Pitru Paksha 2023: ಲಿಂಗಾಯತರು, ಒಕ್ಕಲಿಗರಲ್ಲಿ ಪಿತೃ ಪಕ್ಷದ ಆಚರಣೆ ಹೇಗಿರುತ್ತದೆ, ವಿಧಿ ವಿಧಾನಗಳಲ್ಲಿನ ವ್ಯತ್ಯಾಸದ ಕುರಿತ ಮಾಹಿತಿ
Sep 29, 2023 04:18 PM IST
ಲಿಂಗಾಯತರು, ಒಕ್ಕಲಿಗರಲ್ಲಿ ಪಿತೃ ಪಕ್ಷದ ಆಚರಣೆ, ವಿಧಿ ವಿಧಾನಗಳಲ್ಲಿನ ವ್ಯತ್ಯಾಸದ ಕುರಿತ ಮಾಹಿತಿ
- ವೀರಶೈವ ಅಥವಾ ಲಿಂಗಾಯಿತ ಪಂಗಡದಲ್ಲಿ ಪಿತೃ ಪಕ್ಷದ ಆಚರಣೆಗೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಆದರೆ ಕೆಲವು ಉಪ ಪಂಗಡಗಳ ವಿಧಿ ವಿಧಾನದಲ್ಲಿ ಬದಲಾವಣೆ ಕಾಣಬಹುದು. ಸಾಮಾನ್ಯವಾಗಿ ಪಿತೃ ಪಕ್ಷದ ಆರಂಭದಿಂದ ಹಿಡಿದು, ಮಹಾಲಯ ಅಮಾವಾಸ್ಯೆಯವರೆಗೂ ಆಚರಣೆ ಮಾಡುವವರು ಇರುತ್ತಾರೆ. ಇಹಲೋಕ ತ್ಯಜಿಸಿದ ಹಿರಿಯರಿಗೆ ವಿಶೇಷ ಗೌರವ ಸಲ್ಲಿಸುತ್ತಾರೆ. ಬರಹ: ಎಚ್. ಸತೀಶ್
ಭಾರತದಲ್ಲಿ ಸುಮಾರು 3,000 ಜಾತಿಗಳಿವೆ. ಅದರಲ್ಲಿ ಸುಮಾರು 25,000 ಉಪಜಾತಿಗಳಿವೆ. ಪ್ರತಿ ಜಾತಿ ಹಾಗೂ ಉಪಜಾತಿಗೂ ಅವರದ್ದೇ ಆದ ಆಚರಣೆಗಳು ಇರುತ್ತವೆ. ಅವರದ್ದೇ ಆದ ವಿಧಿವಿಧಾನಗಳಿವೆ. ಆದರೆ ಶಾಸ್ತ್ರ ಸಂಪ್ರದಾಯಗಳು ಬಹುತೇಕ ಒಂದೇ ಆಗಿವೆ.
ತಾಜಾ ಫೋಟೊಗಳು
ಒಕ್ಕಲಿಗರಲ್ಲಿ ಪಿತೃಪಕ್ಷದ ಆಚರಣೆ
ಒಕ್ಕಲಿಗರಲ್ಲಿ ಆಚರಣೆಯ ವಿಧಾನವೇ ವಿಭಿನ್ನವಾಗಿದೆ. ಇವರಲ್ಲಿ ಕೆಲವರು ಪೂರ್ವಜರು ಅಸುನೀಗಿದ ತಿಥಿಯನ್ನು ನೆನಪಿನಲ್ಲಿಟ್ಟುಕೊಂಡು ಪಿತೃ ಪಕ್ಷದಲ್ಲಿ ಅದೇ ತಿಥಿಯಲ್ಲಿ ಎಡೆಯನ್ನು ಇಡುತ್ತಾರೆ. ಎಡೆ ಎಂದರೆ ಊಟದ ಎಲೆಯ ಸಮೇತ ಅಡುಗೆ ಬೇಕಾಗುವ ಪದಾರ್ಥಗಳು, ತರಕಾರಿಗಳು, ಹಾಲು, ಮೊಸರು, ತುಪ್ಪ ಮೊದಲಾದವುಗಳು ಸೇರಲ್ಫಪಡುತ್ತವೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಸಸ್ಯಹಾರವನ್ನು ಮಾತ್ರ ಬಳಸುತ್ತಾರೆ.
ಅಂದರೆ ಮುಖ್ಯವಾಗಿ ಮಹಾಲಯ ಅಮಾವಾಸ್ಯೆಯ ದಿನದಂದು ಪೂರ್ವಜರ ಭಾವಚಿತ್ರಗಳನ್ನು ಇಟ್ಟು, ಅವರನ್ನು ಭಯ ಭಕ್ತಿಯಿಂದ ಪೂಜಿಸುತ್ತಾರೆ. ಒಂದು ಪ್ರತ್ಯೇಕ ಕೊಠಡಿಯಲ್ಲಿ ಭಾವಚಿತ್ರವನ್ನು ಇಟ್ಟು ಅದರ ಮುಂದೆ ಹೊಸ ಬಟ್ಟೆ ಬಟ್ಟೆಗಳು ಮತ್ತು ಅವರ ಇಷ್ಟದ ತಿಂಡಿ ತಿನಿಸು ಮತ್ತು ಇತರ ಆಹಾರವನ್ನು ಇಡುತ್ತಾರೆ. ಕೆಲವರು ತರಕಾರಿಗಳು ಮುಂತಾದವುಗಳಿಂದ ಪೂಜಿಸಿದರೆ ಇನ್ನೂ ಕೆಲವರು ಇಷ್ಟಪಡುತ್ತಿದ್ದ ಮಾಂಸಹಾರವನ್ನು ಅರ್ಪಿಸುತ್ತಾರೆ. ಈ ವಿಧಿ ವಿಧಾನಗಳು ಅವರ ಗುರುಗಳಾದ ದಾಸಪ್ಪನವರಿಂದ ನಡೆಸಲ್ಪಡುತ್ತವೆ.
ತಂದೆ ತಾಯಿ ಇಬ್ಬರೂ ಅಸುನೀಗಿದ್ದಲ್ಲಿ ಅವರಿಬ್ಬರ ಪೂಜೆಯನ್ನು ಮಾತ್ರ ಮಾಡಲಾಗುತ್ತದೆ. ತಂದೆ ಇಲ್ಲದೆ ತಾಯಿ ಮಾತ್ರ ಇದ್ದಲ್ಲಿ ತಂದೆಯ ಜೊತೆಯಲ್ಲಿ ಅಜ್ಜ ಅಜ್ಜಿಯರನ್ನು ಪೂಜಿಸಲಾಗುತ್ತದೆ. ಮನೆಯ ಹಿರಿಯರು ಇದ್ದು ಗಂಡನಿಲ್ಲದೆ ಹೋದಲ್ಲಿ ಆತನ ಪತ್ನಿಯೇ ಈ ಆಚರಣೆಯನ್ನು ಮಾಡಬೇಕಾಗುತ್ತದೆ. ಮದುವೆ ಇಲ್ಲದ ಮಕ್ಕಳು ಅಸುನೀಗಿದರೆ ಶ್ರಾದ್ಧ ಮಾಡುವುದು ತಂದೆ ಅಥವಾ ತಾಯಿಯ ಕರ್ತವ್ಯವಾಗುತ್ತದೆ. ಇವರಲ್ಲಿ ತಂದೆ, ತಾಯಿ, ತಾತ, ಅಜ್ಜಿ ಒಡಹುಟ್ಟಿದ ಸಹೋದರರು, ವಿವಾಹವಿಲ್ಲದ ಸಹೋದರಿ, ಮಕ್ಕಳು ಬಿಟ್ಟರೆ ಬೇರಾರು ಈ ವ್ಯಾಪ್ತಿಗೆ ಒಳಪಡುವುದಿಲ್ಲ. ಇವರಲ್ಲಿ ಇನ್ನೂ ಕೆಲವರು ಪೂರ್ವಜರಿಗೆ ಇಷ್ಟವಾಗುತ್ತಿದ್ದ ಮಾಂಸಾಹಾರವನ್ನು ಸಹ ಹೊಸ ಬಟ್ಟೆಗಳ ಜೊತೆಯಲ್ಲಿ ಅರ್ಪಿಸುತ್ತಾರೆ. ಸಾಮಾನ್ಯವಾಗಿ ಬೆಳಗಿನ ವೇಳೆ ಉಪವಾಸವಿದ್ದು ಸಂಜೆಯ ವೇಳೆ ಈ ಆಚರಣೆಯನ್ನು ಮಾಡುತ್ತಾರೆ. ಆದರೆ ಆರೋಗ್ಯದಲ್ಲಿ ತೊಂದರೆ ಉಂಟಾದಲ್ಲಿ ಅವಲಕ್ಕಿ, ಉಪ್ಪಿಟ್ಟಿನಂತಹ ತಿಂಡಿಯನ್ನು ಸೇವಿಸಬಹುದು. ಇವೆಲ್ಲವನ್ನು ಒಂದು ಕೊಠಡಿಯಲ್ಲಿ ಕೆಲ ಗಂಟೆಗಳವರೆಗೂ ಕೊಠಡಿಯ ಬಾಗಿಲನ್ನು ಹಾಕುತ್ತಾರೆ. ಅನಂತರ ಕೊಠಡಿಯನ್ನು ತೆರೆದು ಅಲ್ಲಿರುವ ತಿಂಡಿ ತಿನಿಸುಗಳನ್ನು ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ. ಹೊಸ ಬಟ್ಟೆಯನ್ನು ತಾವೇ ಬಳಸುತ್ತಾರೆ.
ವೀರಶೈವ, ಲಿಂಗಾಯತರಲ್ಲಿ ಪಿತೃಪಕ್ಷದ ಆಚರಣೆ
ವೀರಶೈವ ಅಥವಾ ಲಿಂಗಾಯಿತ ಪಂಗಡದಲ್ಲಿ ಪಿತೃ ಪಕ್ಷದ ಆಚರಣೆಗೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಆದರೆ ಕೆಲವು ಉಪ ಪಂಗಡಗಳ ವಿಧಿ ವಿಧಾನದಲ್ಲಿ ಬದಲಾವಣೆ ಕಾಣಬಹುದು. ಸಾಮಾನ್ಯವಾಗಿ ಪಿತೃ ಪಕ್ಷದ ಆರಂಭದಿಂದ ಹಿಡಿದು, ಮಹಾಲಯ ಅಮಾವಾಸ್ಯೆಯವರೆಗೂ ಆಚರಣೆ ಮಾಡುವವರು ಇರುತ್ತಾರೆ. ಇಹಲೋಕ ತ್ಯಜಿಸಿದ ಹಿರಿಯರಿಗೆ ವಿಶೇಷ ಗೌರವ ಸಲ್ಲಿಸುತ್ತಾರೆ. ಅವರ ಭಾವಚಿತ್ರವನ್ನು ಇಟ್ಟು ಅದಕ್ಕೆ ಪೂಜೆಗೆ ಮಾಡುತ್ತಾರೆ. ಪೂರ್ವಜರಿಗೆ ಇಷ್ಟವೆನಿಸುವ ತಿಂಡಿ ಪದಾರ್ಥಗಳನ್ನು ಮಾಡಿ ಅವರಿಗೆ ಅರ್ಪಿಸುತ್ತಾರೆ. ಇದರ ಜೊತೆಗೆ ರುದ್ರಾಕ್ಷಿ ಮತ್ತು ವಿಭೂತಿಯ ಘಟ್ಟಿಯನ್ನುಇಟ್ಟು ಪೂಜೆಯನ್ನು ಮಾಡುತ್ತಾರೆ. ಅನಂತರ ಅವರ ಗುರುಗಳ ಮಾರ್ಗದರ್ಶನದಲ್ಲಿ ಶ್ರಾದ್ಧವನ್ನು ಆಚರಿಸಿ ಭಕ್ಷಗಳನ್ನು ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ. ಹೊಸ ಬಟ್ಟೆಯನ್ನು ಸಹ ಹಿರಿಯರಿಗೆ ಅರ್ಪಿಸಿ ನಂತರ ಸೇವಿಸುತ್ತಾರೆ. ಈ ಕೆಲಸ ಮುಗಿಯುವವರೆಗೂ ಉಪವಾಸ ಇರುವುದು ವಾಡಿಕೆ. ಇದರಿಂದ ಪೂರ್ವಜರಿಗೆ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಅವರಲ್ಲಿ ಇರುತ್ತದೆ. ಕೇವಲ ರಕ್ತ ಸಂಬಂಧಿಕರು ಮಾತ್ರ ಈ ಧಾರ್ಮಿಕ ಕ್ರಿಯಾ ವಿಧಿಗಳನ್ನು ನೆರವೇರಿಸುತ್ತಾರೆ. ಇವರಲ್ಲಿಯೂ ವೇದೋಕ್ತ ಮಂತ್ರಗಳ ಪಠಣೆ ನಡೆಯುತ್ತದೆ. ಸಾಮಾನ್ಯವಾಗಿ ಕುಟುಂಬದವರ ವಿನಹ ಬೇರೆ ಯಾರೂ ಪ್ರಸಾದವನ್ನು ಸ್ವೀಕರಿಸುವುದಿಲ್ಲ.
ಪಿತೃಪಕ್ಷದ ಸಂಪ್ರದಾಯ
ವೀರಶೈವರಲ್ಲಿ ಸಂಪ್ರದಾಯಗಳು ಕೊಂಚ ಹೆಚ್ಚೇ ಎನ್ನಬಹುದು. ಹಿಂದಿನ ದಿನಗಳಲ್ಲಿ ಪುರಾಣೋಕ್ತವನ್ನು ಆಚರಿಸುತ್ತಿದ್ದ ಕೆಲವರು ಇಂದು ವೇದೋಕ್ತ ಮಂತ್ರಗಳನ್ನು ಆಶ್ರಯಿಸುತ್ತಾರೆ. ಇವರಿಗೆ ಪಿತೃಪಕ್ಷವು ಪಾಡ್ಯದಿಂದಲೇ ಆರಂಭವಾಗುತ್ತದೆ. ಪೂರ್ವಜರು ಕಾಲವಾದ ದಿನದ ತಿಥಿಯನ್ನು ಆಧರಿಸಿ ಶ್ರಾದ್ಧಕರ್ಮಗಳನ್ನು ಸಹ ಮಾಡುತ್ತಾರೆ. ಕೆಲವರು ಪ್ರತಿದಿನವೂ ತರ್ಪಣವನ್ನು ನೀಡಿ ಆ ದಿನ ರಾತ್ರಿಯ ವೇಳೆ ಉಪವಾಸ ಮಾಡುತ್ತಾರೆ. ಮಹಾಭರಣಿ ಮತ್ತು ಷಷ್ಠಿಯ ದಿನಗಳಂದು ವಿಶಿಷ್ಟ ಆಚರಣೆ ಇರುತ್ತದೆ. ಅಮಾವಾಸ್ಯೆಯ ದಿನದಂದು ಪೂರ್ವಜರ ಭಾವಚಿತ್ರಗಳನ್ನು ಇಟ್ಟು ಪೂಜಿಸುತ್ತಾರೆ. ಅನಂತರ ಶ್ರಾದ್ಧಕರ್ಮವನ್ನು ಆಚರಿಸುತ್ತಾರೆ.
ಸಾಮಾನ್ಯವಾಗಿ ದಿನನಿತ್ಯ ತಂದೆ ತಾಯಿಗಳ ತಂದೆ, ತಾಯಿ, ತಾತ, ಅಜ್ಜಿಗಳ ಆಯ್ದ ಸಂಬಂಧಿಕರಿಗೆ ತರ್ಪಣ ನೀಡುವುದು ವಾಡಿಕೆ. ಇವರೊಂದಿಗೆ ಆತ್ಮೀಯರೆಸುವ ಬೇರೆಯವರಿಗೂ ತರ್ಪಣವನ್ನು ಬಿಡಬಹುದು. ಪುರೋಹಿತರ ಸಹಾಯದಿಂದ ಶ್ರಾದ್ಧಕಾರ್ಯಗಳೆಲ್ಲ ಮುಗಿದ ಮೇಲೆ ದ್ವಾದಶ ಪಿತೃಗಳಿಗೆ ತರ್ಪಣವನ್ನು ನೀಡುತ್ತಾರೆ. ಅಂದು ವಿಶೇಷವಾಗಿ ಸಿಹಿ ತಯಾರಿಸುತ್ತಾರೆ. ಆಗಮಿಸಿರುವ ಬಂಧು ಬಳಗದವರಿಗೆ ಪ್ರಸಾದ ರೂಪವಾಗಿ ಸಿಹಿ ಮತ್ತು ಒಡವೆಯನ್ನು ನೀಡುವುದು ವಾಡಿಕೆ. ಮಧ್ಯಾಹ್ನದ ನಂತರ ಊಟ ಮಾಡಿ ಸಂಜೆಯ ವೇಳೆ ಉಪವಾಸ ಮಾಡುತ್ತಾರೆ. ಅನಾರೋಗ್ಯದ ಕಾರಣ ಉಪವಾಸ ಮಾಡಲು ಸಾಧ್ಯವಾಗದೆ ಹೋದ ಪಕ್ಷದಲ್ಲಿ ತಿಂಡಿಯನ್ನು ತಿನ್ನಬಹುದಾಗಿದೆ. ಬೆಂದಿರುವ ಯಾವುದೇ ಪದಾರ್ಥಗಳನ್ನು ಎರಡು ಬಾರಿ ಸೇವಿಸುವುದಿಲ್ಲ. ಗಂಡು ಮಕ್ಕಳು ಇಲ್ಲದೇ ಹೋದ ಪಕ್ಷದಲ್ಲಿ ಅಳಿಯ ಅಥವಾ ಅಣ್ಣ ತಮ್ಮಂದಿರ ಮಕ್ಕಳು ಈ ಕಾರ್ಯವನ್ನು ನಡೆಸಬಹುದಾಗಿದೆ.
ಲೇಖನ: ಜ್ಯೋತಿಷಿ ಎಚ್. ಸತೀಶ್
(ಗಮನಿಸಿ: ಈ ಬರಹವು ಶಾಸ್ತ್ರ, ಸಂಪ್ರದಾಯ, ನಂಬಿಕೆಗಳನ್ನು ಆಧರಿಸಿದೆ. ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ).