ಭಗವದ್ಗೀತೆ: ಭಗವಂತನನ್ನು ಕಾಣುವವರೆಗೆ ನಾವೆಲ್ಲರೂ ಕುರುಡರೇ; ಗೀತೆಯ ಅರ್ಥ ಹೀಗಿದೆ
Oct 02, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥ. ಭಗವಂತನನ್ನು ಕಾಣುವವರೆಗೆ ನಾವೆಲ್ಲರೂ ಕುರುಡರೇ ಎಂಬ ಗೀತೆಯ ಅರ್ಥ ಹೀಗಿದೆ
ಕುರುಕ್ಷೇತ್ರ ರಣರಂಗದಲ್ಲಿ ಪಾಂಡವರ ಏಳು ಅಕ್ಷೋಹಿಣಿ ಸೈನ್ಯ ಮತ್ತುಕೌರವರ 11 ಅಕ್ಷೋಹಿಣಿ ಸೈನ್ಯವು ಎದುರು ಬದುರಾಗಿ ನಿಂತಿದೆ. ಇಡೀ ಸೇನಾ ಸಮೂಹವು ಮಹಾಸಾಗರದಂತೆ ಕಾಣುತ್ತಿದೆ. ಪ್ರಪಂಚದ ಎಲ್ಲಾರಾಜರುಗಳು ತಮ್ಮ ಸೇನೆಯೊಡನೆ ಒಂದೇ ಕಡೆ ಬಂದು ಸೇರಿದ್ದಾರೆ. ಆದರೆ ಕುರುಡನಾದಂತಹ ದೃತರಾಷ್ಟ್ರನು ಹಸ್ತಿನಾಪುರದಲ್ಲಿ ಉಳಿಯಬೇಕಾಯಿತು.
ತಾಜಾ ಫೋಟೊಗಳು
ಮಹರ್ಷಿ ವೇದವ್ಯಾಸರು ಧೃತರಾಷ್ಟ್ರನಿಗೆ ದಿವ್ಯ ದೃಷ್ಟಿಯನ್ನು ನೀಡಲು ಸಿದ್ದರಿದ್ದರು. ಆದರೆ ಧೃತರಾಷ್ಟ್ರನು ತನ್ನ ಮಕ್ಕಳು ರಣರಂಗದಲ್ಲಿ ಮಡಿಯುವುದನ್ನು ಕಾಣಲು ಬಯಸಲಿಲ್ಲ. ಹಾಗಾಗಿ ವೇದವ್ಯಾಸರು ಸಂಜಯನಿಗೆ ದಿವ್ಯದೃಷ್ಟಿಯನ್ನು ನೀಡಿ ಕುರುಕ್ಷೇತ್ರ ರಣರಂಗದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ರಾಜ ಧೃತರಾಷ್ಟ್ರನಿಗೆ ವಿವರಿಸುವಂತೆ ತಿಳಿಸಿದರು. ದೃತರಾಷ್ಟ್ರನು ಸಂಜಯನಲ್ಲಿಕೇಳಿದಂತಹ ಪ್ರಶ್ನೆಯೇ ಭಗವದ್ಗೀತೆಯ
ಪ್ರಥಮ ಶ್ಲೋಕ
ಧೃತರಾಷ್ಟ್ರ ಉವಾಚ ।
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥1.1॥
ಧೃತರಾಷ್ಟ್ರನು, ಹೇ ಸಂಜಯ, ಯುದ್ಧಾಪೇಕ್ಷೆಯಿಂದ ನನ್ನ ಮಕ್ಕಳು ಮತ್ತು ಪಾಂಡವರು ಧರ್ಮ ಕ್ಷೇತ್ರದಲ್ಲಿ ಸೇರಿದ ನಂತರ ಏನು ಮಾಡಿದರು ಎಂದು ಕೇಳಿದನು.
ಭಗವದ್ಗೀತೆಯನ್ನು ಕುರುಡನಾದಂತಹ ಧೃತರಾಷ್ಟ್ರನ ಪ್ರಶ್ನೆಯೊಂದಿಗೆ ಏಕೆ ಪ್ರಾರಂಭಿಸಲಾಯಿತು ಎಂಬಂತಹ ಕುತೂಹಲವು ನಮ್ಮನ್ನು ಕಾಡಬಹುದು. ಧೃತರಾಷ್ಟ್ರನಲ್ಲಿಇದ್ದಂತಹ ಒಂದು ಉತ್ತಮ ಗುಣವೆಂದರೆ ಆತನು ಸಂಜಯನ ಮಾತುಗಳನ್ನು ಕೇಳುತ್ತಿದ್ದ. ಈ ಪ್ರಪಂಚದಲ್ಲಿ ಭಗವಂತನನ್ನು ಕಾಣಲು ಸಾಧ್ಯವಾಗದೇ ಇರುವಂತಹ ನಾವೆಲ್ಲರೂ ಒಂದು ರೀತಿಯಲ್ಲಿ ಕುರುಡರೇ ಆಗಿದ್ದೇವೆ. ನಮಗೂ ಸಹ ಸಂಜಯನ ಮಾರ್ಗದರ್ಶನದ ಅಗತ್ಯವಿದೆ.
ಕಾಲ ಬಂದಾಗ ನಾವು ಎಲ್ಲವನ್ನು ತೊರೆದು ಹೋಗಬೇಕು
ವೇದವ್ಯಾಸರ ಅನುಗ್ರಹವನ್ನು ಪಡೆದಿರುವಂತಹ ಸಂಜಯನು ಕುರುಕ್ಷೇತ್ರದ ಪ್ರತಿಯೊಂದು ಘಟನೆಯನ್ನು ಕಾಣಬಲ್ಲವನಾಗಿದ್ದಾನೆ. ಇಂತಹ ಜ್ಞಾನಿಯ ಸಂಗವನ್ನು ಪಡೆದಂತಹ ವ್ಯಕ್ತಿಯು ಧೃತರಾಷ್ಟ್ರನ ರೀತಿಯಲ್ಲಿ ಕುರುಡನಾಗಿದ್ದರೂ ಸಹ, ವಾಸ್ತವ ಅಂಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಧೃತರಾಷ್ಟ್ರನೆಂದರೆ ರಾಜ್ಯದ ಸಿಂಹಾಸನಕ್ಕೆ ಅಂಟಿಕೊಂಡು ಬದುಕುತ್ತಿರುವ ವ್ಯಕ್ತಿ ಎಂದರ್ಥ. ನಾವು ಸಹ ಜೀವನದಲ್ಲಿ ಸಂಪತ್ತನ್ನು ಗಳಿಸಲು ಬಯಸುತ್ತೇವೆ. ಗಳಿಸಿದ ಸಂಪತ್ತನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಬೇಕೆಂದು ಬಹಳಷ್ಟು ಪ್ರಯತ್ನಿಸುತ್ತೇವೆ. ಆದರೆ ಕಾಲವು ಬಂದಾಗ ನಾವು ಎಲ್ಲವನ್ನು ತೊರೆದು ಹೋಗಬೇಕಾಗುತ್ತದೆ.
ಯಾವುದು ಕುರುಕ್ಷೇತ್ರ?
ಮಹಾಭಾರತ ಯುದ್ಧವು ನಡೆದ ಕುರುಕ್ಷೇತ್ರವು ಧರ್ಮ ಕ್ಷೇತ್ರವಾಗಿದೆ. ಇಂತಹ ಪುಣ್ಯಕ್ಷೇತ್ರವನ್ನು ದರ್ಶನ ಮಾಡುವ ಮಾತ್ರದಿಂದಲೇ ವ್ಯಕ್ತಿಯು ಪುಣ್ಯವನ್ನು ಸಂಪಾದಿಸಲು ಸಾಧ್ಯ. ಪ್ರಾಚೀನ ಕಾಲದಲ್ಲಿ ಭರತ ವಂಶದಲ್ಲಿಕುರು ಎಂಬ ಹೆಸರಿನ ರಾಜನಿದ್ದ. ಆತ ನಿರ್ಮಿಸಿದಂತಹ ಈ ಭೂಮಿಯನ್ನು ಕುರುಕ್ಷೇತ್ರ ಎಂದು ಕರೆಯಲಾಗಿದೆ. ಭಗವಾನ್ ಶ್ರೀ ಕೃಷ್ಣನು ಧರ್ಮ ಕ್ಷೇತ್ರವಾದಂತಹ ಕುರುಕ್ಷೇತ್ರದಲ್ಲಿ ಅಧರ್ಮಿಗಳಾದ ದುರ್ಯೋಧನಂತಹ ಕಳೆ ಗಿಡಗಳನ್ನು ಕಿತ್ತೆಸಿಯುತ್ತಾನೆ. ಧರ್ಮವೇ ಮೂರ್ತಿ ವೆತ್ತಂತೆ ಇರುವ ರಾಜ ಯುಧಿಷ್ಠಿರನನ್ನು ಸಿಂಹಾಸನದಲ್ಲಿ ಪ್ರತಿಷ್ಠಾಪಿಸುತ್ತಾನೆ.
ಧರ್ಮ ಸಂಸ್ಥಾಪನಾಚಾರ್ಯನಾದಂತಹ ಭಗವಾನ್ ಶ್ರೀಕೃಷ್ಣನು ಸ್ವತಃ ಪಾಂಡವರ ಪಕ್ಷದಲ್ಲಿನಿಂತಿರುವುದರಿಂದ ಇಲ್ಲಿ ಕುರುಕ್ಷೇತ್ರವನ್ನು ಧರ್ಮ ಕ್ಷೇತ್ರ ಎಂದು ಕರೆದಿರುವುದು ಬಹಳ ಪ್ರಸ್ತುತವಾಗಿದೆ. ಧೃತರಾಷ್ಟ್ರನು ತನ್ನ ಮಕ್ಕಳನ್ನು ಪಾಂಡುವಿನ ಮಕ್ಕಳಿಂದ ಪ್ರತ್ಯೇಕವಾಗಿ ಇಡಲು ಬಯಸುತ್ತಾನೆ. ಇದು ಆತನ ಮಾತಿನಿಂದ ಇಲ್ಲಿ ಬಹಳ ಸ್ಪಷ್ಟವಾಗಿದೆ. ಧೃತರಾಷ್ಟ್ರನ ಮಕ್ಕಳು ಮತ್ತು ಪಾಂಡುವಿನ ಮಕ್ಕಳು ಎಲ್ಲರೂ ಕುರು ವಂಶಕ್ಕೆ ಸೇರಿದವರಾದರೂ ಧೃತರಾಷ್ಟ್ರನು ಪಾಂಡುವಿನ ಮಕ್ಕಳನ್ನು ಕುರು ವಂಶದಿಂದ ದೂರ ಇಡಲು ಪ್ರಯತ್ನಿಸುತ್ತಿದ್ದಾನೆ ಎಂಬುದನ್ನು ನಾವು ಇಲ್ಲಿಕಾಣಬಹುದು.
ಯುದ್ಧದ ಫಲಿತಾಂಶದ ಬಗ್ಗೆ ಧೃತರಾಷ್ಟ್ರನಿಗೆ ಇರುವ ಅನುಮಾನವೇನು?
ಕುರುಕ್ಷೇತ್ರ ರಣರಂಗದಲ್ಲಿ ಬಂದು ಸೇರಿರುವಂತಹ ಪ್ರತಿಯೊಬ್ಬ ಯೋಧನು ಯುದ್ಧಾಪೇಕ್ಷಯಿಂದಲೇ ಬಂದಿದ್ದಾನೆ ಎಂಬುದು ಧೃತರಾಷ್ಟ್ರನ ಮಾತಿನಿಂದಲೇ ಸ್ಪಷ್ಟವಾಗುತ್ತದೆ. ಆದರೂ ಧೃತರಾಷ್ಟ್ರನು ಇಲ್ಲಿ ಅವರು ಏನು ಮಾಡಿದರು ಎಂದು ಕೇಳುವುದು ಯುದ್ಧದ ಫಲಿತಾಂಶದ ಬಗ್ಗೆಆತನಿಗಿರುವಂತಹ ಸಂದೇಹದ ಕುರಿತಾಗಿ ತಿಳಿಸುತ್ತದೆ. ಧರ್ಮ ಕ್ಷೇತ್ರ ವಾದಂತಹ ಕುರುಕ್ಷೇತ್ರದಲ್ಲಿ ಅಧರ್ಮಿಗಳಾದಂತಹ ತನ್ನ ಮಕ್ಕಳು ವಿಜಯಿಗಳಾಗುತ್ತಾರೋ ಇಲ್ಲವೋ ಎಂಬಂತಹ ಅನುಮಾನವು ಆತನಿಗೆ ಮೊದಲಿನಿಂದಲೂ ಇತ್ತು.
ಒಬ್ಬ ವ್ಯಕ್ತಿಗೆ ಮೃಷ್ಟಾನ್ನ ಭೋಜನವನ್ನು ನೀಡಿದ ನಂತರ ಆತನು ಏನು ಮಾಡಿದನು ಎಂದು ಕೇಳುವುದು ಅಪ್ರಸ್ತುತ. ಭೋಜನಕ್ಕೆ ಕುಳಿತವನು ಊಟ ಮಾಡಿದನು ಎಂಬುದು ನಮಗೆ ಸಹಜವಾಗಿಯೇ ಅರ್ಥವಾಗುತ್ತದೆ. ಅದೇ ರೀತಿಯಲ್ಲಿ ಯುದ್ಧಾಪೇಕ್ಷಯಿಂದ ಬಂದಂತಹ ಎಲ್ಲಾಯೋಧರು ಯುದ್ಧದಲ್ಲಿ ತೊಡಗಿದರು ಎಂಬುದು ಸಹಜವಾಗಿಯೇ ಅರ್ಥವಾಗುವಂತಹ ಮಾತು.
ಸಂಜಯನು ಧೃರಾಷ್ಟ್ರನ ಮನಸ್ಸನ್ನು ಅರ್ಥ ಮಾಡಿಕೊಳ್ಳಬಲ್ಲವನಾಗಿದ್ದ. ಧೃತರಾಷ್ಟ್ರನಿಗೆ ತನ್ನ ಮಗನಾದಂತಹ ದುರ್ಯೋಧನನ ಮೇಲೆ ಕುರುಡು ಪ್ರೀತಿ. ದುರ್ಯೋಧನ ಮಾಡುತ್ತಿದ್ದಂತಹ ಪ್ರತಿಯೊಂದು ಅನ್ಯಾಯಕ್ಕೂ ಧೃತರಾಷ್ಟ್ರನು ಬೆಂಬಲವಾಗಿ ನಿಂತಿದ್ದ. ಈ ವಿಚಾರವನ್ನು ತಿಳಿದಂತಹ ಸಂಜಯನು ಎರಡನೆಯ ಶ್ಲೋಕ ದುರ್ಯೋಧನನ ಕುರಿತಾಗಿಯೇ ತಿಳಿಸುತ್ತಾನೆ.
ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರು.
ಭಗವದ್ಗೀತಾ ಯಥಾರೂಪದ ನಿರೂಪಕರು- ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು ( ಇವರು ಡಾ.ಸುಜೇಶ್ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ).