ದೀಪಾವಳಿಗೆ ಮೊದಲೇ ಈ ಸಸ್ಯಗಳನ್ನು ಮನೆಗೆ ತನ್ನಿ; ಸೌಂದರ್ಯ ಹೆಚ್ಚಿಸುವ ಜೊತೆಗೆ ಲಕ್ಷ್ಮಿ ಮನೆಯಿಂದ ಹೊರಗಡೆ ಹೋಗಲ್ಲ
Oct 16, 2024 02:17 PM IST
ದೀಪಾವಳಿಗೂ ಮೊದಲ ಮನೆಯಲ್ಲಿ ಯಾವೆಲ್ಲಾ ಸಸ್ಯಗಳು ಇದ್ದರೆ ಅದೃಷ್ಟ, ಶುಭ ಫಲಿತಾಂಶಗಳು ಇರುತ್ತವೆ ಎಂಬುದನ್ನು ತಿಳಿಯೋಣ.
- ದೀಪಾವಳಿ 2024: ಎಲ್ಲರೂ ಸಂಭ್ರಮದಿಂದ ಆಚರಿಸುವ ದೀಪಾವಳಿ ಹಬ್ಬ ಕೆಲವೇ ದಿನಗಳಲ್ಲಿ ಬರುತ್ತಿದೆ. ಈ ಸಂದರ್ಭದಲ್ಲಿ ನೀವು ಕೆಲವು ಸಸ್ಯಗಳನ್ನು ಮನೆಗೆ ತರಬಹುದು. ಇವು ನಿಮ್ಮ ಮನೆಗೆ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಸಹ ನೀಡುತ್ತದೆ.
ಇಡೀ ಜಗತ್ತಿನಾದ್ಯಂತ ಇರುವ ಹಿಂದೂಗಳು ಆಚರಿಸುವ ದೀಪಾವಳಿಯು ಅತ್ಯಂತ ಪ್ರಮುಖ ಮತ್ತು ದೊಡ್ಡ ಹಬ್ಬವಾಗಿದ್ದು, ಜಾತಿ ಭೇದವಿಲ್ಲದೆ ಎಲ್ಲರೂ ಸಂತೋಷದಿಂದ ಆಚರಿಸುತ್ತಾರೆ. ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ಬೆಳಕಿನ ಹಬ್ಬವನ್ನು ಎಲ್ಲರೂ ಇಷ್ಟಪಡುತ್ತಾರೆ. ಈ ದಿನ ದೀಪಗಳನ್ನು ಹಚ್ಚಿ ಲಕ್ಷ್ಮಿ, ಗಣೇಶ ಹಾಗೂ ಸಂಪತ್ತಿನ ರಾಜ ಕುಬೇರನನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಎಂದು ನಂಬಲಾಗಿದೆ.
ತಾಜಾ ಫೋಟೊಗಳು
ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಹೂವುಗಳು, ದೀಪಗಳು ಹಾಗೂ ಇತರ ವಸ್ತುಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಸಿದ್ಧರಾಗುತ್ತಾರೆ. ಆದರೆ ಇದೆಲ್ಲದರ ಹೊರತಾಗಿ ನೀವು ಅಲಂಕಾರಕ್ಕಾಗಿ ಕೆಲವು ಸಸ್ಯಗಳನ್ನು ಸಹ ಖರೀದಿಸಬಹುದು. ಈ ಸಸ್ಯಗಳು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮನೆಯಲ್ಲಿ ಸಕಾರಾತ್ಮಕತೆ, ಸಂತೋಷ ಹಾಗೂ ಸಮೃದ್ಧಿ ನೆಲೆಸುವಂತೆ ಮಾಡುತ್ತವೆ. ಈ ಸಸ್ಯಗಳಿದ್ದರೆ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೃಪೆ ತೋರುತ್ತಾರೆ. ದೀಪಾವಳಿ ಹಬ್ಬಕ್ಕೂ ಮೊದಲು ನೀವು ಖರೀದಿಸಬೇಕಾದ ಐದು ಅದೃಷ್ಟದ ಸಸ್ಯಗಳನ್ನು ಇಲ್ಲಿ ನೀಡಲಾಗಿದೆ.
ಪೀಸ್ ಲೀಲಿ
ಈ ಗಿಡ ಮನೆಯಲ್ಲಿದ್ದರೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಹೆಸರೇ ಸೂಚಿಸುವಂತೆ, ಮನೆಯಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಯಾಗುತ್ತದೆ. ಬಿಳಿ ಹೂವುಗಳನ್ನು ಹೊಂದಿರುವ ಈ ಸಸ್ಯವು ತುಂಬಾ ಸುಂದರವಾಗಿ ಕಾಣುತ್ತದೆ. ಇದು ನೆಟ್ಟ ಸ್ಥಳದ ಹವಾಮಾನವನ್ನು ಸಂಪೂರ್ಣವಾಗಿ ಧನಾತ್ಮಕವಾಗಿ ಮಾಡುತ್ತದೆ. ಮನೆಯಲ್ಲಿ ಶಾಂತಿಯ ಸಂಕೇತವಾಗಿ ಈ ಸಸ್ಯವನ್ನು ನೆಡುವುದರಿಂದ ಸಂತೋಷ ಮತ್ತು ಸಂಪತ್ತು ಬರುತ್ತದೆ.
ಜೇಡ್ ಸಸ್ಯ
ಜೇಡ್ ಸಸ್ಯವನ್ನು ಕ್ರಾಸುಲಾ ಅಂತಲೂ ಕರೆಯುತ್ತಾರೆ. ಇದನ್ನು ಕುಬೇರನ ಗಿಡ ಎಂದೂ ಕರೆಯುತ್ತಾರೆ. ದಪ್ಪ ಸಣ್ಣ ಎಲೆಗಳಿರುವ ಈ ಗಿಡ ನೋಡಲು ತುಂಬಾ ಮುದ್ದಾಗಿರುತ್ತದೆ. ಈ ಸಸ್ಯವು ಬಿಳಿ ಅಥವಾ ಗುಲಾಬಿ ಹೂವುಗಳೊಂದಿಗೆ ತುಂಬಾ ಸುಂದರವಾಗಿ ಕಾಣುತ್ತದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಯ ಅಂದ ಹೆಚ್ಚುವುದಲ್ಲದೆ ವಾಸ್ತು ಶಾಸ್ತ್ರದ ಪ್ರಕಾರ ಇದು ತುಂಬಾ ಅದೃಷ್ಟದ ಸಸ್ಯವಾಗಿದೆ. ಎಲ್ಲೆಲ್ಲಿ ಈ ಗಿಡ ನೆಟ್ಟರೂ ಸಕಾರಾತ್ಮಕತೆ ಇರುತ್ತದೆ. ಈ ಸಸ್ಯದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ. ಈ ಗಿಡವನ್ನು ನೆಟ್ಟ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಬಿಳಿ ಪಲಾಶ್ ಸಸ್ಯ
ಬಿಳಿ ಹೂವುಗಳನ್ನು ಹೊಂದಿರುವ ಬಿಳಿ ಪಲಾಶ್ ಸಸ್ಯವು ತುಂಬಾ ಸುಂದರವಾಗಿ ಕಾಣುತ್ತದೆ. ಇದು ಧಾರ್ಮಿಕ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಈ ಸಸ್ಯದಲ್ಲಿ ಲಕ್ಷ್ಮಿ ಮತ್ತು ತ್ರಿಮೂರ್ತಿಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ದೀಪಾವಳಿಗೂ ಮುನ್ನ ಈ ಗಿಡವನ್ನು ನೆಟ್ಟಲ್ಲೆಲ್ಲಾ ಲಕ್ಷ್ಮಿ ದೇವಿಯ ಕೃಪೆ ಸದಾ ಇರುತ್ತದೆ.
ಮನಿ ಪ್ಲಾಂಟ್
ಮನಿ ಪ್ಲಾಂಟ್ ಅನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದು ಬಹುತೇಕ ಪ್ರತಿಯೊಂದು ಮನೆಯಲ್ಲೂ ಕಂಡುಬರುತ್ತದೆ. ಆದರೆ ಯಾರಿಗಾದರೂ ತಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇಲ್ಲದಿದ್ದರೆ, ಅವರು ಈ ದೀಪಾವಳಿಯಲ್ಲಿ ಖಂಡಿತವಾಗಿಯೂ ಅದನ್ನು ತಮ್ಮ ಮನೆಗೆ ತರಬಹುದು. ಇದನ್ನು ನೆಡಲು ಹೆಚ್ಚಿನ ಶ್ರಮ ಅಗತ್ಯವಿಲ್ಲ. ಈ ಸಸ್ಯವು ಗಾಳಿಯಲ್ಲಿರುವ ಕಲ್ಮಶಗಳನ್ನು ಸಹ ತೆಗೆದುಹಾಕುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟರೆ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.
ಬಿದಿರು ಗಿಡ
ಬಿದಿರಿನ ಸಸ್ಯವು ಪರಿಸರಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಸಸ್ಯವು ವಾಯು ಶುದ್ಧಿಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಸ್ಯದಿಂದ ಹೊರಹೊಮ್ಮುವ ಧನಾತ್ಮಕ ಶಕ್ತಿಯು ಮನಸ್ಸನ್ನು ಶಾಂತಗೊಳಿಸುತ್ತದೆ. ಈ ಗಿಡವನ್ನು ಮನೆಯಲ್ಲಿ ನೆಡುವುದು ವಾಸ್ತು ಶಾಸ್ತ್ರದ ಪ್ರಕಾರ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ. ಇದು ಒಳಾಂಗಣ ಸಸ್ಯವಾಗಿದೆ. ಆದ್ದರಿಂದ ನೀವು ಅದನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.