ಭಗವದ್ಗೀತೆ: ಅಹಂಕಾರಿಯಾದವನು ತಾನೇ ಎಲ್ಲವನ್ನೂ ಮಾಡಿದೆ ಎಂದು ಹೇಳಿಕೊಳ್ಳುತ್ತಾನೆ; ಗೀತೆಯ ಸಾರಾಂಶ ಹೀಗಿದೆ
Dec 20, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಅಹಂಕಾರಿಯಾದವನು ತಾನೇ ಎಲ್ಲವನ್ನೂ ಮಾಡಿದೆ ಎಂದು ಹೇಳಿಕೊಳ್ಳುತ್ತಾನೆ ಎಂಬುದರ ಗೀತೆಯಲ್ಲಿನ ಅರ್ಥ ತಿಳಿಯಿರಿ.
ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ |
ಅಹನ್ಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ || 27||
ಕಾರ್ಯಗಳನ್ನು ವಾಸ್ತವವಾಗಿ ಪ್ರಕೃತಿಯ ತ್ರಿಗುಣಗಳೇ ಮಾಡುತ್ತವೆ. ಆದರೆ ಅಹಂಕಾರದಿಂದ ಮೂಢನಾದವನು ತಾನೇ ಕಾರ್ಯಗಳನ್ನು ಮಾಡುತ್ತೇನೆ ಎಂದು ಭಾವಿಸುತ್ತಾನೆ.
ತಾಜಾ ಫೋಟೊಗಳು
ಕೃಷ್ಣಪ್ರಜ್ಞೆ ಇರುವ ಒಬ್ಬನು ಮತ್ತು ಐಹಿಕ ಪ್ರಜ್ಞೆಯಲ್ಲಿರುವ ಮತ್ತೊಬ್ಬನು ಒಂದೇ ಮಟ್ಟದಲ್ಲಿ ಕೆಲಸಮಾಡುತ್ತಿರುವಾಗ ಇಬ್ಬರೂ ಒಂದೇ ನೆಲೆಯಲ್ಲಿ ಇರುವಂತೆ ತೋರಬಹುದು. ಆದರೆ ಅವರಿಬ್ಬರ ಸ್ಥಾನಗಳಲ್ಲಿ ತೀವ್ರ ವ್ಯತ್ಯಾಸವಿದೆ. ಐಹಿಕ ಪ್ರಜ್ಞೆಯಲ್ಲಿರುವ ಮನುಷ್ಯನು ಅಹಂಕರಾದ ದೆಸೆಯಿಂದ ತಾನೇ ಎಲ್ಲವನ್ನೂ ಮಾಡುವವನು ಎಂದು ದೃಢವಾಗಿ ನಂಬಿರುತ್ತಾನೆ.
ದೇಹದ ಯಂತ್ರವನ್ನು ಐಹಿಕ ಪ್ರಕೃತಿಯು ಸೃಷ್ಟಿಮಾಡಿದೆ ಮತ್ತು ಈ ಪ್ರಕೃತಿಯು ಭಗವಂತನ ಮೇಲ್ವಿಚಾರಣೆಯಲ್ಲಿ ಕೆಲಸಮಾಡುತ್ತದೆ ಎನ್ನುವುದು ಅವನಿಗೆ ತಿಳಿಯದು. ಪ್ರಾಪಂಚಿಕನಿಗೆ ಕಟ್ಟಕಡೆಯದಾಗಿ ತಾನು ಕೃಷ್ಣನ ನಿಯಂತ್ರಣದಲ್ಲಿದ್ದೇನೆ ಎನ್ನುವುದು ತಿಳಿಯದು. ಅಹಂಕಾರಿಯಾದವನು ತಾನೇ ಸ್ವತಂತ್ರವಾಗಿ ಎಲ್ಲವನ್ನೂ ಮಾಡಿದೆ ಎಂದು ಹೇಳಿಕೊಳ್ಳುತ್ತಾನೆ. ಇದೇ ಅವನ ಅಜ್ಞಾನದ ಲಕ್ಷಣ. ಈ ಜಡವಾದ ಮತ್ತು ಸೂಕ್ಷ್ಮವಾದ ದೇಹವನ್ನು ದೇವೋತ್ತಮ ಪರಮ ಪುರುಷನ ಆಜ್ಞೆಯಂತೆ ಐಹಿಕ ಪ್ರಕೃತಿಯು ಸೃಷ್ಟಿಸಿದೆ. ಆದುದರಿಂದ ಅವನ ದೇಹದ ಮತ್ತು ಮನಸ್ಸಿನ ಚಟುವಟಿಕೆಗಳು ಕೃಷ್ಣಪ್ರಜ್ಞೆಯಲ್ಲಿ ಕೃಷ್ಣನ ಸೇವೆಯಲ್ಲಿ ತೊಡಗಬೇಕು ಎನ್ನುವುದು ಅವನಿಗೆ ತಿಳಿಯದು.
ಇಂದ್ರಿಯಗಳನ್ನು ಇಂದ್ರಿಯತೃಪ್ತಿಗಾಗಿ ಬಹುಕಾಲ ದುರುಪಯೋಗ ಮಾಡಿಕೊಂಡಿದ್ದರಿಂದ ವಾಸ್ತವಿಕವಾಗಿ ಅಹಂಕಾರವು ಅವನನ್ನು ಮೂಢನನ್ನಾಗಿ ಮಾಡುತ್ತದೆ. ಇದರಿಂದ ಅವನು ಕೃಷ್ಣನೊಡನೆ ತನ್ನ ನಿತ್ಯಸಂಬಂಧವನ್ನು ಮರೆತು ಬಿಡುತ್ತಾನೆ. ಆದುದರಿಂದ ಅಜ್ಞಾನಿಯು ದೇವೋತ್ತಮ ಪರಮ ಪುರುಷನಿಗೆ ಹೃಷೀಕೇಶ ಅಥವಾ ಐಹಿಕ ಶರೀರದ ಇಂದ್ರಿಯಗಳ ಪ್ರಭು ಎಂದು ಹೆಸರು ಎನ್ನುವುದನ್ನು ಮರೆತುಬಿಡುತ್ತಾನೆ.
ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ |
ಗುಣಾಗುಣೇಷು ವರ್ತನ್ತ ಇತಿ ಮತ್ವಾ ನ ಸಜ್ಜತೇ ||28||
ಹೇ ಮಾಹಾಬಾಹುವಾದ ಅರ್ಜುನ, ಪರಮ ಸತ್ಯವನ್ನು ತಿಳಿದವನು ಇಂದ್ರಿಯಗಳಲ್ಲಿ ಮತ್ತು ಇಂದ್ರಿಯ ತೃಪ್ತಿಯಲ್ಲಿ ತೊಡಗುವುದಿಲ್ಲ. ಅವನಿಗೆ ಭಕ್ತಿಸೇವೆ ಮತ್ತು ಫಲದಾಸೆ ಇರುವ ಕರ್ಮ ಇವುಗಳಲ್ಲಿನ ವ್ಯತ್ಯಾಸವು ತಿಳಿದರುತ್ತದೆ.
ಪರಮ ಸತ್ಯವನ್ನು ತಿಳಿದವನಿಗೆ ಐಹಿಕ ಸಹವಾಸದಲ್ಲಿ ತನ್ನ ತೊಡಕಿನ ಸ್ಥಿತಿಯ ವಿಷಯವಾಗಿ ದೃಢವಾದ ಅರಿವಿರುತ್ತದೆ. ತಾನು ದೇವೋತ್ತಮ ಪರಮ ಪುರುಷನಾದ ಕೃಷ್ಣನ ವಿಭಿನ್ನ ಅಂಶ ಮತ್ತು ಐಹಿಕ ಸೃಷ್ಟಿಯಲ್ಲಿ ತನ್ನ ಸ್ಥಾನವಿರಬಾರದು ಎಂದು ಅವನಿಗೆ ತಿಳಿದಿರುತ್ತದೆ. ವಾಸ್ತವವಾಗಿ ತಾನು ನಿತ್ಯಜ್ಞಾನಾನಂದನಾದ ಪರಮ ಪ್ರಭುವಿನ ವಿಭಿನ್ನಾಂಶ ಎಂದು ಅವನಿಗೆ ಗೊತ್ತು.
ಹೇಗೋ ತಾನು ಜೀವನದ ಭೌತಿಕ ಕಲ್ಪನೆಯಲ್ಲಿ ಸಿಕ್ಕಿಕೊಂಡಿದ್ದೇನೆ ಎಂದು ಅವರು ಗುರುತಿಸುತ್ತಾನೆ. ತನ್ನ ಪರಿಶುದ್ಧ ಅಸ್ತಿತ್ವದಲ್ಲಿ ತನ್ನ ಭಕ್ತಿಸೇವೆಯ ಚಟುವಟಿಕೆಗಳು ಸನ್ನಿವೇಶಕ್ಕೆ ಮಿತಗೊಂಡವು ಮತ್ತು ತಾತ್ಕಾಲಿಕ. ಆದುದರಿಂದ ಆತನಿಗೆ ಸಹಜವಾಗಿ ಭೌತಿಕ ಇಂದ್ರಿಯಗಳ ಚಟುವಟಿಕೆಗಳಲ್ಲಿ ಆಸಕ್ತಿಯಿರುವುದಿಲ್ಲ. ತನ್ನ ಬದುಕಿನ ಐಹಿಕ ಸ್ಥಿತಿಯು ಭಗವಂತನ ಪರಮ ನಿಯಂತ್ರಣದಲ್ಲಿದೆ ಎಂದು ಅವನಿಗೆ ಗೊತ್ತು. ಆದುದರಿಂದ ವಿವಿಧ ಬಗೆಯ ಪ್ರಾಪಂಚಿಕ ಪ್ರತಿಕ್ರಿಯೆಗಳು ಅವನ ಮನಸ್ಸನ್ನು ಕಲುಕುವುದಿಲ್ಲ.
ಈ ಪ್ರತಿಕ್ರಿಯೆಗಳು ಭಗವಂತನ ಕರುಣೆ ಎಂದು ಅವನು ಭಾವಿಸುತ್ತಾನೆ. ಶ್ರೀಮದ್ಭಾಗವತದ ಪ್ರಕಾರ ಪರಮ ಸತ್ಯವನ್ನು ನಿರಾಕಾರ ಬ್ರಹ್ಮ, ಪರಮಾತ್ಮ ಮತ್ತು ದೇವೋತ್ತಮ ಪರಮ ಪುರುಷ ಎನ್ನುವ ಮೂರು ಸ್ವರೂಪಗಳಲ್ಲಿ ಅರಿತವನನ್ನು ತತ್ತ್ವವಿತ್ ಎಂದು ಕರೆಯಲಾಗುತ್ತದೆ. ಏಕೆಂದರೆ ಪರಮ ಪ್ರಭುವಿನೊಂದಿಗೆ ತನ್ನ ಸಂಬಂಧದ ವಾಸ್ತವಸ್ಥಿತಿ ಅವನಿಗೆ ಗೊತ್ತು.