ ಆಚರಣೆಯ ಮಹತ್ವ, ಧಾರ್ಮಿಕ ಹಿನ್ನೆಲೆ ತಿಳಿಯಿರಿ

    • ದೀಪಾವಳಿ ದೀಪಗಳ ಹಬ್ಬ. ಪುರಾಣದ ಪ್ರಕಾರ ಶ್ರೀರಾಮ 14 ವರ್ಷಗಳ ವನವಾಸ ಮುಗಿಸಿ ನಾಡಿಗೆ ಮರಳಿ ದಿನದಂದು ಅಯೋಧ್ಯೆಯ ಜನರು ಇಡೀ ಊರಿಗೆ ಊರೇ ದೀಪ ಬೆಳಗುವ ಮೂಲಕ ಸಂಭ್ರಮಿಸಿದ ದಿನ ಮುಂದೆ ದೀಪಾವಳಿ ಆಚರಣೆಯಾಯ್ತು ಎನ್ನಲಾಗುತ್ತದೆ. ಇದು ಅಸುರರನ್ನು ಶಿಕ್ಷಿಸಿದ ದಿನವೂ ಹೌದು. ಅಜ್ಞಾನದ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ಪಸರಿಸುವ ಹಬ್ಬವೇ ದೀಪಾವಳಿ. 
ದೀಪಾವಳಿ, ಬಲಿಪಾಡ್ಯಮಿ, ನರಕಚತುರ್ದಶಿ ಆಚರಣೆಯ ಮಹತ್ವ, ಧಾರ್ಮಿಕ ಹಿನ್ನೆಲೆ ತಿಳಿಯಿರಿ
ದೀಪಾವಳಿ, ಬಲಿಪಾಡ್ಯಮಿ, ನರಕಚತುರ್ದಶಿ ಆಚರಣೆಯ ಮಹತ್ವ, ಧಾರ್ಮಿಕ ಹಿನ್ನೆಲೆ ತಿಳಿಯಿರಿ

ದೀಪಾವಳಿ ಭಾರತ ದೇಶದಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ. ಸಾಮಾನ್ಯವಾಗಿ ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ದೀಪಾವಳಿ ಹಬ್ಬದ ಆಚರಣೆ ಇರುತ್ತದೆ. ಕಾರ್ತೀಕ ಮಾಸದಲ್ಲಿ ಈ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್‌ 12ರಂದು ದೀಪಾವಳಿ ಹಬ್ಬದ ಆಚರಣೆ ಇದೆ. ಈಗಾಗಲೇ ದೇಶಾದಾದ್ಯಂತ ದೀಪಾವಳಿಯ ತಯಾರಿ ಆರಂಭವಾಗಿದ್ದು, ಸಂಭ್ರಮ ಜೋರಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ದೀಪಾವಳಿ ಪ್ರತಿ ಮನೆ ಮನೆಯಲ್ಲೂ ಹಣತೆಯ ದೀಪ ಬೆಳಗುವ ಮೂಲಕ ಕತ್ತಲೆಯನ್ನು ಹೊಡೆದೋಡಿಸುವುದು ದೀಪಾವಳಿಯ ವಿಶೇಷ. ಬೆಳಕು ಎಂಬುದು ಜ್ಞಾನದ ಪ್ರತೀಕ. ಬೆಳಕು ಎಂದರೆ ಭರವಸೆ. ಬೆಳಕು ಎಂದರೆ ಬದುಕು. ಹೀಗೆ ಬೆಳಕಿಗೆ ನಾನಾ ಅರ್ಥವಿದೆ. ಈ ಬೆಳಕಿನ ಹಬ್ಬ ಅಸುರರ ಸಂಹಾರದ ಪ್ರತೀಕವೂ ಹೌದು. ದೀಪಾವಳಿಯಲ್ಲಿ ಸಾಲು ಸಾಲು ದೀಪಗಳನ್ನು ಬೆಳಗುವ ಮೂಲಕ ಇಡೀ ಊರಿಗೆ ಊರು, ರಾಜ್ಯಕ್ಕೆ ರಾಜ್ಯಕ್ಕೆ ಸೇರಿದಂತೆ ದೇಶವನ್ನೇ ಬೆಳಗಿಸಲಾಗುತ್ತದೆ. ಪ್ರತಿ ಮನೆಯಲ್ಲೂ ಹಬ್ಬದ ಸಂಭ್ರಮದೊಂದಿಗೆ ಬೆಳಕು ಹರಡಿರುವುದನ್ನು ಕಾಣಬಹುದಾಗಿದೆ.

ದೀಪಾವಳಿ ಹಬ್ಬ ಎಂದರೆ ಕೇವಲ ಒಂದು ದಿನಕ್ಕೆ ಮೀಸಲಲ್ಲ. ಸಾಮಾನ್ಯವಾಗಿ ಇದು 5 ದಿನಗಳ ಹಬ್ಬ. ಕರ್ನಾಟಕದಲ್ಲಿ ಮೂರು ದಿನಗಳ ಕಾಲ ದೀಪಾವಳಿ ಆಚರಿಸುತ್ತಾರೆ. ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲಿ ಪಾಡ್ಯಮಿ, ಲಕ್ಷ್ಮೀಪೂಜೆ, ಗೂಪೂಜೆ ಹೀಗೆ ದೀಪಾವಳಿ ಹಬ್ಬವನ್ನು ಸಂಭ್ರಮದೊಂದಿಗೆ ಸಂಪ್ರದಾಯ ಬದ್ಧವಾಗಿಯೂ ಆಚರಿಸಲಾಗುತ್ತದೆ.

ದೀಪಾವಳಿ ಹಬ್ಬದ ಇನ್ನೊಂದು ವಿಶೇಷ ಎಂದರೆ ಪಟಾಕಿ. ದೀಪಾವಳಿ ದಿನಗಳು ಹತ್ತಿರ ಬರುತ್ತಿದ್ದಂತೆ ಎಲ್ಲಿ ನೋಡಿದರೂ ಮತಾಪು, ಸುರ್‌ಸುರ್‌ ಬತ್ತಿ, ನೆಲಚಕ್ರ, ಸರಪಟಾಕಿ, ಕೇಪಿನ ಸದ್ದು ಜೋರಾಗಿರುತ್ತದೆ. ಈ ಹಬ್ಬದಲ್ಲಿ ಪಟಾಕಿ ಕೂಡ ಸಂಭ್ರಮ ಹೆಚ್ಚಿಸುವ ವಸ್ತು. ಆದರೆ ಪಟಾಕಿ ಹೊಡೆಯುವಾಗ ಸಾಕಷ್ಟು ಜಾಗೃತೆ ಬೇಕು. ಪಟಾಕಿ ವಿಷಯದಲ್ಲಿ ಕೊಂಚ ಜಾಗ್ರತೆ ತಪ್ಪಿದರೂ ಅನಾಹುತಗಳಾಗಬಹುದು. ಇದು ಹಬ್ಬದ ಸಂಭ್ರಮವನ್ನು ಕಸಿಯಬಹುದು ಜಾಗೃತೆ. ಇನ್ನು ದೀಪಾವಳಿಯ 5 ದಿನಗಳ ಸಂಭ್ರಮದ ಬಗ್ಗೆ ತಿಳಿಯೋಣ.

ನೀರು ತುಂಬುವ ಹಬ್ಬ

ದೀಪಾವಳಿಯ ಮೊದಲ ದಿನ ನೀರು ತುಂಬುವ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದ ಬಹುತೇಕ ಕಡೆ ಈ ಹಬ್ಬದ ಆಚರಣೆ ಇದೆ. ಉತ್ತರ ಭಾರತದಲ್ಲಿ ಈ ದಿನದಂದು ಧನ್‌ತೇರಸ್‌ ಆಚರಣೆ ಇರುತ್ತದೆ. ಧನ್‌ತೇರಸ್‌ ಅಥವಾ ಧನ ತ್ರಯೋದಶಿ ಎಂಬುದು ಹೊಸ ಆರ್ಥಿಕ ವರ್ಷದ ಆರಂಭದ ಸೂಚಕವಾಗಿದೆ.

ಧಾರ್ಮಿಕ ಕಥೆಗಳ ಪ್ರಕಾರ ಧನತ್ರಯೋದಶಿಯ ದಿನದಂದು ಸಮುದ್ರ ಮಂಥನ ಮಾಡುವಾಗ ಲಕ್ಷ್ಮೀದೇವಿ ಉದ್ಭವಿಸುತ್ತಾಳೆ. ಅವಳೊಂದಿಗೆ ಅವಳ ಅಣ್ಣ ತಮ್ಮಂದಿರಾದ ಯಕ್ಷ, ಚಂದ್ರ, ಕಾಮಧೇನು, ಐರಾವತ, ಕಲ್ಪವೃಕ್ಷ ಇವರೆಲ್ಲರೂ ಜೊತೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಧನ ತ್ರಯೋದಶಿ ಆಚರಣೆ ಮಾಡಲಾಗುತ್ತದೆ.

ನೀರು ತುಂಬುವ ಹಬ್ಬದ ದಿನ ಸ್ನಾನದ ಹಂಡೆಯನ್ನು ಚೆನ್ನಾಗಿ ತೊಳೆದು ಅದಕ್ಕೆ ಸುಣ್ಣ ಬಳಿದು, ರಂಗೋಲಿ ಹಾಕಿ, ಹಂಡೆಗೆ ಹೂವಿನಿಂದ ಅಲಂಕಾರ ಮಾಡಿ ನೀರು ತುಂಬಲಾಗುತ್ತದೆ. ಕೆಲವರು ನೀರಿನ ಹಂಡೆಗೆ ಆರತಿ ಬೆಳಗಿ ಪೂಜೆಯನ್ನೂ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಆ ನೀರಿನಲ್ಲಿ ಸ್ನಾನ ಮಾಡಿ ಹಬ್ಬಕ್ಕೆ ತಯಾರಾಗುವುದು ವಾಡಿಕೆ.

ನರಕ ಚತುರ್ದಶಿ

ದೀಪಾವಳಿಯಲ್ಲಿ ನರಕ ಚತುದರ್ಶಿ ಪ್ರಮುಖ ದಿನ. ನರಕ ಚತುರ್ದಶಿಯಂದು ನರಕಾಸುರನನ್ನು ಹತ್ಯೆ ಮಾಡಿದ ದಿನ ಎಂದು ಹೇಳಲಾಗುತ್ತದೆ. ಈ ದಿನದಂದು ಶ್ರೀಕೃಷ್ಣ, ಸತ್ಯಭಾಮೆ ಹಾಗೂ ಕಾಳಿ ಈ ಮೂವರು ಸೇರಿ ಅಸುರ ರಾಕ್ಷಸನಾದ ನರಕಾಸುರನನ್ನು ಕೊಂದ ದಿನ. ಇದನ್ನು ಕಾಲಿ ಚೌದಾಸ್‌ ಎಂದೂ ಕರೆಯುತ್ತಾರೆ. ಈ ದಿನ ದುಷ್ಟತನ ಮರೆಯಾಗಿ ಬೆಳಕು ಹರಡುವ ದಿನ. ಈ ದಿನವನ್ನು ಕಿರು ದೀಪಾವಳಿ ಎಂದೂ ಕರೆಯುತ್ತಾರೆ. ನರಕ ಚತುರ್ದಶಿಯ ದಿನ ಅಭ್ಯಂಗ ಸ್ನಾನ ಮಾಡುವುದು ಬಹಳ ವಿಶೇಷ. ಅಭ್ಯಂಗ ಸ್ನಾನವನ್ನು ಚಂದ್ರನ ಉಪಸ್ಥಿತಿಯಲ್ಲಿ ಚತುರ್ದಶಿ ತಿಥಿ ಚಾಲ್ತಿಯಲ್ಲಿರುವಾಗ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಸೂರ್ಯೋದಯಕ್ಕೂ ಮುಂಚೆ ಹಿಂದಿನ ದಿನ ಹಂಡೆಯಲ್ಲಿ ತುಂಬಿಸಿಟ್ಟ ನೀರಿನಿಂದ ಸ್ನಾನ ಮಾಡುವುದು ಪದ್ಧತಿ. ಈ ದಿನ ಎಳ್ಳೆಣ್ಣೆ ಮೈಗೆ ಹಚ್ಚಿ ಸ್ನಾನ ಮಾಡುವುದು ವಾಡಿಕೆ. ಇದರಿಂದ ಬಡತನ, ಅನಿಷ್ಟ, ದುರಾದೃಷ್ಟ ಎಲ್ಲವೂ ದೂರಾಗುತ್ತದೆ ಎಂಬುದು ನಂಬಿಕೆ. ಬಹುತೇಕ ಈ ದಿನದಿಂದ ದೀಪಾವಳಿ ಹಬ್ಬ ಆರಂಭವಾಗಿ, ಬಲಿಪಾಡ್ಯಮಿವರೆಗೆ ಮುಂದುವರಿಯುತ್ತದೆ.

ಬಲಿ ಪಾಡ್ಯಮಿ

ಬೆಳಕಿನ ಹಬ್ಬ ದೀಪಾವಳಿಯಲ್ಲಿ ಬಲಿ ಪಾಡ್ಯಮಿ ದಿನಕ್ಕೂ ಕೂಡ ಅದರದ್ದೇ ಆದ ಮಹತ್ವವಿದೆ. ಈ ದಿನ ಬಲೀಂದ್ರ ಚಕ್ರವರ್ತಿಯನ್ನು ಪೂಜಿಸಲಾಗುತ್ತದೆ. ಹಿಂದೆಲ್ಲಾ ಮಣ್ಣಿನ ಬಲೀಂದ್ರ ಮೂರ್ತಿಯನ್ನು ಮಾಡಿ ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಕೆಲವರು ಬಲೀಂದ್ರ ಮೂರ್ತಿಯನ್ನು ಮನೆಯಲ್ಲೇ ಇರಿಸಿಕೊಂಡಿರುತ್ತಾರೆ. ಬಲೀಂದ್ರ ಚಕ್ರವರ್ತಿಯ ಅಹಂಕಾರವನ್ನು ತಗ್ಗಿಸಲು ಅವನ ತಲೆಯ ಮೇಲೆ ಪಾದವನ್ನು ಇಡುವ ಮೂಲಕ ವಿಷ್ಣುವು ಅವನನ್ನು ಪಾಳಾತಕ್ಕೆ ತಳ್ಳುತ್ತಾನೆ, ನಂತರ ವಿಷ್ಣು ಬಲೀಂದ್ರ ಚಕ್ರವರ್ತಿಗೆ ನೀಡಿದ ವರದ ಪ್ರಕಾರ ಮೂರು ದಿನಗಳ ಕಾಲ ಭೂಮಿಗೆ ಬರುವ ಅವಕಾಶವಿರುತ್ತದೆ. ಆ ಕಾರಣದಿಂದ ದೀಪಾವಳಿಯ ಸಮಯದಲ್ಲಿ ಭೂಮಿಗೆ ಬರುವ ಬಲೀಂದ್ರ ಚಕ್ರವರ್ತಿಯನ್ನು ಪೂಜಿಸಲಾಗುತ್ತದೆ.

ದೀಪಾವಳಿ ಅಮಾವಾಸ್ಯೆ

ದೀಪಾವಳಿ ಅಮಾವಾಸ್ಯೆಯಂದು ಅಂಗಡಿ ಪೂಜೆಗಳು ನಡೆಯುತ್ತವೆ. ಆ ದಿನ ಲಕ್ಷ್ಮೀದೇವಿಯನ್ನು ಪೂಜಿಸುವ ಮೂಲಕ ವ್ಯಾಪಾರ, ವಹಿವಾಟುಗಳು ಚೆನ್ನಾಗಿ ನಡೆಯಲಿ ಎಂದು ಪ್ರಾರ್ಥಿಸಲಾಗುತ್ತದೆ. ಈ ದಿನ ವ್ಯಾಪಾರಿಗಳು ತಮ್ಮ ಲೆಕ್ಕ ಪುಸ್ತಕಕ್ಕೆ ಪೂಜೆ ಸಲ್ಲಿಸಿ ಹೊಸ ಲೆಕ್ಕವನ್ನು ಆರಂಭಿಸುತ್ತಾರೆ.

ದೀಪಾವಳಿ ಸಮಯದಲ್ಲಿ ಗೋಪೂಜೆಗೂ ವಿಶೇಷ ಪ್ರಾಧಾನ್ಯವಿದೆ. ಈ ದಿನ ಬೆಳಿಗ್ಗೆ ಬೇಗ ಎದ್ದು ಗೋವುಗಳಿಗೆ ಸ್ನಾನ ಮಾಡಿಸಿ, ಹೂವು, ಕುಂಕುಮ ಇತ್ಯಾದಿಗಳಿಂದ ಅಲಂಕಾರ ಮಾಡಿ ಪೂಜೆ ಮಾಡುವುದು ಪದ್ಧತಿ. ಹಿಂದೂ ಧರ್ಮದಲ್ಲಿ ಗೋಪೂಜೆಗೆ ವಿಶೇಷ ಮಹತ್ವವಿದೆ. ಗೋವಿನಲ್ಲಿ 33 ಕೋಟಿ ದೇವರು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ.

ಹೀಗೆ ಈ ಎಲ್ಲಾ ಹಬ್ಬಗಳು ಸೇರಿ ದೀಪಾವಳಿ ಆಗುತ್ತದೆ. ದೀಪಾವಳಿಯ ದಿನಗಳಲ್ಲಿ ಪ್ರತಿ ಮನೆ ಮನೆಗಳಲ್ಲೂ ದೀಪದ ಬೆಳಕಿನ ಪ್ರಭಾವವನ್ನು ಕಾಣಬಹುದಾಗಿದೆ. ಎಲ್ಲೆಲ್ಲೂ ಬೆಳಕಿನ ಚಿತ್ತಾರ ಮೂಡಿಸುತ್ತಿರುತ್ತದೆ. ದುಷ್ಟತನವು ಬೆಳಕಿನ ಜ್ವಾಲೆಯ ಎದುರು ಸುಟ್ಟು ಹೋಗಿ, ಒಳ್ಳೆಯತನ ಪ್ರಜ್ವಲಿಸುತ್ತದೆ ಎಂಬುದು ದೀಪಾವಳಿ ದೀಪದ ಅರ್ಥ.

ದೀಪಾವಳಿಯಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಬೆಳಗೋಣ. ಪಟಾಕಿ ಹಚ್ಚುವಾಗ ಮಕ್ಕಳು, ಹಿರಿಯರೆನ್ನದೇ ಸಾಕಷ್ಟು ಎಚ್ಚರ ವಹಿಸಿ. ಪರಿಸರಕ್ಕೆ ಹಾನಿ ಮಾಡುವ ಪಟಾಕಿ ಹಚ್ಚದಿರಿ. ಒಟ್ಟಾರೆ ಬೆಳಕಿನ ಸಂಭ್ರಮವನ್ನು ಬೆಳಕಿನ ಮೂಲಕವೇ ಸ್ವಾಗತಿಸಿ ಸಂಭ್ರಮಿಸೋಣ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ