Bhagavad Gita: ಜೀವನದಲ್ಲಿ ಸಂಕಷ್ಟಗಳು ಇಲ್ಲದೆ ಸಾಗಲು ಭಗವಂತನಲ್ಲಿ ಈ ರೀತಿ ಇರಬೇಕು; ಗೀತೆಯ ಅರ್ಥ ಹೀಗಿದೆ
May 08, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ಜೀವನದಲ್ಲಿ ಸಂಕಷ್ಟಗಳು ಇಲ್ಲದೆ ಸಾಗಲು ಭಗವಂತನಲ್ಲಿ ಹೇಗೆ ಇರಬೇಕು ಎಂಬುದರ ಬಗ್ಗೆ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 21 ಮತ್ತು 22ನೇ ಶ್ಲೋಕದಲ್ಲಿ ತಿಳಿಯಿರಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 21
ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ
ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶನ್ತಿ|
ಏವಂ ತ್ರಯೀಧರ್ಮಮನುಪ್ರಪನ್ನಾ
ಗತಾಗತಂ ಕಾಮಕಾಮಾ ಲಭನ್ತೇ||21|
ಅನುವಾದ: ಹೀಗೆ ಅವರು ಸ್ವರ್ಗಲೋಕದ ಅಪಾರವಾದ ಇಂದ್ರಿಯ ಭೋಗವನ್ನು ಸವಿದು, ತಮ್ಮ ಪುಣ್ಯಕಾರ್ಯಗಳ ಫಲಗಳು ಕ್ಷಯಿಸಿದನಂತರ ಈ ಮರ್ತ್ಯಲೋಕಕ್ಕೆ ಹಿಂದಿರುಗುತ್ತಾರೆ. ಹೀಗೆ ಮೂರು ದೇವತೆಗಳ ತತ್ವಗಳ ಅನುಸರಣೆಯಿಂದ ಇಂದ್ರಿಯ ಸುಖವಷ್ಟನ್ನೇ ಅರಸುವವರು ಮತ್ತೆಮತ್ತೆ ಹುಟ್ಟಿ ಸಾಯುವುದಷ್ಟನ್ನೇ ಸಾಧಿಸುತ್ತಾರೆ (Bhagavad Gita Updesh in Kannada).
ತಾಜಾ ಫೋಟೊಗಳು
ಭಾವಾರ್ಥ: ಮೇಲಿನ ಲೋಕವ್ಯೂಹಗಳಿಗೆ ಏರಿದವನು ಇನ್ನೂ ದೀರ್ಘವಾದ ಆಯಸ್ಸನ್ನೂ ಇಂದ್ರಿಯ ಸುಖಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನೂ ಪಡೆಯುತ್ತಾರೆ. ಆದರೆ ಅಲ್ಲಿ ಶಾಶ್ವತವಾಗಿ ಉಳಿಯಲು ಅವನಿಗೆ ಅನುಮತಿ ದೊರೆಯುವುದಿಲ್ಲ. ಪುಣ್ಯಕಾರ್ಯಗಳ ಫಲಗಳನ್ನು ಮುಗಿಸಿದ ನಂತರ ಅವನನ್ನು ಭೂಮಿಗೆ ಮತ್ತೆ ಕಳಿಸಲಾಗುತ್ತದೆ. ವೇದಾಂತ ಸೂತ್ರದಲ್ಲಿ ಸೂಚಿಸಿರುವಂತೆ ಆತನು ಪರಿಪೂರ್ಣ ಜ್ಞಾನವನ್ನು ಪಡೆದಿರುವುದಿಲ್ಲ (ಜನ್ಮಾದಿ ಅಸ್ಯ ಯತಃ).
ಬೇರೆ ಮಾತುಗಳಲ್ಲಿ ಹೇಳಬೇಕಾದರೆ, ಎಲ್ಲ ಕಾರಣಗಳ ಕಾರಣನಾದ ಕೃಷ್ಣನನ್ನು ಅರ್ಥಮಾಡಿಕೊಳ್ಳದವನು ಬದುಕಿನ ಕಟ್ಟಕಡೆಯ ಗುರಿಯನ್ನು ಸಾಧಿಸುವ ವಿಷಯದಲ್ಲಿ ದಿಕ್ಕುತೋರದವನಾಗುತ್ತಾನೆ. ಆದುದರಿಂದ, ಒಮ್ಮೊಮ್ಮೆ ಮೇಲಕ್ಕೆ ಹೋಗಿ ಒಮ್ಮೊಮ್ಮೆ ಕೆಳಕ್ಕೆ ಬರುವ ತಿರುಗುಚಕ್ರದಲ್ಲಿ ಕುಳಿತವನಂತೆ ಮತ್ತೆ ಮತ್ತೆ ಉನ್ನತ ಲೋಕಗಳಿಗೆ ಹೋಗಿ ಮತ್ತೆ ಕೆಳಕ್ಕೆ ಬರುವ ನಿಯತಕ್ರಮಕ್ಕೆ ಸಿಕ್ಕಿಕೊಳ್ಳುತ್ತಾನೆ. ಇದರ ಭಾವಾರ್ಥವೆಂದರೆ, ಮತ್ತೆ ಕೆಳಕ್ಕೆ ಬರುವ ಸಾಧ್ಯತೆಯೇ ಇಲ್ಲದ ಅಧ್ಯಾತ್ಮಿಕ ಲೋಕಕ್ಕೆ ಆತನು ಏರುವುದಿಲ್ಲ. ಅದರ ಬದಲು ಊರ್ಧ್ವಲೋಕ - ಅಧೋಲೋಕಗಳ ವ್ಯೂಹಗಳಲ್ಲಿ, ಹುಟ್ಟು-ಸಾವುಗಳ ಚಕ್ರದಲ್ಲಿ ಸುತ್ತುತ್ತಾನೆ ಅಷ್ಟೆ. ಶಾಶ್ವತವಾದ ಜ್ಞಾನಾನಂದವನ್ನು ಸವಿಯುತ್ತ ಈ ಕಷ್ಟದ ಐಹಿಕ ಜ್ಮನಕ್ಕೆ ಬಾರದೆಯೇ ಇರಬೇಕಾದಲ್ಲಿ ಅಧ್ಯಾತ್ಮಿಕ ಲೋಕಕ್ಕೆ ಹೋಗುವುದೇ ಉತ್ತಮ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 22
ಅನನ್ಯಾಶ್ಚಿನ್ತಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||22||
ಅನುವಾದ: ಅನ್ಯಚಿಂತೆಯಿಲ್ಲದೆ ಒಂದೇ ಮನಸ್ಸಿನಿಂದ ನನ್ನನ್ನು ಪೂಜಿಸುತ್ತ ನನ್ನ ದಿವ್ಯರೂಪವನ್ನು ಧ್ಯಾನಿಸುವವರು ಯಾರೋ ಅವರಿಗೆ ನಾನು ಇಲ್ಲದ್ದನ್ನು ಕೊಡುತ್ತೇನೆ ಮತ್ತು ಇರುವುದನ್ನು ಕಾಪಾಡುತ್ತೇನೆ.
ಭಾವಾರ್ಥ: ಕೃಷ್ಣಪ್ರಜ್ಞೆಯಿಲ್ಲದೆ ಒಂದು ಕ್ಷಣವೂ ಬದುಕಲಾರದವರು ದಿನದಲ್ಲಿ ಇಪ್ಪತ್ನಾಲ್ಕು ಗಂಟೆಯೂ ಕೃಷ್ಣನನ್ನೇ ಕುರಿತು ಯೋಚಿಸದೆ ಬೇರೆ ದಾರಿಯೇ ಇಲ್ಲ. ಭಗವಂತನ ವಿಷಯ ಕೇಳುತ್ತ, ಸಂಕೀತರ್ನೆ ಮಾಡುತ್ತ, ಸ್ಮರಣೆ ಮಾಡುತ್ತ, ಪ್ರಾರ್ಥನೆ ಮಾಡುತ್ತ, ಪೂಜೆ ಮಾಡುತ್ತ, ಭಗವಂತನ ಚರಣಕಮಲಗಳನ್ನು ಸೇವಿಸುತ್ತ, ಇತರ ಸೇವೆಗಳನ್ನು ಮಾಡುತ್ತ, ಸ್ನೇಹವನ್ನು ಬೆಳೆಸಿಕೊಳ್ಳುತ್ತ ಮತ್ತು ಸಂಪೂರ್ಣವಾಗಿ ಪ್ರಭುವಿಗೆ ಶರಣಾಗುತ್ತ ಅವರು ಭಕ್ತಿ ಸೇವೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಚಟುವಟಿಕೆಗಳೆಲ್ಲ ಮಂಗಳಕರವಾದವು ಮತ್ತು ಅಧ್ಯಾತ್ಮಿಕ ಶಕ್ತಿಗಳಿಂದ ತುಂಬಿರುವುವು. ಅವು ಭಕ್ತನನ್ನು ಆತ್ಮಸಾಕ್ಷಾತ್ಕಾರದಲ್ಲಿ ಪರಿಪೂರ್ಣನನ್ನಾಗಿ ಮಾಡುತ್ತವೆ.
ದೇವೋತ್ತಮ ಪರಮ ಪುರುಷನ ಸಹವಾಸವನ್ನು ಪಡೆಯುವುದೊಂದೇ ಅವನ ಬಯಕೆಯಾಗುತ್ತದೆ. ಇಂತಹ ಭಕ್ತನು ನಿಶ್ಚಯವಾಗಿಯೂ ಯಾವುದೇ ಕಷ್ಟವಿಲ್ಲದೆ ಭಗವಂತನ ಬಳಿ ಸಾರುತ್ತಾನೆ. ಇದನ್ನು ಯೋಗ ಎಂದು ಕರೆಯಲಾಗುತ್ತದೆ. ಪ್ರಭುವಿನ ಕೃಪೆಯಿಂದ ಇಂತಹ ಭಕ್ತನು ಬದುಕಿನ ಐಹಿಕ ಸ್ಥಿತಿಗೆ ಮತ್ತೆ ಬರುವುದೇ ಇಲ್ಲ. ಕ್ಷೇಮ ಎಂದರೆ ಭಗವಂತನ ಕೃಪಾಪೂರ್ಣ ರಕ್ಷಣೆ. ಭಕ್ತನು ಯೋಗದ ಮೂಲಕ ಕೃಷ್ಣಪ್ರಜ್ಞೆಯನ್ನು ಸಾಧಿಸಲು ಭಗವಂತನು ನೆರವಾಗುತ್ತಾನೆ. ಆತನು ಕೃಷ್ಣಪ್ರಜ್ಞೆಯು ಪೂರ್ಣವಾದಾಗ ಆತನು ಸಂಕಟದ ಬಾಳಿನಲ್ಲಿ ಬೀಳದಂತೆ ಭಗವಂತನು ಕಾಪಾಡುತ್ತಾನೆ.