Bhagavad Gita: ಇಡೀ ಸೃಷ್ಟಿಯಲ್ಲಿ ವ್ಯಾಪಿಸಿರುವ ಭಗವಂತನ ಶಕ್ತಿಯಲ್ಲಿ ಎಲ್ಲರೂ ಆಶ್ರಯ ಪಡೆದಿದ್ದಾರೆ; ಗೀತೆಯ ಸಾರಾಂಶ ಹೀಗಿದೆ
Apr 23, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಇಡೀ ಸೃಷ್ಟಿಯಲ್ಲಿ ವ್ಯಾಪಿಸಿರುವ ಭಗವಂತನ ಶಕ್ತಿಯಲ್ಲಿ ಎಲ್ಲರೂ ಆಶ್ರಯ ಪಡೆದಿದ್ದಾರೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 4ನೇ ಶ್ಲೋಕದಲ್ಲಿ ಓದಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 4
ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ |
ಮತ್‌ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ||4||
ಅನುವಾದ: ನನ್ನ ಅವ್ಯಕ್ತ ಸ್ವರೂಪದಲ್ಲಿ ನಾನು ಇಡೀ ವಿಶ್ವವನ್ನು ವ್ಯಾಪಿಸಿದ್ದೇನೆ. ಎಲ್ಲ ಜೀವಿಗಳೂ ನನ್ನಲ್ಲಿದ್ದಾರೆ. ನಾನು ಅವರಲ್ಲಿ ಇಲ್ಲ.
ತಾಜಾ ಫೋಟೊಗಳು
ಭಾವಾರ್ಥ: ದೇವೋತ್ತಮ ಪರಮ ಪುರುಷನನ್ನು ಜಡ ಭೌತಿಕ ಇಂದ್ರಿಯಗಳು ಗ್ರಹಿಸಲಾರವು. ಭಕ್ತಿರಸಾಮೃತಸಿಂಧುವಿನಲ್ಲಿ ಹೀಗೆ ಹೇಳಿದೆ-
ಅತಃ ಶ್ರೀಕೃಷ್ಣ ನಾಮಾದಿ ನ ಭವೇದ್ ಗ್ರಾಹ್ಯಮ್ ಇನ್ದ್ರಿಯ್ಯೈಃ |
ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಮೇವ ಸ್ಫುರತ್ಯದಃ ||
(ಭಕ್ತಿರಸಾಮೃತ ಸಿಂಧಉ 1.2.234)
ಭೌತಿಕ ಇಂದ್ರಿಯಗಳು ಪ್ರಭು ಶ್ರೀಕೃಷ್ಣನ ನಾಮವನ್ನಾಗಲಿ ಮಹಿಮೆಯನ್ನಾಗಲಿ ಲೀಲೆಗಳನ್ನಾಗಲಿ ಅರ್ಥಮಾಡಿಕೊಳ್ಳಲಾರವು. ಯೋಗ್ಯವಾದ ಮಾರ್ಗದರ್ಶನದಲ್ಲಿ ಭಕ್ತಿಸೇವೆಯಲ್ಲಿ ನಿರತನಾದವನಿಗೆ ಮಾತ್ರ ಶ್ರೀಕೃಷ್ಣ ಗೋಚರವಾಗುತ್ತಾನೆ ಬ್ರಹ್ಮ ಸಂಹಿತೆಯಲ್ಲಿ (5.38) ಪ್ರೇಮಾಞ್ಜನಚ್ಛುರಿತಭಕ್ತಿ ವಿಲೋಚನೇನ ಸನ್ತಃ ಸದೈವ ಹೃದಯೇಷು ವಿಲೋಕಯನ್ತಿ ಮನುಷ್ಯನು ದೇವೋತ್ತಮ ಪರಮ ಪುರುಷನಾದ ಗೋವಿಂದನ ವಿಷಯದಲ್ಲಿ ದಿವ್ಯಪ್ರೇಮದ ಮನೋಧರ್ಮವನ್ನು ಬೆಳೆಸಿಕೊಂಡರೆ ಸದಾ ತನ್ನೊಳಗೂ, ತನ್ನ ಹೊರಗೂ ಗೋವಿಂದನನ್ನು ಕಾಣಬಹುದು ಎಂದು ಹೇಳಿದೆ. ಹೀಗೆ ಜನಸಾಮಾನ್ಯರು ಅವನನ್ನು ಕಾಣಲಾರರು.
ಆತನು ಸರ್ವವ್ಯಾಪಿಯಾದರೂ ಭೌತಿಕ ಇಂದ್ರಿಯಗಳು ಅವನನ್ನು ಗ್ರಹಿಸಲಾರವು ಎಂದು ಇಲ್ಲಿ ಹೇಳಿದೆ. ಅವ್ಯಕ್ತ ಮೂರ್ತಿನಾ ಎನ್ನುವ ಮಾತು ಇದನ್ನು ಸೂಚಿಸುತ್ತದೆ. ನಾವು ಅವನನ್ನು ಕಾಣಲಾರೆವಾದರೂ ಆತನೇ ಎಲ್ಲಕ್ಕೂ ಆಧಾರ. ಏಳೆನೆಯ ಅಧ್ಯಾಯದಲ್ಲಿ ನಾವು ಚರ್ಚಿಸಿದಂತೆ, ಇಡೀ ಐಹಿಕ ವಿಶ್ವದ ಅಭಿವ್ಯಕ್ತಿಯು ಅವನ ಎರಡು ಬೇರೆ ಬೇರೆ ಶಕ್ತಿಗಳ ಸಂಯೋಜನೆಯಷ್ಟೇ -ಶ್ರೇಷ್ಠ ಅಧ್ಯಾತ್ಮಿಕ ಶಕ್ತಿ ಮತ್ತು ಕೆಳಮಟ್ಟದ ಐಹಿಕ ಶಕ್ತಿ. ಸೂರ್ಯನು ಬೆಳಕು ಇಡೀ ಸೃಷ್ಟಿಯಲ್ಲಿ ವ್ಯಾಪಿಸಿರುವಂತೆ ಪ್ರಭುವಿನ ಶಕ್ತಿಯು ಸೃಷ್ಟಿಯಲ್ಲಿ ವ್ಯಾಪಿಸಿದೆ. ಎಲ್ಲವೂ ಈ ಶಕ್ತಿಯಲ್ಲಿ ಆಶ್ರಯಪಡೆದಿದೆ.
ಆದರೆ ಎಲ್ಲೆಲ್ಲೂ ವ್ಯಾಪಿಸಿರುವುದರಿಂದ ಅವನ ವೈಕ್ತಿಕ ಅಸ್ತಿತ್ವವು ಕಳೆದು ಹೋಗುತ್ತದೆ ಎಂದು ಭಾವಿಸಬಾರದು. ಇಂತಹ ವಾದವನ್ನು ತಳ್ಳಿ ಹಾಕಲು ಪ್ರಭುವು ನಾನು ಎಲ್ಲೆಲ್ಲಿಯೂ ಇದ್ದೇನೆ, ಎಲ್ಲವೂ ನನ್ನಲ್ಲಿದೆ. ಆದರೂ ನಾನು ದೂರವಾಗಿದ್ದೇನೆ ಎಂದು ಹೇಳಿದ್ದಾನೆ. ಉದಾಹರಣೆಗೆ ರಾಜನು ಸರ್ಕಾರದ ಮುಖ್ಯಸ್ಥ. ಸರ್ಕಾರವಾದರೋ ರಾಜನ ಶಕ್ತಿಯ ಒಂದು ಅಬಿವ್ಯಕ್ತಿ ಅಷ್ಟೇ. ಪ್ರತಿಯೊಂದು ವಿಭಾಗಕ್ಕೂ ರಾಜನ ಶಕ್ತಿಯೇ ಆಧಾರ.
ಆದರೆ ರಾಜನು ಪ್ರತಿಯೊಂದು ವಿಭಾಗದಲ್ಲಿ ವೈಯಕ್ತಿಕವಾಗಿ ಸ್ವತಃ ಇರುತ್ತಾನೆ ಎಂದು ನಿರೀಕ್ಷಿಸುವಂತಿಲ್ಲ. ಇದೊಂದು ಒರಟು ಉದಾಹರಣೆ. ಹೀಗೆಯೇ ಐಹಿಕ ಜಗತ್ತಿನಲ್ಲಿಯೂ ಅಧ್ಯಾತ್ಮಿಕ ಜಗತ್ತಿನಲ್ಲಿಯೂ ನಾವು ನೋಡುವ ಎಲ್ಲ ಅಭಿವ್ಯಕ್ತಿಗಳೂ, ಅಸ್ತಿತ್ವದಲ್ಲಿರುವ ಉಳಿದೆಲ್ಲವೂ ದೇವೋತ್ತಮ ಪರಮ ಪುರುಷನ ಶಕ್ತಿಯ ಮೇಲೆ ನಿಂತಿವೆ. ಆತನ ವಿವಿಧ ಶಕ್ತಿಗಳ ಪ್ರಸರಣದಿಂದ ಸೃಷ್ಟಿಯಾಗುತ್ತವೆ. ಭಗವದ್ಗೀತೆಯಲ್ಲಿ ಹೇಳಿದಂತೆ, ವಿಷ್ಟಭ್ಯಾಹಂ ಇದಂ ಕೃತ್ಸ್ನಮ್ - ಅವನು ತನ್ನ ವೈಯಕ್ತಿಕ ಪ್ರಾತಿನಿಧ್ಯದಿಂದ, ವಿವಿಧ ಶಕ್ತಿಗಳ ಪ್ರಸರಣದಿಂದ, ಎಲ್ಲೆಲ್ಲೂ ಇದ್ದಾನೆ.