Bhagavad Gita: ಜೀವನದಲ್ಲಿ ಗುರಿ ಮುಟ್ಟಲು ಮನುಷ್ಯ ಭಕ್ತಿಯಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು; ಗೀತೆಯ ಸಾರಾಂಶ ತಿಳಿಯಿರಿ
May 09, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ಜೀವನದಲ್ಲಿ ಗುರಿ ಮುಟ್ಟಲು ಮನುಷ್ಯ ಭಕ್ತಿಯಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂಬುದರ ಅರ್ಥವನ್ನು ಭವದ್ಗೀತೆಯ 9ನೇ ಅಧ್ಯಾಯದ 23 ಮತ್ತು 24ನೇ ಶ್ಲೋಕದಲ್ಲಿ ಓದಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 23
ಯೇಪ್ಯನ್ಯದೇವತಾಭಕ್ತಾ ಯಜನ್ತೇ ಶ್ರದ್ಧಯಾನ್ವಿತಾಃ |
ತೇಪಿ ಮಾಮೇವ ಕೌನ್ತೇಯ ಯಜನ್ತ್ಯವಿಧಿಪೂರ್ವಕಮ್ ||23|
ಅನುವಾದ: ಕುಂತಿಯ ಮಗನಾದ ಅರ್ಜುನನೆ, ಇತರ ದೇವತೆಗಳ ಭಕ್ತರಾಗಿ ಶ್ರದ್ಧೆಯಿಂದ ಅವರನ್ನು ಪೂಜಿಸುವವರು ನನ್ನನ್ನೇ ಪೂಜಿಸುತ್ತಾರೆ, ಆದರೆ ಅದನ್ನು ತಪ್ಪುರೀತಿಯಲ್ಲಿ ಮಾಡುತ್ತಾರೆ (Bhagavad Gita Updesh in Kannada).
ತಾಜಾ ಫೋಟೊಗಳು
ಭಾವಾರ್ಥ: ಕೃಷ್ಣನು, ದೇವತೆಗಳ ಪೂಜೆಯಲ್ಲಿ ನಿರತರಾದವರು ಪರೋಕ್ಷವಾಗಿ ನನ್ನನ್ನೇ ಪೂಜಿಸುತ್ತಿದ್ದರೂ ಅವರು ಹೆಚ್ಚು ಬುದ್ಧಿವಂತರಲ್ಲ ಎಂದು ಹೇಳುತ್ತಾನೆ. ಉದಾಹರಣೆಗೆ, ಒಬ್ಬ ಮನುಷ್ಯನು ಮರದ ಬೇರಿಗೆ ನೀರು ಹಾಕದೆ ಅದರ ಎಲೆಗಳು ಮತ್ತು ರೆಂಬೆಗಳಿಗೆ ನೀರು ಹಾಕಿದರೆ ಅದು ಸಾಕಷ್ಟು ತಿಳುವಳಿಕೆ ಇಲ್ಲದೆ ಅಥವಾ ನಿಯಂತ್ರಕ ತತ್ವಗಳನ್ನು ಅನುಸರಿಸದೆ ಮಾಡುವ ಕೆಲಸವಾಗುತ್ತದೆ. ಹಾಗೆಯೇ ದೇಹದ ಬೇರೆ ಬೇರೆ ಭಾಗಗಳಿಗೆ ಸೇವೆ ಮಾಡುವ ವಿಧಾನವೆಂದರೆ ಹೊಟ್ಟೆಗೆ ಆಹಾರವನ್ನು ಕೊಡುವುದು.
ದೇವತೆಗಳು ಪರಮ ಪ್ರಭುವಿನ ಸರ್ಕಾರದಲ್ಲಿ ಬೇರೆ ಬೇರೆ ಅಧಿಕಾರಿಗಳು ಮತ್ತು ನಿರ್ದೇಶಕರು ಎನ್ನಬಹುದು. ಮನುಷ್ಯನು ಅನುಸರಿಸಬೇಕಾದದ್ದು ಸರ್ಕಾರವು ಮಾಡಿದ ಕಾನೂನುಗಳನ್ನು, ಅಧಿಕಾರಿಗಳು, ನಿರ್ದೇಶಕರು ಮಾಡಿದ ಕಾನೂನುಗಳನ್ನಲ್ಲ. ಹಾಗೆಯೇ ಪ್ರತಿಯೊಬ್ಬನೂ ಪರಮ ಪ್ರಭುವಿಗೆ ಮಾತ್ರ ಪೂಜೆಯನ್ನು ಸಲ್ಲಿಸಬೇಕು. ಅದು ತಾನಾಗಿಯೇ ಪ್ರಭುವಿನ ಬೇರೆ ಬೇರೆ ಅಧಿಕಾರಿಗಳನ್ನು ಮತ್ತು ನಿರ್ದೇಶಕರನ್ನು ತೃಪ್ತಿಪಡಿಸುತ್ತದೆ. ಅಧಿಕಾರಿಗಳು ಮತ್ತು ನಿರ್ದೇಶಕರು ಸರ್ಕಾರದ ಪ್ರತಿನಿಧಿಗಳಾಗಿ ಕಾರ್ಯನಿರತರಾಗಿರುತ್ತಾರೆ. ಅಧಿಕಾರಿಗಳಿಗೆ ಮತ್ತು ನಿರ್ದೇಶಕರಿಗೆ ಲಂಚಕೊಡುವುದು ಕಾನೂನಿಗೆ ವಿರುದ್ಧವಾದುದು. ಇದನ್ನು ಇಲ್ಲಿ ಅವಿಧಿಪೂರ್ವಕಮ್ ಎಂದು ಹೇಳಿದೆ. ಬೇರೆ ಮಾತುಗಳಲ್ಲಿ ಹೇಳವುದಾದರೆ ಕೃಷ್ಣನು ದೇವತೆಗಳನ್ನು ಅನಗತ್ಯವಾಗಿ ಪೂಜಿಸುವುದಕ್ಕೆ ಸಮ್ಮತಿ ಕೊಡುವುದಿಲ್ಲ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 24
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ |
ನ ತು ಮಾಮಭಿಜಾನನ್ತಿ ತತ್ತ್ವೇನಾತಶ್ಚ್ಯವನ್ತಿ ತೇ ||24||
ಅನುವಾದ: ನಾನೊಬ್ಬನೇ ಎಲ್ಲ ಯಜ್ಞಗಳ ಭೋಕ್ತಾರನು ಮತ್ತು ಯಜಮಾನನು. ಆದುದರಿಂದ ನನ್ನ ನಿಜವಾದ ದಿವ್ಯಸ್ವಭಾವವನ್ನು ಗುರುತಿಸದವರು ಪತನ ಹೊಂದುತ್ತಾರೆ.
ಭಾವಾರ್ಥ: ವೈದಿಕ ಸಾಹಿತ್ಯದಲ್ಲಿ ಅನೇಕ ಬಗೆಯ ಯಜ್ಞಾಚರಣೆಯನ್ನು ಮಾಡಬೇಕೆಂದು ಹೇಳಿದೆ. ಆದರೆ ವಾಸ್ತವವಾಗಿ ಅವೆಲ್ಲವುಗಳ ಉದ್ದೇಶ ಪರಮ ಪ್ರಭುವಿನ ತೃಪ್ತಿಯೇ ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಯಜ್ಞ ಎಂದರೆ ವಿಷ್ಣು. ಭಗವದ್ಗೀತೆಯ ಮೂರನೆಯ ಅಧ್ಯಾಯದಲ್ಲಿ ಮನುಷ್ಯನು ಯಜ್ಞವನ್ನು ಅಥವಾ ವಿಷ್ಣುವನ್ನು ತೃಪ್ತಿಪಡಿಸಲು ಮಾತ್ರ ಕೆಲಸ ಮಾಡಬೇಕೆಂದು ಹೇಳಿದೆ. ವರ್ಣಾಶ್ರಮ ಧರ್ಮ ಎಂದು ಕರೆಸಿಕೊಳ್ಳುವ ಮನುಷ್ಯನ ನಾಗರಿಕತೆಯ ಪರಿಪೂರ್ಣ ರೂಪದ ಉದ್ದೇಶವು ವಿಷ್ಣುವನ್ನು ತೃಪ್ತಿಗೊಳಿಸುವುದು. ಆದುದರಿಂದ ಈ ಶ್ಲೋಕದಲ್ಲಿ ನಾನೇ ಎಲ್ಲ ಯಜ್ಞಗಳ ಭೋಕ್ತಾರನು, ಏಕೆಂದರೆ ನಾನೇ ಪರಮ ಪ್ರಭು. ಎಂದು ಕೃಷ್ಣನು ಹೇಳುತ್ತಾನೆ.
ಸಾಕಷ್ಟು ಬುದ್ಧಿ ಇಲ್ಲದವರು ಈ ವಿಷಯವನ್ನು ತಿಳಿಯದೆ ತಾತ್ಕಾಲಿಕ ಪ್ರಯೋಜನಕ್ಕಾಗಿ ದೇವತೆಗಳನ್ನು ಪೂಜಿಸುತ್ತಾರೆ. ಆದುದರಿಂದ ಅವರು ಐಹಿಕ ಬಾಳಿಗೆ ಬೀಳುತ್ತಾರೆ. ಬದುಕಿನಲ್ಲಿ ಅಪೇಕ್ಷಿಸಿದ ಗುರಿಯನ್ನು ಮುಟ್ಟುವುದಿಲ್ಲ. ಆದರೆ ಯಾರಿಗಾದರೂ ಐಹಿಕ ಬಯಕೆಯಿದ್ದರೆ (ಅದು ಪರಿಶುದ್ಧ ಭಕ್ತಿ ಅಲ್ಲದಿದ್ದರೂ) ಆತನು ಪರಮ ಪ್ರಭುವಿನ ಪ್ರಾರ್ಥನೆ ಮಾಡಿಕೊಳ್ಳುವುದೇ ಉತ್ತಮ. ಹಾಗೆ ಅವನು ತಾನು ಬಯಸಿದ ಫಲವನ್ನು ಪಡೆಯುತ್ತಾನೆ.