Bhagavad Gita: ಎಲ್ಲ ಪ್ರಯತ್ನಕ್ಕೂ ಭೂಮಿ, ಬಂಡವಾಳ, ವ್ಯವಸ್ಥೆ ಮತ್ತು ಶ್ರಮಗಳು ಅಗತ್ಯ; ಗೀತೆಯ ಸಾರಾಂಶ ಹೀಗಿದೆ
Aug 02, 2024 05:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಎಲ್ಲ ಪ್ರಯತ್ನಕ್ಕೂ ಭೂಮಿ, ಬಂಡವಾಳ, ವ್ಯವಸ್ಥೆ ಮತ್ತು ಶ್ರಮಗಳು ಅಗತ್ಯ ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 8 ಮತ್ತು 10ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 8
ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ |
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ ||8||
ಅನುವಾದ: ದೇವೋತ್ತಮ ಪರಮ ಪುರುಷನಾದ ನನ್ನಲ್ಲಿ ಮನಸ್ಸನ್ನು ನಿಲ್ಲಿಸು, ನಿನ್ನ ಬುದ್ಧಿಯನ್ನು ಸಂಪೂರ್ಣವಾಗಿ ನನ್ನಲ್ಲಿ ತೊಡಗಿಸು, ಸಾಕು. ನಿಸ್ಸಂದೇಹವಾಗಿಯೂ ಇದರಿಂದ ನೀನು ಯಾವಾಗಲೂ ನನ್ನಲ್ಲಿ ವಾಸಿಸುವೆ.
ತಾಜಾ ಫೋಟೊಗಳು
ಭಾವಾರ್ಥ: ಪರಮ ಪ್ರಭು ಕೃಷ್ಣನ ಸೇವೆಯಲ್ಲಿ ನಿರತನಾದವನು ಪರಮ ಪ್ರಭುವಿನೊಡನೆ ನೇರವಾದ ಸಂಬಂಧದಲ್ಲಿ ಬಾಳುತ್ತಾನೆ. ಆದುದರಿಂದ ಪ್ರಾರಂಭದಿಂದಲೇ ಅವನದು ಅಲೌಕಿಕ ಸ್ಥಿತಿ ಎನ್ನುವುದರಲ್ಲಿ ಸಂಶಯವಿಲ್ಲ. ಭಕ್ತನಾದವನು ಐಹಿಕ ಮಟ್ಟದಲ್ಲಿ ಬದುಕುವುದಿಲ್ಲ - ಆತನು ಕೃಷ್ಣನಲ್ಲಿ ಬದುಕುತ್ತಾನೆ. ಭಗವಂತನ ಪಾವನನಾಮವೂ ಭಗವಂತನೂ ಬೇರೆ ಬೇರೆಯಲ್ಲ. ಆದುದರಿಂದ ಭಕ್ತನು ಹರೇ ಕೃಷ್ಣ ಸಂಕೀರ್ತನೆ ಮಾಡುವಾಗ ಕೃಷ್ಣನೂ ಅವನ ಅಂತರಂಗ ಶಕ್ತಿಯೂ ಭಕ್ತನ ನಾಲಿಗೆಯಲ್ಲಿ ಕುಣಿಯುತ್ತಿರುತ್ತಾರೆ. ಅವನು ಕೃಷ್ಣನಿಗೆ ನೈವೇದ್ಯ ಮಾಡಿದಾಗ ಕೃಷ್ಣನು ಆ ತಿಂಡಿತಿನಸುಗಳನ್ನು ನೇರವಾಗಿ ಸ್ವೀಕರಿಸುತ್ತಾನೆ. ಭಕ್ತನು ಪ್ರಸಾದವನ್ನು ತಿಂದಾಗ ಕೃಷ್ಣಪ್ರಜ್ಞೆ ಹೊಂದುತ್ತಾನೆ. ಭಗವದ್ಗೀತೆ ಮತ್ತು ಇತರ ವೇದಸಾಹಿತ್ಯದಲ್ಲಿ ಈ ಪ್ರಕ್ರಿಯೆಯನ್ನು ಸಲಹೆ ಮಾಡಲಾಗಿದೆ. ಹೀಗಿದ್ದರೂ, ಇಂತಹ ಸೇವೆಯಲ್ಲಿ ನಿರತನಾಗದವನು ಈ ಪ್ರಕ್ರಿಯೆ ಹೇಗೆ ಕೆಲಸ ಕೆಲಸಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಲಾರ.
ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 10
ಅಭ್ಯಾಸೇಪ್ಯಸಮರ್ಥೋಸಿ ಮತ್ಕರ್ಮಪರಮೋ ಭವ |
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ ||10||
ಅನುವಾದ: ಭಕ್ತಿಯೋಗದ ನಿಯಮಗಳನ್ನು ಅಭ್ಯಾಸ ಮಾಡಲು ನಿನಗೆ ಸಾಧ್ಯವಾಗದಿದ್ದರೆ ನನಗಾಗಿ ಕೆಲಸ ಮಾಡಲು ಪ್ರಯತ್ನಿಸು. ಏಕೆಂದರೆ ನನಗಾಗಿ ಕೆಲಸ ಮಾಡುವುದರಿಂದಲೂ ನೀನು ಪರಿಪೂರ್ಣ ಸ್ಥಿತಿಗೆ ಬರುವೆ.
ಭಾವಾರ್ಥ: ಗುರುವಿನ ಮಾರ್ಗದರ್ಶನದಲ್ಲಿ ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ಆಚರಿಸಲಾರದವನು ಕೂಡಾ ಪರಮ ಪ್ರಭುವಿಗಾಗಿ ಕೆಲಸ ಮಾಡುವ ಮೂಲಕ ಈ ಪರಿಪೂರ್ಣ ಘಟ್ಟಕ್ಕೆ ಸೆಳೆದುಕೊಳ್ಳಲ್ಪಡಬಹುದು. ಈ ಕೆಲಸವನ್ನು ಮಾಡುವುದು ಹೇಗೆ ಎನ್ನುವುದನ್ನು ಹನ್ನೊಂದನೆಯ ಅಧ್ಯಾಯದ ಐವತ್ತೈದನೆಯ ಶ್ಲೋಕದಲ್ಲಿ ಹೇಳಿದೆ. ಕೃಷ್ಣಪ್ರಜ್ಞೆಯ ಪ್ರಸಾರದ ಪರವಾಗಿರಬೇಕು. ಕೃಷ್ಣಪ್ರಜ್ಞೆಯ ಪ್ರಸಾರದ ಕಾರ್ಯದಲ್ಲಿ ನಿರತರಾಗಿರುವ ಭಕ್ತರು ಎಷ್ಟೋ ಮಂದಿ ಇದ್ದಾರೆ. ಅವರಿಗೆ ಸಹಾಯವು ಅಗತ್ಯ. ಆದುದರಿಂದ ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ನೇರವಾಗಿ ಅಭ್ಯಾಸಮಾಡಲಾರದವನೂ ಇಂತಹ ಕಾರ್ಯದಲ್ಲಿ ನೆರವಾಗಬಹುದು.
ಎಲ್ಲ ಪ್ರಯತ್ನಕ್ಕೂ ಭೂಮಿ, ಬಂಡವಾಳ, ವ್ಯವಸ್ಥೆ ಮತ್ತು ಶ್ರಮಗಳು ಅಗತ್ಯ. ವಾಣಿಜ್ಯ ವ್ಯವಹಾರದಲ್ಲಿ ಮನುಷ್ಯನಿಗೆ ವಾಸಿಸಲು ಒಂದು ಸ್ಥಳ, ಬಳಸಲು ಒಂದಿಷ್ಟು ಬಂಡವಾಳ, ಶ್ರಮ ಮತ್ತು ವಿಸ್ತರಿಸಲು ಸಂಘ ಹೇಗೆ ಅಗತ್ಯವೋ ಹಾಗೆಯೇ ಕೃಷ್ಣನ ಸೇವೆಯಲ್ಲಿ ಇವು ಅಗತ್ಯ. ಇರುವ ಒಂದೇ ವ್ಯತ್ಯಾಸ ಎಂದರೆ ಪ್ರಾಪಂಚಿಕತೆಯಲ್ಲಿ ಮನುಷ್ಯನು ಇಂದ್ರಿಯ ತೃಪ್ತಿಗಾಗಿ ಕೆಲಸ ಮಾಡುತ್ತಾನೆ. ಇದೇ ಕೆಲಸವನ್ನು ಕೃಷ್ಣನ ತೃಪ್ತಿಗಾಗಿ ಮಾಡಬಹುದು. ಅದು ಅಧ್ಯಾತ್ಮಿಕ ಚಟುವಟಿಕೆಯಾಗುತ್ತದೆ. ತಕ್ಕಷ್ಟು ಹಣವಿರುವ ಮನುಷ್ಯನು ಕೃಷ್ಣಪ್ರಜ್ಞೆಯ ಪ್ರಸಾರಕ್ಕಾಗಿ ಒಂದು ಕಚೇರಿಯನ್ನು ಕಟ್ಟಬಹುದು ಅಥವಾ ದೇವಸ್ಥಾನವನ್ನು ಕಟ್ಟಬಹುದು ಇಲ್ಲವೇ ಪ್ರಕಟಣೆಗಳಿಗೆ ನೆರವಾಗಬಹುದು. ಹೀಗೆ ನಾನಾ ಕಾರ್ಯಕ್ಷೇತ್ರಗಳಿವೆ.
ಯಾವುದಾದರೂ ಒಂದು ಕಾರ್ಯಕ್ಷೇತ್ರದಲ್ಲಿ ಆಸಕ್ತನಾಗಬೇಕು. ಕರ್ಮಫಲವನ್ನು ತ್ಯಾಗ ಮಾಡಲಾರದವನು ಅದರ ಒಂದು ಭಾಗವನ್ನು, ಕೃಷ್ಣಪ್ರಜ್ಞೆಯನ್ನು ಪ್ರಸಾರಮಾಡಲು ತ್ಯಾಗಮಾಡಬಹುದು. ಕೃಷ್ಣಪ್ರಜ್ಞೆಗಾಗಿ ಸ್ವಯಂ ಪ್ರೇರಣೆಯಿಂದ ಮಾಡುವ ಈ ಕಾರ್ಯವು ಮನುಷ್ಯನು ಭಗವತ್ಪ್ರೇಮದಲ್ಲಿ ಇನ್ನೂ ಮೇಲಿನ ಸ್ಥಿತಿಗೆ ಏರಲು ನೆರವಾಗುತ್ತದೆ. ಇದರಿಂದ ಆತನು ಪರಿಪೂರ್ಣನಾಗುತ್ತಾನೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)