Ayodhya Ram Mandir: ಅಯೋಧ್ಯೆ ರಾಮ ಮಂದಿರದ ಬಾಲರಾಮನ ಮುಖ ಅನಾವರಣ
Jan 19, 2024 06:14 PM IST
ಅಯೋಧ್ಯೆ ರಾಮ ಮಂದಿರದ ಬಾಲರಾಮ ಮೂರ್ತಿಯ ಮುಖ ಕಾಣಿಸಿರುವ ಮೊದಲ ಫೋಟೋ
ಅಯೋಧ್ಯೆ ರಾಮ ಮಂದಿರದ ಬಾಲರಾಮ ಮೂರ್ತಿಯ ಮುಖ ಅನಾವರಣಗೊಂಡಿರುವ ಫೋಟೋ ಬಹಿರಂಗವಾಗಿದೆ. ವಿಶೇಷ ಆಕರ್ಷಣೆ ಹೊಂದಿರುವ ಬಾಲರಾಮನ ಮೂರ್ತಿಯ ವಿಶೇಷಗಳ ಕುರಿತು ಚರ್ಚೆ ಶುರುವಾಗಿದೆ.
ಲಖನೌ: ಅಯೋಧ್ಯೆಯ ರಾಮ ಮಂದಿರದ ಬಾಲರಾಮ ಮೂರ್ತಿಯ ಮುಖ ಅನಾವರಣಗೊಂಡಿದೆ. ಇತ್ತೀಚೆಗೆ ಬಹಿರಂಗವಾಗಿರುವ ಫೋಟೋದಲ್ಲಿ ಬಾಲರಾಮನ ಮುಖ ಕಾಣಿಸಿದ್ದು, ವಿಶೇಷ ಆಕರ್ಷಣೆಯನ್ನು ಹೊಂದಿರುವುದು ಗೋಚರಿಸಿದೆ.
ತಾಜಾ ಫೋಟೊಗಳು
ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ಕೃಷ್ಣ ಶಿಲೆಯ ಬಾಲರಾಮನ ಮೂರ್ತಿಯು ವಿಶೇಷ ಆಕರ್ಷಣೆಯೊಂದಿಗೆ ಜನಮನಸೂರೆಗೊಂಡಿದೆ. ಮಂದಸ್ಮಿತ ವದನ ಬಾಲರಾಮನ ಮುಖದಲ್ಲಿ ವಿಶೇಷ ಜೀವಕಳೆ ಇದ್ದು, ಹಣೆಯ ಮೇಲಿನ ತಿಲಕ ವರ್ಚಸ್ಸನ್ನು ಹೆಚ್ಚಿಸಿದೆ.
ಐದು ವರ್ಷ ವಯಸ್ಸಿನ ಬಾಲರಾಮನ ಮೂರ್ತಿ 51 ಇಂಚು ಎತ್ತರ ಇದ್ದು, ಮುದ್ದುರಾಮನ ಹಿಂದಿರುವ ಪ್ರಭಾವಳಿ ಮೇಲೆ ದಶಾವತಾರದ ಚಿತ್ರಗಳಿವೆ. ಪ್ರಭಾವಳಿಯ ಮೇಲಿರುವ ದಶಾವತಾರ ಹೀಗಿದೆ - 1 ಮತ್ಸ್ಯಾವತಾರ · 2. ಕೂರ್ಮ · 3. ವರಾಹ · 4. ನರಸಿಂಹ · 5. ವಾಮನ / ತ್ರಿವಿಕ್ರಮ · 6. ಪರಶುರಾಮ · 7. ಶ್ರೀ ರಾಮ · 8. ಬಲರಾಮ 9. ಶ್ರೀಕೃಷ್ಣ, 10. ಕಲ್ಕಿ. ಪ್ರಭಾವಳಿಯ ಎರಡೂ ಬದಿಗೆ ತಲಾ 5 ರಂತೆ ಅವತಾರಗಳ ಚಿತ್ರಣವಿದೆ.
ಬಿಲ್ಲು ಮತ್ತು ಬಾಣ ಹಿಡಿಯಲು ಬೇಕಾದಂತೆ ಕೈಗಳನ್ನು ಕೆತ್ತಲಾಗಿದೆ. ಬಿಲ್ಲು ಮತ್ತು ಬಾಣಗಳನ್ನು ಕೈಗಳಿಂದ ಪ್ರತ್ಯೇಕಿಸಿ ತೆಗೆಯುವಂತೆ ಮೂರ್ತಿಯ ರಚನೆ ಇದೆ. ಮರದ ಬಿಲ್ಲು ಬಾಣಗಳನ್ನು ಕೈಗಳಿಗೆ ನೀಡಲಾಗಿದೆ. ಮೇಲ್ನೋಟಕ್ಕೆ ಅದು ಚಿನ್ನದ ಬಿಲ್ಲು ಬಾಣದಂತೆ ಗೋಚರಿಸುತ್ತಿದೆ.
ಮೂರ್ತಿಯ ಪ್ರಭಾವಳಿಯ ಕೆಳಭಾಗದಲ್ಲಿ ಆಂಜನೇಯ ಮತ್ತು ಗರುಡನ ಕೆತ್ತನೆಗಳಿವೆ. ಬಾಲರಾಮನನ್ನು ಕಮಲದ ಹೂವಿನ ಮೇಲೆ ನಿಂತ ಮಾದರಿಯಲ್ಲಿ ಕೆತ್ತನಮಾಡಲಾಗಿದೆ.
ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರು ಬಾಲರಾಮನ ಮುಖದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
“ಲೋಕಾಭಿರಾಮಂ ರಣರಂಗಧೀರಂ
ರಾಜೀವನೇತ್ರಂ ರಘುವಂಶನಾಥಂ.
ಕಾರುಣ್ಯರೂಪಂ ಕರುಣಾಕರಂ ತಾನ್
ಶ್ರೀರಾಮಚಂದ್ರಂ ಶರಣಂ ಪ್ರಪದ್ಯೇ.”
ಭಗವಾನ್ ಶ್ರೀರಾಮನ ಈ ಸುಂದರ ಚಿತ್ರವು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ ಮತ್ತು ಹೃದಯವನ್ನು ಸಂತೋಷಪಡಿಸುತ್ತದೆ. ಜೈ ಜೈ ಶ್ರೀ ರಾಮ್ ಎಂದು ಸಂಬಿತ್ ಪಾತ್ರಾ ಬರೆದುಕೊಂಡಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಲ್ಲು, ಬಾಣ ಹಿಡಿದಿರುವ ಬಾಲರಾಮನ ಪೂರ್ಣ ಫೋಟೋವನ್ನು ಶೇರ್ ಮಾಡಿದ್ದು, ಅಯೋಧ್ಯಾಪತಿ ಶ್ರೀರಾಮ ಎಂದು ಭಕ್ತಿನಮನ ಸಲ್ಲಿಸಿದ್ದಾರೆ.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in
ವಿಭಾಗ