ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ: ಅಯೋಧ್ಯೆ ತಲುಪಿತು ಕನ್ನಡದ ಹಾಡು, ಕವಿ-ಕಾದಂಬರಿಕಾರ ಗಜಾನನ ಶರ್ಮಾರ ಪರಿಚಯ ಇಲ್ಲಿದೆ
Jan 17, 2024 09:23 PM IST
ಕನ್ನಡಿಗ, ಬರಹಗಾರ ಡಾ.ಗಜಾನನ ಶರ್ಮಾ ಬರೆದಿರುವ ರಾಮನ ಕುರಿತ ಹಾಡು ಜನಪ್ರಿಯವಾಗಿದೆ.
- ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಕನ್ನಡದ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಮೊಳಗಲಿದೆ. ಲೇಖಕ ಡಾ. ಗಜಾನನ ಶರ್ಮಾ ಅವರ ಹಾಡು ಸಾಮಾಜಿಕ ಜಾಲತಾಣದಲ್ಲಿ ನಾಲ್ಕು ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ. ಡಾ.ಶರ್ಮಾ ಅವರು ಕನ್ನಡದ ವರ್ತಮಾನ ಕಾಲದ ಜನಪ್ರಿಯ ಲೇಖಕರೂ ಹೌದು. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದೊ ರಾಮ" ಭಕ್ತಿ, ಭಾವದ ಲಹರಿಯ ಈ ಹಾಡನ್ನು ನಾಲ್ಕು ಕೋಟಿಗೂ ಅಧಿಕ ಮಂದಿ ಕೇಳಿದ್ದಾರೆ. ಮನಸ್ಸಿನಲ್ಲಿರುವ ರೌದ್ರಭಾವವನ್ನೂ ಶಾಂತವನ್ನಾಗಿಸುವ ಈ ಹಾಡಿನಲ್ಲಿ ನಾನಾ ಅರ್ಥಗಳಿವೆ. ರಾಮನಲ್ಲಿ ಶರಣಾಗತಿಯೊಂದಿಗೆ ಮನಸ್ಸಿನಲ್ಲಿರುವ ರಾವಣನನ್ನೂ ಹೊಡೆದೋಡಿಸುವ ಶಕ್ತಿಯನ್ನು ಕೊಡು ಎಂಬ ಭಾವಾರ್ಥವಿದೆ. ರಾಮನ ಧ್ಯಾನದೊಂದಿಗೆ ಅಂತರಂಗ ಶುದ್ಧಿಯ ದಾರಿಯೂ ಇದೆ. ಇಂಥ ಹಾಡನ್ನು ಬರೆದವರು, ಲೇಖಕ ಡಾ. ಗಜಾನನ ಶರ್ಮಾ. ಶಿವಮೊಗ್ಗ ಜಿಲ್ಲೆ ಸಾಗರದವರು. ಈ ಹಾಡೀಗ ಅಯೋಧ್ಯೆಯನ್ನೂ ತಲುಪಿದೆ. ಈ ಹಾಡನ್ನು ನಾಲ್ಕು ಕೋಟಿಗೂ ಅಧಿಕ ಮಂದಿ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ.
ತಾಜಾ ಫೋಟೊಗಳು
ಮೂಲತಃ ಇಂಜಿನಿಯರ್ ಆಗಿರುವ ಇವರು ಸಾಹಿತ್ಯದಲ್ಲಿ ಒಲವುಳ್ಳವರು. ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ‘ರಾಮಕಥೆ’’ಯ ಹಾಡುಗಳನ್ನೂ ಬರೆದಿರುವ ಡಾ. ಗಜಾನನ ಶರ್ಮಾ ಬರೆದ ‘’ಇನ್ನಷ್ಟು ಬೇಕೆನ್ನ’’ ಹಾಡು, ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಬಹಳ ಇಷ್ಟಪಟ್ಟ ಹಾಡೂ ಹೌದು. ಇದೀಗ ಶ್ರೀರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲೂ ಇದು ಮೊಳಗಲಿದೆ. ಅಯೋಧ್ಯೆಯಲ್ಲಿ ಕನ್ನಡ ಹಾಡು ಪ್ರಸಾರವಾಗುವುದು ಒಂದು ಖುಷಿಯಾದರೆ, ರಾಮನ ಕುರಿತ ಭಾವಪೂರ್ಣ ಹಾಡು ಬರೆದಿರುವ ಡಾ. ಗಜಾನನ ಶರ್ಮಾ ಅವರಿಗೂ ಇದು ಧನ್ಯತೆಯನ್ನು ತಂದಿದೆ.
ಅಯೋಧ್ಯೆ ರಾಮ ಮಂದಿರ ಆವರಣದಲ್ಲಿ ಈ ಹಾಡನ್ನು ಪ್ರಸಾರ ಮಾಡಿದೆ. ಈ ಕುರಿತು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕನ್ನಡದಲ್ಲಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದೆ. ಪ್ರಭು ಶ್ರೀರಾಮಚಂದ್ರನ ಕುರಿತಾದ ಹೃದಯಕ್ಕೆ ಹಜತ್ತಿರವಾಗಿರುವ ಈ ಮನೋಜ್ಞ ಗೀತೆ ರಚನೆಗಾಗಿ ಡಾ. ಗಜಾನನ ಶರ್ಮಾ ಅವರಿಗೆ ಅಭಿನಂದನೆ, ಜೈ ಶ್ರೀರಾಮ್ ಎಂದು ಬರೆದುಕೊಳ್ಳಲಾಗಿದೆ.
ಹಾಡಿಗೆ ಹನ್ನೊಂದು ವರ್ಷ
ಈ ಕುರಿತು HTಕನ್ನಡ ಜೊತೆ ಸಂತಸ ಹಂಚಿಕೊಂಡ ಡಾ. ಗಜಾನನ ಶರ್ಮಾ, ಹಾಡನ್ನು ಯಾವಾಗ ಪ್ರಸಾರ ಮಾಡುತ್ತಾರೆ, ಯಾವ ವಿಧದಲ್ಲಿ ಆಯ್ಕೆಯಾಗಿದೆ ಎಂಬ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ವೀಟ್ ಮಾಡಿದ ವಿಚಾರ ತಿಳಿದಿದ್ದು, ಸ್ನೇಹಿತರು ವಿಚಾರ ಹೇಳಿದಾಗ ಸಂತಸಪಟ್ಟೆ. ಇದು ನನಗೆ ಧನ್ಯತಾಭಾವ ಮೂಡಿಸಿದೆ ಎಂದರು.
2012ರಲ್ಲಿ ಈ ಹಾಡನ್ನು ಬರೆದಿದ್ದೆ, ಆ ಸಂದರ್ಭ ನಾನು ಸರ್ವೀಸ್ ನಲ್ಲಿದ್ದೆ. ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ರಾಮನ ಕುರಿತ ಹಾಡನ್ನು ಬರೆದಿದ್ದೆ. 2012ರಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ‘ನಂದನ’ ಚಾತುರ್ಮಾಸ್ಯ ಸಂದರ್ಭ ನಾನು ಬರೆದ ಹಾಡಿಗೆ ನನ್ನ ಮಗ ಸಾಕೇತ್ ಶರ್ಮಾ ಸಂಗೀತ ನೀಡಿ ಹಾಡಿದ್ದಾರೆ ಎಂದು ಹೇಳಿದರು.
ವಿದ್ಯುತ್ ಇಲಾಖೆಯಲ್ಲಿ ಎಂಜಿನಿಯರ್, ಬರಹಗಾರರಾಗಿ ಜನಪ್ರಿಯ
ಸಾಗರ ತಾಲೂಕಿನ ಹುಕ್ಕಲು ಗ್ರಾಮದಲ್ಲಿ ಜನಿಸಿದ ಶರ್ಮಾ, ದಾವಣಗೆರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರಿನ ಎನ್‌ಐಇಯಿಂದ ಎಂ.ಟೆಕ್. ಪದವಿ ಪಡೆದವರು. ಮೈಸೂರಿನ ಕೆಎಸ್‌ಒಯುನಲ್ಲಿ ಎಂಎ ಪದವಿ ಪಡೆದಿದ್ದು, ಹಂಪಿ ಕನ್ನಡ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಮೂವತ್ತೈದು ವರ್ಷಗಳ ಕಾಲ ಕೆಇಬಿ(ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ), ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ಸೂಪರಿಂಟೆಂಡೆಂಟ್, ಅಧೀಕ್ಷಕ ಎಂಜಿನಿಯರ್ ಆಗಿದ್ದರು. ಡಾ. ಗಜಾನನ ಶರ್ಮಾ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯಾಗಿ ಗಮನ ಸೆಳೆದವರು. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. 'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಚೆನ್ನಭೈರಾದೇವಿ ಆರು ಮುದ್ರಣಗಳನ್ನು ಕಂಡಿದೆ.
ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ವೃತ್ತಿ ಜೀವನದ ನೆನಪುಗಳು' ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಎಂಬ ಮಹಾಪ್ರಬಂಧಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾ ಲಯದಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಕನ್ನಡ ಸುಗಮ ಸಂಗೀತದ ಮೇರುಪ್ರತಿಭೆ ಗರ್ತಿಕೆರೆ ರಾಘಣ್ಣನವರ ಬದುಕಿನ ಚಿತ್ರಣವಾದ 'ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ' ಇವರ ಇನ್ನೊಂದು ಮಹತ್ವದ ಕೃತಿ. ’ಕೈಲಾಸ ಮಾನಸ', 'ಗೋಮುಖಆಗಿ ಹೋಗುವ ಮುನ್ನ ಕಣ್ಣುಂಬಿಕೊಳ್ಳೋಣ' (ಪ್ರವಾಸ ಕೃತಿ), “ನನ್ನ ವೃತ್ತಿಯ ನೆನಪುಗಳು” ಕೃತಿಯಲ್ಲಿ ಅವರ ವೃತ್ತಿ ಬದುಕಿನ ಅನುಭವವನ್ನು ದಾಖಲಿಸಿದ್ದಾರೆ. ಮಹಾಮಾಪನದ ಕಥನ ಪ್ರಮೇಯ ಜನಪ್ರಿಯವಾಗಿದೆ. ಶಿವರಾಮ ಕಾರಂತ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ಸಂದಿವೆ.
ಇನ್ನಷ್ಟು ಬೇಕೆನ್ನ ಹಾಡಿನ ಸಾಲುಗಳು ಹೀಗಿವೆ.
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ
ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಒಳಿತಿನೆಡೆ ಮುನ್ನೆಡೆವ ಮನವಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
ನನ್ನ ಹರಣಕೆ ನಿನ್ನ ಚರಣ ಕೊಂಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
ವೈದೇಹಿಯಾಗುವೆನು ಒಡನಾಡು ರಾಮ|
ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
ಸಹವಾಸ ಕೊಡು ನನಗೆ ಸೌಮಿತ್ರಿ ರಾಮ|
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
ನಾ ವಿಭೀಷಣ ಶರಣುಭಾವ ಕೊಡು ರಾಮ|
ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
ಕಣ್ಣೀರು ಕರೆಯುವೆನು ನನ್ನತನ ಕಳೆ ರಾಮ|
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ರಘುರಾಮ ರಘುರಾಮ ರಘುರಾಮ ರಘುರಾಮ|
ನಗುರಾಮ ನಗರಾಮ ಜಗರಾಮ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||