ಅಂಜನಾದ್ರಿಯಿಂದ ಅವನಿ ಬೆಟ್ಟದವರೆಗೆ, ರಾಮಾಯಣದ ಕುರುಹು ಹೊಂದಿರುವ ಕರ್ನಾಟಕದ ಕೆಲ ಪ್ರದೇಶಗಳಿವು
Jan 16, 2024 05:09 PM IST
ರಾಮಾಯಣದ ಕುರುಹು ಇರುವ ಕರ್ನಾಟಕದ ಜಾಗಗಳು
- ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ರಾಮನಿಗೂ ಕರ್ನಾಟಕಕ್ಕೂ ಇರುವ ಸಂಬಂಧವನ್ನು ನಾವು ಇಲ್ಲಿ ನೆನೆಯಬಹುದು. ರಾಮಾಯಣದ ಕುರುಹು ಇರುವ ಕರ್ನಾಟಕದ ಕೆಲವು ಪ್ರದೇಶಗಳ ಬಗ್ಗೆ ತಿಳಿಸಿದ್ದಾರೆ ಎಚ್. ಸತೀಶ್.
ರಾಮಾಯಣದ ವಿಚಾರಕ್ಕೆ ಬಂದರೆ ಆಂಜನೇಯನದು ಪ್ರಮುಖ ಪಾತ್ರ. ಕನ್ನಡನಾಡಿನ ಚರಿತ್ರೆಯ ಪ್ರಕಾರ ಮೊದಲು ಕನ್ನಡವನ್ನು ಮಾತನಾಡಿದ ವ್ಯಕ್ತಿ ಶ್ರೀ ಆಂಜನೇಯ. ರಾಮಾಯಣದಲ್ಲಿ ಸತ್ಯ ಮತ್ತು ಧರ್ಮ ಜಯಿಸಲು ಆಂಜನೇಯ ಹಾಗೂ ಅವನ ಜೊತೆಗಾರರ ಪಾತ್ರ ಬಹುಮುಖ್ಯವಾದದ್ದು ಎನ್ನಲಾಗುತ್ತದೆ. ಇದಕ್ಕೆ ಪೂರಕವಾಗಿ ಕನ್ನಡ ನಾಡಿನಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಸ್ಥಳಗಳು ನಮಗೆ ಕಾಣ ಸಿಗುತ್ತದೆ. ಬೆಂಗಳೂರು ಹಾಗೂ ಹಂಪೆಯ ಸುತ್ತಮುತ್ತ ಹಲವು ಪ್ರದೇಶಗಳು ರಾಮಾಯಣಕ್ಕೆ ಸಾಕ್ಷಿಯಾಗಿವೆ.
ತಾಜಾ ಫೋಟೊಗಳು
ಕರ್ನಾಟಕದ ಖ್ಯಾತ ಪ್ರವಾಸಿ ತಾಣಗಳಲ್ಲಿ ಹಂಪೆಗೆ ಅಗ್ರಸ್ಥಾನವಿದೆ. ಹಂಪೆಯ ಸುತ್ತಮುತ್ತ ರಾಮಾಯಣಕ್ಕೆ ಸಂಬಂಧಿಸಿದ ಹಲವು ಕುರುಹುಗಳಿವೆ. ಇಲ್ಲ. ರಾಮಾಯಣ ಕಾಲದಲ್ಲಿ ವಾಲಿ ಮತ್ತು ಸುಗ್ರೀವರ ನಡುವೆ ದೊಡ್ಡ ಹೋರಾಟವೇ ನಡೆದಿರುತ್ತದೆ. ಎಷ್ಟೇ ಪ್ರಯತ್ನ ಪಟ್ಟರು ಅತಿ ಶಕ್ತಿಶಾಲಿಯಾದ ವಾಲಿಯನ್ನು ಸೋಲಿಸಲು ಸುಗ್ರೀವನಿಗೆ ಸಾಧ್ಯವಾಗುವುದೇ ಇಲ್ಲ. ಆ ಸಂದರ್ಭದಲ್ಲಿ ಶ್ರೀರಾಮಚಂದ್ರನು ಸೀತೆ ಮತ್ತು ಲಕ್ಷ್ಮಣರ ಜೊತೆಗೂಡಿ ಅಲ್ಲಿಗೆ ಬರುತ್ತಾನೆ. ಆ ಪ್ರದೇಶವೇ ಕಿಷ್ಕಿಂದಾ. ಇದೇ ಪ್ರದೇಶದಲ್ಲಿ ಮತ್ತೊಮ್ಮೆ ಯುದ್ಧ ನಡೆದಾಗ ಶ್ರೀ ರಾಮನು ಸುಗ್ರೀವನಿಗೆ ನೀಡಿದ ಮಾತಿನಂತೆ ವಾಲಿಯನ್ನು ಸಂಹರಿಸುತ್ತಾನೆ. ಅನಂತರ ಕಿಷ್ಕಿಂದಾ ಪ್ರದೇಶದ ರಾಜನಾಗಿ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡುತ್ತಾನೆ. ಈ ಪಟ್ಟಾಭಿಷೇಕ ನಡೆದ ಸ್ಥಳವೇ ಹಂಪೆಯಲ್ಲಿರುವ ಕೋದಂಡರಾಮ ದೇವಸ್ಥಾನ. ವಾಲಿಯ ಸಂಹಾರದ ವಿಚಾರ ಕೃಷ್ಣಾವತಾರದಲ್ಲಿಯೂ ತಿಳಿದು ಬರುತ್ತದೆ.
ಈ ದೇವಾಲಯದ ಆಸುಪಾಸಿನಲ್ಲಿ ಇರುವ ಋಶ್ಯಮುಕಿ ಪರ್ವತದಲ್ಲಿ ಮೊದಲ ಬಾರಿಗೆ ಆಂಜನೇಯನು ರಾಮಚಂದ್ರನನ್ನು ಭೇಟಿ ಮಾಡಿದನೆಂದು ಹೇಳಲಾಗುತ್ತದೆ. ವಾಲಿಗೆ ಹೆದರಿಕೊಂಡು ಸುಗ್ರೀವನು ಸೋಲನ್ನು ಒಪ್ಪಿ ಓಡಿ ಬಂದು ಪ್ರಾಣವನ್ನು ರಕ್ಷಿಸಿಕೊಂಡ ಎಂದು ಹೇಳಲಾಗುವ ಮಾತಂಗ ಬೆಟ್ಟವು ಇಲ್ಲಿಯೇ ಇದೆ. ಸುಗ್ರೀವನು ಅಡಗಿದ್ದ ವಿಶಾಲವಾದ ಗವಿಯನ್ನೂ ನಾವು ಇಲ್ಲಿ ನೋಡಬಹುದಾಗಿದೆ.
ರಾವಣ ಮಾಯಾ ಜಿಂಕೆಯ ರೂಪದಲ್ಲಿ ಬಂದು ಮೋಸದಿಂದ ಸೀತೆಯನ್ನು ಅಪಹರಿಸುತ್ತಾನೆ. ತನ್ನ ಪುಷ್ಪಕ ವಿಮಾನದಲ್ಲಿ ತೆರಳುವ ವೇಳೆ ಸೀತಾಮಾತೆಯು ತಾನು ಧರಿಸಿದ್ದ ಒಡವೆಗಳನ್ನು ನೆಲದ ಮೇಲೆ ಎಸೆಯುತ್ತಾಳೆ. ಆ ಒಡವೆಯು ಚಿಕ್ಕ ನೀರಿನ ಕೊಳದಲ್ಲಿ ಬೀಳುತ್ತದೆ. ಆ ಕೊಳವು ಹಂಪೆಯಲ್ಲಿಯೇ ಕಾಣ ಸಿಗುತ್ತದೆ. ಆನೆಗುಂಡಿಯಲ್ಲಿರುವ ವಿಜಯನಗರ ರಾಜರ ಅರಸರ ಕಾಲದ ಅರಮನೆಯ ಹೋಲುವ ಮಂದಿರ ಒಂದು ಕಾಣುತ್ತದೆ. ಈ ಮಂದಿರದ ಮುಖ್ಯದ್ವಾರದಲ್ಲಿ ಕೋತಿಯ ಚಿತ್ರವನ್ನು ಕೆತ್ತಲಾಗಿದೆ. ಆದ್ದರಿಂದ ವಾಲಿಯು ವಾಸವಿದ್ದ ಅರಮನೆಯು ಇದಾಗಿದೆ ಎಂದು ಚರಿತ್ರಾಗಾರರ ಅಭಿಮತವಾಗಿದೆ. ರಾಮಾಯಣದಲ್ಲಿ ಬರುವ ಮತ್ತೊಂದು ಬಹು ಮುಖ್ಯ ಪಾತ್ರ ಶಬರಿ. ಶಬರಿಯು ಶ್ರೀರಾಮನ ನಿಜವಾದ ಭಕ್ತರಲ್ಲಿ ಒಬ್ಬಳು. ಪ್ರತಿನಿತ್ಯ ಶ್ರೀರಾಮಚಂದ್ರನ ಪೂಜೆಯನ್ನು ಆರಂಭಿಸುವ ಮುನ್ನ ಸ್ನಾನ ಮಾಡುತ್ತಿದ್ದ ಸರೋವರವು ಕರ್ನಾಟಕದ ಆನೆಗುಂಡಿಯಲ್ಲಿಯೇ ಇದೆ. ಶಬರಿಯು ಸ್ನಾನ ಮಾಡುತ್ತಿದ್ದ ಸರೋವರವೇ ಪಂಪಾ ಸರೋವರ.
ಹಂಪೆಯ ಸಮೀಪಲದಲ್ಲೇ ಇರುವ ಆಂಜನೇಯನಿಗೆ ಸಂಬಂಧಿಸಿದ ಇನ್ನೊಂದು ಪ್ರದೇಶವೆಂದರೆ ಅಂಜನಾದ್ರಿ ಬೆಟ್ಟ. ಇದನ್ನು ಆಂಜನೇಯನ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ಈ ಜಾಗವನ್ನು ತಲುಪಲು 600 ಮೆಟ್ಟಿಲುಗಳನ್ನು ಏರಿ ಬರಬೇಕು.
ಕರ್ನಾಟಕದಲ್ಲಿರುವ ಮತ್ತೊಂದು ಪರ್ವತವನ್ನು ಮಲಯವಂತ ಪರ್ವತ ಎಂದು ಕರೆಯುತ್ತಾರೆ. ವಾನರ ಸೈನ್ಯದೊಂದಿಗೆ ರಾವಣನ ವಿರುದ್ಧ ಯುದ್ಧಕ್ಕೆ ಹೊರಟ ಶ್ರೀರಾಮಚಂದ್ರನು ಮಳೆಗಾಲವಾದ ಕಾರಣ ಕೆಲಕಾಲ ಇಲ್ಲಿ ವಿಶ್ರಮಿಸಿದ್ದನೆಂದು ಎಂದು ಹೇಳಲಾಗುತ್ತದೆ. ಪುರಾತತ್ವ ಇಲಾಖೆಯು ಸಹ ಈ ಎಲ್ಲಾ ವಿಚಾರಗಳನ್ನು ಬಹುತೇಕ ಒಪ್ಪಿಕೊಂಡಿದೆ.
ಕೋಲಾರದ ಬಳಿ ಇರುವ ಅವನಿ ಬೆಟ್ಟದಲ್ಲಿ ಸಹ ಸೀತಾಮಾತೆಯನ್ನು ರಾಮನು ಹುಡುಕುತ್ತಾ ಬಂದನೆಂಬ ವಿಚಾರಗಳಿಗೆ ಸಾಕ್ಷಿ ಇದೆ. ಈ ಬೆಟ್ಟದಲ್ಲಿ ಅನೇಕ ಕುರುಹುಗಳನ್ನು ಈಗಲೂ ಕಾಣಬಹುದು. ರಾವಣನ ವಿರುದ್ಧ ಜಯಗಳಿಸಿದ ಮೇಲೆ ರಾಮನ ಪಟ್ಟಾಭಿಷೇಕವಾಗುತ್ತದೆ. ಆದರೆ ರಾಜ್ಯದ ಪ್ರಜೆಗಳನ್ನು ಮಾತನ್ನು ಕೇಳಿ ಶ್ರೀರಾಮಚಂದ್ರನು ಸೀತಾಮಾತೆಯನ್ನು ರಾಜ್ಯದಿಂದ ದೂರ ಕಳಿಸುತ್ತಾನೆ. ಆಗ ಸೀತಾಮಾತೆಯು ಬಂದು ನೆಲೆಸಿದ ಸ್ಥಳವೇ ಈ ಅವನಿ ಬೆಟ್ಟ. ಇಲ್ಲಿದ್ದ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಸೀತಾಮಾತೆಯು ಆಶ್ರಯ ಪಡೆಯುತ್ತಾಳೆ. ಲವಕುಶರ ಜನನವು ಇಲ್ಲಿಯೇ ಆಗುತ್ತದೆ. ಶ್ರೀರಾಮಚಂದ್ರನ ಅಶ್ವಮೇಧದ ಕುದುರೆಯನ್ನು ಲವಕುಶರು ಇಲ್ಲಿ ಬಂಧಿಸುತ್ತಾರೆ. ಇದೇ ಜಾಗದಲ್ಲಿ ಭರತ, ಶತ್ರುಘ್ನ, ಲಕ್ಷ್ಮಣರನ್ನು ಲವಕುಶರು ಸೋಲಿಸುತ್ತಾರೆ. ಶ್ರೀ ರಾಮನೊಂದಿಗೆ ಸಹ ಮಕ್ಕಳು ಯುದ್ಧ ಮಾಡುತ್ತಾರೆ. ಆಗ ವಾಲ್ಮೀಕಿ ಮಹರ್ಷಿಗಳು ಮಧ್ಯೆ ಪ್ರವೇಶಿಸಿ ಎಲ್ಲಾ ವಿಚಾರವನ್ನು ತಿಳಿಸುತ್ತಾರೆ. ಆಗ ಶ್ರೀರಾಮಚಂದ್ರನಿಗೆ ಪಶ್ಚಾತ್ತಾಪ ಉಂಟಾಗುತ್ತದೆ. ಕೊನೆಗೆ ಮತ್ತೊಮ್ಮೆ ರಾಮಾ ಸೀತೆಯರ ಪರಸ್ಪರ ಭೇಟಿ ನಡೆಯುತ್ತದೆ.
ಇವು ಕರ್ನಾಟಕದಲ್ಲಿ ರಾಮಾಯಣ ಕುರುಹು ಇರುವ ಕೆಲವು ಸ್ಥಳಗಳು. ಇಷ್ಟೇ ಅಲ್ಲದೆ ಇನ್ನೂ ಹಲವು ಸ್ಥಳಗಳಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಕುರುಹುಗಳಿವೆ. ಕೆಲವು ಜಾಗಗಳು ಬೆಳಕಿಗೆ ಬಂದರೆ, ಕೆಲವು ಹೆಚ್ಚು ಚಾಲ್ತಿಯಲ್ಲಿಲ್ಲ.