ಭಗವದ್ಗೀತೆ: ಭೀಷ್ಮರ ಸಾಮರ್ಥ್ಯದ ಬಗ್ಗೆ ದುರ್ಯೋಧನ ಪ್ರಶಂಸೆಗೆ ಗೀತೆಯಲ್ಲಿರುವ ಕಾರಣ ಇದೇ
Oct 07, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.
ಕುರುಕ್ಷೇತ್ರ ರಣರಂಗದಲ್ಲಿ ನಡೆಯುತ್ತಿರುವಂತಹ ಘಟನೆಗಳನ್ನು ಸಂಜಯನು ಧೃತರಾಷ್ಟ್ರನಿಗೆ ತನ್ನ ದಿವ್ಯದೃಷ್ಟಿಯ ಬಲದಿಂದ ತಿಳಿಸಿ ಕೊಡುತ್ತಿದ್ದಾನೆ. ದುರ್ಯೋಧನನು ಮೊದಲು ಪಾಂಡವರ ಸೇನೆಯನ್ನು ಅವಲೋಕಿಸಿ, ಆನಂತರ ತನ್ನ ಸೇನೆಯಲ್ಲಿಇರುವಂತಹ ವಿಶೇಷ ಯೋಧರ ಕುರಿತಾಗಿ ತಿಳಿಸಿದ.
ತಾಜಾ ಫೋಟೊಗಳು
ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ ।
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ॥1.9॥
ನನಗಾಗಿ ಪ್ರಾಣವನ್ನೇ ಕೊಡಲು ಸಿದ್ಧರಾಗಿರುವ ಇನ್ನೂ ಅನೇಕ ಮಂದಿ ವೀರರಿದ್ದಾರೆ. ಅವರೆಲ್ಲ ವಿವಿಧ ಅಸ್ತ್ರ ಶಸ್ತ್ರಗಳನ್ನು ಹೊಂದಿರುವವರು. ಎಲ್ಲರೂ ಯುದ್ಧವಿಶಾರದರು. ಜಯದ್ರಥ, ಕೃತವರ್ಮ ಮತ್ತು ಶಲ್ಯರಂತಹ ಅನೇಕ ವೀರರು ದುರ್ಯೋಧನನಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಂಕಲ್ಪ ಮಾಡಿದ್ದಾರೆ. ಪಾಪ ಮಾಡಿರುವ ದುರ್ಯೋಧನನ ಪಕ್ಷವನ್ನು ಸೇರಿರುವುದರಿಂದ ಅವರೆಲ್ಲ ಕುರುಕ್ಷೇತ್ರ ಯುದ್ಧದಲ್ಲಿ ಸಾಯಬೇಕೆಂದು ಆಗಲೇ ನಿರ್ಧಾರವಾಗಿ ಹೋಗಿದೆ. ದುರ್ಯೋಧನನು ಈ ಎಲ್ಲಾ ಸ್ನೇಹಿತರ ಬಲವು ಒಂದುಗೂಡಿರುವುದರಿಂದ ವಿಜಯವು ತನ್ನದೇ ಎಂಬ ವಿಶ್ವಾಸವನ್ನು ಹೊಂದಿದ್ದಾನೆ.
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ ।
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ॥1.10॥
ನಮ್ಮ ಶಕ್ತಿಯು ಅಳತೆಯನ್ನು ಮೀರಿದ್ದು. ತಾತ ಭೀಷ್ಮರಿಂದ ನಮಗೆ ಪರಿಪೂರ್ಣ ರಕ್ಷಣೆಯು ದೊರೆತಿದೆ. ಭೀಮನು ಎಚ್ಚರದಿಂದ ರಕ್ಷಿಸುತ್ತಿರುವ ಪಾಂಡವರ ಶಕ್ತಿಯಾದರೋ ಮಿತವಾದದ್ದು.
ದುರ್ಯೋಧನನು ಎರಡು ಸೇನೆಗಳ ಶಕ್ತಿಯನ್ನು ಹೋಲಿಸಿ ಅಂದಾಜು ಮಾಡುತ್ತಿದ್ದಾನೆ. ಅದ್ವಿತೀಯ ಅನುಭವಶಾಲಿ ದಂಡನಾಯಕರಾದ ಪಿತಾಮಹ ಭೀಷ್ಮರೇ ಸಂರಕ್ಷಿಸುತ್ತಿರುವುದರಿಂದ ತನ್ನ ಸೈನ್ಯದ ಶಕ್ತಿಯನ್ನು ಅಳೆಯುವುದೇ ಸಾಧ್ಯವಿಲ್ಲ ಎಂದು ಅವನ ಭಾವನೆ. ಇದಕ್ಕೆ ಪ್ರತಿಯಾಗಿ ಪಾಂಡವರ ಸೇನೆಯನ್ನು ಸಂರಕ್ಷಿಸುತ್ತಿರುವವನು ಅಷ್ಟೊಂದು ಅನುಭವವಿಲ್ಲದ ಭೀಮ. ಭೀಷ್ಮರೊಂದಿಗೆ ಹೋಲಿಸಿದರೆ ಅವನು ಕಡ್ಡಿಗೆ ಸಮಾನ. ದುರ್ಯೋಧನನು ಈ ರೀತಿಯಾಗಿ ಯೋಚಿಸಿದರೂ ವಾಸ್ತವಂಶ ಬೇರೆಯೇ ಇದೆ.
ಭೀಮನಿಂದ ರಕ್ಷಿತವಾಗಿರುವ ಪಾಂಡವರ ಸೇನೆಯು ಪರ್ಯಾಪ್ತವಾಗಿದೆ. ಅಂದರೆ ಯುದ್ಧವನ್ನು ಗೆಲ್ಲಬೇಕಾದ ಎಲ್ಲಾ ಅರ್ಹತೆಗಳು ಪಾಂಡವರ ಸೇನೆಗೆ ಇದೆ. ಇಲ್ಲಿರುವ ಪ್ರತಿಯೊಬ್ಬ ಯೋಧನು ಯುದ್ಧವನ್ನು ಗೆಲ್ಲುವುದಕ್ಕಾಗಿ ಹೋರಾಡುತ್ತಿದ್ದಾನೆ. ಆದರೆ ದುರ್ಯೋಧನನ ಪಕ್ಷದಲ್ಲಿ ಯುದ್ಧವನ್ನು ಗೆಲ್ಲುವ ಹುಮ್ಮಸ್ಸು ಯಾರಿಗೂ ಇಲ್ಲ. ಅಲ್ಲಿ ಕೆಲವರು ಅನ್ನದ ಋಣದ ಕಾರಣದಿಂದ ಯುದ್ಧಕ್ಕೆ ಬಂದಿದ್ದಾರೆ. ಮತ್ತೆ ಕೆಲವರು ತಮ್ಮ ವಿರೋಧಿಗಳನ್ನಷ್ಟೇ ನಾಶ ಮಾಡಲು ಬಂದಿದ್ದಾರೆ. ಭೀಷ್ಮಾಚಾರ್ಯರು ಪಾಂಡವರನ್ನು ಏನೂ ಮಾಡುವುದಿಲ್ಲ. ಅಶ್ವತ್ಥಾಮನಿಗೆ ಏನಾದರೂ ಅಪಾಯ ಸಂಭವಿಸಿದರೆ ದ್ರೋಣಾಚಾರ್ಯರು ಯುದ್ಧವನ್ನು ಮುಂದುವರಿಸುವುದಿಲ್ಲ.
ಭೀಷ್ಮಾಚಾರ್ಯರು ಯುದ್ಧರಂಗದಲ್ಲಿಇರುವವರೆಗೆ ಕರ್ಣನು ಯುದ್ಧವನ್ನು ಪ್ರವೇಶಿಸುವುದಿಲ್ಲ. ಶಲ್ಯನು ದುರ್ಯೋಧನನ ಪಕ್ಷದಲ್ಲಿದ್ದರೂ ಕರ್ಣನ ಸಾವಿಗೆ ಕಾರಣವಾಗುತ್ತಾನೆ. ಪರೋಕ್ಷವಾಗಿ ಶಲ್ಯನು ಪಾಂಡವರಿಗೆ ಸಹಾಯ ಮಾಡುತ್ತಾನೆ. ಕರ್ಣನು ತಾನು ಕುಂತಿಗೆ ಕೊಟ್ಟಂತಹ ಮಾತಿನ ಪ್ರಕಾರ ಅರ್ಜುನನನ್ನು ಬಿಟ್ಟು ಬೇರೆ ಪಾಂಡವರನ್ನು ಏನೂ ಮಾಡುವುದಿಲ್ಲ. ದುರ್ಯೋಧನನಲ್ಲಿ ಅಗಾಧವಾದ ಸೇನಾ ಬಲ ಇದ್ದರೂ ಇಚ್ಛಾಶಕ್ತಿಯ ಕೊರತೆಯಿಂದಾಗಿ ಆತನು ಯುದ್ಧವನ್ನು ಗೆಲ್ಲುವುದು ಅನುಮಾನವಾಗಿತ್ತು.
ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ ।
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ॥1.11॥
ಸೇನಾ ವ್ಯೂಹವನ್ನು ಪ್ರವೇಶಿಸಲು ಇರುವ ಆಯಕಟ್ಟಿನ ಬಿಂದುಗಳಲ್ಲಿ ನಿಮ್ಮ ನಿಮ್ಮ ಸ್ಥಳಗಳಲ್ಲಿನಿಂತಿರುವ ನೀವು ಈಗ ಪಿತಾಮಹ ಭೀಷ್ಮರಿಗೆ ಸಂಪೂರ್ಣ ಬೆಂಬಲವನ್ನು ನೀಡಬೇಕು.
ದುರ್ಯೋಧನನು ಭೀಷ್ಮರ ಸಾಮರ್ಥ್ಯವನ್ನು ಪ್ರಶಾಂತಿಸಿದ ಕಾರಣದಿಂದಾಗಿ ಉಳಿದ ಸೇನಾನಿಗಳು ತಾವು ಭೀಷ್ಮರಷ್ಟು ಮುಖ್ಯರಲ್ಲ ಎಂದು ಕೊಳ್ಳಬಹುದು. ಈ ಸಮಸ್ಯೆಯನ್ನು ಬಗೆಹರಿಸುವ ಕಾರಣಕ್ಕಾಗಿ ವ್ಯವಹಾರ ಕುಶಲಿಯಾದ ದುರ್ಯೋಧನನು ಸನ್ನಿವೇಶವನ್ನು ಸರಿ ಹೊಂದಿಸಲು ಪ್ರಯತ್ನಿಸಿದ. ಭೀಷ್ಮರು ಮಹಾ ಪರಾಕ್ರಮಿಗಳಾಗಿದ್ದಾರೆ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಅವರು ವೃದ್ಧರಾಗಿರುವುದರಿಂದ ಎಲ್ಲ ದಿಕ್ಕುಗಳಿಂದ ಅವರನ್ನು ರಕ್ಷಿಸುವ ಅವಶ್ಯಕತೆ ಇದೆ. ಭೀಷ್ಮರು ಯುದ್ಧ ಮಾಡುವಾಗ ಸಂಪೂರ್ಣವಾಗಿ ಒಂದೆಡೆ ಮಗ್ನರಾಗಿರುವುದರ ಲಾಭವನ್ನು ಶತ್ರುಗಳು ಪಡೆದುಕೊಳ್ಳಬಹುದು. ಆದ್ದರಿಂದ ಇತರ ವೀರರು ತಮ್ಮ ಆಯಕಟ್ಟಿನ ಸ್ಥಳಗಳಲ್ಲಿ ನಿಂತುಕೊಂಡು ಶತ್ರುಗಳು ನಮ್ಮ ಸೇನಾ ವ್ಯೂಹವನ್ನು ಚದುರಿಸದಂತೆ ನೋಡಿಕೊಳ್ಳಬೇಕು.
ಭೀಷ್ಮಾಚಾರ್ಯರು ಮತ್ತು ದ್ರೋಣಾಚಾರ್ಯರು ಪಾಂಡವರ ಕುರಿತಾಗಿ ವಿಶೇಷ ಪ್ರೀತಿಯನ್ನು ಹೊಂದಿದ್ದರೂ, ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನ ಪಟ್ಟಾಗ ಅವರು ಯಾವುದೇ ಪ್ರತಿಭಟನೆಯನ್ನು ತೋರಿಸಲಿಲ್ಲ. ಅಂದಿನ ಸಂದರ್ಭದಲ್ಲಿ ಪ್ರೀತಿಯನ್ನು ದೂರವಿಟ್ಟ ಹಾಗೆಯೇ ಈ ಯುದ್ಧದಲ್ಲಿಯೂ ಅವರು ಪಾಂಡವರ ಮೇಲಿನ ಮಮತೆಯನ್ನು ದೂರವಿಡುತ್ತಾರೆ ಎಂಬುದು
ದುರ್ಯೋಧನನ ಭರವಸೆ. ದುರ್ಯೋಧನನು ದ್ರೋಣಾಚಾರ್ಯರಲ್ಲಿಇಷ್ಟೆಲ್ಲಾ ಮಾತುಗಳನ್ನು ಆಡುತ್ತಿದ್ದಾಗ ಅಲ್ಲೇ ಇದ್ದಂತಹ ಭೀಷ್ಮಾಚಾರ್ಯರು ದುರ್ಯೋಧನನಿಗೆ ಸಂತೋಷವಾಗಲಿ ಎಂಬ ಉದ್ದೇಶದಿಂದ ಉಚ್ಚ ಸ್ವರದಿಂದ ಸಿಂಹನಾದವನ್ನು ಮಾಡಿದಂತೆ ಶಂಖವನ್ನು ಊದಿದರು.
ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತುಆಚಾರ್ಯರ
ಭಗವದ್ಗೀತಾ ಯಥಾರೂಪದ ನಿರೂಪಕರು - ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು ( ಇವರು ಡಾ.ಸುಜೇಶ್ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)